ತುಮಕೂರು

ರೈತರಿಂದ ಮೌಲ್ಯವರ್ಧಿತ ಕೃಷಿ ಉತ್ಪನ್ನ ಮಾರಾಟ

Published On :

ಕ.ಪ್ರ.ವಾರ್ತೆ ,  ತುಮಕೂರು ,  ಡಿ.18
ತುಮಕೂರಿನಲ್ಲಿ ತುಮಹಾರ ರೈತರಿಂದ ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧಿತಗೊಳಿಸಿ, ಅವುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿಟ್ಟಿನಲ್ಲಿ ರೈತರು ಮತ್ತು ಗ್ರಾಹಕರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿರುವ ಡ್ರೀಮ್ ಇನ್ ಸಂಸ್ಥೆ ಇದೇ ಪ್ರಥಮ ಬಾರಿಗೆ ತುಮಹಾರ ಎಂಬ ಹೆಸರಿನ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ತುಮಕೂರಿನಲ್ಲಿ ಆಯೋಜಿಸಿದ್ದ ಸಂಸ್ಥೆಯ ಕಾರ್ಯಕ್ರಮದಲ್ಲಿ ಜಿಲ್ಲೆಯ 9 ಜನ ರೈತರು ತಾವೇ ಸ್ವತಃ ತಯಾರಿಸಿರುವ ರಾಗಿ ಉತ್ಪನ್ನಗಳಾದ ರಾಗಿ ಮಾಲ್ಟ್, ರಾಗಿ ಹುರಿಹಿಟ್ಟು ಮತ್ತು ವರ್ಜಿನ್ ಕೋಕನಟ್ ಆಯಿಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.
ಕೇಂದ್ರದ ಕೃಷಿ ವ್ಯವಸಾಯ ವೆಚ್ಚ ಮತ್ತು ದರ ಆಯೋಗದ ನಿರ್ದೇಶನದಂತೆ ಭಾರತದ ಬೆನ್ನೆಲುಬಾಗಿರುವ ಕೃಷಿ ಕ್ಷೇತ್ರವನ್ನು ಆರ್ಥಿಕವಾಗಿ ಬಲಗೊಳಿಸಿ ಯುವಜನತೆ ಕೃಷಿಯತ್ತ ತೊಡಗುವಂತೆ ಮಾಡುವ ನಿಟ್ಟಿನಲ್ಲಿ ಡ್ರೀಮ್ ಇಂಡಿಯಾ ಸಂಸ್ಥೆ ಪ್ರಾಯೋಗಿಕವಾಗಿ ತುಮಕೂರಿನಲ್ಲಿ ಸ್ಥಳೀಯ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೊಳಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಕೆಲಸ ಮಾಡುತ್ತಿದೆ. ರೈತರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆಗೆ ಬೇಕಾದ ತಂತ್ರಜ್ಞಾನ ಮತ್ತು ತರಬೇತಿಯನ್ನು ನೀಡಿ ರೈತರೇ ತಮ್ಮ ಉತ್ಪನ್ನಗಳನ್ನು ಮೌಲ್ಯವರ್ಧನಗೊಳಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಕೆಲಸವನ್ನು ಡ್ರಿಮ್‌ಇನ್ ಸಂಸ್ಥೆ ಮಾಡುತ್ತಿದೆ. ರೈತರು
ತಮ್ಮ-ತಮ್ಮಲ್ಲಿಯೇ ಸಹಕಾರ ಸಂಘಗಳನ್ನು ರಚಿಸಿಕೊಂಡು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ರೈತರನ್ನು ಉದ್ಯಮಿಗಳಾಗಿ ಪರಿವರ್ತಿಸುವ ಕೆಲಸ ನಡೆದಿದೆ. ಪ್ರಾಯೋಗಿಕವಾಗಿ ತುಮಕೂರು ಜಿಲ್ಲೆಯ  9 ಜನ ರೈತರು ತುಮಕೂರು ರೈತರ ಮಾರುಕಟ್ಟೆ ಸಂಘ ಎಂಬ ಸೊಸೈಟಿ ಸ್ಥಾಪಿಸಿಕೊಂಡು ತುಮಹಾರ ಎಂಬ ಹೆಸರಿನ ವಸ್ತುಗಳನ್ನು ಬಿಡುಗಡೆ ಮಾಡಿದೆ.
ಅಗತ್ಯ ಮಾಹಿತಿ: ಡ್ರಿಮ್ ಇನ್ ಸಂಸ್ಥೆ ರೈತರಿಗೆ ತಂತ್ರಜ್ಞಾನ, ತರಬೇತಿಯ ಜೊತೆಗೆ ಮಾರುಕಟ್ಟೆಗೆ ಬೇಕಾದ ಅಗತ್ಯ ಮಾಹಿತಿಯನ್ನು ನೀಡಿದ್ದು, ದೊಡ್ಡ - ದೊಡ್ಡ ಮಾಲ್‌ಗಳಲ್ಲಿ, ರೈತರ ಉತ್ಪನ್ನಗಳು ಮಾರಾಟವಾಗುವಂತೆ ಮಾಡಲಾಗಿದೆ. ಇದರಿಂದ ರೈತರು  ಖುಷಿಯಲ್ಲಿದ್ದಾರೆ. ಜಿಲ್ಲೆಯ ಪ್ರಗತಿಪರ ರೈತರಾದ ತುರುವೇಕೆರೆ ತಾಲೂಕು ನಾಗೇಶ್ ಬಾಬು ಹೇಳುವಂತೆ ಒಂದು ಕೆ.ಜಿ.ರಾಗಿ ಮಾರಾಟದಿಂದ ನಮಗೆ 10-12 ರು. ಮಾತ್ರ ಸಿಗುತ್ತಿತ್ತು. ಈಗ ರಾಗಿಯನ್ನೇ ಮೌಲ್ಯವರ್ಧನೆಗೊಳಿಸಿ ಅಂದರೆ ರಾಗಿ ಉಪ ಉತ್ಪನ್ನಗಳಾದ ರಾಗಿಮಾಲ್ಟ್,
ಬೇಬಿ ಪುಡ್ ಮಾಡಿ ಬಿಡುಗಡೆ ಮಾಡುತ್ತಿರುವುದರಿಂದ ಒಂದು ಕೆ.ಜಿ.ಗೆ 120 ರು. ರು ದೊರೆಯುತ್ತಿದೆ. ಇದರಲ್ಲಿ ಪ್ಯಾಕಿಂಗ್‌ಗೆ  ಸ್ವಲ್ಪ ಹಣ ಹೋದರೂ ಈ ಹಿಂದಿಗಿಂತ ಐದಾರು ಪಟ್ಟು ಹೆಚ್ಚು ಹಣ ದೊರೆಯುತ್ತಿದೆ. ಅದೇ ರೀತಿ ತೆಂಗಿನಕಾಯಿ ಮಾರುಕಟ್ಟೆಯಲ್ಲಿ 15 ರು. ರೂ ದೊರೆತರೆ ಅದನ್ನು ಎಣ್ಣೆ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಬಳಸುವುದರಿಂದ ಅದೇ ಒಂದು ತೆಂಗಿನ ಕಾಯಿಗೆ ಕನಿಷ್ಠ 25 ರು. ಪಡೆಯಬಹುದು ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಪ್ರಾಯೋಗಿಕವಾಗಿ ತುಮಕೂರು: ಡ್ರೀಮ್‌ಇನ್‌ನ ವ್ಯವಸ್ಥಾಪಕ ಖುಷ್ ಮೇಧೋರ್ ಮಾತನಾಡಿ, ಡ್ರೀಮ್‌ಇನ್ ರೈತರು ಮತ್ತು ಗ್ರಾಹಕರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದು, ತುಮಕೂರು ಜಿಲ್ಲೆಯಲ್ಲಿನ ಬೆಳವಣಿಗೆಯನ್ನು ನೋಡಿಕೊಂಡು ಇಡೀ ರಾಷ್ಟ್ರಕ್ಕೆ ವಿಸ್ತರಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಲಿದೆ. ವಿಲೇಜ್ ಎಂಬ ಟ್ರೇಡ್ ಮಾರ್ಕ್‌ನಲ್ಲಿ ಆಯಾಯ ಪ್ರದೇಶದ ಕೃಷಿ ಉತ್ಪನ್ನಗಳನ್ನು ಆಧರಿಸಿ ಮಾರುಕಟ್ಟೆಗೆ ವಸ್ತುಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಆಸಕ್ತ ರೈತರು ಸಹಕಾರ ಸಂಸ್ಥೆಗಳಲ್ಲಿ ಹೆಸರು ನೋಂದಾಯಿಸಿ ತಮ್ಮ ವಸ್ತುಗಳನ್ನು ಬಿಡುಗಡೆ ಮಾಡಬಹುದು ಎಂದರು.
ಸಮಾರಂಭದಲ್ಲಿ ಎಸ್‌ಐಟಿಯ ಪ್ರೊ. ಬಸವರಾಜಯ್ಯ, ವಿದ್ಯೋದಯ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಕೆ.ಚಂದ್ರಣ್ಣ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.