ತುಮಕೂರು

ಕಲ್ಪವೃಕ್ಷ ಬೆಳೆದು ವಿಶ್ವಾಸ ಕಳೆದುಕೊಂಡ ರೈತ

Published On :

ಕನ್ನಡಪ್ರಭ ವಾರ್ತೆ, ತುಮಕೂರು, ಡಿ.18
ಪ್ರಮುಖ ಆರ್ಥಿಕ ಬೆಳೆ ಕಲ್ಪವೃಕ್ಷ ಬೆಳೆದ ರಾಜ್ಯದ ರೈತರು ಬದುಕುವ ವಿಶ್ವಾಸವನ್ನೇ ಕಳಕೊಂಡಿದ್ದಾರೆ.
ತೆಂಗು,  ರೋಗಕ್ಕೆ, ಬರಗಾಲಕ್ಕೆ ಬಲಿಯಾಗಿ, ರೈತ ಬೀದಿ ಪಾಲಾಗುತ್ತಿದ್ದಾನೆ. ಕಾಂಗ್ರೆಸ್ ಸರ್ಕಾರ ಕೂಡಲೇ ತೆಂಗು ಬೆಳೆಗಾರರ ಬೆಂಬಲಕ್ಕೆ ಬಂದು, ವಿಶೇಷ ಪ್ಯಾಕೇಜ್ ನೀಡಲಿ. ಸಿದ್ದು ಸರ್ಕಾರ ರೈತರಿಗೆ ಬದುಕುವ ಭಾಗ್ಯ ಕರುಣಿಸಲಿ ಎಂದು ರಾಜ್ಯ ಬಿಜೆಪಿ ವಕ್ತಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವರೂ, ಹಾಲಿ ಶಾಸಕರೂ ಆಗಿರುವ ಸಿ.ಟಿ. ರವಿ ಒತ್ತಾಯಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ 7 - 8 ಜಿಲ್ಲೆಗಳಲ್ಲಿ ಕಲ್ಪವೃಕ್ಷ ಬೆಳೆದ ರೈತ ಕಂಗಾಲಾಗಿದ್ದಾನೆ.  ಸುಳಿ ರೋಗ, ಬರಗಾಲದಿಂದ ತೆಂಗು ನಾಶವಾಗಿದೆ. ತುಮಕೂರು ಜಿಲ್ಲೆಯೊಂದರಲ್ಲೇ 41,316 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ನಾಶವಾಗಿದೆ. 75,658 ಕುಟುಂಬಗಳು ಸಮಸ್ಯೆ ಎದುರಿಸುತ್ತಿವೆ. ಹಾಸನದಲ್ಲಿ ಸುಮಾರು 49 ಸಾವಿರ ಕುಟುಂಬಗಳು ಸಂಕಷ್ಟದಲ್ಲಿವೆ. ಸರ್ಕಾರವೇ ಮಾಹಿತಿ ನೀಡಿರುವಂತೆ ರಾಜ್ಯದಲ್ಲಿ ಒಟ್ಟು ಸುಮಾರು  ಒಂದೂವರೆ ಲಕ್ಷಕ್ಕೂ ಹೆಚ್ಚು ಕುಟುಂಬಗಳು ಆರ್ಥಿಕ ಸಮಸ್ಯೆಗೀಡಾಗಿವೆ. ಇಷ್ಟೆಲ್ಲಾ ಆದರೂ ರಾಜ್ಯ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲೀ ವಿಶೇಷ ಪ್ಯಾಕೇಜ್ ನೀಡಿಲ್ಲ. ರೈತರ ಸಮಸ್ಯೆ ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರವಿ, ಕೂಡಲೇ ರೈತರ ನೆರವಿಗೆ ಬರುವಂತೆ ಆಗ್ರಹಿಸಿದರು.
ಖಂಡನೀಯ: ಅದೇ ರೀತಿ ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ 2500 ರು. ಎಂದು ಘೋಷಿಸಿ, ನಂತರ ಆಗಲ್ಲ ಎಂದ ಸರ್ಕಾರದ ಧೋರಣೆ ಖಂಡನೀಯ. ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಚರ್ಚಿಸದೆ ಏಕಾ ಏಕಿ ತೀರ್ಮಾನ ಮಾಡಿ ಈಗ ಆಗಲ್ಲ ಎಂದಿರುವುದು ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಲೇವಡಿ ಮಾಡಿದರು. ನಿಮ್ಮದೇ ಪಕ್ಷದ ಸಕ್ಕರೆ ಕಾರ್ಖಾನೆ ಮಾಲೀಕರಾದ ಉಮೇಶ್ ಕತ್ತಿ, ಮುರುಗೇಶ್ ನಿರಾಣಿಯವರಾದರೂ 2500 ರು. ಬೆಂಬಲ ನೀಡಿ ಆದರ್ಶ ಮೆರೆಯಬಹುದಲ್ಲ ಎಂಬ ಪ್ರಶ್ನೆಗೆ, ಹೇಳಿರೋದು ಸಿದ್ದರಾಮಯ್ಯನವರ ಸರ್ಕಾರ. ನಾವಲ್ಲ ಎಂದರು.
ಅನ್ನಭಾಗ್ಯ ಯೋಜನೆ ಜಾರಿಗೆ ಅಕ್ಕಿ ಇದೆಯೋ, ಇಲ್ಲವೋ ಎಂಬುದನ್ನು ನೋಡದೆ ಏಕಾ ಏಕಿ ಘೋಷಣೆ ಮಾಡಲಾಯಿತು. ಆದರೆ ಅಕ್ಕಿ ಇಲ್ಲ. ಪರಿಣಾಮ ರಾಜ್ಯ ರೈಸ್ ಮಿಲ್ ಮಾಲೀಕರ ಮೇಲೆ ಲೆವಿ ಒತ್ತಡ ಬಿದ್ದಿದೆ. ಮಾಲೀಕರು ಮುಷ್ಕರ ಹೂಡಿದ್ದಾರೆ. ಜನತೆ ಸಮಸ್ಯೆ ಎದುರಿಸುವಂತಾಗಿದೆ. ಬಿಪಿಎಲ್ ಕಾರ್ಡ್‌ದಾರರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಎಪಿಎಲ್ ಕಾರ್ಡ್‌ಗೆ ಅಕ್ಕಿ ನಿಲ್ಲಿಸಲಾಗಿದೆ. ಅನ್ನಭಾಗ್ಯ ಅಕ್ಕಿ ಕಾಳಸಂತೆ ಮಾರಾಟದ ಹಿನ್ನೆಲೆಯಲ್ಲಿ 13 ಪ್ರಕರಣಗಳು ಪೊಲೀಸ್ ಇಲಾಖೆಯಲ್ಲಿ ದಾಖಲಾಗಿವೆ. ಅನ್ನಭಾಗ್ಯ ಕನ್ನಭಾಗ್ಯ ಆಗಿದೆ ಎಂದು ಲೇವಡಿ ಮಾಡಿದರು.
ಓಟಿನ ಭಾಗ್ಯಕ್ಕೆ : ಶಾದಿ ಭಾಗ್ಯ, ಅಹಿಂದ ಮಕ್ಕಳ ಪ್ರವಾಸ, ಅನ್ನಭಾಗ್ಯ, ಶಾದಿ ಭಾಗ್ಯ ಸೇರಿದಂತೆ ಇತರೆ ವಿವೇಚನಾ ರಹಿತ ತೀರ್ಮಾನಗಳಿಂದ, ಲಾಭ-ನಷ್ಟ ಲೆಕ್ಕಾಚಾರವಿಲ್ಲದ ಪರಿಣಾಮ, ತಾತ್ಕಾಲಿಕ ಓಟ್‌ಬ್ಯಾಂಕ್ ಆಸೆಗೆ ಬಿದ್ದ ಸಿದ್ದರಾಮಯ್ಯ ಸರ್ಕಾರ ಆಡಳಿತ ವೈಫಲ್ಯ ಎದುರಿಸುತ್ತಿದೆ. ಗೊಂದಲಗಳ ಮೇಲೆ ಗೊಂದಲಗಳು ಏಳುತ್ತಿವೆ ಎಂದು ಆರೋಪಿಸಿದರು. ಓಟಿನ ಬಾಗ್ಯಕ್ಕೆ ಸರ್ಕಾರದ ಬೊಕ್ಕಸ ಖಾಲಿಯಾಗಲಿದ್ದು, ಮೂಲ ಸೌಕರ್ಯ ಅಭಿವೃದ್ದಿಗೆ ಹೊಡೆತ ಬೀಳಲಿದೆ. ಪರಿಣಾಮ ನಿರುದ್ಯೋಗ ಹೆಚ್ಚಲಿದೆ. ಶಾದಿ ಭಾಗ್ಯದಂತಹ ಕಾರ್ಯಕ್ರಮಗಳು ಕೋಮು ಭಾವನೆ ಕೆರಳಿಸಿ, ಸಂಘರ್ಷಕ್ಕೆ, ಸಮಾಜದ ಒಡಕಿಗೆ ಕಾರಣವಾಗುತ್ತವೆ ಎಂದು ಸಿ.ಟಿ. ರವಿ ವಿಶ್ಲೇಷಿಸಿದರು.
ಸಿಇಟಿ ಅದ್ವಾನ: ರಾಜ್ಯದಲ್ಲಿ ಸಿಇಟಿ ಅದ್ವಾನವಾಗಿದೆ. ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿ ಕೂಡ ತನಗೆ ಬೇಕಾದ ಎಂಜಿನಿಯರಿಂಗ್ ಅಥವಾ ಮೆಡಿಕಲ್ ಕಾಲೇಜು ಆಯ್ಕೆ ಮಾಡಿಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಲಿದೆ. ಅಷ್ಟೊಂದು ಶುಲ್ಕ ನೀಡಬೇಕಾದ  ಅನಿವಾರ್ಯತೆ ಎದುರಾಗಲಿದೆ. ಹೀಗಾಗಿ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜು ಮಾಲೀಕರು, ವಿದ್ಯಾರ್ಥಿ ಸಂಘಟನೆಗಳ ಮುಖಂಡರು, ಚಿಂತಕರ ರೌಂಡ್ ಟೇಬಲ್ ಸಭೆ ಕರೆದು ಚರ್ಚಿಸಿ, ಕೂಡಲೇ ಯೋಗ್ಯ ನಿರ್ಧಾರ ಪ್ರಕಟಿಸಲಿ. ಇಲ್ಲದೇ ಹೋದಲ್ಲಿ ರಾಜ್ಯದ ಕನಿಷ್ಠ 38 ಸಾವಿರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ರವಿ ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.