ತುಮಕೂರು

ಗ್ರಾಮದ ಸ್ವಚ್ಛತೆ ಮರೆತ ಗ್ರಾ.ಪಂ. ವಿರುದ್ಧ ಪ್ರತಿಭಟನೆ

Published On :

ಹುಳಿಯಾರು: ಗ್ರಾಮದ ಅಭಿವೃದ್ಧಿ, ಸ್ವಚ್ಛತೆಯ ಬಗ್ಗೆ ಕಾಳಜಿವಹಿಸಬೇಕಾದ ಗ್ರಾಮ ಪಂಚಾಯ್ತಿಯವರು ಗ್ರಾಮಕ್ಕೆ ಬರುವ ಸೌಲಭ್ಯಗಳಿಗೆ ತೊಡರುಗಾಲು ಹಾಕುವುದಲ್ಲದೆ,  ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯವಹಿಸಿ ತಮಗೂ ಈ ಗ್ರಾಮಕ್ಕೂ ಸಂಬಂಧವಿಲ್ಲ ಎಂಬಂತೆ ಪಂಚಾಯ್ತಿ ಅಧ್ಯಕ್ಷರು ಹಾಗೂ ಕೆಲ ಸದಸ್ಯರು ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದ ಹೋಬಳಿಯ ದೊಡ್ಡಬಿದರೆ ಸಾರ್ವಜನಿಕರು ಗುರುವಾರ ಪ್ರತಿಭಟಿಸಿ ಗ್ರಾ.ಪಂ. ಕಾರ್ಯಾಲಕ್ಕೆ ಮುತ್ತಿಗೆ ಹಾಕಿ ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡರು.
ದೊಡ್ಡಬಿದರೆ ಗ್ರಾಮದಲ್ಲಿ ನೆಪಮಾತ್ರಕ್ಕೆ ಗ್ರಾ.ಪಂ.ಯಿದೆಯೇ  ಹೊರತು ಯಾವುದೇ ಅಭಿವೃದ್ಧಿ ಕಾರ್ಯಗಳಿಗಾಗಲಿ, ಸರ್ಕಾರದಿಂದ ಬರುವ ಸವಲತ್ತುಗಳಿಗಾಗಲಿ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ, ಊರಿನ ಪ್ರತಿಬೀದಿಯ ಚರಂಡಿಗಳ ತುಂಬೆಲ್ಲ ಹೂಳು ತುಂಬಿಕೊಂಡು ಕ್ರಿಮಿಕೀಟಗಳ ಸಂಖ್ಯೆ ಹೆಚ್ಚಾಗಿವೆ, ಅಲ್ಲದೆ ಬೀದಿ ಬದಿಯ ಕಂಬಗಳಲ್ಲಿ ಬೀದಿ ದೀಪಗಳಿಲ್ಲದೆ ರಾತ್ರಿ ಸಮಯದಲ್ಲಿ ಸಂಚರಿಸುವುದು ಕಷ್ಟವಾಗಿದೆ.ಈ ಬಗ್ಗೆ ಪಂಚಾಯ್ತಿಯ ಪಿಡಿಓಗೆ ತಿಳಿಸಿದರೆ ಸರಿ  ಮಾಡಿಸುವುದಾಗಿ ಹೇಳಿ ಕೈತೊಳೆದುಕೊಳ್ಳುತ್ತಾರೆ. ತಮ್ಮಿಂದ ಆಯ್ಕೆಯಾದ ಸದಸ್ಯರು ಇತ್ತ ತಿರುಗಿನೋಡುವುದಿಲ್ಲ ಎಂದು ಹರಿಹಾಯ್ದರು.
ಕಳೆದ ಕೆಲ ದಿನಗಳ ಹಿಂದಷ್ಟೆ ಪಂಚಾಯ್ತಿ ಕೇಂದ್ರವಾದ ದೊಡ್ಡಬಿದರೆ  ಗ್ರಾಮದಲ್ಲಿ ಕೆನರಾ ಬ್ಯಾಂಕ್ ಗ್ರಾಮೀಣ ಶಾಖೆಯನ್ನು  ಸ್ಥಾಪಿಸುವ ವಿಚಾರವಾಗಿ ಗ್ರಾ..ಪಂ.ಗೆ ಬ್ಯಾಂಕ್ ಅಧಿಕಾರಿಗಳು ಆಗಮಿಸಿದ್ದಾಗ ಇಲ್ಲಿನ ಗ್ರಾ.ಪಂ.ಅಧ್ಯಕ್ಷರು ಹಾಗೂ ಸದಸ್ಯರು ಸೂಕ್ತ ಮಾಹಿತಿಯನ್ನು ನೀಡದೆ ತಮ್ಮ ಗ್ರಾಮಕ್ಕೆ ಬ್ಯಾಂಕ್ ಬೇಡವೆಂದಿದ್ದಾರೆಂಬುದೇ ಇವತ್ತಿನ ಪ್ರತಿಭಟನೆಗೆ ಕಾರಣಾವಾಯಿತು.
 ಈ ವಿಷಯದ ಬಗ್ಗೆ ಪಿಡಿಓ ಅವರೊಂದಿಗೆ ಮಾತಿಗೆ ಮುಂದಾದ  ಪಿಡಿಓ ಬಸವರಾಜು ತಮಗೆ ಈ ಬಗ್ಗೆ ಏನು ಗೊತ್ತಿಲ್ಲ, ಬ್ಯಾಂಕ್ ಅಧಿಕಾರಿಗಳು ಬಂದಾಗ ತಾವು ಇರಲಿಲ್ಲ ಎಂದು ಹಾರಿಕೆ ಉತ್ತರ ನೀಡಿದರು. ಇದರಿಂದ ಆಕ್ರೋಶಗೊಂಡ ಜನ ಗ್ರಾ.ಪಂ ಬೀಗ ಹಾಕಿದ್ದಲ್ಲದೆ  ಊರಿನ ಸಮಸ್ಯೆಗಳಾದರು ತಮಗೆ ತಿಳಿದಿದೆಯೇ ಎಂದು ಪ್ರಶ್ನಿಸಿ ಹೂಳು ತುಂಬಿಕೊಂಡಿದ್ದ ಚರಂಡಿಗಳ ಹತ್ತಿರಕ್ಕೆ ಅವರನ್ನು ಕರೆದೊಯ್ದು ನೈಜ ಸಂಗತಿಯನ್ನು ಎದುರಿಗಿಟ್ಟರು.
ಪಿಎಸೈ ಮಧ್ಯಸ್ತಿಕೆ: ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪಿಎಸೈ ರಾಜು ಅವರು ಪ್ರತಿಭಟನಕಾರರೊಂದಿಗೆ ಮಾತನಾಡಿ ಗ್ರಾಮದ ಅಭಿವೃದ್ಧಿಯಲ್ಲಿ ರಾಜಕೀಯವಿರಬಾರದು. ಗ್ರಾ.ಪಂ.ಸದಸ್ಯರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಗೆ ಎಡೆ ಮಾಡಿಕೊಡದೆ ಸಹಕಾರ ಮನೋಭಾವದಿಂದ ನಡೆಯಬೇಕು ಎಂದರು.
ಬ್ಯಾಂಕ್ ಸ್ಥಳಾಂತರವಾಗಿದೆ ಎಂಬುದು ಗ್ರಾ.ಪಂ.ಯವರಿಗೆ ತಿಳಿದಿಲ್ಲದಿರುವುದರಿಂದ ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತನಾಡಿ ಎಂದು ಜನರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.