ತುಮಕೂರು

ವಿಕಲಚೇತನರಿಗೆ ಪ್ರೋತ್ಸಾಹ ಅಗತ್ಯ್ಛ

Published On :

ತುಮಕೂರು: ವಿಕಲಚೇತನರಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ, ಅದನ್ನು ಹೊರಹೊಮ್ಮಿಸಿ, ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಕರೆ ನೀಡಿದರು.
ಅವರು ಜಿಲ್ಲಾ ಬಾಲಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಕಲಚೇತನರು ಸಮಾಜದಲ್ಲಿ ಯಾರಿಗೂ ಕಡಿಮೆಯಿಲ್ಲ ಎಂಬಂತಹ ಆತ್ಮವಿಶ್ವಾಸವನ್ನು ಅವರಲ್ಲಿ ಮೂಡಿಸುವ ಕೆಲಸ ನಮ್ಮೆಲ್ಲರಿಂದ ಆಗಬೇಕಿದೆ ಎಂದರು. ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಮೂಲಕ ಅಂಗವಿಕಲತೆಯನ್ನು ನಾವು ಪರಿಣಾಮಕಾರಿಯಾಗಿ ನಿಯಂತ್ರಿಸಿದ್ದೇವೆ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯಾಗುತ್ತದೆ ಎಂದು ಅವರು ಈ ಸಂದರ್ಭ ತಿಳಿಸಿದರು. ತಮ್ಮ ಶಾಸಕರ ಅನುದಾನದಲ್ಲಿ ವಿಕಲಚೇತನರ ಕಲ್ಯಾಣಕ್ಕಾಗಿ ಹಣ ಸದ್ವಿನಿಯೋಗ ಮಾಡುವುದಾಗಿ ಭರವಸೆ ನೀಡಿದ ರಾಜಣ್ಣ ಅವರು, ತಮ್ಮ ಕ್ಷೇತ್ರದಲ್ಲಿನ ಅಂಗವಿಕಲರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಸಂಸ್ಥೆಗಳಿಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ಸಹಕಾರ ನೀಡುವುದಾಗಿ ಈ ಸಂದರ್ಭ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ರಫೀಕ್ ಅಹಮದ್ ಅವರು ಮಾತನಾಡಿ, ಸರ್ಕಾರ ಪ್ರತಿ ಹಂತದಲ್ಲೂ ವಿಕಲಚೇತನರ ಕಲ್ಯಾಣಕ್ಕಾಗಿ ಮೀಸಲಾತಿ ಸೌಲಭ್ಯ ಕಲ್ಪಿಸಿದ್ದು, ವಿವಿಧ ಹಂತದಲ್ಲಿ ಸಾಕಷ್ಟು ಅನುದಾನ ಒದಗಿಸಿದೆ. ಇದು ಸದುಪಯೋಗವಾಗಬೇಕು ಎಂದು ಕರೆ ನೀಡಿದರು.
ಜಿಪಂ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಿರಿಸಲಾಗಿರುವ ಅನುದಾನ ವಿಕಲಚೇತನರಿಗೆ ಮಾತ್ರ ಬಳಕೆಯಾಗಬೇಕು. ಇದಲ್ಲದೆ, ಬಸ್ ಪಾಸ್ ರಿಯಾಯಿತಿ, ಉದ್ಯೋಗಗಳಲ್ಲಿ ಮೀಸಲಾತಿ ಇತ್ಯಾದಿ. ಸೇರಿದಂತೆ ಹಲವಾರು ಸೌಲಭ್ಯಗಳ ಮಾಹಿತಿಯನ್ನು ವಿಕಲಚೇತನರು ಪಡೆದುಕೊಂಡು ಸೌಲಭ್ಯದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.  
ಕೀಳಾಗಿ ನೋಡದಿರಿ: ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ. ಅಧ್ಯಕ್ಷೆ ಸಾಕಮ್ಮ ನಾಗರಾಜ್ ಅವರು ಮಾತನಾಡಿ, ಅಂಗವಿಕಲರನ್ನು ಯಾರೂ ಸಹ ಕೀಳಾಗಿ ನೋಡಬಾರದು. ಎಂದಿಗೂ ತಾರತಮ್ಯ ಮಾಡಬಾರದು. ಬದಲಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯಲು ಅನುಕೂಲವಾಗುವಂತೆ ಅಂಗವಿಕಲರನ್ನು ಪ್ರೋತ್ಸಾಹಿಸಬೇಕು. ಅಂತೆಯೇ ಪೋಷಕರೂ ಸಹ ತಮ್ಮ ಮಕ್ಕಳಿಗೆ ಬಂದಿರುವ ಅಂಗವಿಕಲತೆಯನ್ನು ನೆನೆದು ಕೊರಗದೆ ಎಲ್ಲಾ ರೀತಿಯಲ್ಲಿಯೂ ತಮ್ಮ ಮಕ್ಕಳೂ ಇತರೆ ಮಕ್ಕಳಿಗೆ ಕಡಿಮೆಯಿಲ್ಲದಂತೆ ಆರೈಕೆ ಮಾಡಿ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಕರೆ ನೀಡಿದರು.
ಶಾಪ ಎಂದು ಭಾವಿಸಬೇಡಿ: ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಮಾತನಾಡಿ, ಅಂಗವಿಕಲತೆ ಶಾಪ ಎಂದು ಭಾವಿಸಬಾರದು. ವಿಕಲಚೇತನರಲ್ಲೂ ಚೈತನ್ಯವಿರುತ್ತದೆ, ಶಕ್ತಿಯಿರುತ್ತದೆ. ಅದನ್ನು ಉಪಯೋಗಿಸಬೇಕಾಗುತ್ತದೆ.  ನಮ್ಮ ಒಟ್ಟು ಜನಸಂಖ್ಯೆಯ  ಶೇ. 3ರಷ್ಟು ಭಾಗ ಅಂಗವಿಕಲರಿದ್ದಾರೆಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಬಸ್‌ಪಾಸ್, ಶ್ರವಣಸಾಧನಗಳು, ಉರುಗೋಲು, ಟ್ರೈಸಿಕಲ್, ಮುಂತಾದ ಸವಲತ್ತುಗಳನ್ನು ಸರ್ಕಾರ ಒದಗಿಸುತ್ತಿದೆ. ಅಲ್ಲದೆ, ಜಿಲ್ಲಾ ಪಂಚಾಯತ್, ಸ್ಥಳೀಯ ಸಂಸ್ಥೆಗಳಲ್ಲಿ  ಶೇ. 3 ರಷ್ಟು ಕಲ್ಯಾಣ ಕಾರ್ಯಕ್ರಮಗಳು ಇದೆ. ಅನ್ಯ ಪಾಲಾಗದಂತೆ ಈ ಹಣ ಸದುಪಯೋಗವಾಬೇಕು ಎಂದರು.
ವೈದ್ಯರು ಸರಿಯಾಗಿ ಅಂಗವಿಕಲರನ್ನು ಗುರುತಿಸಬೇಕು. ನಿಜವಾಗಿ ಅಂಗವಿಕಲತೆ ಇದ್ದವರಿಗೆ ಮಾತ್ರ ಪ್ರಮಾಣಪತ್ರ ನೀಡಬೇಕು. ಅನರ್ಹರಿಗೆ ವೈದ್ಯರು ಪ್ರಮಾಣಪತ್ರ ನೀಡಿದಲ್ಲಿ ನಿಜವಾದ ವಿಕಲಚೇತನರಿಗೆ ಸವಲತ್ತು ದೊರಕುವುದಿಲ್ಲ, ಜೊತೆಗೆ ಸರ್ಕಾರಕ್ಕೆ ನಷ್ಟ ಉಂಟಾಗುತ್ತದೆ ಎಂದು ಕರೆ ನೀಡಿದ ಜಿಲ್ಲಾಧಿಕಾರಿಗಳು, ಅಂಗವಿಕಲರು ಏನೇ ಸಮಸ್ಯೆಯಿದ್ದರೂ ಸಹ ತಮ್ಮ ಗಮನಕ್ಕೆ ತಂದಲ್ಲಿ ಸಮಸ್ಯೆ ಬಗೆಹರಿಸಲು ತಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹುಚ್ಚಯ್ಯ ಅವರು ಮಾತನಾಡಿ, ವಿಕಲಚೇತನರ ಬಗ್ಗೆ ಕೇವಲ ಅನುಕಂಪದ ಮಾತನ್ನು ಆಡಿದರಷ್ಟೇ ಸಾಲದು ಜೊತೆಗೆ ವಿಕಲಚೇತನರಿಗೆ ನ್ಯಾಯಯುತವಾಗಿ ದೊರಕಬಹುದಾದ ಸವಲತ್ತು ದೊರಕಿಸಿಕೊಡಲು ಅವರ ಜೊತೆಗೆ ನಾವುಗಳು ಸಹಕರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭ ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸಿ ಬಹಮಾನ ಗಳಿಸಿದ ವಿಕಲಚೇತನ ಮಕ್ಕಳನ್ನು ಸನ್ಮಾನಿಸಲಾಯಿತು. ಜಿ.ಪಂ. ಸಿ.ಇ,.ಓ ಗೋವಿಂದರಾಜು, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕಿ ಸುಜಾತ ಸೇರಿದಂತೆ  ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.