ಸಿದ್ದಯ್ಯ ಎಂಎಲ್ಸಿ ಆಗಲಿ: ಡಾ.ಸಿ. ನಾಗಣ್ಣ
ತುಮಕೂರು: ಸಾಹಿತಿ ಕೆ.ಬಿ. ಸಿದ್ದಯ್ಯ ವಿಧಾನ ಪರಿಷತ್ ಸದಸ್ಯರಾಗಲಿ ಎಂಬ ಆಶಯವನ್ನು ಮೈಸೂರು ವಿವಿ ಪ್ರಾಧ್ಯಾಪಕ ಡಾ. ಸಿ. ನಾಗಣ್ಣ ವ್ಯಕ್ತಪಡಿಸಿದ್ದಾರೆ.
ನಗರದ ಸಿದ್ದಗಂಗಾ ಬಾಲಕರ ಕಾಲೇಜಿನಲ್ಲಿ ಜಾತ್ಯತೀತ ವಿಚಾರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕವಿ ಕೆ.ಬಿ.ಸಿದ್ದಯ್ಯ ಅವರ ಕಾವ್ಯದ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತಿಗಳು ಪರೋಕ್ಷವಾಗಿ ಶಾಸಕರಾಗಿಯೇ ಇರುತ್ತಾರೆ ಎಂಬುದನ್ನು ಉಲ್ಲೇಖಿಸಿದ ನಾಗಣ್ಣ ಅವರು ಕೆ.ಬಿ.ಸಿದ್ದಯ್ಯ ಶಾಸಕರಾಗುವ ಎಲ್ಲಾ ಅರ್ಹತೆಗಳನ್ನು ಪಡೆದಿದ್ದು ಅಧಿಕಾರ ಹಿಡಿಯಲಿ. ಕನ್ನಡ ಕಾವ್ಯ ಪರಂಪರೆಯಲ್ಲಿ ಸಿದ್ದಯ್ಯ ಅವರ ಹೆಸರು ಬಹುಮುಖ್ಯವಾಗಿ ಕೇಳಿ ಬರುತ್ತಿದೆ. ಹೀಗಾಗಿ ಅವರು ಅಧಿಕಾರ ಸಿಕ್ಕಿದರೆ ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಹೇಳಿದರು.
ಈಗಾಗಲೇ ಸಾಹಿತಿ ಡಾ.ಸಿದ್ದಲಿಂಗಯ್ಯ ಮತ್ತು ಎಲ್. ಹನುಮಂತಯ್ಯ ಅವರು ಅಧಿಕಾರವನ್ನು ಅನುಭವಿಸಿದ್ದಾರೆ. ಇದೀಗ ಕೆ.ಬಿ.ಸಿದ್ದಯ್ಯ ಅವರಿಗೆ ಅಂತಹ ಅಧಿಕಾರ ಹಿಡಿಯುವ ಕಾಲ ಬಂದಿದೆ. ಹೀಗಾಗಿ ಸಿದ್ದಯ್ಯ ಅಂತಹ ಅಧಿಕಾರ ಹಿಡಿಯಲು ಮುಂದಾಗಬೇಕು ಎಂದು ಹೇಳಿದರು.
ಕೆ.ಬಿ.ಸಿದ್ದಯ್ಯ ಸಂಯಮದ ಕವಿ. ತಮ್ಮಷ್ಟಕ್ಕೇ ತಾವೇ ಬರೆದುಕೊಳ್ಳುತ್ತ ಯಾರೊಂದಿಗೂ ಸ್ಪರ್ಧೆಗಿಳಿಯದೆ ಬರೆಯತ್ತಿದ್ದಾರೆ. ಈವರೆಗೆ ಅವರು ಬರೆದಿರುವ ನಾಲ್ಕು ಕೃತಿಗಳು ಸಂಯಮದಿಂದ ಕೂಡಿವೆ ಎಂದು ತಿಳಿಸಿದರು.
ವೈಭವೀಕರಣ: ಕಾರ್ಯಕ್ರಮ ಉದ್ಘಾಟಿಸಿದ ಹಂಪಿ ಕನ್ನಡ ವಿವಿ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸಾಹಿತ್ಯದಲ್ಲಿ ವೈಭವೀಕರಣ ನಡೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಹೀಗಾಗಿ ಇಂತಹ ಸನ್ನಿವೇಶದಲ್ಲಿ ವಾಸ್ತವಿಕ ಸಾಹಿತ್ಯ ರಚನೆ ಬೇಕಾಗಿದೆ ಎಂದರು.
ಸಾಹಿತ್ಯದಲ್ಲಿ ಮೌಲ್ಯಗಳನ್ನು ಪುನರ್ ಸ್ಥಾಪಿಸುವ, ಭಾರತೀಯ ಸಾಂಸ್ಕೃತಿಕ ಪರಂಪರೆ ಕಟ್ಟುವ ಕೆಲಸ ನಡೆಯಬೇಕು. ಈ ಸಂದರ್ಭದಲ್ಲಿ ಭಾರತೀಯ ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟುವ ಕೆಲಸ ನಡೆಯಬೇಕಾಗಿದೆ ಎಂದು ಹೇಳಿದರು.
ಪ್ರಭಾವ ಬೀರಿದೆ: ಯಾವ ಸಾಹಿತ್ಯದಲ್ಲಿ ದೊರೆಯದಷ್ಟು ಜಾನಪದ ಕಾವ್ಯಗಳು ಕನ್ನಡದಲ್ಲಿ ದೊರೆತಿವೆ. ಕನ್ನಡದಲ್ಲಿ ಈವರೆಗೆ ದೊರೆತ 17 ಜಾನಪದ ಸಾಹಿತ್ಯ ಕೃತಿಗಳನ್ನು ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದೆ. ಇಂತಹ ಶ್ರೇಷ್ಠ ಪರಂಪರೆ ಸಾಹಿತಿ ಕೆ.ಬಿ.ಸಿದ್ದಯ್ಯ ಅವರ ಮೇಲೆ ಪ್ರಭಾವ ಬೀರಿದೆ ಎಂದು ತಿಳಿಸಿದರು.
ಕೆ.ಬಿ.ಸಿದ್ದಯ್ಯ ಅವರ ಕಾವ್ಯದಲ್ಲಿ ನಿಜವಾದ ಮಣ್ಣಿನ ವಾಸನೆ ಇದೆ. ಇದರ ಗಾಢ ಪ್ರಭಾವದಿಂದ ದಕ್ಲಕಥಾ ದೇವಿ, ಬಕಾಲ ಮತ್ತು ಅನಾತ್ಮದಂತಹ ಮಹತ್ವದ ಕೃತಿಗಳನ್ನು ರಚಿಸಲು ಸಾಧ್ಯವಾಗಿದೆ. ಬಹುಮುಖ್ಯ ಕವಿಯಾದ ಕೆ.ಬಿ.ಸಿದ್ದಯ್ಯ ಅವರು ಕನ್ನಡ ಸಾಹಿತ್ಯ ಪರಂಪರೆಗೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದು ವಿವರಿಸಿದರು.
ದೇಶೀ ಪರಂಪರೆಯೊಂದಿಗೆ ಅನುಸಂಧಾನ ನಡೆಸಿರುವ ಸಿದ್ದಯ್ಯ ಮಂಟೆಸ್ವಾಮಿ ಕಥಾ ಪ್ರಸಂಗ ಹಾಗೂ ಅಲ್ಲಮನ ವಚನಗಳ ಮುಂದುವರಿಕೆಯ ಭಾಗವಾಗಿ ಕೃತಿಗಳನ್ನು ರಚಿಸಿದ್ದಾರೆ ಎಂದರು.
ಇಂದಿನ ಸಂದರ್ಭದಲ್ಲಿ ರಾಮಾಯಣ ಹಾಗೂ ರಾಮನನ್ನು ವೈಭವೀಕರಿಸುವ ಕೆಲಸ ನಡೆಯುತ್ತಿದೆ. ರಾಮ ಸೀತೆಗಾಗಿ ಯುದ್ಧ ನಡೆಸಲಿಲ್ಲ. ಬದಲಾಗಿ ಭೂಮಿ ಪಡೆಯಲು ಯುದ್ಧ ನಡೆಸಿದ. ಈವರೆಗೆ ಹೇಳುತ್ತಿದ್ದಂತೆ ರಾಮ ಸೀತೆಗಾಗಿ ಹೋರಾಡಿದ್ದು ಸುಳ್ಳು ಎಂದು ತಿಳಿಸಿದರು.
ಇದೇ ವೇಳೆ ಸಾಹಿತ್ಯ ಚಿಂತಕ ಅಗ್ರಹಾರ ಕೃಷ್ಣಮೂರ್ತಿ ಸಾಹಿತಿ ಕೆ.ಬಿ.ಸಿದ್ದಯ್ಯ ಆಧುನಿಕ ಕನ್ನಡ ಕಾವ್ಯ ಪರಂಪರೆಗೆ ಹೊಸ ಧಾರೆಯನ್ನು ಹರಿಸಿದ್ದಾರೆ. ದಲಿತರಿಗೆ ಆಸ್ಮಿತೆ ಕಂಡುಕೊಳ್ಳಲು ಪ್ರಯತ್ನಪಡುತ್ತಿದ್ದಾರೆ ಎಂದರು. ನಂತರ ವಿವಿಧ ಗೋಷ್ಠಿಗಳು ನಡೆದವು.
ಕೊಟ್ಟ ಶಂಕರ್, ಡಾಗೇರಹಳ್ಳಿ ವಿರೂಪಾಕ್ಷ, ಎಚ್.ಎಲ್. ಪುಷ್ಪ, ತಾರಿಣಿ ಶುಭದಾಯಿನಿ,ಬಿ.ಎಂ. ಪುಟ್ಟಯ್ಯ ಇತರರು ಇದ್ದರು.
ಅಕ್ಷರಕ್ಕಿಂತ ಅನುಭವ ದೊಡ್ಡದು
ತುಮಕೂರು: ಅಕ್ಷರಕ್ಕಿಂತ ಅನುಭವ ದೊಡ್ಡದು ಎಂದು ಖ್ಯಾತ ಸಾಹಿತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಬಿ. ಸಿದ್ದಯ್ಯ ವ್ಯಾಖ್ಯಾನಿಸಿದರು.
ಅವರು ನಾಟಕಮನೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಒಂದು ಕಾಲದಲ್ಲಿ ದಲಿತರು ಅಕ್ಷರವನ್ನು ಮುಟ್ಟದಂತೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ನನ್ನಂತಹವರು ಅಕ್ಷರವನ್ನು ಮುಟ್ಟುವ ಮೂಲಕ ಅಕ್ಷರದ ಬಂಧನವನ್ನು ದೂರ ಮಾಡುವುದರ ಜೊತೆಗೆ ನಾನು ಬಂಧನದಿಂದ ಹೊರಬರಲು ಸಾಧ್ಯವಾಯಿತು ಎಂದರು. ಜಾನಪದ ನುಡಿ, ನಡೆ ಸಣ್ಣದಲ್ಲ. ಅದರ ಹಿಂದಿನ ಮೌಲ್ಯ ಆಪಾರ. ಅಕ್ಷರಕ್ಕಿಂತ ಅನುಭವ ದೊಡ್ಡದು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಅಂತಾರಾಷ್ಟ್ರೀಯ ತೊಗಲುಗೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಮಾತನಾಡಿ ನಾಟಕ ಎಲ್ಲ ಕಲಾಪ್ರಕಾರಗಳನ್ನು ಒಳಗೊಂಡ ಒಂದು ಕಲೆ. ನಾಟಕಮನೆ ನಿರಂತರವಾಗಿ ಇಂತಹ ಕಾರ್ಯಕ್ರಮನ್ನು ಆಯೋಜಿಸುವ ಮೂಲಕ ಕಲೆ ಮತ್ತು ಕಲಾವಿದರಿಗೆ ವೇದಿಕೆ ನೀಡುತ್ತಾ ತನ್ನಂತೆಯೇ ಇತರೆ ರಂಗಭೂಮಿಗೆ ಸಂಬಂಧಿಸಿದ ಸಂಸ್ಥೆಗಳು ಬೆಳೆಯಲು ಸಹಕಾರಿಯಾಗಿದೆ ಎಂದರು.
ಸಂತಸದ ಸಂಗತಿ: ಕಲಾಶ್ರೀ ಡಾ.ಲಕ್ಷ್ಮಣದಾಸ್ ಮಾತನಾಡಿ, ಪ್ರಭಾವ ಹೆಚ್ಚಾಗಿ ಪ್ರಶಸ್ತಿಗಳು ಅನರ್ಹರ ಪಾಲಾಗುತ್ತಿರುವ ಇಂದಿನ ದಿನಗಳಲ್ಲಿ ರಂಗಭೂಮಿಗೆ ಅದರಲ್ಲಿಯೂ ಪೌರಾಣಿಕ ರಂಗಭೂಮಿಗೆ ತಮ್ಮನ್ನು ಅರ್ಪಿಸಿಕೊಂಡಿರುವ ಗುಡಿಹಳ್ಳಿ ನಾಗರಾಜು ಮತ್ತು ಸಾಹಿತ್ಯದ ಮೂಲಕ ಹೊಸಚಿಂತನೆ ಹುಟ್ಟುಹಾಕಿದ ಪ್ರೊ.ಕೆ.ಬಿ. ಸಿದ್ದಯ್ಯ ಅವರಿಗೆ ಈ ಸಾಲಿನ ರಾಜೋತ್ಸವ ಪ್ರಶಸ್ತಿ ದೊರೆತಿರುವುದು ಸಂತಸದ ವಿಚಾರವಾಗಿದೆ. ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅದರಿಂದ ಹೊರಬಂದು ನಿಜವಾದ ಕಲಾವಿದರಿಗೆ ಸೇವೆ ಸಲ್ಲಿಸುವಂತಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಬಿ.ಟಿ. ಮುನಿರಾಜಯ್ಯ ಮಾತನಾಡಿ ತುಮಕೂರು ಜಿಲ್ಲೆ ಎಲ್ಲಾ ಪ್ರಕಾರದ ಪ್ರತಿಭಾವಂತರನ್ನು ಒಳಗೊಂಡ ಜಿಲ್ಲೆ. ರಂಗಭೂಮಿಯಲ್ಲಿ ನಾಟಕರತ್ನ ಡಾ.ಗುಬ್ಬಿವೀರಣ್ಣ ಅವರ ಮಾಡಿದ ಕೆಲಸವನ್ನು ಇಂದು ನಾಟಕಮನೆ ನಿರಂತರವಾಗಿ ರಂಗಭೂಮಿ ಚಟುವಟಿಕೆಯಲ್ಲಿ ತೊಡಗುವ ಮೂಲಕ ಮುಂದುವರೆಸಿಕೊಂಡು ಹೋಗುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.
ಮಾಧ್ಯಮಗಳಿಂದ ನಡೆಯಲಿ: ಮತ್ತೊಬ್ಬ ಸನ್ಮಾನಿತ ಗುಡಿಹಳ್ಳಿ ನಾಗರಾಜ್ ಮಾತನಾಡಿ ಕಲೆ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರದಲ್ಲಿ ಎಲೆಮರೆಯ ಕಾಯಿಗಳಂತೆ ದುಡಿಯುತ್ತಿರುವ ಹೊಸ ಪ್ರತಿಭೆಗಳನ್ನು ಹೊರಜಗತ್ತಿಗೆ ಪರಿಚಯಿಸುವ ಕೆಲಸ ಮಾಧ್ಯಮಗಳಿಂದ ಆಗಬೇಕಾಗಿದೆ ಎಂದು ತಿಳಿಸಿದರು.
ಅಕ್ಷರ ಕಲಿತವರ ಪ್ರತಿಭೆಗಳು ಬಹುಬೇಗ ಹೊರಜಗತ್ತಿಗೆ ಪರಿಚಯವಾಗುತ್ತವೆ. ಅಕ್ಷರಕ್ಕೆ ಅಂತಹ ಶಕ್ತಿಯಿದೆ. ಆದರೆ ಅನಕ್ಷರಸ್ಥರಾಗಿ ಜೀವನ ಅನುಭವ ಜೊತೆಗೆ ತಾವು ರೂಢಿಸಿಕೊಂಡ ಕಲೆಯಿಂದ ಜನರ ನಡುವೆ ಜನಪ್ರಿಯರಾಗಿರುವ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕೆಲಸ ಸಮರ್ಥವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಾಗಲಿ, ಮಾಧ್ಯಮಗಳಿಂದಾಗಲಿ ನಡೆಯುತ್ತಿಲ್ಲ ಎಂದರು.
ಈ ಮಾಸ ನಾಟಕ ಪತ್ರಿಕೆ ಸಂಪಾದಕ ಎ. ಕೃಷ್ಣಪ್ಪ, ಉಪನ್ಯಾಸಕ ಡಾ.ಕಂಟಲಗೆರೆ ಸಣ್ಣಹೊನ್ನಯ್ಯ, ಡಾ.ಶಿವಣ್ಣ ತಿಮ್ಲಾಪುರ, ಭೂಮಿ ಬಳಗದ ಜಿ.ಎಸ್. ಸೋಮಶೇಖರ್ ಮತ್ತಿತರರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ನಗರದ ಟೌನ್ಹಾಲ್ ವೃತ್ತದಿಂದ ಜಾನಪದ ಜಾಥಾ ಆರಂಭವಾಗಿ, ಜಾಥಾಕ್ಕೆ ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣ್ದಾಸ್ ಚಾಲನೆ ನೀಡಿದರು.
ಮರಗಾಲು ಕುಣಿತ, ವೀರಗಾಸೆ, ಚಿಟ್ಟಿಮೇಳ, ಸೋಮನಕುಣಿತ, ಪೂಜಾಕುಣಿತ, ಉರುವೆವಾದ್ಯ, ಖಾಸಾ ಬೇಡರ ಪಡೆ ಕುಣಿತ ಜಾನಪದ ಕಲಾ ತಂಡಗಳ ಪ್ರದರ್ಶನದೊಂದಿಗೆ 2013ನೇ ಸಾಲಿನ ರಾಜೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಡಾ.ಗುಬ್ಬಿ ವೀರಣ್ಣ ರಂಗಮಂದಿರದವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

