ನಮೋ ರ್ಯಾಲಿಯ ನಂತರ ಬಿಜೆಪಿಯಲ್ಲಿ ಉತ್ಸಾಹ
ಕ.ಪ್ರ.ವಾರ್ತೆ ತುಮಕೂರು ಡಿ. 7
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ನಿರೀಕ್ಷಿತವಾಗಿತ್ತು. ಖಚಿತವಾಗಿತ್ತು. ಆದರೆ ಈಗ ಹಾಗಿಲ್ಲ. 6 ತಿಂಗಳ ಹಿಂದಿನ ನಿರುತ್ಸಾಹದ ವಾತಾವರಣ ಈಗಿಲ್ಲ. ಬೆಂಗಳೂರು ನಮೋ ರ್ಯಾಲಿಯ ನಂತರ ರಾಜ್ಯ ಬಿಜೆಪಿಯಲ್ಲಿ ಉತ್ಸಾಹದ ವಾತಾವರಣ ಕಂಡುಬರುತ್ತಿದೆ ಎಂದು ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಅಭಿಪ್ರಾಯಪಟ್ಟರು.
ಅವರು ತುಮಕೂರಿನಲ್ಲಿ ಬಿಜೆಪಿ ವತಿಯಿಂದ ಏರ್ಪಾಟಾಗಿದ್ದ ಲೋಕಸಭಾ ಚುನಾವಣಾ ಪೂರ್ವ ಸಿದ್ಧತಾ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ರಾಜ್ಯ ಬಿಜೆಪಿ ಸರ್ಕಾರದ ಬಗ್ಗೆ ಜನತೆಯ ನಿರೀಕ್ಷೆ ತುಂಬಾ ಇತ್ತು. ಆದರೆ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದೇ ಇದ್ದುದು ಹಾಗೂ ಕಚ್ಚಾಡಿದ್ದು ಪಕ್ಷ ಸೋಲಲು ಕಾರಣವಾಯಿತು. ಜನತೆ ಬಿಜೆಪಿಗೆ ಶಿಕ್ಷೆ ಕೊಟ್ಟರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಖಚಿತವಾಗಿತ್ತು ಎಂದು ಆತ್ಮಾವಲೋಕನ ಮಾಡಿಕೊಳ್ಳುವ ರೀತಿಯಲ್ಲಿ ಮಾತನಾಡಿದರು.
ಅಂದಿನ ಪ್ರಧಾನಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರುವದಕ್ಕಿಂತಲೂ ಮುಂಚೆ ಅನೇಕ ಜನಪರ ಕೆಲಸಗಳನ್ನು ಮಾಡಿ, ದೇಶಾದ್ಯಂತ ಅಲೆಯೆಬ್ಬಿಸಿ, ಒಳ್ಳೆಯ ಸರ್ಕಾರ ಎಂಬ ಭಾವನೆ ಮೂಡಿಸಿದ್ದರು. ಆದರೆ ತುರ್ತು ಪರಿಸ್ಥಿತಿ ಹೇರಿದ ಪರಿಣಾಮ ಅವರೂ ಕೂಡ ಚುನಾವಣೆಯಲ್ಲಿ ಸೋಲಬೇಕಾಯಿತು. ಕಳೆದ 5 ವರ್ಷಗಳಲ್ಲಿ ರಾಜ್ಯ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು ಒಂದಷ್ಟು ಒಳ್ಳೆಯ ಕೆಲಸ ಮಾಡಿದ್ದರೂ, ಕಚ್ಚಾಡಿದ್ದರಿಂದ, ಸರ್ಕಾರ, ಪಕ್ಷ ನಡೆದುಕೊಂಡ ರೀತಿಯಿಂದ ಕೆಟ್ಟ ಹೆಸರು ಬಂತು. ಚುನಾವಣೆಯಲ್ಲಿ ಸೋಲಾಯಿತು ಎಂದು ವಿಶ್ಲೇಷಿಸಿದರು.
ಭ್ರಮೆ ಬೇಡ: ಬೆಂಗಳೂರು ರ್ಯಾಲಿಯಲ್ಲಿ ಸೇರಿದ್ದ ಜನ ನೋಡಿ ಭ್ರಮೆಗೆ ಒಳಗಾಗುವುದು ಬೇಡ. ಗೆಲವಿನ ಭ್ರಮೆಯಲ್ಲಿ ತೇಲುವುದು ಬೇಡ. ಕೆಲಸ ಮಾಡದೇ ಗೆಲವು ಸಾಧ್ಯವಿಲ್ಲ. ಅದೊಂದು ಉತ್ಸಾಹ ತುಂಬುವ ರ್ಯಾಲಿಯಷ್ಟೆ. ಬೆಂಗಳೂರಿಗೆ ಕಾರ್ಯಕರ್ತರು ವಿಶೇಷವಾಗಿ ಬಂದಿದ್ದರು. ಪ್ರತಿಯೊಬ್ಬರೂ ಉತ್ಸಾಹದಿಂದ ಬಂದಿದ್ದರು. ಭಾರತ ಗೆಲ್ಲಿಸಿ ನಮೋ ರ್ಯಾಲಿಗೆ ಯಾರೂ ಹೆದರಿಕೆಯಿಂದ ಬಂದಿರಲಿಲ್ಲ. ಅಭಿಮಾನದಿಂದ ಬಂದಿದ್ದರು. ವ್ಯವಸ್ಥೆ ತುಂಬಾ ಚೆನ್ನಾಗಿತ್ತು. ನರೇಂದ್ರ ಮೋದಿ ಪ್ರಭಾವ ಕಾರ್ಯಕರ್ತರ ಮೇಲೆ ಆಗಿದ್ದು ಎದ್ದು ಕಾಣುತ್ತಿತ್ತು. ಬೆಳಗ್ಗೆ 7 ಗಂಟೆಯ ವೇಳೆಗೆ 20 ಸಾವಿರ ಕುರ್ಚಿಗಳು ನಮೋ ರ್ಯಾಲಿಯಲ್ಲಿ ಭರ್ತಿಯಾಗಿದ್ದವು. ಲೋಕಸಭಾ ಚುನಾವಣೆಯಲ್ಲಿ ಪಕ್ಷ ವ್ಯವಸ್ಥಿತವಾಗಿ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಸಕ್ರಿಯರಾಗಿ ಮುಂದುವರೆಯುವಂತೆ ಕರೆ ನೀಡಿದರು.
ಗೇಮ್ ಚೇಂಜರ್: ಹಿಂದೆ ಬಿಜೆಪಿ ಏರುಮುಖದಲ್ಲಿದ್ದಾಗ ಗೆದ್ದಿದ್ದು ಇತಿಹಾಸ. ಆದರೆ ವಾತಾವರಣ ಅಂದಿನ ಹಾಗಿಲ್ಲ. ಸುಮರು 25 ವರ್ಷಗಳ ಹಿಂದೆ ಕಪಿಲ್ದೇವ್ ಆಲ್ರೌಂಡ್ ಆಟದ ಮೂಲಕ ಭಾರತಕ್ಕೆ ವಿಶ್ವಕಪ್ ಕ್ರಿಕೆಟ್ ಟ್ರೋಫಿ ತಂದುಕೊಡುವ ಮೂಲಕ ಗೇಮ್ ಚೇಂಜರ್ ಆದರು. ಅದೇ ರೀತಿ ಇಂದು ನರೇಂದ್ರ ಮೋದಿಯವರ ಭಾರತ ಗೆಲ್ಲಿಸಿ ರ್ಯಾಲಿಯ ಮೂಲಕ ದೇಶದ ಗೇಮ್ ಚೇಂಜರ್ ಆಗಲು ಹೊರಟಿದ್ದಾರೆ. ಅವರನ್ನು ಗೆಲ್ಲಿಸುವುದು ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನ ಕೆಲಸವಾಗಬೇಕು. ಬೆಂಗಳೂರು ನಮೋ ರ್ಯಾಲಿ ಗೇಮ್ ಚೇಂಜರ್ ಇನ್ಸಿಂಗ್ಸ್ ಇದ್ದ ಹಾಗೆ. ಇದೊಂದು ಲೋಕಸಭಾ ಚುನಾವಣೆಗೆ ನಡೆದ ಪೂರ್ವಭಾವಿ ಸಭೆ ಎಂಬುದನ್ನು ಮರೆಯದಿರಿ ಎಂದು ಕಿವಿ ಮಾತು ಹೇಳಿದರು.
ಭ್ರಮೆ ಬೇಡ: ಕುಸಿದಿದ್ದ ಬಿಜೆಪಿಗೆ ಈ ನಮೋ ರ್ಯಾಲಿ ವಿಶ್ವಾಸ ತುಂಬುವ ಸಭೆಯಾಗಿತ್ತು. ರ್ಯಾಲಿ ಆಗಿದೆ. ಲೋಕಸಭಾ ಚುನಾವಣೆಯಲ್ಲಿ ಗೆದ್ದೇ ಬಿಟ್ಟೆವು ಎಂಬ ಭ್ರಮೆ ಬೇಡ. ಬಿಜೆಪಿ ಗೆಲ್ಲಿಸಿ, ಮೋದಿ ಪ್ರಧಾನಿ ಮಾಡುವುದರ ಮೂಲಕ ಗೇಮ್ ಚೇಂಜರ್ ಆಗುವಂತೆ ಕಾರ್ಯಕರ್ತರಿಗೆ ಸಂತೋಷ್ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಕೆಲ ಟೀಕೆಗಳನ್ನು ಸಂತೋಷ್ ಮಾಡಿದರು.
ಸಭೆಗೆ ತುಮಕೂರು ಜಿಲ್ಲೆಯ ವಿವಿಧೆಡೆಯಿಂದ ಕಾರ್ಯಕರ್ತರು ಆಗಮಿಸಿದ್ದರು. ಗಿರೀಶ್ ಸ್ವಾಗತಿಸಿ, ತಿಪಟೂರಿನ ಮಾಜಿ ಶಾಸಕ ಬಿ.ಸಿ. ನಾಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪಂಚಾಕ್ಷರಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

