ತುಮಕೂರು

ತುಮಕೂರು ಪೊಲೀಸ್ ಬೆಸ್ಟ್: ಐಜಿಪಿ ಶಹಬಾಸ್

Published On :

ತುಮಕೂರು: ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧ ತಡೆಯುವಲ್ಲಿ ತುಮಕೂರು ಪೊಲೀಸರೇ ಬೆಸ್ಟ್ ಈ ಶಹಬಾಸ್ಗಿರಿಯನ್ನು ಕೊಟ್ಟವರು ಕೇಂದ್ರ ವಲಯ  ಐಜಿಪಿ ಅಮರಕುಮಾರ್ ಪಾಂಡೆ. ತುಮಕೂರಿನಲ್ಲಿ ಪೊಲೀಸ್ ಇಲಾಖೆಯ ವಾರ್ಷಿಕ ಪರಿಶೀಲನೆ ನಡೆಸಿದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಂಡೆ ಕೇಂದ್ರ ವಲಯಕ್ಕೆ ಸೇರಿದ ಜಿಲ್ಲೆಗಳಲ್ಲಿ ತುಮಕೂರು ಪೊಲೀಸರು ದಕ್ಷತೆ ಮೆರೆದಿದ್ದಾರೆ ಎಂದು ಪ್ರಶಂಸಿಸಿದರು.
2013ನೇ ಸಾಲಿನಲ್ಲಿ ರಾಜ್ಯದಲ್ಲಿ ಎರಡು ಪ್ರಮುಖ ಚುನಾವಣೆಗಳು ನಡೆದಿದ್ದು, ಶಾಸಕರ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪೊಲೀಸರು ತುಂಬ ಒಳ್ಳೆಯ ಕಾರ್ಯನಿರ್ವಹಿಸಿದ್ದರ ಪರಿಣಾಮ ಇಡೀ ಚುನಾವಣೆ ಯಾವುದೇ ಅಹಿತಕರ ಘಟನೆಯಿಲ್ಲದೆ ಮುಕ್ತಾಯಗೊಂಡಿತ್ತು. ರಾಜ್ಯದಲ್ಲಿಯೇ ತುಮಕೂರು ಎರಡನೇ ಅತಿದೊಡ್ಡ ಜಿಲ್ಲೆಯಾಗಿರುವುದರಿಂದ ಇಲ್ಲಿ ಕಾರ್ಯನಿರ್ವಹಿಸುವುದು ನಿಜಕ್ಕೂ ಒಂದು ಸವಾಲಿನ ಕೆಲಸ. ಜನತೆಯ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಪಾಂಡೆ ನುಡಿದರು.
ಶೇ. 90 ಕ್ಕೂ ಹೆಚ್ಚು ಸಾಧನೆ: ಕಳೆದ ಸಾಲಿಗೆ ಹೋಲಿಸಿದರೆ ಸರಗಳ್ಳತನ, ಮನೆಕಳವು, ಕೊಲೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. 2012ನೇ ಸಾಲಿನಲ್ಲಿ 81 ಕೊಲೆ ಪ್ರಕರಣಗಳು ದಾಖಲಾಗಿದ್ದರೆ 65 ಕೇಸುಗಳನ್ನು ಪತ್ತೆ ಹಚ್ಚಲಾಗಿತ್ತು. ಈ ಸಾಲಿನಲ್ಲಿ 55 ಪ್ರಕರಣಗಳು ದಾಖಲಾಗಿದ್ದು, 51 ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ಶೇ. 90 ಕ್ಕೂ ಹೆಚ್ಚು ಸಾಧನೆ ಮಾಡಲಾಗಿದೆ ಎಂದರು.
ಅದೇ ರೀತಿ ಸರಗಳ್ಳತನಗಳಲ್ಲಿ ಇದುವರೆಗೆ 88 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 43 ಕೇಸುಗಳನ್ನು ಪತ್ತೆ ಹೆಚ್ಚಿದ್ದು, ಕೆಲವು ಕೇಸುಗಳು ಪತ್ತೆಯ ಹಂತದಲ್ಲಿವೆ. ಕನ್ನಗಳವು ಪ್ರಕರಣಗಳ ಸಂಖ್ಯೆ 2012ರಲ್ಲಿ 352 ದಾಖಲಾಗಿದ್ದರೆ 233ನ್ನು ಪತ್ತೆ ಹಚ್ಚಲಾಗಿತ್ತು. 2013ನೇ ಸಾಲಿನಲ್ಲಿ ಪ್ರಕರಣಗಳ ಸಂಖ್ಯೆ ಕುಸಿದಿದೆ. ಕೇವಲ 236 ಕೇಸುಗಳು ದಾಖಲಾಗಿದ್ದು ಅವುಗಳಲ್ಲಿ 142 ಕೇಸುಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಐಜಿಪಿ ಅಮರ್ಕುಮಾರ್ ಪಾಂಡೆ ತಿಳಿಸಿದರು.
ದಂಡ ವಸೂಲಿ: ಅಕ್ರಮ ಮರಳು ದಂಧೆ ತಡೆಯುವುದು ಪೊಲೀಸರ ಕೆಲಸವಲ್ಲ. ಆದರೆ ಟಾಸ್ಕಪೋರ್ಸ್ನ ಒಂದು ಭಾಗವಾಗಿ ಪೊಲೀಸ್ ಇಲಾಖೆ ಇಲ್ಲಿಯೂ ಉತ್ತಮವಾಗಿ ಕೆಲಸ ಮಾಡಿದೆ. 2011ರಲ್ಲಿ ಅಕ್ರಮ ಮರಳು ದಂಧೆ ವಿಚಾರವಾಗಿ 376 ಕೇಸು ದಾಖಲಾದರೆ, 2012ರಲ್ಲಿ 325 ಕೇಸು ದಾಖಲಾಗಿತ್ತು. ಆದರೆ 2013 ನೇ ವರ್ಷದಲ್ಲಿ ಅದರ ನಾಲ್ಕು ಪಟ್ಟು ಅಂದರೆ 1094 ಪ್ರಕರಣ ದಾಖಲು ಮಾಡಲಾಗಿದೆ. 117 ಪ್ರಕರಣಗಳಲ್ಲಿ ಎಫ್.ಐ.ಆರ್.ದಾಖಲಿ 339 ಜನರನ್ನು ಬಂಧಿಸಲಾಗಿದೆ.ಅಲ್ಲದೆ 1.49 ಕೋಟಿ ರೂ ದಂಢ ವಸೂಲಿ ಮಾಡಲಾಗಿದೆ ಎಂದು ಪಾಂಡೆ ನುಡಿದರು.
ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಪ್ರಸ್ಥುತ 140 ಹುದ್ದೆಗಳು ಖಾಲಿಯಿದ್ದು, ಇವುಗಳನ್ನು ತುಂಬಲು ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಗೃಹ ಸಚಿವರು 8 ಸಾವಿರ ಪೊಲೀಸರ ನೇಮಕಕ್ಕೆ ಕ್ರಮ ಕೈಗೊಂಡಿದ್ದು, ಈ ವೇಳೆ ತುಮಕೂರು ಜಿಲ್ಲೆಯ ಖಾಲಿ ಹುದ್ದೆಗಳನ್ನು ಕಾನೂನು ಪ್ರಕಾರ ತುಂಬಲಾಗುವುದು. ಜಯನಗರ ಪೊಲೀಸ್ ಠಾಣೆಗೆ ಸಂಬಂಧಿಸಿದಂತೆ ಪ್ರಕ್ರಿಯೇ ಪ್ರಾರಂಭವಾಗಿದ್ದು, ಸದ್ಯದಲ್ಲಿಯೇ ಸರಕಾರಿ ಆದೇಶ ಹೊರಬೀಳಲಿದೆ ಎಂದರು.
ಪೊಲೀಸ್ ಇಲಾಖೆಯ ಅಧಿಕಾರಿಗಳ ವರ್ಗಾವಣೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಮಾತು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದ ಅವರು, ತುಮಕೂರು ಉಪಕೇಂದ್ರ ಬಂಧಿಖಾನೆಯ ಅವ್ಯವಹಾರ ಕುರಿತಂತೆ ತನಿಖೆ ಮಾಡಿ ಇಲಾಖೆಗೆ ವರದಿ ನೀಡಲಾಗಿದೆ. ವರದಿಯ ಶಿಫಾರಸುಗಳ ಅನ್ವಯ ಕ್ರಮ ಕೈಗೊಳ್ಳುವುದು ಸಂಬಂಧಪಟ್ಟ ಇಲಾಖೆ ಬಿಟ್ಟ ವಿಚಾರ. ಒಳ್ಳೆಯ ಕೆಲಸ ಮಾಡಿರುವ ತುಮಕೂರು ಪೊಲೀಸರಿಗೆ ಕೆಲವು ಕೇಸುಗಳ ಪತ್ತೆಗೆ ಸಂಬಂಧಿಸಿದಂತೆ ಬಹುಮಾನಕ್ಕಾಗಿ ಶಿಫಾರಸ್ಸು ಮಾಡಲಾಗಿದೆ ಎಂದು ಐಜಿಪಿ ಅಮರಕುಮಾರ್ ಪಾಂಡೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್. ಲಕ್ಷ್ಮಣ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.