ತುಮಕೂರು

ಆರೋಗ್ಯ ಭಾಗ್ಯಕ್ಕಾಗಿ ಯೋಗ ಕಡ್ಡಾಯ ಮಾಡಿ

Published On :

ಕ.ಪ್ರ.ವಾರ್ತೆ ತುಮಕೂರು ಡಿ.10
ದೇಶದ ಅಭಿವೃದ್ಧಿಗಾಗಿ, ಶಿಸ್ತು, ತಾಳ್ಮೆ, ಆರೋಗ್ಯ ಭಾಗ್ಯಕ್ಕಾಗಿ ವೈಜ್ಞಾನಿಕವಾಗಿ ಯೋಗಾಸನವನ್ನು ಪಠ್ಯಕ್ರಮದಲ್ಲಿ ಕಡ್ಡಾಯ ಮಾಡುವುದು ಒಳಿತು ಎಂದು ತುಮಕೂರಿನ ಹಿರಿಯ ಯೋಗ ಶಿಕ್ಷಕ ಹಾಗೂ ಹಿರಿಯ ವಕೀಲರೂ ಆಗಿರುವ ಎಸ್.ವಿ.ರವೀಂದ್ರನಾಥ ಠಾಗೂರ್ ಪ್ರತಿಪಾದಿಸಿದ್ದಾರೆ.
ಅವರು ತುಮಕೂರಿನ ಪತಂಜಲಿ ಯೋಗ ಸಮಿತಿಯ ವತಿಯಿಂದ ಅಮರಜ್ಯೋತಿ ನಗರದಲ್ಲಿ ಏರ್ಪಾಟಾಗಿದ್ದ ಉಚಿತ ಯೋಗಶಿಬಿರ  ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಜನತೆಯ ಆರೋಗ್ಯಭಾಗ್ಯಕ್ಕಾಗಿ ಕೋಟ್ಯಂತರ ರು.ಗಳನ್ನು ಆಸ್ಪತ್ರೆ, ಔಷಧಿಗಾಗಿ ಪ್ರತಿವರ್ಷ ವೆಚ್ಚ ಮಾಡುತ್ತಿದೆ. ಆದರೆ ಯಾವುದೇ ವೆಚ್ಚವಿಲ್ಲದೆ ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಳ್ಳುವ ಸುಲಭ ವಿಧಾನವಾಗಿರುವ ಯೋಗಾಸನ ಕುರಿತಂತೆ ನಿರ್ಲಕ್ಷ್ಯ ವಹಿಸಿದೆ. ಆಟೋಟಗಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಅದೇ ರೀತಿ ಯೋಗಾಸನಕ್ಕೂ ಪ್ರೋತ್ಸಾಹ ನೀಡಿ, ಕಡ್ಡಾಯ ಮಾಡಿದಲ್ಲಿ ವಿದ್ಯಾರ್ಥಿಗಳಲ್ಲಿ, ಯುವಜನತೆಯಲ್ಲಿ ಶಿಸ್ತು, ಆರೋಗ್ಯ ಭಾಗ್ಯ ಮೂಡಿಸಲು ಯೋಗದಿಂದ ಸಾಧ್ಯ. ಯುವಜನಾಂಗವೇ ದೇಶದ ಶಕ್ತಿ. ದೇಶದ ಅಭಿವೃದ್ಧಿ ಯುವ ಜನಾಂಗದ ಮೇಲೆ ನಿಂತಿದೆ. ಹೀಗಾಗಿ ಎಲ್ಲ ಖಾಸಗಿ, ಸರ್ಕಾರಿ ಶಾಲೆಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಯೋಗಾಸನ ಕಡ್ಡಾಯ ಮಾಡುವುದು ಇಂದಿನ ತುರ್ತಾಗಿದೆ. ಯೋಗದಿಂದ ಆರೋಗ್ಯ ಸುಧಾರಣೆ ಸಾಧ್ಯ ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಸಂಗತಿ. ವಿದೇಶಗಳಲ್ಲಿ ಹಣ ನೀಡಿ, ಯೋಗ ಕಲಿಯುತ್ತಿರುವ ಉದಾಹರಣೆಗಳು ಬೇಕಾದಷ್ಟಿವೆ. ಹೀಗಿರುವಾಗ ಯೋಗದ ತವರೂರಾದ ಭಾರತದಲ್ಲಿ ಜನತೆಯ ಆರೋಗ್ಯ ಸುಧಾರಣೆಯ ದೃಷ್ಟಿಯಿಂದ ಯೋಗ ಕಡ್ಡಾಯ ಮಾಡವುದು ಒಳಿತು. ಜನತೆಯ ಆರೋಗ್ಯ ಸುಧಾರಿಸಿದಲ್ಲಿ ಸರ್ಕಾರಕ್ಕೆ ಕೋಟ್ಯಂತರ ರು. ಹಣ ಉಳಿತಾಯವಾದಂತಾಗುತ್ತದೆ. ಜನತೆ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆ, ಬಾಧೆಗಳಿಂದ ನರಳುವುದು ತಪ್ಪುತ್ತದೆ ಎಂದು ಠಾಗೂರ್ ತಿಳಿಸಿದರು. ಆರೋಗ್ಯ ಎಲ್ಲರಿಗೂ ಬೇಕು. ಇದಕ್ಕಾಗಿ ಪ್ರತಿನಿತ್ಯ ಕನಿಷ್ಠ ಶ್ರಮ ಅತ್ಯಗತ್ಯ ಯೋಗ ಎಂದರೆ ಆರೋಗ್ಯ  ಎಂದರ್ಥ ಎಂದು ತಿಳಿಯಬೇಕಿದೆ ಎಂದು ಠಾಗೂರ್ ಅಭಿಪ್ರಾಯಪಟ್ಟರು. ಇಂದು ಮನುಷ್ಯ ಜೀವನಕ್ರಮವನ್ನು ದೇಹ ಪ್ರಕೃತಿ, ಪರಿಸರ ಪ್ರಕೃತಿಗೆ ವಿರುದ್ಧವಾಗಿ ತಿರುಗಿಸಿಕೊಂಡಿರುವುದರ ಪರಿಣಾಮವೇ ಭಯಂಕರ ರೋಗಗಳು ಕಾಣಿಸಿಕೊಳ್ಳಲು ಕಾರಣವಾಗಿದೆ.
ಸೀಮಿತವಲ್ಲ: ಯೋಗಾಸನ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಲ್ಲ ಎಂಬುದನ್ನು ಎಲ್ಲರೂ ನೆನಪಿನಲ್ಲಿಡಬೇಕು. ಯೋಗದ ಮೂಲ ಭಾರತವೇ ಆಗಿದ್ದರೂ, ಇಂದು ಭಾರತಕ್ಕಿಂತ ಪಾಶ್ಚಿಮಾತ್ಯರಲ್ಲೇ ಹೆಚ್ಚು- ಹೆಚ್ಚು ಪ್ರಚಲಿತದಲ್ಲಿದೆ. ಪಾಶ್ಚಿಮಾತ್ಯರು ಹಣ ಕೊಟ್ಟು ಯೋಗ ಕಲಿತು ಆರೋಗ್ಯ ಸುಧಾರಿಸಿಕೊಳ್ಳುತ್ತಿದ್ದಾರೆ. ಆದರೆ ಭಾರತದಲ್ಲಿ ಉಚಿತವಾಗಿ ಯೋಗ ಶಿಬಿರಗಳು ನಡೆಯುತ್ತಿದ್ದರೂ ಸದುಪಯೋಗಪಡಿಸಿಕೊಳ್ಳುವವರ ಸಂಖ್ಯೆ ವಿರಳವಾಗಿದೆ. ಇದೊಂದು ಹಿತ್ತಲ ಗಿಡ ಮದ್ದಲ್ಲ ಎಂಬುದಕ್ಕೆ ಉದಾಹರಣೆಯಾಗಿದೆ. ಅಷ್ಟೇ ಅಲ್ಲ ವಿಷಾದನೀಯ ಸಂಗತಿ ಕೂಡ ಎಂದರು.
ಯೋಗ ಇಂದು ಧರ್ಮಾಂಧರ ಕೈಯಲ್ಲಿ ಸಿಕ್ಕುತ್ತಿದೆಯೇ ಕೇವಲ ಒಂದು ಥರ್ಮಕ್ಕೆ ಅಥವಾ ಯಾವುದಾದರೂ ಚೌಕಟ್ಟಿಗೆ ಸೀಮಿತವಾಗಿದೆಯೇ ಎಂಬುದನ್ನು ನೋಡಬೇಕಿದೆ. ಮೂಲತಃ ನೋಡಿದಲ್ಲಿ ಯೋಗಕ್ಕೆ ಯಾವುದೇ ಧರ್ಮ, ಜಾತಿಯ ಚೌಕಟ್ಟಿಲ್ಲ. ಮನುಷ್ಯರೆಲ್ಲಾ, ಮಾನವ ಜನಾಂಗವೆಲ್ಲಾ ಒಂದೇ ಎನ್ನುತ್ತಿರುವಾಗ ಯೋಗಕ್ಕೆ ಜಾತಿ, ಧರ್ಮದ ಸೋಂಕು ತಗುಲಿಸುವುದು ಅನಗತ್ಯ. ಅಷ್ಟೇ ಅಲ್ಲ. ಯೋಗಕ್ಕೆ ಮಾಡುವ ದ್ರೋಹ. ಅಷ್ಟೇ ಅಲ್ಲ ಧರ್ಮದ ಹೆಸರಲ್ಲಿ ಮಾಡುವ ಭಯೋತ್ಪಾದನೆ ಕೂಡ ಎಂದು ಮಾರ್ಮಿಕವಾಗಿ ನುಡಿದರು. ಮುಸ್ಲಿಮರು, ಕ್ರಿಶ್ಚಿಯನ್ನರು ಸೇರಿದಂತೆ ಜಗತ್ತಿನ ಎಲ್ಲ ಧರ್ಮೀಯರು ಯೋಗಾಭ್ಯಾಸಕ್ಕೆ ಅರ್ಹರು. ಇದರಲ್ಲಿ ಎರಡು ಮಾತಿಲ್ಲ ಎಂದು ಠಾಗೂರ್ ಬಲವಾಗಿ ಪ್ರತಿಪಾದಿಸಿದರು.
ಅಂಧಾನುಕರಣೆ ಬೇಡ: ಯೋಗಾಸನವನ್ನು ಅಂಧಾನುಕರಣೆ, ಧಾರ್ಮಿಕ ಚೌಕಟ್ಟಿಗೆ ಸೇರಿಸಿ ಮಾಡುವುದು ಸರಿಯಲ್ಲ. ಯೋಗಾಸನವನ್ನು ಕೂಡ ವೈಜ್ಞಾನಿಕ ರೀತಿಯಲ್ಲೇ ಮಾಡುವುದು ಉತ್ತಮ ಮಾರ್ಗ. ಯಾವ ಆಸನಗಳನ್ನು ಎಷ್ಟೆಷ್ಟು ನಿಮಿಷ ಮಾಡಿದಲ್ಲಿ ಯಾವ್ಯಾವ ರೀತಿಯ ಆರೋಗ್ಯ ಭಾಗ್ಯ ಲಭಿಸುತ್ತದೆ ಎಂಬುದನ್ನು ಮನದಲ್ಲಿಟ್ಟುಕೊಂಡು ಯೋಗಾಭ್ಯಾಸ ಮಾಡುವುದು ಒಳಿತು. ಹೀಗಾದಾಗ ಯೋಗ ಅದ್ಭುತ ಶಕ್ತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಶ್ಲೋಕಕಷ್ಟೇ ಮಹತ್ವ ಕೊಟ್ಟು, ಆಚರಣೆಯಲ್ಲಿ ವಿಫಲರಾದಲ್ಲಿ ಯಾವುದೇ ಆರೋಗ್ಯ ಭಾಗ್ಯ ಲಭಿಸಲು ಸಾಧ್ಯವಿಲ್ಲ ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.
ಒಟ್ಟಾರೆ ಯೋಗ ಎಂದರೆ ನಮ್ಮನ್ನು ನಾವು ಅರಿಯುವುದು ಎಂದರ್ಥ. ಯೋಗಕ್ಕೆ ಯಾವುದೇ ಧರ್ಮದ ಚೌಕಟ್ಟು ಬೇಕಿಲ್ಲ. ಆರೋಗ್ಯ ಭಾಗ್ಯದ ದೃಷ್ಟಿಯಿಂದ ಎಲ್ಲ ವರ್ಗದ ಜನತೆ ಯೋಗಾಭ್ಯಾಸ ಮಾಡುವುದು ದೇಶದ ಹಾಗೂ ಇಡೀ ಭೂಮಂಡಲದ ದೃಷ್ಟಿಯಿಂದ ಒಳಿತು ಎಂದು ಠಾಗೂರ್ ಮಾರ್ಮಿಕವಾಗಿ ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.