ತುಮಕೂರು

ಶಾದಿ ಭಾಗ್ಯ ಜರೆದ ಕುಮಾರಸ್ವಾಮಿ

Published On :

ತುರುವೇಕೆರೆ: ಕಾರ್ಯಕರ್ತರೊಬ್ಬರ ಮಗಳ ಮದುವೆಗೆ ಬಂದಿದ್ದ ವಿಧಾನ ಸಭಾ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರ ಕೈಗೊಂಡಿರುವ ಶಾದಿ ಭಾಗ್ಯವನ್ನು ಅದೊಂದು ಅರ್ಥಹೀನ ಯೋಜನೆ ಎಂದು ಜರೆದ ಘಟನೆ ಪಟ್ಟಣದಲ್ಲಿ ನಡೆಯಿತು.
ತಾಲೂಕು ಜೆಡಿಎಸ್‌ನ ಮುಸ್ಲಿಂ ಘಟಕದ ಅಧ್ಯಕ್ಷ ಜಫ್ರುಲ್ಲಾ ಖಾನ್ ಅವರ ಮಗಳ ಮದುವೆಗೆ ಆಗಮಿಸಿದ್ದ ಕುಮಾರಸ್ವಾಮಿ ಅವರಿಗೆ ತಾಲೂಕಿನ ಜೆಡಿಎಸ್ ಕಾರ್ಯಕರ್ತರು ಅವರ 55 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದರು. ಕುಮಾರಸ್ವಾಮಿಯವರಿಂದ ಕೇಕ್ ಕಟ್ ಮಾಡಿಸಿದ ಕಾರ್ಯಕರ್ತರು ತಮ್ಮ ಸ್ಥಳದಲ್ಲಿ ಪ್ರಪ್ರಥಮ ಬಾರಿಗೆ ಹುಟ್ಟು ಹಬ್ಬವನ್ನು ಆಚರಣೆ ಮಾಡಿದ್ದಕ್ಕೆ ಸಂತಸ ಪಟ್ಟರು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಎಚ್.ಡಿ.ಕೆ ರಾಜ್ಯ ಸರ್ಕಾರ ಉತ್ತಮವಾದ ಕಾರ್ಯ ಮಾಡದೇ ಸಮುದಾಯ ಸಮುದಾಯದ ನಡುವೆಯೇ ಕಿಚ್ಚು ತರಿಸುವ ಪ್ರಯತ್ನ ಮಾಡುತ್ತಿದೆ. ಶಾದಿ ಭಾಗ್ಯ ಅನ್ನೋ ಯೋಜನೆಯನ್ನೇನೋ ತಂದರು. ರಾಜ್ಯದಲ್ಲಿರುವ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಮದುವೆಗೆಂದು ಕೇವಲ 5 ಕೋಟಿ ರು.ಗಳನ್ನು ಮೀಸಲು ಇರಿಸಿದ್ದಾರೆ. ಕೆಲವೇ ಸಾವಿರ ಮಂದಿಗೆ ಮಾತ್ರ ಈ ಯೋಜನೆ ತಲುಪಲು ಸಾಧ್ಯ. ಆದರೆ ರಾಜ್ಯದಲ್ಲಿ ವಾರ್ಷಿಕ ಕನಿಷ್ಠವೆಂದರೂ 70 ಸಾವಿರ ಮುಸ್ಲಿಂ ಮದುವೆ ಆಗುತ್ತದೆ. ಪ್ರತಿ ಜಿಲ್ಲೆಗೆ ಕೇವಲ ಹತ್ತಿಪ್ಪತ್ತು ಮಂದಿಗೆ ಮಾತ್ರ ಶಾದಿ ಭಾಗ್ಯ ಸಾಧ್ಯ. ತಾಲೂಕಿಗೆ ಕೇವಲ ಒಂದೆರೆಡು ಮಂದಿಗೆ ಮಾತ್ರ  ಈ ಯೋಜನೆಯ ಪ್ರಯೋಜನ ಸಿಗಲಿದೆ. ಇಂತಹ ಯೋಜನೆ ಜಾರಿ ಮಾಡಿದರೆ ಮುಸ್ಲಿಂ ಸಮುದಾಯದವರಲ್ಲೇ ಒಡಕು ಉಂಟು ಮಾಡುವುದಿಲ್ಲವೇ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.
ಮಧ್ಯಮ ವರ್ಗದವರು ಬಾವಿಗೆ: ಇನ್ನು ಈ ಸರ್ಕಾರದಲ್ಲಿ ಮಧ್ಯಮ ವರ್ಗದವರು ಬಾಳುವ ಹಾಗೇ ಇಲ್ಲ. ಬಡವರಿಗೆ ಅಕ್ಕಿ ನೀಡುವ ಭರದಲ್ಲಿ ಮಧ್ಯಮ ವರ್ಗದವರನ್ನು ಭಾವಿಗೆ ತಳ್ಳುತ್ತಿದೆ. ಅನ್ನವನ್ನು ಕಸಿದುಕೊಂಡ ಅಪಕೀರ್ತಿಗೆ ಈ ಸರ್ಕಾರ ಸಿಲುಕಿದೆ. ಇವರು ನೀಡಿದ ಭರವಸೆಯನ್ನು ಉಳಿಸಿಕೊಳ್ಳಲು ಅಕ್ಕಿ ಗಿರಣಿ ಮಾಲೀಕರ ಜೀವವನ್ನು ಹಿಂಡುವುದು ಸರಿಯಲ್ಲ. ಬೆಳೆ ಬೆಳೆದರೇ ತಾನೇ ಅಕ್ಕಿ ಉತ್ಪನ್ನ ಸಾಧ್ಯ. ಅದನ್ನು ಕಾರ್ಯಗತಗೊಳಿಸದೇ ಕೇವಲ ಅಕ್ಕಿ ಗಿರಣಿಯ ಮೇಲೆ ಬಾಣ ಬಿಟ್ಟರೆ ಫಲವೇನು ಎಂದು ಕಿಡಿಕಾರಿದರು.
ಕಾಂಗ್ರೆಸ್‌ಗೆ ತಕ್ಕ ಪಾಠ: ವರ್ಷ ತುಂಬುವ ಮುನ್ನವೇ ಕಾಂಗ್ರೆಸ್ ಸರ್ಕಾರ ಜನರಿಂದ ದೂರ ಉಳಿದಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬುದ್ಧಿ ಕಲಿಸುವ ರಾಜ್ಯದ ಜನತೆ ಜೆಡಿಎಸ್ ಅನ್ನು ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸುವರು ಎಂಬ ನಂಬಿಕೆ ಇದೆ ಎಂದರು.
ಮೋದಿ ಟೀಕೆ: ಮೋದಿಯನ್ನು ಮುಂದಿನ ಪ್ರಧಾನಿ ಎಂದು ಕೆಲವೇ ಕೆಲವು ಮಾಧ್ಯಮಗಳು ಪ್ರಚಾರ ಮಾಡುತ್ತಿವೆ. ಇದರಲ್ಲಿ ಏನೋ ಆಮಿಷವಿದೆ ಎಂದು ಸಂಶಯ ವ್ಯಕ್ತಪಡಿಸಿದರು. ಗುಜರಾತ್ ನಲ್ಲೇ ಕಳಪೆ ಆಹಾರಗಳನ್ನು ನೀಡುತ್ತಿರುವ ಮೋದಿಯವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಕುಟುಕಿದರು.
ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಎಚ್.ಬಿ.ನಂಜೇಗೌಡ, ಜಿ.ಪಂ.ಸದಸ್ಯರಾದ ಎ.ಬಿ.ಜಗದೀಶ್, ಲತಾ ವಿಶ್ವನಾಥ್, ಶ್ರೀನಿವಾಸ್, ತಾಲೂಕು ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀಕಾಂತ್, ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.