ರಜೆ ಲೆಕ್ಕದಲ್ಲೇ ಕಾಲ ಕಳೆವ ಸರ್ಕಾರಿ ನೌಕರರು
ತುಮಕೂರು: ಸಮಾನತೆಯಿಲ್ಲದ ಸಮಾಜ ಸಮಾಜವೇ ಅಲ್ಲ. ಮಾಹಿತಿ ಹಕ್ಕು ಕಾಯ್ದೆ ಜಾರಿಯಾಗಿರುವುದು, ಸಕಾಲ ಯೋಜನೆ ಬಂದಿರುವುದು ಒಳ್ಳೆಯ ಸಮಾಜದ ಲಕ್ಷಣವಲ್ಲ. ಇದೊಂದು ಕರ್ತವ್ಯಭ್ರಷ್ಟತೆಗೆ ಹಿಡಿದ ಕನ್ನಡಿ. ಇದರ ಹಿಂದಿನ ವ್ಯಥೆಯನ್ನು ಗುರುತಿಸಬೇಕು ಎಂದು ಜಿಲ್ಲಾ ಸತ್ರ ಹಾಗೂ ಪ್ರಧಾನ ನ್ಯಾಯಾಧೀಶ ಹೆಚ್.ಬಿ. ಪ್ರಭಾಕರಶಾಸ್ತ್ರಿ ಮಾರ್ಮಿಕವಾಗಿ ನುಡಿದರು.
ಅವರು ಜಿಲ್ಲಾಡಳಿತದ ವತಿಯಿಂದ ಏರ್ಪಾಟಾಗಿದ್ದ ಮಾನವ ಹಕ್ಕುಗಳ ದಿನಚಾರಣೆ ಉದ್ಘಾಟಿಸಿ ಮಾತನಾಡಿದರು.
ಬಹುತೇಕ ಸರ್ಕಾರಿ ನೌಕರರು ರಜೆ ಲೆಕ್ಕ ಹಾಕುವುದರಲ್ಲೇ ಕಾಲ ಕಳೆಯುತ್ತಾರೆ. ಎರಡು ದಿನ ಸರ್ಕಾರಿ ರಜೆ ಬಂದರೆ 3 ನೇ ದಿನ ರಜೆ ಹಾಕಿ ಏನು ಮಾಡಬಹುದು ಎಂಬುದರಲ್ಲೇ ಮಗ್ನರಾಗಿರುತ್ತಾರೆ. ಇನ್ನು ಮಾನವ ಹಕ್ಕುಗಳ ಬಗ್ಗೆ ಕಾಳಜಿಯೆಲ್ಲಿಂದ ಬಂತು. ನಾಗರಿಕರಿಗೆ ಸೌಲಭ್ಯ ಒದಗಿಸುವ ಮಾತೆಲ್ಲಿ ಬಂತು. ಹಕ್ಕನ್ನಷ್ಟೇ ಚಲಾಯಿಸುವ ನಾವು, ಕರ್ತವ್ಯದ ಬಗ್ಗೆ ಜಾಣ ಮರೆವು ತೋರುತ್ತಿದ್ದೇವೆ. ಲಿಂಗ ಅಸಮಾನತೆ ಎಲ್ಲೆಡೆ ವಿಜೃಂಭಿಸುತ್ತಿದೆ. ಸಂವಿಧಾನದ ಆಶಯ 65 ವರ್ಷಗಳಾದರೂ ಈಡೇರಿಲ್ಲ. ಜಾತಿ, ಧರ್ಮದ ಮೇಲಾಟಗಳಿಂದಾಗಿ ಈಗಾಗಲೇ ಎರಡು ಮಹಾಯುದ್ಧಗಳು ನಡೆದು ಹೋಗಿವೆ. 3 ನೇ ಮಹಾಯುದ್ದ ಬೇಡವಾಗಿದ್ದು, ವಿಶ್ವದೆಲ್ಲೆಡೆ ಸಮರ್ಪಕವಾಗಿ ಮಾನವ ಹಕ್ಕುಗಳ ಜಾರಿಯೊಂದೇ ಇದಕ್ಕೆ ಉತ್ತರ ಎಂದರು.
ನಾವು ನಮ್ಮ ಬಗ್ಗೆ ಯೋಚಿಸುತ್ತೇವೆಯೇ ವಿನಃ ಇತರರ ಬಗ್ಗೆ ಯೋಚಿಸುವುದೇ ಇಲ್ಲ. ಬೇಜವಾಬ್ದಾರಿಯ ಪರಿಣಾಮ ಮಾನವ ಹಕ್ಕುಗಳ ಜಾರಿಯಲ್ಲಿ ವಿಳಂಬವಾಗುತ್ತಿರುವುದು. ಒಂದೇ ಕಡೆ ಸರ್ಕಾರಿ ನೌಕರರು 8, 10, 15, 20 ವರ್ಷಗಳ ಕಾಲ ಝಾಂಡ ಊರುವುದೇ ಆಡಳಿತ ಕುಂಠಿತಗೊಳ್ಳಲು ಒಂದು ಕಾರಣ. ಇದರಿಂದ ವ್ಯವಸ್ಥೆ ಜಡ್ಡುಗಟ್ಟಿ ಹೋಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಲ್ಮಾರ್ಕ್ಸ್, ಅಂಬೇಡ್ಕರ್, ಮಂಡೇಲ ಗುಣಗಾನ ಮಾಡಿದ, ಕೆ.ಎಸ್. ಸತ್ಯಮೂರ್ತಿ ಸಂಬಳ ತೆಗೆದುಕೊಳ್ಳುವ ನಾವೆಲ್ಲಾ ಕಾರ್ಮಿಕರೇ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು. ಅಂಬೇಡ್ಕರ್ ಹಿಡಿದ ಕೆಲಸವನ್ನು ಬೆಂಬಿಡದೆ ಮಾಡಿದ ಪರಿಣಾಮ ಸಂವಿಧಾನಶಿಲ್ಪಿ ಎನಿಸಿಕೊಂಡರು. ಮಂಡೇಲಾ 27 ವರ್ಷಗಳ ಕಾಲ ಜೈಲಿನಲ್ಲಿದ್ದರೂ ಧೃತಿಗೆಡದೆ ವರ್ಣಭೇದ ನೀತಿ ಹೋರಾಟ ಮಾಡಿ ಮಹಾತ್ಮ ಎನಿಸಿಕೊಂಡರು. ಕಾರ್ಲ್ ಮಾರ್ಕ್ಸ್ ಹೇಳಿದ ತತ್ವಗಳನ್ನು ಜಗತ್ತು ಅಳವಡಿಸಿಕೊಂಡಿದ್ದರೆ ಇಂದು ಸಮಸ್ಯೆಗಳೇ ಇರುತ್ತಿರಲಿಲ್ಲ. ನಾವು ನಮ್ಮ ಬಗ್ಗೆ ಯೋಚಿಸುತ್ತೇವೆಯೇ ವಿನಃ ಇತರರ ಬಗ್ಗೆ ಯೋಚಿಸುವುದೇ ಇಲ್ಲ. ಪರಿಣಾಮ ಮಾನವ ಹಕ್ಕುಗಳ ಜಾರಿಯಲ್ಲಿ ವಿಳಂಬವಾಗುತ್ತಿರುವುದು. ಪಾವಗಡದಲ್ಲಿ ಫ್ಲೋರೈಡ್ ನೀರಿನ ಸಮಸ್ಯೆ ಬಗೆಹರಿದಿಲ್ಲ.
ತುಮಕೂರು ಜಿಲ್ಲೆಗೆ 25 ಟಿಎಂಸಿ ಹೇಮಾವತಿ ನೀರು ಸರಬರಾಜಾಗಬೇಕಿದೆ. ಆದರೆ ಆಗುತ್ತಿರುವುದು ಮಾತ್ರ 16 ಟಿಎಂಸಿ ಮಾತ್ರ. ಇದು ಮಾನವ ಹಕ್ಕುಗಳ ಉಲ್ಲಂಘನೆಯೇ. ಆಡಳಿತದಲ್ಲಿ ವೇಗವಿಲ್ಲ. ಚುರುಕಿಲ್ಲ. ನಾಳೆ ಅನ್ನೋದು ಮಾಮೂಲಾಗಿ ಹೋಗಿದೆ. ಏಕಾಗ್ರತೆಯಿಲ್ಲದ ಬದುಕು, ಹಿಡಿದ ಕೆಲಸ ಮಾಡುವ ಇಚ್ಛೆಯಿಲ್ಲದ್ದೇ ಸರ್ಕಾರಿ ಆಡಳಿತ ಕುಂಠಿತಗೊಳ್ಳಲು ಮುಖ್ಯ ಕಾರಣವಾಗಿದೆ ಎಂದು ಸತ್ಯಮೂರ್ತಿ ನುಡಿದರು.
ಒಬ್ಬಟ್ಟಿನ ಊಟದ ಹಾಗೆ
ನಾಳೆ ಅನ್ನೋದು, ನಾಳೆ ಕೆಲಸ ಮಾಡೋಣ ಅನ್ನೋದು ಸರ್ಕಾರಿ ನೌಕರರಿಗೆ ಒಬ್ಬಟ್ಟಿನ ಊಟವಿದ್ದಂತೆ ಎಂದು ವಿಶ್ವ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಮಾರ್ಮಿಕವಾಗಿ ನುಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

