ನೀರು ಹರಿಸದೇ ಕಿರುಕುಳ, ಜನರ ಆಕ್ರೋಶ
ಗುಬ್ಬಿ: ತಾಲೂಕಿನ ಕಸಬಾ ಹೋಬಳಿ ಜಿ.ಹೊಸಹಳ್ಳಿ ಕೆರೆ ಹಾಗೂ ವರ್ಜನಕೆರೆಗಳಿಗೆ ಹೇಮಾವತಿ ನೀರು ಹರಿಸಿ ಎಂದರೆ ಅಧಿಕಾರಿಗಳು ಇಲ್ಲ ಸಲ್ಲದ ಕಾರಣ ನೀಡುತ್ತಿದ್ದಾರೆ. ಕಳಪೆ ಗುಣಮಟ್ಟದಿಂದ ನಿರ್ಮಾಣಗೊಂಡ ಉಪನಾಲೆ ಒಡೆದಿರುವ ಬಗ್ಗೆ ಗ್ರಾಮಸ್ಥರನ್ನು ದೂರುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದ ಜಿ.ಹೊಸಹಳ್ಳಿ ಗ್ರಾಮಸ್ಥರು ಮಂಗಳವಾರ ಪಟ್ಟಣದ ಹೇಮಾವತಿ ನಾಲಾ ಸಹಾಯಕ ಎಂಜಿನಿಯರ್ ಕಚೇರಿ ಮುಂದೆ ಪ್ರತಿಭಟಿಸಿದರು.
ಕಳೆದರೆಡು ವರ್ಷದಿಂದ ಹೇಮಾವತಿ ನೀರು ಕಾಣದೆ ಕಂಗಾಲಾದ ಜಿ.ಹೊಸಹಳ್ಳಿ, ಮಡೇನಹಳ್ಳಿ ರೈತರಿಗೆ ಡಿ.7 ರಿಂದ ನೀರು ಹರಿಸುವ ಭರವಸೆ ನೀಡಿದ್ದ ಹೇಮಾವತಿ ಎಂಜಿನಿಯರ್ಗಳು ಮಡೇನಹಳ್ಳಿ ಕೆರೆಗೆ ನೀರು ಹರಿದ ಬಳಿಕ ಜಿ.ಹೊಸಹಳ್ಳಿ ಮತ್ತು ವರ್ಜನಕೆರೆಗೆ ನೀರು ಹರಿಸುವುದಾಗಿ ತಿಳಿಸಿದ್ದರು. ಮುಖ್ಯನಾಲೆಯಿಂದ 23 ನೇ ವಿತರಣಾ ಉಪನಾಲೆಯ ಮೂಲಕ 17 ಕಿ.ಮೀ ದೂರದ ಮಡೇನಹಳ್ಳಿ ಕೆರೆಗೆ ನೀರು ಹರಿಸುವ ಮಾರ್ಗ ಮಧ್ಯೆ 12 ನೇ ಕಿ.ಮೀ ಬಳಿ ಸೋಮವಾರ ರಾತ್ರಿ ನಾಲೆಯು ಒಡೆದು ನೀರು ಪೋಲಾಗಿದೆ. ಇದರ ಹೊಣೆ ಹೊರಬೇಕಾದ ಅಧಿಕಾರಿಗಳು ಜಿ.ಹೊಸಹಳ್ಳಿ ಗ್ರಾಮಸ್ಥರ ಮೇಲೆ ದೂರಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಆರೋಪ: ರಾಜಕೀಯ ದುರುದ್ದೇಶದಿಂದ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜು ಅರಸ್ ಹಾಗೂ ಇತರರ ಮೇಲೆ ಪೊಲೀಸ್ ದೂರು ನೀಡಿರುವ ಎಇಇ ಶಿವಕುಮಾರ್, ರೈತರ ಸಂಕಷ್ಟಕ್ಕೆ ಸ್ಪಂದಿಸಿ ನಾಲೆ ದುರಸ್ಥಿ ಮಾಡಿ ನೀರು ಹರಿಸುವ ಬಗ್ಗೆ ಚಿಂತನೆ ನಡೆಸಬೇಕಾದ ಹೇಮಾವತಿ ಅಧಿಕಾರಿಗಳು ಮಡೇನಹಳ್ಳಿ ಮತ್ತು ಜಿ.ಹೊಸಹಳ್ಳಿ ಗ್ರಾಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದ್ದಾರೆ ಎಂದು ಮುಖಂಡ ಎಚ್.ಎಸ್. ರೇಣುಕಾಪ್ರಸಾದ್ ಆರೋಪಿಸಿದರು.
ನಿಯಾಮಾನುಸಾರ ಜಿ.ಹೊಸಹಳ್ಳಿ ಕೆರೆ ಮತ್ತು ವರ್ಜನಕೆರೆಗೆ ನೀರು ಹರಿಸಬೇಕಾದ ಅಧಿಕಾರಿಗಳು ಈವರೆಗೆ ಶೇ.20 ರಷ್ಟು ಮಾತ್ರ ನೀರು ನೀಡಿದ್ದಾರೆ. ತಾಂತ್ರಿಕ ತೊಂದರೆ ಎಂಬ ಹಾರಿಕೆ ಉತ್ತರ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಉದ್ದೇಶ ಪೂರ್ವಕವಾಗಿ ಈ ಎರಡು ಕೆರೆಗಳಿಗೆ ನೀರು ಹರಿಸುತ್ತಿಲ್ಲ. ನಾಲೆ ಒಡೆದಿದ್ದಾರೆ ಎಂದು ದೂರುತ್ತಾ ರೈತರಲ್ಲಿ ಭಯ ಹುಟ್ಟಿಸುವ ಕಾರ್ಯ ಮಾಡಿದ್ದಾರೆ ಎಂದು ಹೇಮಾವತಿ ಅಧಿಕಾರಿಗಳ ವಿರುದ್ಧ ಗ್ರಾಪಂ ಸದಸ್ಯ ನಾಗರಾಜು ಅರಸ್ ಕಿಡಿಕಾರಿದರು. ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಸದಸ್ಯ ಎಚ್.ಎಲ್.ಬಸವರಾಜು, ಹೊನ್ನಪ್ಪಾಜೀ ಅರಸ್, ಚನ್ನಬಸವಯ್ಯ, ಕಿಶೋರ್, ಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

