ತೆಂಗು ಬೆಳೆಗಾರರು ಸಂಘಟಿತರಾಗಲಿ
ಹುಳಿಯಾರು: ಪ್ರಸ್ತುತದಲ್ಲಿ ಅಡಕೆ, ಕಬ್ಬು, ಕಾಫಿ ಸೇರಿದಂತೆ ಇತರ ಅನೇಕ ಬೆಳೆಗಳನ್ನು ಬೆಳೆಯುತ್ತಿರುವ ಬೆಳೆಗಾರರು ಸಂಘಟಿತರಾಗಿ ಸಂಘಗಳನ್ನು ಸ್ಥಾಪಿಸಿಕೊಂಡು ತಾವು ಉತ್ಪಾದಿಸುವ ಉತ್ಪನ್ನಗಳಿಗೆ ಸೂಕ್ತ ಬೆಲೆಯನ್ನು ಪಡೆಯುವ ಹಾದಿಯಲ್ಲಿ ನಡೆಯುತ್ತಿದ್ದಾರೆ. ಇಂತಹ ಹಿನ್ನಲೆಯಲ್ಲಿ ಇನ್ನಾದರೂ ರಾಜ್ಯದ
ತೆಂಗು ಬೆಳೆಗಾರರು ಸಂಘಟಿತರಾಗುವ ಸಂಕಲ್ಪ ಮಾಡಿ ತೆಂಗು ಹಾಗೂ ಅದರ ಉತ್ಪನ್ನಗಳಿಗೆ ಸೂಕ್ತ ಬೆಲೆ ಪಡೆಯುವಂತಾಗಬೇಕು ಎಂದು ತುರುವೇಕೆರೆ ತೆಂಗು ಉತ್ಪಾದಕರ ಕಂಪನಿಯ ಅಧ್ಯಕ್ಷ ಎಂ.ಬಿ.ಸಿದ್ದಬಸಪ್ಪ ಕರೆ ನೀಡಿದರು. ಚಿ.ನಾ.ಹಳ್ಳಿ ತಾಲ್ಲೂಕು ತೆಂಗು ಬೆಳೆಗಾರ ಸಂಘದ ವತಿಯಿಂದ ಹುಳಿಯಾರಿನ ಶ್ರೀ ಪ್ರಸನ್ನ ಗಣಪತಿದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ತೆಂಗುಬೆಳೆಗಾರರ ಸಂಘದ ಸಮಾವೇಶದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ತುಮಕೂರು ಜಿಲ್ಲೆ ರಾಜ್ಯದಲ್ಲಿ ಹೆಚ್ಚು ತೆಂಗು ಬೆಳೆಯುವ ಜಿಲ್ಲೆಯಾಗಿದ್ದು, ಚಿ.ನಾ.ಹಳ್ಳಿ, ತುರುವೇಕೆರೆ,ತಿಪಟೂರು, ಗುಬ್ಬಿ ತಾಲೂಕುಗಳಲ್ಲಿ ಹೆಚ್ಚು ತೆಂಗು ಬೆಳೆಗಾರರಿರುವುದು ಹೆಮ್ಮೆಯ ಸಂಗತಿ. ಕೇವಲ ತೆಂಗು ಬೆಳೆದು ಕಾಯಿ ಮಾರುವುದಕ್ಕೆ ಸೀಮಿತವಾಗದೆ ತೆಂಗು ಬೆಳೆಗಾರರು ತೆಂಗಿನ ಕಾಯಿಯಿಂದ ಯಾವೆಲ್ಲಾ ಉತ್ಪನ್ನಗಳನ್ನು ಸಿದ್ಧಪಡಿಸಬಹುದು ಹಾಗೂ ಅವುಗಳಿಗೆ ಮಾರುಕಟ್ಟೆಯಲ್ಲಿ ಯಾವ ರೀತಿ ಬೇಡಿಕೆಯಿದೆ, ಬೇಡಿಕೆಯನ್ನು ಯಾವ ರೀತಿ ಪೂರೈಸಬೇಕು ಎಂಬ ವಿಚಾರ ಮತ್ತು ವಿಧಾನಗಳನ್ನು ತಿಳಿದಲ್ಲಿ ಮಾತ್ರ ಲಾಭದಾಯಕವಾಗಿ ಮುನ್ನಡೆಯಬಹುದು. ಅದಕ್ಕಾಗಿ ಪ್ರತಿಯೊಂದು ಗ್ರಾಮಗಳಲ್ಲಿ ಸಂಘಗಳನ್ನು ಸ್ಥಾಪಿಸಿಕೊಂಡು, ಸ್ಥಳೀಯವಾಗಿ ತಾವೇ ಸ್ವತಃ ಉತ್ಪನ್ನಗಳನ್ನು ಸಿದ್ಧಪಡಿಸಿ, ಯಾವ ಮಧ್ಯವರ್ತಿಗಳನ್ನು ಅವಲಂಬಿಸದೇ ನೇರವಾಗಿ ಗ್ರಾಹಕನಿಗೆ ಮಾರುವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಎಂದರು.
ಸಮರ್ಪಕವಾಗಿ ಬೆಳೆಸಿಕೊಳ್ಳಿ: ಚಿ.ನಾ.ಹಳ್ಳಿ ತಾಲೂಕು ತೆಂಗುಬೆಳೆಗಾರರ ಸಂಘದ ಅಧ್ಯಕ್ಷ ಲಿಂಗರಾಜು ಮಾತನಾಡಿ, ಬರಗಾಲದ ಬಾಯಿಗೆ ತುತ್ತಾಗಿ, ಅಂತರ್ಜಲವೆಲ್ಲಾ ಬತ್ತಿ, ನೀರಿಗೆ ಹಾಹಾಕಾರ ಪಡುತ್ತಿರುವ ವಿಷಮ ಸನ್ನಿವೇಶ ಎದುರಾಗಿದ್ದು, ರೈತ ಇದಕ್ಕೆಲ್ಲಾ ಚಿಂತಿಸಿ ಕೈಕಟ್ಟಿ ಕೂರದೆ ತಮ್ಮಲ್ಲಿ ಸಿಗುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಬೆಳೆಬೆಳೆಯಲು ಮುಂದಾಗಬೇಕು ಎಂದರು.
ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯವನ್ನು ತೆಂಗು ಬೆಳೆಯಿಂದ ಪಡೆಯಬಹುದಾಗಿದ್ದು ತಾಂತ್ರಿಕ ವಿಧಾನಗಳಿಂದ ತೆಂಗಿನ ಮರದಿಂದ ದೊರೆಯುವ ವಸ್ತುಗಳ ಬಳಕೆಯನ್ನು ಯಾವರೀತಿ ಮಾಡುಬಹುದು ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದರು.
ಸಾವಯವ ಕೃಷಿ ಪರಿಣಿತ ಹಾಗೂ ಲೇಖಕ ಅಣೆಕಟ್ಟೆ ವಿಶ್ವನಾಥ್ ತೆಂಗು ಉತ್ಪಾದಕರ ಸೊಸೈಟಿ ಸ್ಥಾಪನೆ ಅವಶ್ಯಕತೆ ಕುರಿತಂತೆ ಕಿವಿಮಾತು ಹೇಳಿದರು. ವಕೀಲ ಗಾಣಧಾಳ್ ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದು, ರಾಜ್ಯರೈತ ಸಂಘದ ಕೆಂಕೆರೆಸತೀಶ್, ತಾಲೂಕು ತೆಂಗು ಬೆಳೆಗಾರರ ಸಂಘದ ಕಾರ್ಯದರ್ಶಿನಾಗರಾಜು, ಈರಣ್ಣ, ಸದಾಶಿವಯ್ಯ ಮಾತನಾಡಿದರು.
ಪ್ರಸನ್ನಗಣಪತಿ ದೇವಾಲಯ ಸಮಿತಿಯ ಅಧ್ಯಕ್ಷ ಮೋಹನ್ ಕುಮಾರ್ ಸೇರಿದಂತೆ ತಾಲೂಕಿನ ವಿವಿಧ ಭಾಗದ ರೈತರು ಆಗಮಿಸಿದ್ದ ಸಭೆಯಲ್ಲಿ ನಳಿನಾ ರಮಾಕಾಂತ್ ಪ್ರಾರ್ಥಿಸಿ, ನಾಗರಾಜು ಸ್ವಾಗತಿಸಿ, ಎಸ್.ಬಿ. ಚಿಕ್ಕಣ್ಣ ನಿರೂಪಿಸಿ, ರಾಜಣ್ಣ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

