ತುಮಕೂರು

ಚಿಣ್ಣರ ಸಂತೆಯಲ್ಲಿ ಮಕ್ಕಳದ್ದೇ ಕಾರುಬಾರು

Published On :

ತುರುವೇಕೆರೆ:  ಅಲ್ಲಿ ಪುಟಾಣಿಗಳದ್ದೇ ಕಾರು ಬಾರು. ದೊಡ್ಡವರೂ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳಬೇಕು. ಹಾಗೆ ತಮ್ಮ ಚಾಕಚಕ್ಯತೆಯನ್ನು ತೋರಿಸುತ್ತಿದ್ದರು. ತಾವು ತಂದಿದ್ದ ವಸ್ತುಗಳನ್ನು ಗ್ರಾಹಕರಿಗೆ ಮಾರಾಟ ಮಾಡಲು ಅವರು ಅನುಸರಿಸುತ್ತಿದ್ದ ಮಾರ್ಗ ಅಚ್ಚರಿ ಉಂಟು ಮಾಡಿತು. ಪೆಪ್ಪರ್ ಮೆಂಟ್‌ನಿಂದ ಹಿಡಿದು ಆಲೂಗಡ್ಡೆಯ ತನಕ ಮಕ್ಕಳು ಅಲ್ಲಿ ಮಾರಾಟ ಮಾಡುತ್ತಿದ್ದರು. ಕೊಳ್ಳಲು ಬಂದ ಗ್ರಾಹಕರೂ ಸಹ ಬಹಳ ಖುಷಿಯಿಂದಲೇ ವಸ್ತುಗಳನ್ನು ಕೊಂಡರು.
ಇದು ಪಟ್ಟಣದ ವಿವಿ ವಿದ್ಯಾ ಶಾಲೆ, ಮಕ್ಕಳಲ್ಲಿರುವ ವ್ಯಾವಹಾರಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ಹಾಗೂ ಲಾಭ ನಷ್ಟದ ಅರಿವು ಆರಂಭದಿಂದಲೇ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ  ನಡೆಸಿದ ಮಕ್ಕಳ ಸಂತೆಯಲ್ಲಿ ಕಂಡು ಬಂದ ದೃಶ್ಯ. ಗ್ರಾಮಾಂತರ ಪ್ರದೇಶದಿಂದ ಬರುವ ಹಲವಾರು ಮಕ್ಕಳು ತಮ್ಮ ಪೋಷಕರು ಬೆಳೆಯುವ ಆಹಾರ ಪದಾರ್ಥಗಳನ್ನೇ ತಂದಿದ್ದರು. ಅವರೇ ಕಾಯಿ, ಹೆಸರು ಬೇಳೆ, ತೊಗರಿಕಾಯಿ, ಬೆಂಡೇಕಾಯಿ, ಈರುಳ್ಳಿ, ಹುರುಳಿಕಾಯಿ, ಪಪ್ಪಾಯಿ, ಹಲಸಿನ ಕಾಯಿ,  ಟೊಮೊಟೋ...ಮನೆಯಿಂದ ತಯಾರಿಸಿಕೊಂಡು ಬಂದಿದ್ದ ಬೋಂಡ, ಪಾನಿಪೂರಿ, ಚೌಚೌ ಬಾತ್ ಸಂತೆಗೆ ಬಂದಿದ್ದ ಗ್ರಾಹಕರ ಬಾಯಿಯಲ್ಲಿ ನೀರೂರಿಸಿದರೆ ಮಕ್ಕಳೇ ಸ್ಥಳದಲ್ಲಿ ತಯಾರಿಸುತ್ತಿದ್ದ ಚುರುಮುರಿ, ಮಸಾಲಾ ಬೋಂಡ ಮಕ್ಕಳಲ್ಲಿರುವ ಪಾಕದ ಪಾಠವನ್ನು ತೋರಿಸುತ್ತಿತ್ತು. ಪ್ರಮಾಣಕ್ಕೆ ತಕ್ಕದಾದ ಮಸಾಲಾ ಐಟಂಗಳನ್ನು ಹಾಕುತ್ತಿದ್ದ ಪರಿ ದೊಡ್ಡವರನ್ನೂ ಕ್ಷಣ ಕಾಲ ನಿಬ್ಬೆರಗು ಮಾಡಿತು.
ಬಿಸ್ಕತ್, ಚಿಪ್ಸ್: ಕೆಲವು ಮಕ್ಕಳು ಮಾರುಕಟ್ಟೆಯಲ್ಲಿ ದೊರೆಯುವ ಬಿಸ್ಕತ್, ಚಿಪ್ಸ್‌ಗಳನ್ನು ತಂದು ವ್ಯಾಪಾರ ಮಾಡುತ್ತಿದ್ದರು. ಸಂತೆ ಮುಗಿಯುವ ಹಂತ ಬಂದ ವೇಳೆ ಉಳಿದಿದ್ದ ವಸ್ತುಗಳನ್ನು ಖರ್ಚು ಮಾಡಲು ಆಫರ್ ಇಟ್ಟು ಗ್ರಾಹಕರನ್ನು ಸೆಳೆದರು. ಹಾಕಿದ್ದ ಬಂಡವಾಳಕ್ಕೆ ಮೋಸವಿಲ್ಲದಂತೆ ಹಣ ಸಂಪಾದಿಸಿ ಒಂದಿಷ್ಟು ಲಾಭ ಮಾಡಿಕೊಂಡು ಸಂತಸ ಪಟ್ಟರು. ಹಲವಾರು ಮಕ್ಕಳು ತಾವು ಗಳಿಸಿದ ಲಾಭದ ಬಗ್ಗೆ ತಮ್ಮ ತಮ್ಮೊಳಗೇ ಚರ್ಚಿಸಿಕೊಂಡರು.  ಶಾಲೆಯ ಮುಖ್ಯೋಪಧ್ಯಾಯಿನಿ ವಿಜಯ ವಿಶ್ವೇಶ್ವರಯ್ಯ ಮಾತನಾಡಿ ಮಕ್ಕಳಲ್ಲಿ ಸಾಮಾಜಿಕ ಅರಿವು ಬರಬೇಕು, ವ್ಯಾವಹಾರಿಕ ಜ್ಞಾನ ಮೂಡಬೇಕು. ಜೀವನವನ್ನು ಮಾಡಲು ಹಲವಾರು ವಿಧಾನಗಳು ಇವೆ ಎಂಬುದನ್ನೂ ಮಕ್ಕಳಲ್ಲಿ ಮೂಡಿಸಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.