ಸರ್ಕಾರದ ಕೆಲಸ ದೇವರ ಕೆಲಸ ಎಂದು ಭಾವಿಸಿ
ಕ.ಪ್ರ.ವಾರ್ತೆ , ಮಧುಗಿರಿ , ಡಿ.18
ಶ್ರೀಸಾಮಾನ್ಯರಿಗೆ ಸ್ಪಂದಿಸಿ ಸಮಾಜ ಸೇವೆ ಸಲ್ಲಿಸುವ ನೌಕರರನ್ನು ಒಟ್ಟಿಗೆ ನೋಡುವ ಸೌಭಾಗ್ಯ ತಂದು ಕೊಟ್ಟ ತಾಲೂಕು ನೌಕರರ ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಕಾರ್ಯ ವೈಖರಿ ಮೆಚ್ಚುವಂಥದ್ದು ಎಂದು ಶಾಸಕ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.
ಬುಧವಾರ ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೊಡ್ಡ ಪ್ರಮಾಣದಲ್ಲಿ ಸೇರಿದ್ದ ನೌಕರರನ್ನು ಕಂಡು ಸಂತಸ ಪಟ್ಟ ರಾಜಣ್ಣ, ಸರ್ಕಾರಿ ನೌಕರರ ಸೇವೆಗೆ ತಕ್ಕಂತೆ ವೇತನ ಹೆಚ್ಚಿಸಬೇಕು. ನೌಕರರು ತಮ್ಮ ಹಕ್ಕು, ಕರ್ತವ್ಯ ಅರಿತು ಸರ್ಕಾರದ ಕೆಲಸ ದೇವರ ಕೆಲಸ ಎಂದು ಭಾವಿಸಿ ಮುತುವರ್ಜಿ ವಹಿಸಿ ಶ್ರೀಸಾಮಾನ್ಯರ ಕುಂದು-ಕೊರತೆ ಬಗ್ಗೆ ತಮ್ಮ ಪಾಲಿನ ಕರ್ತವ್ಯವನ್ನು ಚಾಚು ತಪ್ಪದೆ ನಿರ್ವಹಿಸಬೇಕು. ಒಂದು ವೇಳೆ ಕರ್ತವ್ಯದಲ್ಲಿ ಲೋಪ ಎಸಗಿದರೆ ಇಡೀ ಸಮಾಜಕ್ಕೆ ದ್ರೋಹ ಮಾಡಿದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದ ರಾಜಣ್ಣ, ನಮ್ಮ ತಾಲೂಕಿನಲ್ಲಿ ಕೆಲಸ ಮಾಡುವ ನೌಕರರು ಒಗ್ಗಟ್ಟಾಗಿ ಎಲ್ಲ ವರ್ಗದ ಜನಪರ ಕೆಲಸ ಮಾಡಿ ಜನರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆತಾಗ ಸೇವೆ ಸಾರ್ಥಕವಾಗುತ್ತದೆ. ನಾನು ಜಾತಿ-ಪಕ್ಷದ ಪ್ರತಿನಿಧಿಯಲ್ಲ, ಈ ಕ್ಷೇತ್ರದ ಎಲ್ಲ ಬಡವರ ಪರವಾಗಿ ಜನರ ಸಮಸ್ಯೆ ಅರಿತು ಕೆಲಸ ಮಾಡುವ ವ್ಯಕ್ತಿ, ಹಾಗಾಗಿ ಈ ಕ್ಷೇತ್ರದ ಜನತೆ ನನ್ನ ಮೇಲೆ ವಿಶ್ವಾಸವಿರಿಸಿ ಅತ್ಯಧಿಕ ಮತ ನೀಡಿ ಗೆಲ್ಲಿಸಿದ್ದಾರೆ.ಜನರ ಋಣ ತೀರಿಸಲು ಪ್ರಮಾಣಿಕ ಪ್ರಯತ್ನ ಮಾಡುವುದೇ ನನ್ನ ದ್ಯೇಯ ಎಂದರು.
ಅಧಿಕಾರಿಗಳ ವಿರುದ್ಧ ಎಚ್ಚರಿಕೆ: ಜಿಲ್ಲಾಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ ಮಾತನಾಡಿ, ನಮಗೆ ಕಿರುಕುಳ ನೀಡುವ ಮೇಲಾಧಿಕಾರಿಗಳ ವಿರುದ್ಧ ಧಿಕ್ಕಾರು ಹಾಕಬೇಕಿದೆ. ಮುಂದಿನ ದಿನಗಳಲ್ಲಿ ನೌಕರರು ಹೋರಾಟಕ್ಕೆ ನಿಲ್ಲಬೇಕಾಗುತ್ತದೆ. ಸರ್ಕಾರಿ ನೌಕರರು ಅನುತ್ಪಾದಕರಲ್ಲ, ಉತ್ಪಾದಕರು, ಪ್ರಯೋಜಕರು ಎಂದು ನುಡಿದರು.
ರಾಜ್ಯಾಧ್ಯಕ್ಷ ಎಲ್.ಭೈರಪ್ಪ ಜಿಲ್ಲೆಯಲ್ಲಿ ಹಿರಿಯ ಅಧಿಕಾರಿಗಳು ಟೀಕೆ ಮಾಡುವ ಮೂಲಕ ಸರ್ಕಾರಿ ನೌಕರರು ಅನುತ್ಪಾದಕರು ಎಂದು ಹೇಳಿರುವುದು ತಪ್ಪು,ಮುಂದಿನ ದಿನಗಳಲ್ಲಿ ಸರಿಯಾದ ಮಾರ್ಗದರ್ಶನ ನೀಡಿ ನೌಕರರ ಬಗ್ಗೆ ಉತ್ತಮ ಬಾಂಧವ್ಯ ಬೆಳಸಿಕೊಳ್ಳುವಂತೆ ಸಲಹೆ ನೀಡಿದರು.
ಶಾಸಕ ಕೆ.ಎನ್.ರಾಜಣ್ಣ ಅವರನ್ನು ನೌಕರ ಬಂಧುಗಳು ಅದ್ಧೂರಿಯಾಗಿ ಸನ್ಮಾನಿಸಿದರು. ಪ್ರತಿಭಾವಂತ 225 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ತಾ.ಅಧ್ಯಕ್ಷ ಎನ್. ಮಹಾಲಿಂಗೇಶ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಸಮಾರಂಭದಲ್ಲಿ ಕಿರುತೆರೆ ಮತ್ತು ಚಿತ್ರ ನಿರ್ದೇಶಕ ರವಿ. ಆರ್ ಗರಣಿ, ಡಿಡಿಪಿಐ ಆಂಜನಪ್ಪ, ಕಸಾಪ ಅಧ್ಯಕ್ಷ ಚಿ.ಸೂ. ಕೃಷ್ಣಮೂರ್ತಿ, ಪುರಸಭೆ ಅಧ್ಯಕ್ಷ ಎನ್.ಗಂಗಣ್ಣ,ತಾ.ಪಂ.ಅಧ್ಯಕ್ಷೆ ಸಿದ್ಧಾಗಂಗಾಂಭಿಕೆ, ಜುಬೇದ ಭಾನು, ಮುಖಂಡ ಟಿ.ರಾಮಣ್ಣ, ಎಂ.ಜಿ.ಶ್ರೀನಿವಾಸಮೂರ್ತಿ, ಬಿಇಓ ವೈ.ಎನ್.ರಾಮಕೃಷ್ಣಯ್ಯ, ರಾಜ್ಯ ಪರಿಷತ್ ಸದಸ್ಯ ಪ್ರಭಾಕರ ರೆಡ್ಡಿ, ಪ್ರೊ. ಮಲನ ಮೂರ್ತಿ, ಆರ್. ಸುಂದರರಾಜ್, ಎಸ್.ಡಿ.ಕೃಷ್ಣಪ್ಪ, ಯೋಗಾನಂದ ಮತ್ತು ನೌಕರರ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ನೌಕರರು ಉಪಸ್ಥಿತರಿದ್ದರು. ಪ್ರಭಾಕರರೆಡ್ಡಿ ಸ್ವಾಗತಿಸಿ ಮುನೀಂದ್ರಕುಮಾರ್ ನಿರೂಪಿಸಿ ಸಂಜಯ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

