ರಾಜ್ಯ ಸರ್ಕಾರಕ್ಕೆ ಅವೈಜ್ಞಾನಿಕ ಲೆವಿ ಚಟ
ತುಮಕೂರು: ರಾಜ್ಯ ಸರ್ಕಾರ ಅವೈಜ್ಞಾನಿಕ ಲೆವಿ ಚಟ ಅಂಟಿಸಿಕೊಂಡಿದೆ. ಸರ್ಕಾರಿ ಅಕ್ಕಿ ಲೆವಿ ನೀತಿ, ಅಸ್ಪಷ್ಟತೆಯಿಂದ ಕೂಡಿದ್ದು, ಅವೈಜ್ಞಾನಿಕವಾಗಿದೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಹಾಗೂ ಸ್ವತಃ ರೈಸ್ ಮಿಲ್ ಮಾಲೀಕರೂ ಆಗಿರುವ ಸೊಗಡು ಶಿವಣ್ಣ ಲೇವಡಿ ಮಾಡಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಲೆವಿ ನೀತಿಯಿಂದಾಗಿ ರೈಸ್ ಮಿಲ್ ಮಾಲೀಕರಿಗೆ ತೊಂದರೆಯಾಗುತ್ತಿದೆ. ಅಷ್ಟೇ ಅಲ್ಲ ಬಳಕೆದಾರ ಬಡ ಕುಟುಂಬದವರಿಗೂ ಇದರ ಪ್ರಯೋಜನ ಲಭ್ಯವಾಗುತ್ತಿಲ್ಲ ಎಂದು ದೂರಿದರು.
ಲೆವಿ ನೀತಿಯ ನಿಯಮ ಎಫ್ಎಕ್ಯೂ ಸ್ಟ್ಯಾಂಡರ್ಡ್ ರೀತ್ಯ ಅಕ್ಕಿ ಗಾತ್ರವನ್ನು ಮಾಪಕವಾಗಿಟ್ಟುಕೊಂಡು ಐಆರ್ - 64 ಅಕ್ಕಿಯನ್ನು ಖರೀದಿಸಲು ಮಾತ್ರ ಸೀಮಿತಗೊಳಿಸಿ, ಸೋನಾ ಮಸೂರಿ ಹಾಗೂ ಇತರೆ ಉನ್ನತ ದರ್ಜೆಯ ಅಕ್ಕಿಯನ್ನು ಸಾಮಾನ್ಯ ಅಕ್ಕಿ ಎಂದು ಪರಿಗಣಿಸಿ ಖರೀದಿಸುತ್ತಿಲ್ಲವಾದ್ದರಿಂದ ಕರ್ನಾಟಕದ ಬತ್ತದ ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ. ಅಲ್ಲದೇ ಸ್ಥಳೀಯ ಅಕ್ಕಿ ಗಿರಣಿ ಮಾಲೀಕರಿಗೂ ತೊಂದರೆಯಾಗುತ್ತಿದೆ. ಕರ್ನಾಟಕ ರಾಜ್ಯ ಸೋನಾ ಮಸೂರಿಯಂತಹ ಉತ್ತಮ ಬತ್ತದ ಬೆಳೆ ಬೆಳೆಯುವ ರಾಜ್ಯವಾಗಿರುವುದು ಗಮನಾರ್ಹ ಎಂದರು.
ತಾರತಮ್ಯ ಬೇಡ: ಸರ್ಕಾರದ ಅನ್ನಭಾಗ್ಯ, ಅಕ್ಷರ ದಾಸೋಹದಂತಹ ಕಾರ್ಯಕ್ರಮಗಳು ಬೇಕಾಬಿಟ್ಟಿ ಕಾರ್ಯಕ್ರಮಗಳಾಗದೇ, ಫಲಾನುಭವಿಗಳಿಗೆ ತಾರತಮ್ಯ ಮಾಡದೇ ಪೌಷ್ಟಿಕ ಆಹಾರ ದೊರೆಯುವಂತಾಗಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ಸೊಗಡು ಸ್ಪಷ್ಟಪಡಿಸಿದರು. ಹೊರ ರಾಜ್ಯಗಳಿಂದ ಅಕ್ಕಿ ತರಿಸಿಕೊಳ್ಳಲಾಗುತ್ತಿದ್ದು, ಅದರ ಖರೀದಿ ದರ ಹಾಗೂ ಸಾಕಾಣಿಕೆ ದರಗಳನ್ನು (ಸುಮಾರು 33) ಪರಿಗಣನೆಗೆ ತೆಗೆದುಕೊಂಡಲ್ಲಿ ಕರ್ನಾಟಕ ರಾಜ್ಯದ ಅಕ್ಕಿ ಗಿರಣಿಗಳ ಮುಖಾಂತರ ಉತ್ತಮ ಅಕ್ಕಿಯನ್ನು ಖರೀದಿಸಿ, ಸರ್ಕಾರಿ ಯೋಜನೆಯ ಕುಟುಂಬಗಳಿಗೆ, ಫಲಾನುಭವಿಗಳಿಗೆ ಉತ್ತಮ ಅಕ್ಕಿಯನ್ನು ಕೊಡಬಹುದಾಗಿದೆ. ಇದರಿಂದ ರಾಜ್ಯದ ರೈತರಿಗೆ ಮಾರುಕಟ್ಟೆ ಸೌಲಭ್ಯ ದೊರೆಯುವುದಲ್ಲದೇ, ರಾಜ್ಯದಲ್ಲಿ ಸರ್ಕಾರದ ಯೋಜನೆಯ ಕುಟುಂಬಗಳಿಗೆ ಅಥವಾ ಫಲಾನುಭವಿಗಳಿಗೆ ಉತ್ತಮ ಅಕ್ಕಿಯನ್ನು ಕೊಡಬಹುದಾಗಿ. ಇದರಿಂದ ರಾಜ್ಯದ ರೈತರಿಗೆ ಮಾರುಕಟ್ಟೆ ಸೌಲಭ್ಯ ದೊರೆಯುವುದಲ್ಲದೇ, ರಾಜ್ಯದಲ್ಲಿ ಸರ್ಕಾರದ ನಿಯಮಾನುಸಾರ ಆರಂಭಗೊಂಡು ನಡೆಯುತ್ತಿರುವ ಅಕ್ಕಿ ಗಿರಣಿಗಳು ಬೆಳಯಲು ಸಹಾಯವಾಗುತ್ತದೆ. ಈ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಸೊಗಡು ಸಲಹೆ ನೀಡಿದರು.
ಸರ್ಕಾರಕ್ಕೆ ಆಸಕ್ತಿಯಿಲ್ಲ: ರಾಜ್ಯದ ಹಲವು ಭಾಗಗಳಲ್ಲಿ ವಿವಿಧ ತಳಿಯ ಅಕ್ಕಿಯನ್ನು ಉಪಯೋಗಿಸುತ್ತಾರೆ. (ಕರಾವಳಿ ಭಾಗದಲ್ಲಿ ಕುಸೂಲಕ್ಕಿ) ಅಂತಹ ಭಾಗದಲ್ಲಿರುವ ಗಿರಣಿಗಳಿಂದ ಅಂತಹ ಅಕ್ಕಿಯನ್ನು ಪಡೆಯಬಹುದಾಗಿದ್ದು, ಸರ್ಕಾರ ಲೆವಿ ಸಂಗ್ರಹಣೆಯಲ್ಲಿ ಈ ಎಲ್ಲ ಅಂಶಗಳನ್ನು ಅಳವಡಿಸಿಕೊಂಡು ಗಿರಣಿ ಮಾಲೀಕರಿಗೆ, ರೈತರಿಗೆ ಹಾಗೂ ಗ್ರಾಹಕರಿಗೆ ತೊಂದರೆಯಾಗದಂತೆ ಲೆವಿ ನೀತಿ ಹೊರಡಿಸುವಂತೆ ಅಕ್ಕಿ ಗಿರಣಿ ಮಾಲೀಕರೂ ಆಗಿರುವ ಸೊಗಡು ಶಿವಣ್ಣ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಜತೆಗೆ ಉತ್ತಮ ಗುಣಮಟ್ಟದ ಸೋನಾ ಮಸೂರಿ ಅಕ್ಕಿಯನ್ನು ಕಡಿಮೆ ಬೆಲೆಗೆ ನೀಡಲು ಸಾಧ್ಯವಿದೆ. ಆದರೆ ಸರ್ಕಾರಕ್ಕೆ ಆಸಕ್ತಿಯಿಲ್ಲ ಎಂದು ಸೊಗಡು ವಿಷಾದ ವ್ಯಕ್ತಪಡಿಸಿದ್ದಾರೆ.
ಎಲ್ಲ ಕಡೆ ಪೌಷ್ಟಿಕ ಅಕ್ಕಿ: ಮೇಲೆ ತಾವು ತಿಳಿಸಿರುವಂತೆ ಯೋಜನೆ ಜಾರಿಗೊಳಿಸಿದಲ್ಲಿ ರಾಜ್ಯದ ಆಹಾರ ವಿತರಣೆಗೆ ಸಂಬಂಧಪಟ್ಟ ಎಲ್ಲ ಯೋಜನೆಗಳಲ್ಲಿ ಉತ್ತಮ ಪೌಷ್ಟಿಕ ಅಕ್ಕಿ ದೊರೆಯಲು ಸಹಕಾರಿಯಾಗುತ್ತದೆ ಎಂದು ಸೊಗಡು ಶಿವಣ್ಣ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಬಿ. ನಂದೀಶ್, ಜಿಲ್ಲಾ ಮುಖಂಡ ನಂದೀಶ್, ಬಿಜೆಪಿ ಯುವ ಮೋರ್ಚಾದ ಸನತ್ ಜಯಸಿಂಹ ಇತರರು ಉಪಸ್ಥಿತರಿದ್ದರು.
ಅಕ್ರಮ ಸಂಗ್ರಹಗಾರರ ವಿರುದ್ಧ ಕ್ರಮ ತೆಗೆದುಕೊಳ್ಳಲಿ
ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹ ಮಾಡುವ ರೈಸ್ ಮಿಲ್ಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲು ಮಾಜಿ ಸಚಿವ ಹಾಗೂ ರೈಸ್ ಮಿಲ್ ಮಾಲೀಕ ಸೊಗಡು ಶಿವಣ್ಣ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕಾನೂನು ಬಾಹಿರ ಕೃತ್ಯ ಮಾಡುವ ರೈಸ್ ಮಿಲ್ ಮಾಲೀಕರ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಂಡಲ್ಲಿ ತಮ್ಮದಾಗಲೀ, ರೈಸ್ಮಿಲ್ ಮಾಲೀಕರದ್ದಾಗಲೀ ಅಭ್ಯಂತರವಿಲ್ಲ, ತಕರಾರಿಲ್ಲ ಎಂದು ಸೊಗಡು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರು. 2 ಕೋಟಿ ಗೂ ಅಧಿಕ ವಿದ್ಯುತ್ ಬಿಲ್
ತುಮಕೂರು: ತುಮಕೂರು ನಗರವೊಂದರಲ್ಲೇ ರಾಜ್ಯದಲ್ಲೇ ಅತ್ಯಧಿಕ ಅಂದರೆ ಸುಮಾರು 100 ಕ್ಕೂ ಹೆಚ್ಚು ರೈಸ್ ಮಿಲ್ಗಳಿವೆ. ಈ ರೈಸ್ ಮಿಲ್ಗಳಿಂದಲೇ ತಿಂಗಳಿಗೆ ಕನಿಷ್ಠ 2 ಕೋಟಿ ರು. ಗಳಿಗೂ ಹೆಚ್ಚು ವಿದ್ಯುತ್ ಬಿಲ್ ಸಂದಾಯವಾಗುತ್ತಿದೆ. ಅತ್ಯಾಧುನಿಕವಲ್ಲದ ರೈಸ್ಮಿಲ್ಗಳಲ್ಲಿ ಕನಿಷ್ಠ 30 ಮಂದಿ ಕೆಲಸಗಾರರ ಅವಶ್ಯಕತೆಯಿದೆ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವ ರೈಸ್ ಮಿಲ್ಗಳಲ್ಲಿ ಕೆಲಸಗಾರರ ಸಂಖ್ಯೆ ಕಡಿಮೆಯಿರಬಹುದು. ರೈಸ್ ಮಿಲ್ ಮಾಲೀಕರ ಮುಷ್ಕರದಿಂದ ಸರ್ಕಾರಕ್ಕೆ ಹಾಗೂ ನಾಗರಿಕರಿಗೆ ಸಮಸ್ಯೆಯೇ ಹೊರತು ಲಾಭವಂತೂ ಖಂಡಿತ ಆಗಲ್ಲ ಎಂದು ರೈಸ್ ಮಿಲ್ ಮಾಲೀಕರೂ ಆಗಿರುವ ಮಾಜಿ ಸಚಿವ, ಬಿಜೆಪಿ ಮುಖಂಡ ಸೊಗಡು ಶಿವಣ್ಣ ಮಾಹಿತಿ ನೀಡಿದರು.
ರು. 30ಗೆ ಸೋನಾ ಮಸೂರಿ:ಸರ್ಕಾರ ರೈಸ್ ಮಿಲ್ ಮಾಲೀಕರೊಂದಿಗೆ ಸಹಕರಿಸಿದರೆ ಕೇವಲ 30 ರು. ಗೆ ಅತ್ಯುತ್ತಮ ಗುಣಮಟ್ಟದ ಸೋನಾ ಮಸೂರಿ ಅಕ್ಕಿಯನ್ನು ಎಲ್ಲರಿಗೂ ಒದಗಿಸಬಹುದು. ಆದರೆ ಸರ್ಕಾರಕ್ಕೆ ಈ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲ. ಅನ್ನಭಾಗ್ಯ, ಅಕ್ಷರ ದಾಸೋಹಕ್ಕೆ ಯಾವುದೇ ಅಡೆ-ತಡೆಯಾಗದಂತೆ ಅಕ್ಕಿ ಪೂರೈಕೆಯತ್ತ ಕಾಂಗ್ರೆಸ್ ಸರ್ಕಾರ ಚಿತ್ತ ಹರಿಸಲಿ. ವಿನಾಕಾರಣ ಸಮಸ್ಯೆ ಒಡ್ಡುವುದು ಬೇಡ. ಬಡ ಜನತೆಗೆ ಕಂಟಕ ಒಡ್ಡುವುದು ಬೇಡ. ಸರ್ಕಾರ ತೆರಿಗೆಯಿಂದ ವಂಚಿತವಾಗುವುದು ಬೇಡ ಎಂದು ಸೊಗಡು ರಾಜ್ಯ ಸರ್ಕಾರಕ್ಕೆ ಕಿವಿ ಮಾತು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

