ತುಮಕೂರು

ಶೇಂಗಾ ಬೆಳೆಗೆ ರು. 4 ಸಾವಿರ ಬೆಂಬೆಲೆ ನೀಡಿ

Published On :

ಪಾವಗಡ: ಪಾವಗಡ ತಾಲೂಕಿನ ಬಗ್ಗೆ ಸರ್ಕಾರ ಮಲತಾಯಿ ಧೋರಣೆ ತೋರಿದ್ದು ರೈತರ ಜೀವನಾಡಿ ಶೇಂಗಾ ಬೆಳೆಗೆ 4ಸಾವಿರ ರು.ಗಳ ಬೆಂಬಲ ಬೆಲೆ ನೀಡುವಂತೆ ಶಾಸಕ ಕೆ.ಎಂ.ತಿಮ್ಮರಾಯಪ್ಪ ಸರ್ಕಾರವನ್ನು ಆಗ್ರಹಿಸಿದರು.
ಶೇಂಗಾ ಬೆಳೆಗೆ ಬೆಂಬಲ ಬೆಲೆ, ಪರಿಹಾರ ಹಾಗೂ ನದಿ ಮೂಲದ ನೀರು ಸೇರಿದಂತೆ ಇತರೆ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಸೋಮವಾರ ತಾಲೂಕು ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಬೆಳೆಗ್ಗೆ  ಪಟ್ಟಣದ ಎಸ್‌ಎಸ್‌ಕೆ ಬಯಲು ರಂಗಮಂದಿರದಿಂದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಘೋಷಣೆಗಳೊಂದಿಗೆ ಸರ್ಕಾರದ ಧೋರಣೆಯನ್ನು ಖಂಡಿಸಿದರು. ನಂತರ  ತಾಲೂಕು ಕಚೇರಿಯ ಬಳಿ ಆಗಮಿಸಿ  ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭದಲ್ಲಿ ಶಾಸಕ ಕೆ.ಎಂ.ತಿಮ್ಮರಾಯಪ್ಪ  ಮಾತನಾಡಿ, ಶೇಂಗಾ ಬೆಳೆ ತಾಲೂಕಿನ ರೈತರ ಜೀವನಾಡಿ ಬೆಳೆಯಾಗಿದ್ದು ಸರ್ಕಾರ ಇತರೆ ಜಿಲ್ಲೆಗಳ ಕಬ್ಬು, ಕಾಫಿ, ಈರುಳ್ಳಿ ಬೆಳೆಗಳಿಗೆ ಕೊಟ್ಟಿರುವ ಬೆಂಬಲ ಬೆಲೆ ರೀತಿಯಲ್ಲಿ ಶೇಂಗಾ ಬೆಳೆಗೂ ಬೆಂಬಲ ಬೆಲೆ ನೀಡಿ ಎಂದು ಆಗ್ರಹಿಸಿದರು. ರೈತರು ಶೇಂಗಾ ಬಿತ್ತನೆ ಬೀಜ ಖರೀದಿಸುವ ಸಂದರ್ಭದಲ್ಲಿ ಕ್ವಿಂಟಾಲ್‌ಗೆ 5,500 ರು.ಗಳ ಬೆಲೆ ನಿಗದಿಯಿತ್ತು. ಆದರೆ ರೈತರು ಬೆಳೆ ತೆಗೆದು ಮಾರಾಟ ಮಾಡುವ ಸಂದರ್ಭದಲ್ಲಿ ಕ್ವಿಂಟಾಲ್ ಬರೀ 3500 ರು.ಗಳಿಗೆ ಮಾರುಕಟ್ಟೆ ದರ ನಿಗದಿಪಡಿಸಿದ ಕಾರಣ  ರೈತರಿಗೆ ಅನ್ಯಾಯವಾಗುತ್ತಿದೆ. ಅಲ್ಲದೇ ಜಮೀನು ಹಸನು ಸೇರಿದಂತೆ ಬೀಜ ಬಿತ್ತನೆ ಮಾಡಿ ಫಸಲು ಪಡೆಯುವ ವೇಳೆಗೆ ಪ್ರತಿ ಹೆಕ್ಟೇರ್‌ಗೆ ಸಾವಿರಾರು ರು.ಗಳ ಖರ್ಚು ರೈತರು ಭರಿಸಬೇಕಿದೆ. ಈ ಹಿನ್ನಲೆಯಲ್ಲಿ ಶೇಂಗಾ ಬೆಳೆಗೆ ಸರ್ಕಾರ ಪ್ರತಿವರ್ಷ 1ರು. ಸಾವಿರ ಪ್ರೋತ್ಸಾಹ ಧನ ಸೇರಿದಂತೆ ಪ್ರತಿ ಕ್ವಿಂಟಾಲ್‌ಗೆ 4 ಸಾವಿರ ಮಾರುಕಟ್ಟೆ ದರ ನಿಗದಿಪಡಿಸಬೇಕು ಎಂದರು.
ಅನುಕೂಲ ಕಲ್ಪಿಸಿ: ಮಾರುಕಟ್ಟೆಯಲ್ಲಿ ಶೇಂಗಾ ಬೆಳೆಯ ಮಾರಾಟ ಕೇಂದ್ರಗಳನ್ನು ತೆರೆದು ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದ ಅವರು, ನದಿ ಮೂಲದ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಸೇರಿದಂತೆ ಕಡು ಬಡವರಿಗೆ ಸಮರ್ಪಕ ಪಡಿತರ ವ್ಯವಸ್ಥೆ, ನಿರಂತರ ವಿದ್ಯುತ್ ಸರಬರಾಜು ಕಲ್ಪಿಸುವ ಮೂಲಕ ಈ ಭಾಗದ ರೈತರ ನೆರವಿಗೆ ಸರ್ಕಾರ ಮುಂದಾಗಲು ಒತ್ತಾಯಿಸಿದರು.
ತಾಲೂಕಿನಲ್ಲಿ ಗ್ರಾಮೀಣಾ ಸಾರಿಗೆ ವ್ಯವಸ್ಥೆಗೆ ಒತ್ತಾಯಿಸಿದ ಅಧ್ಯಕ್ಷ ಎನ್. ತಿಮ್ಮಾರೆಡ್ಡಿ ಸಾರಿಗೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸರ್ಕಾರದ ಧೋರಣೆ ವಿರುದ್ಧ  ಹಾರಿಹಾಯ್ದರು.
ಜಿಪಂ ಸದಸ್ಯ ಆರ್.ಸಿ. ಅಂಜಿನಪ್ಪ, ಪಕ್ಷದ ಪ್ರಧಾನ ಕಾರ್ಯದರ್ಶಿ ಗೋವಿಂದಬಾಬು, ಹಿರಿಯ ಮುಖಂಡರಾದ ಬಲರಾಮರೆಡ್ಡಿ, ಕೆ.ಆರ್. ಸುರೇಶ್ ಇತರರು  ಸಮಸ್ಯೆಗಳ ಬಗ್ಗೆ ವಿವರಿಸಿದರು.
ವಕೀಲ ವೆಂಕಟರಾಮರೆಡ್ಡಿ, ಎಸ್.ಕೆ.ರೆಡ್ಡಿ, ವಿ.ಚಿಂತಲರೆಡ್ಡಿ, ಪ್ರಸಾದ್ ರೆಡ್ಡಿ, ಎಸ್.ಟಿ.ನಾಗರಾಜ್, ಎಂ.ಕೆ.ನಾರಾಯಣಪ್ಪ, ಜಿ.ಬಿ.ದೇವರಾಜ್, ಶಿವಪ್ಪ ನಾಯಕ, ತಾಪಂ ಸದಸ್ಯ ಚಂದ್ರಶೇಖರ್, ರಾಜ್‌ಗೋಪಾಲ್ ಪುರಸಭೆ ಸದಸ್ಯ ವಸಂತ್‌ಕುಮಾರ್ ವಕೀಲ ರವಿ, ಹನುಮಂತನಹಳ್ಳಿ ರಮೇಶ್, ಅಪ್‌ಬಂಡೆ ಗೋಪಾಲ್ ಮುಂತಾವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಸಮಸ್ಯೆಗೆ ಗಮನ ಹರಿಸದ ಸರ್ಕಾರ
ಪಾವಗಡ: ಬೆಳಗಾವಿ ಅಧಿವೇಶನದಲ್ಲಿ ಶೇಂಗಾ ಬೆಳೆಗೆ ಬೆಂಬಲ ಬೆಲೆ ಹಾಗೂ ಪರಿಹಾರ ಸೇರಿದಂತೆ ತಾಲೂಕಿನ ಜ್ವಲಂತ ಸಮಸ್ಯೆಗಳ ಬಗ್ಗೆ 20 ನಿಮಿಷಗಳಿಗೂ ಹೆಚ್ಚು ಕಾಲ ಬೆಳಕು ಚೆಲ್ಲಿದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲವೆಂದು ಶಾಸಕ ಕೆ.ಎಂ. ತಿಮ್ಮರಾಯಪ್ಪ ಕಿಡಿಕಾರಿದರು.
ಸೋಮವಾರ ಹಮ್ಮಿಕೊಂಡಿದ್ದ ಜೆಡಿಎಸ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ರಾಜ್ಯ ಜೆಡಿಎಸ್ ಹಿರಿಯ ಮುಖಂಡರು ಸೇರಿದಂತೆ ತಾವು ಕೂಡ ಅಧಿವೇಶನದಲ್ಲಿ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಧ್ವನಿ ಎತ್ತಿದರೆ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೆ ಪ್ರಜಾತಂತ್ರ ವ್ಯವಸ್ಥೆಗೆ ಅನ್ಯಾಯ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಶೇಂಗಾ ಬೆಳೆಗೆ ಬೆಂಬಲ ಬೆಲೆ ಹಾಗೂ ಶಾಶ್ವತ ಕುಡಿಯುವ ನೀರಿನ ಅನುಷ್ಠಾನದಲ್ಲಿ ಸರ್ಕಾರ ತಾಲೂಕನ್ನು ವಂಚಿಸಿದರೆ ಪಕ್ಷದ ವತಿಯಿಂದ ಮುಂದಿನ ದಿನಗಳಲ್ಲಿ ಸ್ವರೂಪ ಬದಲಿಸುವ ಮೂಲಕ ಉಗ್ರ ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದು ಅವರು ಸರ್ಕಾರಕ್ಕೆ  ಎಚ್ಚರಿಕೆ ನೀಡಿದರು.
ಎನ್. ತಿಮ್ಮಾರೆಡ್ಡಿ ಆಯ್ಕೆಗೆ ಅಭಿನಂದನೆ
ಪಾವಗಡ: ಜನಪರ ಹೋರಾಟಗಾರ ಪಕ್ಷದ ನಿಷ್ಠಾವಂತ, ತಾಲೂಕು ಜೆಡಿಎಸ್ ಅಧ್ಯಕ್ಷ ಎನ್. ತಿಮ್ಮಾರೆಡ್ಡಿ ಅವರನ್ನು  ಗುರುತಿಸಿ ಗಡಿ ಭಾಗಕ್ಕೆ ಆದ್ಯತೆ ನೀಡುವ ಮೂಲಕ ಇತ್ತೀಚಿಗೆ ಅವರನ್ನು ರಾಜ್ಯ ಜೆಡಿಎಸ್ ಘಟಕದ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿರುವುದು ಸಂತಸದ ಸಂಗತಿ ಎಂದು ಪಕ್ಷದ ಯುವ ಘಟಕದ ಪ್ರಮುಖ ಹನುಮಂತನಹಳ್ಳಿ ರಮೇಶ್ ಹರ್ಷ ವ್ಯಕ್ತಪಡಿಸಿದ್ದಾರೆ. ಜನತಾದಳ ವಿಭಾಗವಾದ ಸಂದರ್ಭದಲ್ಲಿ ದೇವೇಗೌಡರ ಪರ ಧ್ವನಿಯಾಗಿ ನಿಂತು ಪಕ್ಷ ಸಂಘಟಿಸಿದವರು ತಿಮ್ಮಾರೆಡ್ಡಿ. ಅಲ್ಲದೇ ಇಲ್ಲಿ ಪಕ್ಷ ಗೆಲ್ಲುವಲ್ಲಿ ಅವರ ಶ್ರಮ ಹೆಚ್ಚಿದ್ದುದನ್ನು ಗುರುತಿಸಿ ಅವರನ್ನು ರಾಜ್ಯ ಜೆಡಿಎಸ್ ಘಟಕದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವುದು ತಾಲೂಕಿಗೆ ನೀಡಿದ ಗೌರವ ಎಂದರು. ಅವರ ಆಯ್ಕೆಗೆ ಕಾರಣರಾದ ಪಕ್ಷದ ಹಿರಿಯರಾದ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಹಾಗೂ ಶಾಸಕ ಕೆ.ಎಂ. ತಿಮ್ಮರಾಯಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿರುವುದಾಗಿ ಅವರು ತಿಳಿಸಿದರು.  


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.