ಸಹಕಾರಿ ಸಂಸ್ಥೆಗಳ ಚುನಾವಣೆಯಿಂದ ಹೆಚ್ಚಿನ ಲಾಭ: ಬಾಲಶೇಖರ್ ಅಭಿಮತ
ಕ.ಪ್ರ. ವಾರ್ತೆ ತುಮಕೂರು ಡಿ. 17
ಸಹಕಾರಿ ಸಂಘಗಳು ಶಿಸ್ತುಬದ್ಧವಾಗಿ ಚುನಾವಣೆ ನಡೆಸಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆ ಮಾಡುವುದರಿಂದ ಹೆಚ್ಚಿನ ಪ್ರತಿಫಲ ನಿರೀಕ್ಷಿಸಬಹುದು ಎಂದು ಸಹಕಾರಿಗಳ ಉಪನಿಬಂಧಕ ಎಚ್. ಬಾಲಶೇಖರ್ ತಿಳಿಸಿದ್ದಾರೆ.
ನಗರದ ಹೊರಪೇಟೆಯಲ್ಲಿರುವ ಸೆಕ್ರೆಡ್ಹಾರ್ಟ್ ಸೌಹಾರ್ದ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದಸಂಯುಕ್ತ ಸಹಕಾರಿ ಸಂಸ್ಥೆ ಆಯೋಜಿಸಿದ್ದ ಸೌಹಾರ್ದ ಸಹಕಾರಿಗಳ ಚುನಾವಣಾ ಪೂರ್ವಸಿದ್ಧತಾ ಸಭೆ ಮತ್ತು ಮುಖ್ಯ ಕಾರ್ಯನಿರ್ವಾಹಕರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು. ಸಹಕಾರಿ ಸಂಸ್ಥೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅತಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಪ್ರತಿಸಹಕಾರಿ ಸಂಸ್ಥೆಯೂ ನಿಯಮದಂತೆ ಚುನಾವಣೆಯಲ್ಲಿ ಪಾಲ್ಗೊಳ್ಳುವುದು ಅಗತ್ಯವಾಗಿದೆ. ಈಗಾಗಲೇ ಅವಧಿ ಪೂರೈಸಿರುವ ಸಹಕಾರಿ ಸಂಸ್ಥೆಗಳ ಚುನಾಯಿತ ಮಂಡಳಿಗಳು ಮೊದಲು ಚುನಾವಣಾ ಆಯೋಗಕ್ಕೆ ತಮ್ಮ ಸಂಸ್ಥೆಯ ಚುನಾವಣೆ ನಡೆಸುವಂತೆ ಮನವಿ ಸಲ್ಲಿಸಿದರೆ ಆಯೋಗವೇ ಚುನಾವಣಾಧಿಕಾರಿಯನ್ನು ನೇಮಕ ಮಾಡುತ್ತದೆ. ಆ ನಂತರದಲ್ಲಿ ಮತದಾರರ ಪಟ್ಟಿ ತಯಾರಿಸಿ, ಮತದಾರರಿಗೆ ನೊಟೀಸ್ ನೀಡುವುದರ ಜೊತೆಗೆ ಮಾಧ್ಯಮಗಳಲ್ಲಿ ಚುನಾವಣೆ ನಡೆಯುವ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಮತದಾನದ ದಿನ ನಿಗದಿಯಾಗಿ ನಿರ್ದೇಶಕರ ಆಯ್ಕೆ ನಡೆದ 7 ದಿನಗಳ ಒಳಗೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಸುವುದು ಕಡ್ಡಾಯವಾಗಿದೆ ಎಂದು ಬಾಲಶೇಖರ್ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಯ ನಿರ್ದೇಶಕ ಬಿ.ಗಂಗಾಧರಯ್ಯ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 136 ಸೌಹಾರ್ದ ಸಹಕಾರಿ ಸಂಘಗಳು ನೋಂದಾಯಿಸಿದ್ದು ಅವುಗಳಲ್ಲಿ 115 ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಇವುಗಳಲ್ಲಿ 57 ಅತ್ಯಂತ ಲಾಭದಾಯಕವಾಗಿ ತಮ್ಮ ವಹಿವಾಟು ನಡೆಸುತ್ತಿವೆ. ಎಂಟು ಸಂಸ್ಥೆಗಳು ನಷ್ಟ ಹೊಂದಿ ಬಾಗಿಲು ಮುಚ್ಚಿವೆ. ಆರ್ಥಿಕ ಅಭಿವೃದ್ಧಿಗೆ ಸಹಕಾರಿ ತತ್ವ ಅತ್ಯಂತ ಪ್ರಮುಖವಾಗಿದ್ದು, ಪ್ರತಿ ಸೌಹಾರ್ದ ಸಹಕಾರಿ ಸಂಸ್ಥೆಗೆ ಚುನಾವಣೆ ನಡೆಸುವುದು ಆಯಾಯ ಸಂಸ್ಥೆಗಳ ಸಿಇಓಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪವ್ಯವಸ್ಥಾಪಕ ವೈ.ಕುಮಾರ್, ರಘುನಂದನ್, ಸಹಕಾರಿ ಸಲಹೆಗಾರ ಶಂಕರ್ ಐ. ಹೆಗಡೆ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

