ಮಳಿಗೆಗಳಿಂದ ಸರಿಯಾಗಿ ಬಾಡಿಗೆ ಬರುತ್ತಿಲ್ಲ
ತುಮಕೂರು: ಖಾಸಗಿ ಬಸ್ ನಿಲ್ದಾಣದ 18 ಹಳೇ ಮಳಿಗೆ ಮಾಲೀಕರಿಗೆ ಹಣವನ್ನು ಶೇ. 9 ರ ಬಡ್ಡಿ ದರದಲ್ಲಿ ಸೇರಿಸಿ ಸೋಮವಾರದ ನಂತರ ಹಿಂತಿರುಗಿಸುವುದಾಗಿ ನಗರಸಭಾ ಆಯುಕ್ತರು ಭರವಸೆ ನೀಡಿದರು.
ಅವರು ತುಮಕೂರು ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಮಹಮದ್ ನದೀಂ ಫಾಷಾ ಅವರ ಪ್ರಶ್ನೆಗೆ ಉತ್ತರಿಸಿ, ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಹಣ ಹಿಂತಿರುಗಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಖಾಸಗಿ ಬಸ್ ನಿಲ್ದಾಣದ 53 ಅಂಗಡಿ ಮಳಿಗೆಗಳು ಖಾಲಿಯಿವೆ. ಹಾಲಿ ಬಾಡಿಗೆಗೆ ಪಡೆದಿರುವವರು ಸರಿಯಾಗಿ ಬಾಡಿಗೆ ಕಟ್ಟುತ್ತಿಲ್ಲ. ಸುಮಾರು ಒಂದುವರೆ ಕೋಟಿ ರು. ವಿದ್ಯುತ್ ಬಿಲ್ ಬಾಕಿಯಿತ್ತು. ಈ ಹಿನ್ನೆಲೆಯಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು ಎಂದು ಆಯುಕ್ತ ಆರ್. ಅಶಾದ್ ಷರೀಪ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿರೋಧ ಪಕ್ಷ ನಾಯಕ ಜೆಡಿಎಸ್ನ, ಹನುಮಂತರಾಯ ನಗರದೆಲ್ಲಡೆ ನಡೆದಿರುವ ಕಾಮಗಾರಿಗಳೆಲ್ಲಾ ಕಳಪೆಯಾಗಿವೆ. ಈ ಕಾಮಗಾರಿ ಪರಿಶೀಲನೆಗೆ ಅಧಿಕಾರಿಗಳ ಜತೆ ಹೋದರೆ, ಗುತ್ತಿಗೆದಾರರೇ ಅಧಿಕಾರಿಗಳನ್ನು ಬ್ಲಾಕ್ಮೇಲ್ ಮಾಡುತ್ತಾರೆ.
ನಗರಸಭೆಯಲ್ಲಿ ಇರೋರೆಲ್ಲಾ ಒಳ್ಳೆಯ ಅಧಿಕಾರಿಗಳು. ಲೋಕಾಯುಕ್ತ ಅಸ್ತ್ರ ಇಟ್ಟುಕೊಂಡು ಅಧಿಕಾರಿಗಳಿಗೆ, ಸಿಬ್ಬಂದಿಗೆ ಕಿರುಕುಳ ಕೊಡಲಾಗುತ್ತಿದೆ. ಶಾಸಕರು, ಸಂಸದರು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದರು.
ಲೋಪ ಎತ್ತಿ ತೋರಿಸಿದ ಆಡಳಿತ ಪಕ್ಷದ ಸದಸ್ಯ: ವಿರೋಧ ಪಕ್ಷದ ಸದಸ್ಯರು ಮಾಡುವ ಕೆಲಸವನ್ನು ಆಡಳಿತ ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯರೇ ಮಾಡಿದ್ದು ಈ ಬಾರಿಯ ಸಾಮಾನ್ಯ ಸಭೆಯ ವಿಶೇಷ.
ಆಡಳಿತರೂಢ ಕಾಂಗ್ರೆಸ್ ಸದಸ್ಯ ಸುಧೀಶ್ವರ್ ಜಮಾ-ಖರ್ಚು ಲೋಪವನ್ನು ಎತ್ತಿ ತೋರುವುದರ ಮೂಲಕ ನಗರಸಭಾಧ್ಯಕ್ಷರು, ಶಾಸಕರು, ಅಧಿಕಾರಿಗಳನ್ನು ತಬ್ಬಿಬ್ಬುಗೊಳಿಸಿದರು. ಕಳೆದ 2 ತಿಂಗಳಿನಿಂದ ನಿಂತಿದ್ದ ಕಸ ಸಾಗಿಸುವ ಕಂಟೈನರ್ಗೆ 18 ಸಾವಿರ ರು. ಡೀಸೆಲ್ ಲೋಡ್ ಮಾಡಿರುವ ಅವ್ಯವಹಾರ ಬಯಲುಗೊಳಿಸಿದರು.
ಇಂಧನ ಖರೀದಿ ವೋಚರ್ಗೆ ಅಧ್ಯಕ್ಷರೇ ಸಹಿ ಮಾಡಿದ್ದು,ಅಧಿಕಾರಿಗಳ ಭ್ರಷ್ಟತೆಗೆ ಸ್ಪಷ್ಟ ನಿದರ್ಶನ ಎಂದು ತರಾಟೆಗೆ ತೆಗೆದುಕೊಂಡರು. ನಗರಸಭೆ ಸಾಮಾನ್ಯ ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜು, ಜೆಡಿಎಸ್ನ ಎಂಎಲ್ಸಿ ಡಾ.ಎಂ.ಆರ್. ಹುಲಿನಾಯ್ಕರ್ ಇತರರು ಉಪಸ್ಥಿತರಿದ್ದರು.
ಅಧಿಕಾರಿಗಳು ತಬ್ಬಿಬ್ಬು
ಈ ಜಮಾ ಖರ್ಚುಗಳ ಲೋಪ ಬಹಿರಂಗ ಕೂಡಲೇ ಅಧಿಕಾರಿಗಳು ತಬ್ಬಿಬ್ಬಾದರು. ಈ ಸಂದರ್ಭದಲ್ಲಿ ಹಾಜರಿದ್ದ ಶಾಸಕ ಡಾ.ರಫೀಕ್ ಅಹ್ಮದ್ ದಾಖಲೆಗಳನ್ನು ಪರಿಶೀಲಿಸಿದರು. ಇಂಧನ ಖರೀದಿಯಲ್ಲಿನ ಅವ್ಯವಹಾರ ಕಂಡು ವಿಚಲಿತಗೊಂಡರು. ಆಯುಕ್ತ ಶರೀಫ್, ರಾತ್ರಿವೇಳೆ ಈ ಕಂಟೈನರ್ ಬಳಸಲಾಗುತ್ತಿದೆ ಎಂದು ಉತ್ತರಿಸಲು ಮುಂದಾದರು. ಆಯುಕ್ತರ ಹೇಳಿಕೆಯಿಂದ ಮತ್ತಷ್ಟು ಕೆರಳಿದ ಸುದೀಶ್ವರ್, ಇದೊಂದು ಸ್ಯಾಂಪಲ್ ಅಷ್ಟೇ. ಈ ರೀತಿಯ ಎಷ್ಟು ಅವ್ಯವಹಾರಗಳು ನಡೆಯುತ್ತಿವೆಯೋ ಬೇಕಾದಷ್ಟು ಹಣ ಇದೆ. ಅಧಿಕಾರಿಗಳು ಮನಸೋ ಇಚ್ಛೆ ತಿನ್ನುತ್ತಿದ್ದಾರೆ. ಇಂತಹ ಹತ್ತು-ಹಲವು ಕಳ್ಳತನದ ಚೆಕ್ಗಳನ್ನು ತಂದುಕೊಡುತ್ತೇನೆ ಅಧ್ಯಕ್ಷರೇ, ಹಾಗೇ ಕಣ್ಮುಚ್ಚಿ ಸಹಿ ಹಾಕಿಬಿಡುತ್ತೀರಾ ಜನರ ತೆರಿಗೆ ಹಣ ದುರ್ಬಳಕೆಯಾಗುತ್ತಿದೆ. ಹೀಗಾಗಿ ಹೊಣೆಹೊತ್ತು ರಾಜೀನಾಮೆ ನೀಡಿ. ಇಲ್ಲದಿದ್ದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಿ ಎನ್ನುತ್ತಾ ಸಭಾತ್ಯಾಗ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

