ಉಸ್ತುವಾರಿ ಸಚಿವರೇ ತುಸು ಇತ್ತ ಗಮನಿಸಿ...
ತುರುವೇಕೆರೆ: ಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವರೂ, ಪಶು ಸಂಗೋಪನಾ ಸಚಿವರೂ ಆದ ಟಿ.ಬಿ.ಜಯಚಂದ್ರ ಅವರೇ ಮಾಯಸಂದ್ರದಲ್ಲಿರುವ ಪಶು ಆಸ್ಪತ್ರೆಯ ಕಡೆ ದಯವಿಟ್ಟು ಒಂದ್ ಸಾರಿ ನೋಡ್ತೀರಾ...
ಹೊರಗಡೆಯಿಂದ ಮಾತ್ರ ನೋಡಲು ಸೊಗಸಾದ ಕಟ್ಟಡ ಅಂತ ಕಾಣುತ್ತೆ. ಆದರೆ ಕಟ್ಟಡದ ಒಳಗೆ ಹೋಗಿ ಮೇಲ್ಭಾಗ ನೋಡಿದರೆ ಎಷ್ಟೊತ್ತಿಗೆ ಆಚೆ ಬಂದೆನೋ ಎಂದು ಜೀವ ಹೊಡೆದುಕೊಳ್ಳುತ್ತೆ. ಯಾಕಂದ್ರೆ ಕಟ್ಟಡದ ಛಾವಣಿ ಸಂಪೂರ್ಣವಾಗಿ ಕಿತ್ತು ಬಂದಿದೆ. ಸಿಮೆಂಟ್ ಎಲ್ಲಾ ಉದುರಿ ಈಗ ಕಬ್ಬಿಣದ ಸರಳುಗಳು ಅಸ್ಥಿಪಂಜರದಂತೆ ತೆರೆದುಕೊಂಡಿವೆ. ಕ್ಷಣ ಕ್ಷಣವೂ ಸಿಮೆಂಟ್ನ ತುಣುಕುಗಳು, ಕಬ್ಬಿಣದ ತುಣುಕುಗಳು ಕಿತ್ತು ಬರುತ್ತಲೇ ಇವೆ. ಕೊಠಡಿಯೊಳಗೇ ಪಶುಗಳ ಔಷಧಗಳು ಇಡಲಾಗಿದೆ. ಅತ್ತ ವೈದ್ಯರು ಕೂರುವ ಕೊಠಡಿಯೂ ಇದಕ್ಕಿಂತ ಹೊರತಾಗಿಲ್ಲ. ಕಳೆದ ಐದಾರು ವರ್ಷಗಳಿಂದಲೂ ಈ ಪಶು ಆಸ್ಪತ್ರೆಯ ಸ್ಥಿತಿಯನ್ನು ಮೇಲಾಧಿಕಾರಿಗಳಿಗೆ ವಿವರಿಸಿದರೂ ಪ್ರಯೋಜನವಾಗಿಲ್ಲ.
ಗೋಡೆಗಳು ಬೀಳುವ ಹಂತ ತಲುಪಿರುವುದರಿಂದ ಹೊರಾಂಗಣದಲ್ಲಿ ಕೋಲುಗಳಿಂದ ತಡೆ ಒಡ್ಡಲಾಗಿದೆ. ಈ ಕಟ್ಟಡದೊಳಗೆ ಇದ್ದು ಚಿಕಿತ್ಸೆ ನೀಡುವುದು ಅಸಾಧ್ಯವೆಂದು ತಿಳಿದಿರುವ ವೈದ್ಯರು ಹಾಗೂ ಸಿಬ್ಬಂದಿ ಬಹು ಸಮಯ ಆಸ್ಪತ್ರೆಯ ಆವರಣದಲ್ಲಿ ಇರುವ ಮರಗಳ ಕೆಳಗೇ ಕುಳಿತು ಬರುವ ಪಶುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಯಾವ ಕ್ಷಣದಲ್ಲಿ ಉದುರಿ ಹೋಗುವುದೋ ಎಂಬ ಆತಂಕ ಎದುರಾಗಿದೆ. ಲಕ್ಷಾಂತರ ರೂಪಾಯಿಯ ಔಷಧಗಳೂ ಇದೇ ಕೊಠಡಿಯಲ್ಲೇ ಇದೆ. ಸಿಮೆಂಟ್ ಉದುರಿ ಹೋಗುವುದರಿಂದ ಗಾಜಿನ ಶೀಶೆಯಲ್ಲಿರುವ ಔಷಧಗಳು ಒಡೆದು ಹೋಗುತ್ತಿವೆ. ವೈದ್ಯರು ಹಾಗೂ ಸಿಬ್ಬಂದಿ ದಿನಕಳೆದರೆ ಸಾಕಪ್ಪಾ ಜೀವ ಉಳಿಯಿತು ಎಂದು ಉಸಿರು ಬಿಡುವಂತಾಗಿದೆ.
ಹೊಸ ಕಟ್ಟಡ ನಿರ್ಮಿಸಲು ಜಿಪಂ ಸದಸ್ಯರ ಒತ್ತಾಯ: ಬಹಳ ಹಳೇ ಕಟ್ಟಡವಾಗಿರುವ ಮಾಯಸಂದ್ರದ ಪಶು ಆಸ್ಪತ್ರೆಯ ಕಟ್ಟಡವನ್ನು ಕೂಡಲೇ ಕೆಡವಿ ನೂತನ ಕಟ್ಟಡವನ್ನು ನಿರ್ಮಿಸಬೇಕು ಎಂದು ಜಿ ಪಂ ಸದಸ್ಯ ಶ್ರೀನಿವಾಸಯ್ಯ ಒತ್ತಾಯಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಕ್ಷೇತ್ರ ವ್ಯಾಪ್ತಿಗೆ ಬರುವ ಈ ಆಸ್ಪತ್ರೆಯನ್ನು ಕೂಡಲೇ ತೆರವುಗೊಳಿಸಿ ವಿಸ್ತಾರವಾದ ಆಸ್ಪತ್ರೆಯ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ದಿ. ಮಾ.ಕೃ.ನರಸಿಂಹಯ್ಯ ಮುಂದಾಳತ್ವದಲ್ಲಿ ಆಗಿದ್ದ ಈ ಕಟ್ಟಡ ಬಹಳ ಹಳೆಯದಾಗಿದೆ. ಆದ್ದರಿಂದ ಬೇರೆ ಕಟ್ಟಡ ಕಟ್ಟುವುದು ಅತ್ಯಗತ್ಯ ಎಂದು ಸ್ವಾತಂತ್ರ್ಯ ಹೋರಾಟಗಾರ ಎಂ.ಹೆಚ್.ನರಸಿಂಹಯ್ಯ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

