ತುಮಕೂರು

ಮೇಲ್ಸೇತುವೆ ಕಾಮಗಾರಿಗೆ ಮತ್ತೆ 9 ಕೋಟಿ

Published On :

ತುಮಕೂರು: ಮಹತ್ವಾಕಾಂಕ್ಷಿ ಉಪ್ಪಾರಹಳ್ಳಿ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಮತ್ತೆ 9 ಕೋಟಿ ರು. ಮಂಜೂರಾಗಿದ್ದು ಅತಿ ಶೀಘ್ರದಲ್ಲೇ ಸರ್ವಿಸ್ ರಸ್ತೆ, ವಿದ್ಯುತ್ ಸೌಕರ್ಯವನ್ನು ಕಾಣಲಿದೆ.
ಮೂಲಭೂತ ಸೌಕರ್ಯ ಇಲಾಖೆ ಹಾಗೂ ರೇಲ್ವೆ ಇಲಾಖೆಯಿಂದ ಹಣ ಮಂಜೂರಾಗಿದ್ದು ಕ್ಷಿಪ್ರಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.
ಅಲ್ಲದೇ ಭದ್ರಮ್ಮ  ಛತ್ರದಿಂದ ಮೇಲ್ಸೇತುವೆ ಪ್ರವೇಶ ದ್ವಾರದವರೆಗೆ ರಸ್ತೆ ನಿರ್ಮಿಸಲಾಗುವುದು. ಈಗಾಗಲೇ ರಾತ್ರಿ ವೇಳೆ ವಿದ್ಯುತ್ ಇಲ್ಲದೇ ಇರುವುದರಿಂದ ಮೇಲ್ಸೇತುವೆ ಮೇಲೆ ವಾಹನ ಚಲಾಯಿಸುವುದು ದುಸ್ತರವಾಗಿದೆ. ಅಲ್ಲದೇ ಮೇಲ್ಸೇತುವೆ ಕೆಳಗೆಡೆ ಸವಾರರು ಗೊಂದಲಕ್ಕೆ ಬೀಳುವುದರಿಂದ ನಿರಂತರ ಅಪಘಾತಗಳು ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಭದ್ರಮ್ಮ ಛತ್ರದಿಂದ ಮೇಲ್ಸೇತುವೆ ಪ್ರವೇಶದವರೆಗೆ ರಸ್ತೆ ಸಂಪರ್ಕ ಕಲ್ಪಿಸುವ ಇರಾದೆಯನ್ನು ಹೊಂದಲಾಗಿದೆ.
ಗೊಂದಲ, ತಾಪತ್ರಯ: ಕಳೆದ 10 ವರ್ಷಗಳ ಹಿಂದೆ ಆರಂಭವಾದ ಈ ಮೇಲ್ಸೇತುವೆ ಕಾಮಗಾರಿ ಹಲವಾರು ಗೊಂದಲ, ತಾಪತ್ರಯಗಳಿಂದ ಇಲ್ಲಿಯ ತನಕ ನಡೆಯಿತು. ಕಳೆದ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಮುನ್ನ ಅಂದಿನ ಸಚಿವ ಸೊಗಡು ಶಿವಣ್ಣ ಮೇಲ್ಸೇತುವೆ ಕಾಮಗಾರಿಯನ್ನು ನಾಗರಿಕರಿಗೆ ಮುಕ್ತಗೊಳಿಸಿದ್ದರು. ವಿದ್ಯುತ್ ಸೌಕರ್ಯ, ಸರ್ವಿಸ್ ರಸ್ತೆ ಇಲ್ಲದೆ ತರಾತುರಿಯಲ್ಲಿ ಮೇಲ್ಸೇತುವೆ ಮುಕ್ತಗೊಳಿಸಿದ್ದಕ್ಕೆ ವಿರೋಧ ಪಕ್ಷಗಳು ಟೀಕೆಯನ್ನೂ ಮಾಡಿದ್ದವು. ಸುದೀರ್ಘ 6 ತಿಂಗಳ ನಂತರ ಮೇಲ್ಸೇತುವೆ 9 ಕೋಟಿ ರು. ಮಂಜೂರಾಗಿದ್ದು ಅತಿ ಶೀಘ್ರದಲ್ಲೇ ಕಾಮಗಾರಿ ಆರಂಭಿಸುವ ಯೋಜನೆ ಹೊಂದಲಾಗಿದೆ.
ಜೋರಾಗಿ ಸಾಗಿದೆ ಕೆಳ ಸೇತುವೆ ಕಾಮಗಾರಿ: ಅತ್ತ ಮೇಲ್ಸೇತುವೆ ಕಾಮಗಾರಿಗೆ ಮತ್ತೆ 9 ಕೋಟಿ ರು. ಬಿಡುಗಡೆಯಾಗಿದ್ದರೆ ಇತ್ತ ಶೆಟ್ಟಿಹಳ್ಳಿ ಕೆಳಸೇತುವೆ ನಿರ್ಮಾಣ ಕಾಮಗಾರಿ ಬಿರುಸಿನಿಂದ ಕೂಡಿದೆ. ಸುಮಾರು 9 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಾಮಗಾರಿಯನ್ನು 1 ವರ್ಷದೊಳಗೆ ಪೂರ್ಣಗೊಳಿಸುವ ಇರಾದೆ ಹೊಂದಲಾಗಿದೆ.
ಕೇಂದ್ರ, ರಾಜ್ಯ ಸಹಭಾಗಿತ್ವ: ಈಗಾಗಲೇ ಶೆಟ್ಟಿಹಳ್ಳಿ ರಸ್ತೆಗೆ ನಿರ್ಬಂಧ ವಿಧಿಸಲಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಈ ಕಾಮಗಾರಿಯನ್ನು ರೈಲ್ವೆ ಇಲಾಖೆ ಈಗಾಗಲೇ ಆರಂಭಿಸಿದೆ. ರೇಲ್ವೆ ಇಲಾಖೆಯವರು ತಮ್ಮ ಪಾಲಿನ ಕೆಲಸ ಮುಗಿಸಿದ ಕೂಡಲೇ ನಗರಸಭೆ ಮತ್ತು ಟೂಡಾದವರು ಈ ಕಾರ್ಯ ಕೈಗೊಳ್ಳಲಿದ್ದಾರೆ.
9 ಮೀ ಆಳ: ಶೆಟ್ಟಿಹಳ್ಳಿ ಗೇಟ್ ಬಳಿ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕ 9 ಮೀ ಆಳದಲ್ಲಿ ಗುಂಡಿ ತೋಡಲಾಗಿದೆ. ರಾಘವೇಂದ್ರ ಸ್ವಾಮಿ ಮಠದ ಕಡೆ 180 ಮೀಟರ್ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನದ ಕಡೆ 65 ಮೀಟರ್ ಉದ್ದದಲ್ಲಿ ಈ ಕೆಳಸೇತುವೆ ನಿರ್ಮಾಣವಾಗಲಿದೆ. ರಸ್ತೆ ಮಧ್ಯದಿಂದ ಎಡ ಬಲದಲ್ಲಿ 12.5 ಮೀಟರ್ ಜಾಗ ಬಿಡಬೇಕಾಗಿದ್ದು ಈಗಾಗಲೇ ಮಾರ್ಕಿಂಗ್ ಕೂಡ ಆಗಿದೆ. ಅಲ್ಲದೇ 17 ಅಡಿ ಸರ್ವಿಸ್ ರಸ್ತೆಯನ್ನು ಮಾಡಲಾಗುವುದು.
ಕ್ಷಿಪ್ರಗತಿಯಲ್ಲಿ  ಪೂರ್ಣಗೊಳಿಸಲು ಕ್ರಮ: ಶಾಸಕ
ಉಪ್ಪಾರಹಳ್ಳಿ ಮೇಲ್ಸೇತುವೆ ಕಾಮಗಾರಿಗೆ ಬೇಕಾಗಿದ್ದ ಹಣ ಬಿಡುಗಡೆಯಾಗಿದ್ದು ಸರ್ವಿಸ್ ರಸ್ತೆ, ವಿದ್ಯುತ್ ಹಾಗೂ ಮೇಲ್ಸೇತುವೆಗೆ ಕನೆಕ್ಟ್ ಆಗಲಿಕ್ಕೆ ಭದ್ರಮ್ಮ ಛತ್ರದಿಂದ ರಸ್ತೆ ನಿರ್ಮಿಸಲು ಬಿಡುಗಡೆಯಾಗಿರುವ 9 ಕೋಟಿ ರು. ಹಣವನ್ನು ವಿನಿಯೋಗಿಸಲಾಗುವುದು. ಉಳಿದಂತೆ ಕೆಳಸೇತುವೆ ಕಾಮಗಾರಿಯನ್ನು ಕ್ಷಿಪ್ರಗತಿಯಲ್ಲಿ  ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
10 ತಿಂಗಳಿನಲ್ಲಿ ಕಾಮಗಾರಿ ಪೂರ್ಣ: ನಾಗರಾಜರಾವ್
ಕೆಳಸೇತುವೆ ಕಾಮಗಾರಿ ಭರದಿಂದ ನಡೆಯುತ್ತಿದೆ. ಇನ್ನು 10 ತಿಂಗಳಿನಲ್ಲಿ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಳಿಸಿ ಶೆಟ್ಟಿಹಳ್ಳಿ, ಜಯನಗರ, ಮಾರುತಿ ನಗರ ವಾಸಿಗಳಿಗೆ ಮುಕ್ತ ಪ್ರವೇಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ರೈಲ್ವೆ ಇಲಾಖೆಯವರು ತಮ್ಮ ಪಾಲಿನ ಕಾಮಗಾರಿ ಆರಂಭಿಸಿದ್ದಾರೆ. ನಂತರ ನಗರಸಭೆ ಹಾಗೂ ಟೂಡಾದವರು ಸರ್ವಿಸ್ ರಸ್ತೆಯನ್ನು ಪೂರ್ಣಗೊಳಿಸುತ್ತೇವೆ.
ಮುಖ್ಯಾಂಶಗಳು
ಮೇಲ್ಸೇತುವೆ ಹೈಲೆಟ್ಸ್
ಮೂಲಭೂತ ಸೌಕರ್ಯ ಇಲಾಖೆಯಿಂದ ಹಣ ಬಿಡುಗಡೆ
ಮೇಲ್ಸೇತುವೆಗೆ ವಿದ್ಯುತ್, ಸರ್ವಿಸ್ ರಸ್ತೆ ನಿರ್ಮಾಣ
ಕ್ರಿಪ್ರಗತಿಯಿಂದ ಕಾಮಗಾರಿ ಆರಂಭಿಸಲು ತೀರ್ಮಾನ
ನಿರಂತರ ಅಪಘಾತ ತಪ್ಪಿಸಲು ತುರ್ತು ಕಾಮಗಾರಿ
ಅತಿ ಶೀಘ್ರದಲ್ಲೇ ಸಂಪೂರ್ಣ ಕಾಮಗಾರಿ ಮುಕ್ತಾಯ
ಕೆಳಸೇತುವೆ ಹೈಲೆಟ್ಸ್
9 ಅಡಿ ಆಳದಲ್ಲಿ ಶೆಟ್ಟಿಹಳ್ಳಿ ಗೇಟ್ ಬಳಿ ಕೆಳ ಸೇತುವೆ
ರಾಘವೇಂದ್ರ ಸ್ವಾಮಿ ಮಠದ ಕಡೆ 180 ಅಡಿ ಉದ್ದ
ಆಂಜನೇಯ ಸ್ವಾಮಿ ದೇವಸ್ಥಾನದ ಕಡೆ 65 ಮೀಟರ್
17 ಅಡಿಯಲ್ಲಿ ಸರ್ವಿಸ್ ರಸ್ತೆ, ಜಾಗಕ್ಕೆ ಮಾರ್ಕಿಂಗ್
1 ವರ್ಷದಲ್ಲಿ 9 ಕೋಟಿ ರು. ವೆಚ್ಚದ ಕಾಮಗಾರಿ ಪೂರ್ಣ



-ಉಗಮ ಶ್ರೀನಿವಾಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.