'ಮಹಿಳೆಯರಿರುವ ಕಡೆ ಐಶ್ವರ್ಯ, ಸಂಪತ್ತು'
ಕ.ಪ್ರ.ವಾರ್ತೆ ಮಧುಗಿರಿ ಆ. 29
ಮಹಿಳಾ ಸಮಾಜ ಭಾರತೀಯ ಕಲೆ, ಸಾಹಿತ್ಯ, ಪರಂಪರೆ, ಸಂಸ್ಕೃತಿಯನ್ನು ಶ್ರೀಮಂತಗೊಳಿಸುವ ಮೂಲಕ ಸಮಾಜಮುಖಿ ಕಾರ್ಯ ಕೈಗೊಳ್ಳುವ ನಿಟ್ಟಿನಲ್ಲಿ ಹೊಸ ಕಟ್ಟಡಕ್ಕೆ ಜ್ಞಾನಮಂದಿರ ಎಂದು ನಾಮಕರಣ ಮಾಡಿರುವುದು ಸಮಾಜದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಶಾಸಕ ಕೆ.ಎನ್.ರಾಜಣ್ಣ ನುಡಿದರು.
ಪಟ್ಟಣದಲ್ಲಿ ಮಹಿಳಾ ಸಮಾಜದ ವತಿಯಿಂದ ನಿರ್ಮಿಸಿರುವ ನೂತನ ಜ್ಞಾನಮಂದಿರ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಮಹಿಳೆಯರು ಇರುವ ಕಡೆ ಎಲ್ಲ ಐಶ್ವರ್ಯ, ಸಂಪತ್ತು ಇರುತ್ತದೆ ಎಂಬುದಕ್ಕೆ ಮಧುಗಿರಿಯ ಮಹಿಳಾ ಸಮಾಜ ಉದಾಹರಣೆ ಎಂದ ಅವರು, ಈ ಮಹಿಳಾ ಸಮಾಜ ಚಿಕ್ಕಮಕ್ಕಳಿಗೆ ಶಿಶುವಿಹಾರ, ಸಂಗೀತ,ನಾಟ್ಯ, ಹೊಲಿಗೆ, ಅಡಿಗೆ ತರಗತಿ, ಆರೋಗ್ಯ, ಕಲೆ, ಸಾಹಿತ್ಯ, ನಾಟಕ, ಕರಕುಶಲ, ಶ್ರೀಕೃಷ್ಣನ ವೇಷ ಸ್ಪರ್ಧೆ ಹೀಗೆ ಹತ್ತು ಹಲವು ಭಾರತೀಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಸಮಾಜಮುಖಿ ಕಾರ್ಯ ಕೈಗೆತ್ತಿಕೊಂಡು ಸಮಾಜದ ಪ್ರಗತಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಭರವಸೆ: ಪಟ್ಟಣದಲ್ಲಿ ಮಹಿಳೆಯರ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಬರುವ ಶೈಕ್ಷಣಿಕ ವರ್ಷದಿಂದ ಪ್ರತ್ಯೇಕ ಮಹಿಳಾ ಪಪೂ ಕಾಲೇಜು ಸ್ಥಾಪನೆಗೆ ಸರ್ಕಾರದಿಂದ ಅನುಮತಿ ಕೊಡಿಸುವುದಾಗಿ ಭರವಸೆ ನೀಡಿ, ಈ ಮಹಿಳಾ ಸಮಾಜ ಸ್ಥಾಪಿಸಲು ಶ್ರಮಿಸಿದವರ ಸಾಧನೆಗಳನ್ನು ಮೆಲುಕು ಹಾಕಿ ಹಿರಿಯರ ಧ್ಯೇಯೋದ್ದೇಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮತ್ತಷ್ಟು ಸಮಾಜ ಸದೃಢವಾಗಿ ಬೆಳೆದು ರಾಜ್ಯ-ರಾಷ್ಟ್ರ ಮಟ್ಟದಲ್ಲಿ ರಾರಾಜಿಸಲಿ ಎಂದು ಶುಭ ಕೋರಿದರು.
ಸಂತಸ: ಮಾಜಿ ಅಧ್ಯಕ್ಷೆ ಇಂದುಮತಿ ಪ್ರಸನ್ನಕುಮಾರ್ ಮಾತನಾಡಿ, ಮಹಿಳೆಯರ ಉನ್ನತಿ, ಪುರೋಭಿವೃದ್ಧಿಗೆ ಪೂರಕವಾಗಿ ಈ ಸಮಾಜ ಬೆಳೆದು ಬಂದಿದ್ದು, ಅಂದು ಪ್ರಾರಂಭವಾದ ಈ ಮಹಿಳಾ ಸಮಾಜ 92 ವರ್ಷ ತುಂಬಿ ಶತಮಾನೋತ್ಸವದ ಹೊಸ್ತಿಲಿಗೆ ಬಂದು ನಿಂತಿರುವುದನ್ನು ನೋಡಿದರೆ ಸಂತಸ ತರುವ ಜತೆಗೆ ಈ ಕಟ್ಟಡ ಇನ್ನು ಹೆಮ್ಮರವಾಗಿ ಬೆಳೆದು ಸಮಾಜದ ಉದ್ಧಾರಕ್ಕೆ ದಾರದೀಪವಾಗಲಿ ಎಂದು ಹಾರೈಸಿದರು. ಡಾ.ಹನುಮಕ್ಕ ಮಾತನಾಡಿದರು. ಮಹಿಳಾ ಸಮಾಜದ ಖಜಾಂಚಿ ಅರುಂಧತಿ ರಾಜ್ ಸಮಾಜದ ಧ್ಯೇಯೋದ್ದೇಶಗಳನ್ನು ವಾಚಿಸಿದರು.
ಮಹಿಳಾ ಸಮಾಜದ ಅಧ್ಯಕ್ಷೆ ಪುಷ್ಪಾವತಮ್ಮ ರತ್ನಯ್ಯ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಜಿ.ಎನ್.ಶ್ರೀನಾಥ್, ಕಾರ್ಯದರ್ಶಿ ವಿಜಯ ಆರ್.ಸಿ.ಗುಪ್ತ, ಸಹ ಖಜಾಂಚಿ ಸಹನ ನಾಗೇಶ್, ನಿದೇಶಕರಾದ ಲಕ್ಷ್ಮೀಬಾಯಿ, ಗಾಯಿತ್ರಿ ಮೋಹನ್, ಶಾಂತರೆಡ್ಡಿ, ಅನ್ನಪೂರ್ಣಮ್ಮ, ಲಕ್ಷ್ಮೀಮೂರ್ತಿ, ಕುಸುಮ ಶ್ರೀನಿವಾಸ್, ನಾಗರತ್ನ ಮೊದಲಾದವರು ಉಪಸ್ಥಿತರಿದ್ದರು. ಪುಷ್ಪಾವತಮ್ಮ ಸ್ವಾಗತಿಸಿ ಸಹನ ನಾಗೇಶ್ ನಿರೂಪಿಸಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

