ಅಧಿಕಾರ ಮದದಲ್ಲಿ ರಾಜಕಾರಣಿ, ಅಧಿಕಾರಿಗಳು
ತುಮಕೂರು: ಅಧಿಕಾರದ ಮದದಲ್ಲಿ ರಾಜಕಾರಣಿ ಹಾಗೂ ಅಧಿಕಾರಿ ವರ್ಗ ತೇಲುತ್ತಿದೆ ಎಂದು ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಜಿಪಂ ಸಭಾಂಗಣದಲ್ಲಿ ಏರ್ಪಾಟಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ದೈತ್ಯ ಪ್ರತಿಭೆ. ದುರದೃಷ್ಟವಶಾತ್ ಅಂಬೇಡ್ಕರ್ ಬೇಗ ನಿಧನರಾದರು. ಅಂಬೇಡ್ಕರ್ ಅವರ ನಿರಂತರ ಶ್ರಮದ ಫಲವೇ ಇಂದು ನಾವೆಲ್ಲಾ ಮೂಲಭೂತ ಹಕ್ಕುಗಳನ್ನು ಅನುಭವಿಸಲು ಸಾಧ್ಯವಾಗಿರುವುದು. ಸಂವಿಧಾನವೇ ಎಲ್ಲ ಕಾನೂನುಗಳ ಮೂಲ ಬೇರು. ತಾಯಿಯಿದ್ದಂತೆ. ಅಧಿಕಾರ ಅಂದರೆ ಜವಾಬ್ದಾರಿ. ಸಂವಿಧಾನದ ಆಶೋತ್ತರಗಳನ್ನು ಈಡೇರಿಸಲು ನೀಡಿರುವ ಅಧಿಕಾರ, ಬಲು ದೊಡ್ಡ ಜವಾಬ್ದಾರಿ ಎಂದರ್ಥ. ಸಂವಿಧಾನ ಜಾರಿಯಾದ ಮೇಲಾದರೂ ಸ್ವತಂತ್ರ ಭಾರತದಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಜನಸೇವಕರಾಗಿ ನಡೆದುಕೊಳ್ಳಬೇಕಾಗಿತ್ತು. ಸ್ವತಂತ್ರ ಬಂದು 65 ವರ್ಷಗಳು ಕಳೆದರೂ ಅಧಿಕಾರಿ, ರಾಜಕಾರಣಿಗಳು ಬ್ರಿಟಿಷ್ ಪಳೆಯುಳಿಕೆ, ತುಂಡುಗಳಂತೆಯೇ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಅಧಿಕಾರ ಇರುವುದು ಸಾಮಾನ್ಯ ಜನತೆಯ ಸೇವೆ ಮಾಡುವುದಕ್ಕಾಗಿ ಎಂಬುದನ್ನು ರಾಜಕಾರಣಿಗಳು, ಅಧಿಕಾರಿಗಳು ಮರೆತಿದ್ದಾರೆ. ಸಂವಿಧಾನದ ಅರ್ಥೈಸುವಿಕೆಯಲ್ಲಿ, ಜಾರಿಯಲ್ಲಿ ವಿಫಲರಾಗಿದ್ದೇವೆ. ಜನತೆ ಕೇಳುತ್ತಿರುವುದು ಸಂವಿಧಾನ ನೀಡಿರುವ ಹಕ್ಕುಗಳನ್ನು ಎಂಬುದನ್ನು ಮರೆತು, ಅವರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದಾರೆ. ಅಧಿಕಾರದ ಮದದಲ್ಲಿ ತೇಲುತ್ತಿದ್ದಾರೆ. ಸರ್ಕಾರಿ ಹುದ್ದೆಯನ್ನು ಜವಾಬ್ದಾರಿ ಬದಲು ಅಧಿಕಾರ ಎಂದು ತಿಳಿದದ್ದೇ ಅದ್ವಾನಕ್ಕೆ ಕಾರಣವಾಗಿದೆ. ರಾಜಕೀಯ ಮುಖಂಡರು ಅಧಿಕಾರಿಗಳಿಗೆ ಅರಿವು ಮೂಡಿಸುವಲ್ಲಿ ವಿಫಲವಾಗಿರುವುದು ವ್ಯವಸ್ಥೆಯ ಮುಖ್ಯ ದೋಷವಾಗಿದೆ ಎಂದು ಗೋಪಾಲಗೌಡ ತೀವ್ರ ವಾಗ್ದಾಳಿ ನಡೆಸಿದರು.
ಕನಿಷ್ಠ ಸೌಜನ್ಯವಿಲ್ಲ: ಸಾಮಾನ್ಯ ಜನತೆ ಇಲಾಖೆಗಳಿಗೆ ಕೆಲಸಗಳಿಗೆ ಹೋದಲ್ಲಿ ಕುಳಿತುಕೊಳ್ಳಿ ಎಂದು ಕನಿಷ್ಠ ಸೌಜನ್ಯದ ಮಾತನ್ನೂ ಆಡದ ದುಸ್ಥಿತಿಗೆ ಅಧಿಕಾರಶಾಹಿ ತಲುಪಿರುವುದು ದೇಶದ ದುರಂತ. ಇದಕ್ಕೆ ನೇರ ಹೊಣೆ ವ್ಯವಸ್ಥೆಯ ಉಸ್ತುವಾರಿ ಹೊತ್ತಿರುವ ರಾಜಕಾರಣಿಗಳು. ಜನ ಭಿಕ್ಷೆ ಕೇಳಲು ಬರುತ್ತಿಲ್ಲ. ಹಕ್ಕು ಕೇಳಲು ಬರುತ್ತಿದ್ದಾರೆ ಎಂಬ ಮೂಲಭೂತ ಅಂಶವನ್ನು ಮತ್ತೆ-ಮತ್ತೆ ಅಧಿಕಾರಶಾಹಿಗೆ ನೆನಪು ಮಾಡಿಕೊಡಬೇಕಿದೆ. ಇದರ ಜವಾಬ್ದಾರಿ ನೇರವಾಗಿ ಮತ್ತೆ ಸರ್ಕಾರದ್ದೇ ಆಗಿರುತ್ತದೆ ಎಂಬುದನ್ನು ಬೇರೆ ಹೇಳಬೇಕಿಲ್ಲ ಎಂದು ಗೋಪಾಲಗೌಡ ಮಾರ್ಮಿಕವಾಗಿ ನುಡಿದರು.
ಹೆಚ್ಚು ದಿನ ನಡೆಯಲ್ಲ: ಅಧಿಕಾರ ಶಾಹಿ ದರ್ಪ, ರಾಜಕಾರಣಿಗಳ ಬೇಜವಾಬ್ದಾರಿತನದಿಂದ ಜನತೆ ರೋಸಿ ಹೋಗಿದ್ದಾರೆ. ಅಧಿಕಾರಶಾಹಿ ಸಭ್ಯತೆಯ ಎಲ್ಲೆ ಮೀರುತ್ತಿದೆ. ಸರ್ಕಾರ ಹಾಗೂ ಐಎಎಸ್ ಮನೋಸ್ಥಿತಿ ತುರ್ತಾಗಿ ಬದಲಾಗಬೇಕಿದೆ. ಸಾಮಾನ್ಯರಿಗೆ ಸ್ಪಂದಿಸುವ ತುರ್ತು ಇಂದಿನದ್ದಾಗಿದೆ. ಸರ್ಕಾರ ಹಾಗೂ ಅಧಿಕಾರಿ ವರ್ಗದ ಬೇಜವಾಬ್ದಾರಿ ಮನೋಸ್ಥಿತಿ ಹೆಚ್ಚು ದಿನ ನಡೆಯಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಿದೆ ಎಂದು ಗೋಪಾಲಗೌಡ ನುಡಿದರು.
ನಕ್ಸಲಿಸಂಗೆ ಆಡಳಿತ ವೈಫಲ್ಯ ಕಾರಣ: ಈ ದೇಶದ ಧರ್ಮ ಸತ್ಯ ಹಾಗೂ ಅಹಿಂಸೆಯೇ ಹೊರತು ಬೇರಾವುದೇ ಧರ್ಮಗಳಲ್ಲ. ಸತ್ಯ, ಅಹಿಂಸೆ ಮರೆತ ಪರಿಣಾಮ ರಕ್ತಪಾತಗಳಾಗುತ್ತಿವೆ. ದೇಶದಲ್ಲಿ ಮೂಲಭೂತ ವ್ಯವಸ್ಥೆಗಳಾದ ರಸ್ತೆ, ಕುಡಿಯುವ ನೀರು, ಶಾಲೆ, ಉದ್ಯೋಗ ಎಷ್ಟು ಜನರಿಗೆ ದೊರಕಿದೆ ಎಂಬುದನ್ನು ಸ್ವಲ್ಪ ಗಮನವಿಟ್ಟು ನೋಡಬೇಕಿದೆ. ತಿಂಗಳುಗಳೇ ಕಳೆದರೂ ರಸ್ತೆ ರಿಪೇರಿ ಕಾರ್ಯ ಮುಗಿಯುವುದಿಲ್ಲ. ಜನತೆ ಎಷ್ಟು ಅಂತ ಸಹಿಸಬೇಕು ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಗೋಪಾಲಗೌಡ, ನಕ್ಸಲಿಸಂಗೆ ಆಡಳಿತ ವೈಫಲ್ಯವೇ ಕಾರಣ. ಅಂದರೆ ಜನತೆಯ ಮೂಲಭೂತ ಹಕ್ಕುಗಳ ಜಾರಿಯಲ್ಲಿ ಸರ್ಕಾರ ವಿಫಲವಾಗಿರುವುದೇ ಕಾರಣ. ಯಾವ ವೇದ, ಉಪನಿಷತ್ತುಗಳಲ್ಲಿ ಮಾನವ ಹಕ್ಕುಗಳ ಬಗ್ಗೆ ಹೇಳಿದ್ದರೆ ಏನು ಪ್ರಯೋಜನ. ಪ್ರಜಾಪ್ರಭುತ್ವದಲ್ಲೂ ಮಾನವ ಹಕ್ಕುಗಳು ಸಮರ್ಪಕವಾಗಿ ಜಾರಿಯಾಗದಿದ್ದರೆ, ಅಂಬೇಡ್ಕರ್, ಸಂವಿಧಾನದ ಆಶಯ ಈಡೇರದಿದ್ದರೆ ಏನಾಗಬಹುದು ಎಂದು ಗೋಪಾಲಗೌಡ ಮಾರ್ಮಿಕವಾಗಿ ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಜಿಪಂ ಸಿಇಓ ಗೋವಿಂದರಾಜು, ಜಿಲ್ಲಾ ಸತ್ರ ಹಾಗೂ ಪ್ರಧಾನ ನ್ಯಾಯಾಧೀಶ ಎಚ್.ಬಿ. ಪ್ರಭಾಕರಶಾಸ್ತ್ರಿ, ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ಕೆ. ವೆಂಕಟಾಚಲಪತಿ ಸ್ವಾಮಿ, ಡಾ. ಗುಂಡೇಗೌಡ, ವಕೀಲ ಎಸ್. ರಮೇಶ್ ಅಧಿಕಾರಿ ವರ್ಗ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

