ಕನಕದಾಸರು ಏಕಮುಖಿಯಲ್ಲ, ವಿಶ್ವತೋಮುಖಿ
ತುಮಕೂರು: ಕನಕದಾಸರು ಏಕಮುಖಿಯಲ್ಲ. ಅವರು ವಿಶ್ವತೋಮುಖಿ ಎಂದು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ಕೊಡ್ಲಿಯವರ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಶ್ರೀದೇವಿ ಕಾಲೇಜಿನಲ್ಲಿ ಕನಕದಸಾ ಸಂಶೋಧನ ಕೇಂದ್ರ, ಮಂಗಳೂರು ವಿವಿ ಆಶ್ರಯದಲ್ಲಿ ಕನಕ ತತ್ವ ಚಿಂತನದ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನಕ ಕೇವಲ ಒಂದು ಜಾತಿ, ಜನಾಂಗಕ್ಕೆ, ವರ್ಣ ಭೇದಕ್ಕೆ ಸೀಮಿತನಲ್ಲ. ಕನಕ ಯಾರ ಹಂಗಿಗೂ, ಯಾರ ಪರಿಧಿಗೂ,ಯಾರ ಚೌಕಟ್ಟಿಗೂ ನಿಲುಕದ ನಕ್ಷತ್ರ ಎಂದು ಪ್ರಶಂಸಿಸಿದರು.
ಇದನ್ನು ಅರಿಯದವರು ಕನಕನನ್ನು, ಕನಕನ ಚಿಂತನೆಗಳನ್ನು, ವಿಚಾರ ತತ್ವಗಳನ್ನು ಕಲುಕುವ ಕೆಲಸ ಮಾಡುತ್ತಿದ್ದಾರೆ. ಕನಕನ ಚಿಂತನ, ಮಂಥನ ಮಾಡಬೇಕಾದ ಸಂದರ್ಭದಲ್ಲಿ ನಾವು ಇಂದು ಕನಕನ ದೀಕ್ಷೆಯ, ನಾಮದ ವಿಚಾರವಾಗಿ ಪದೇ ಪದೇ ಚರ್ಚೆ ಮಾಡುತ್ತಿದ್ದೇವೆ ಎಂದರು. ಕನಕ ತತ್ವಗಳು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಅವರ ಸಾಹಿತ್ಯ ಅನುಭವದ ಅನುಭಾವತೆ ಇದ್ದಂತೆ. ಎಲ್ಲಾ ವರ್ಗದವರ, ಸಮಾಜದ ಪ್ರತಿಬಿಂಬ ಕನಕನ ಸಾಹಿತ್ಯ ಎಂದರು.
ಸೀಮಿತ ಗೊಳಿಸುತ್ತಿದ್ದಾರೆ: ಕನಕನಿಗೆ ದಾಸ ದೀಕ್ಷೆ ಕೊಡದವರು, ವರ್ತಮಾನದಲ್ಲಿ ದೀಕ್ಷೆ ಬಗ್ಗೆ ಮಾತನಾಡ ಹೊರಟಿದ್ದಾರೆ ಎಂದರು. ಕನಕನ ವಿಚಾರಗಳನ್ನು ಕೇವಲ ಒಂದು ದೃಷ್ಟಿಕೋನದಿಂದ ಸೀಮಿತಗೊಳಿಸುತ್ತಿದ್ದಾರೆ ಎಂದರು.
ಕನಕನ ತತ್ವಗಳಲ್ಲಿ ವೈಚಾರಿಕ ನಿಲುವುಗಳಿವೆ. ಅವರು ಸಾಹಿತ್ಯ ಶೈಲಿಯಲ್ಲಿ ಹೃದಯಸ್ಪರ್ಶಿ ಸಂಗೀತ ಮಾಧ್ಯಮದ ವಿಚಾರಗಳನ್ನು ಸಂಗೀತದ ಮೂಲಕ ಸರಳವಾಗಿ ಮತ್ತು ಸವಿಯಾಗಿ ಕಟ್ಟಿಕೊಟ್ಟಿದ್ದಾರೆ ಎಂದರು.
ಅವರ ವಿಚಾರಗಳು ಗೆಜ್ಜೆಯ ಹೆಜ್ಜೆಯೊಂದಿಗಿನ ನಾದದಂತಿದೆ. ಇಂದು ಜಗತ್ತಿನ ಎಲ್ಲಾ ಶ್ರೇಷ್ಠರ, ಸಂತರ, ಕವಿಗಳ, ಸಾಧಕರನ್ನು ಜಾತಿ, ಮತ, ಧರ್ಮಗಳೆಂಬ ಅನಿಷ್ಠ ತಕ್ಕಡಿಯಲ್ಲಿ ತೂಗುತ್ತಾ ಹರಿದು ಹಂಚಿಕೊಳ್ಳುವುದರ ಬಗ್ಗೆ ವಿಷಾದವಿದೆ. ಕನಕದಾಸರ ರಾಮಧಾನ್ಯ ಚರಿತ್ರೆ, ಮೇಲು-ಕೀಳು ಜಾತಿಗಳೆಂದು ವರ್ಣಿಸದೆ ಅನ್ಯೋನ್ಯತೆಯ, ಹೊಂದಾಣಿಕೆಯ ಸಹಬಾಳ್ವೆಯ ಸಂಕೇತವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಕೃತಿ ಚಿಂತಕ ಡಾ. ನಟರಾಜ್ ಬೂದಾಳ್ ಕನಕನ ಸಾಹಿತ್ಯದ ಓದಿನ ಹಿಂದಿರುವ ಸಾಂಸ್ಕೃತಿಕ ರಾಜಕಾರಣದ ಬಗ್ಗೆ ಮಾತನಾಡಿ ಕನಕ ಮತ್ತೆ ಹುಟ್ಟಿ ಬಂದರೂ ಕುಲ ಕುಲವೆಂದು ಹೊಡೆದಾಡದಿರಿ ಎಂದು ಹೇಳಲೇಬೇಕಾದ ಸಂದರ್ಭ ಒದಗಿ ಬಂದಿದೆ ಎಂದರು.
ಕಟ್ಟಿಹಾಕುತ್ತಿದ್ದೇವೆ: ಕನಕನನ್ನು ಸಂತ ಶ್ರೇಷ್ಠ, ಕೀರ್ತನಕಾರ, ದಾಸ ಶ್ರೇಷ್ಠ ಎಂದು ಒಂದು ಚೌಕಟ್ಟಿನೊಳಗೆ ಕಟ್ಟಿ ಹಾಕುತ್ತಿದ್ದೇವೆ. ಆದರೆ ಕನಕ ಎಲ್ಲವನ್ನೂ ಮೀರಿದವ. ನಾವು ಕನಕನ ನಾಮದ ಆಧಾರದ ಮೇಲೆ ಮತ ಕಟ್ಟುವ ಪ್ರಯತ್ನ ಮಾಡುತ್ತಿದ್ದೇವೆ. ರಾಮಧಾನ್ಯ ಚರಿತ್ರೆ ಒಂದು ಸಾಮಾನ್ಯ ಜನರ ಸಾಮಾಜಿಕ ಬದುಕಿನ ಅನಾವರಣ ಎಂದರು.
ನಳ ಚರಿತೆ ಜನರ ಕೌಟುಂಬಿಕ ಜೀವನವನ್ನು ಬಿಂಬಿಸುವ ಕೃತಿ. ಇವುಗಳು ಅಂದೂ- ಇಂದು ಸಾಮಾಜಿಕ ಮತ್ತು ಕೌಟುಂಬಿಕ ವಿಚಾರಗಳಿಗೆ ಪ್ರಸ್ತುತವಾಗಿದೆ ಎಂದರು. ಆದರೆ ಇಂದಿನ ನಮ್ಮ ಓದಿಗೆ ನಿರ್ದಿಷ್ಟ ಸಾಂಸ್ಕೃತಿಕ ರಾಜಕಾರಣ ಇದೆ. ಕನಕರ ಸಾಹಿತ್ಯ ಜಗತ್ತಿನ ಶ್ರೇಷ್ಠ ಸಾಹಿತ್ಯವಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕನಕ ಸಂಶೋಧನಾ ಕೇಂದ್ರದ ಸಂಚಾಲಕ ಡಾ. ಶಿವರಾಮಶೆಟ್ಟಿ ಅವರು ಕನಕ ಸಂಶೋಧನಾ ಕೇಂದ್ರ ಬೆಳೆದು ಬಂದ ಬಗೆ ಹಾಗೂ ಕಾರ್ಯಚಟುವಟಿಕೆಗಳ ಕುರಿತಾದ ಮಾಹಿತಿ ನೀಡಿದರು. ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಟ್ರಸ್ಟಿ ಡಾ. ರಮಣ ಎಂ. ಹುಲಿನಾಯ್ಕರ್, ಡೀನ್. ಡಾ. ಗುರುಮೂರ್ತಿ ಉಪಸ್ಥಿತರಿದ್ದರು. ಶೀಲಾರಾಣಿ ನಿರೂಪಿಸಿ ರಾಘವೇಂದ್ರ ಸ್ವಾಗತಿಸಿ ರಮೇಶ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

