ತುಮಕೂರು

ನರೇಗಾ ಅಕ್ರಮ: ಕಠಿಣ ಕ್ರಮಕೈಗೊಳ್ಳಿ

Published On :

ಕ.ಪ್ರ.ವಾರ್ತೆ ಕುಣಿಗಲ್ ಡಿ. 19
ನರೇಗಾ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಅಕ್ರಮಗಳು ನಡೆದಿರುವ ಆರೋಪಗಳಿಗೆ ಸಂಬಂಧಿಸಿದಂತೆ ತಾಪಂ ಕಾರ್ಯನಿರ್ವಹಣಾಧಿಕಾರಿ ಡಿ.ಹೊಸಹಳ್ಳಿ ಗ್ರಾಪಂ ಕಾರ್ಯಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗ್ರಾಪಂ ಸದಸ್ಯರು, ಕಾರ್ಯದರ್ಶಿಯೊಂದಿಗೆ ವಾಗ್ವಾದ ನಡೆಸಿ, ನರೇಗಾ ಅಕ್ರಮದ ಬಗ್ಗೆ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
  ತಾಲೂಕಿನ ಡಿ.ಹೊಸಹಳ್ಳಿ ಗ್ರಾಪಂನ ಚಿಕ್ಕಮಾವತ್ತೂರು ಗ್ರಾಮವ್ಯಾಪ್ತಿಯಲ್ಲಿ ನರೇಗಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ, ತಾಪಂ ಸಾಮಾನ್ಯ ಸಭೆಯ ವೇಳೆ, ಗ್ರಾಮಸ್ಥರು ಸಭಾಂಗಣಕ್ಕೆ ನುಗ್ಗಲು ಯತ್ನಿಸಿದಾಗ ತಾಪಂ ಇಒ ಶಂಕರಪ್ಪ, ಆಗಮಿಸಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಭರವಸೆ ನೀಡಿದ್ದ ಮೇರೆಗೆ, ಗುರುವಾರ ತಾಪಂ ಇಒ, ನರೇಗಾ ವಿಭಾಗದ ಅಧಿಕಾರಿ ಶ್ರೀನಿವಾಸ್, ಡಿ.ಹೊಸಹಳ್ಳಿ ಗ್ರಾಪಂಗೆ ಭೇಟಿ ನೀಡಿದರು.
ಗ್ರಾಪಂ ಬಹುತೇಕ ಸದಸ್ಯರು, ಕಾರ್ಯದರ್ಶಿ ನಾರಾಯಣ್ ಅವರ ಅಸಮರ್ಪಕ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ನರೇಗಾ ಯೋಜನೆಯಡಿಯಲ್ಲಿ ಫಲಾನುಭವಿಗಳ ಆಯ್ಕೆಯ ಜಾಬ್ ಕಾರ್ಡ್‌ನ್ನು ಗ್ರಾಪಂನಲ್ಲಿ ತೆಗೆಯದೆ, ತಾಲೂಕು ಕೇಂದ್ರದಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಗುಪ್ತಸಂಖ್ಯೆ (ಪಾಸ್ ವರ್ಡ್) ನೀಡಿ, ಕೆಲಸ ಮಾಡದಿರುವವರನ್ನು, ಗ್ರಾಮಸ್ಥರಲ್ಲದವರನ್ನು ಅಕ್ರಮವಾಗಿ ಪಟ್ಟಿಗೆ ಸೇರಿಸಿ ಎನ್‌ಎಂಆರ್ ತೆಗೆದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ತಾಪಂಇಒ ಮುಂದೆ, ಗ್ರಾಪಂ ಕಾರ್ಯದರ್ಶಿಯೊಂದಿಗೆ ವಾಗ್ವಾದ ನಡೆಸಿದರು.
ಪಾಸ್‌ವರ್ಡ್ ನೀಡಿಲ್ಲ: ಗ್ರಾಪಂ ಕಾರ್ಯದರ್ಶಿ ನಾರಾಯಣ, ತಾವು ಪಾಸ್‌ವಾರ್ಡ್ ನೀಡಿಲ್ಲ, ಕಂಪ್ಯೂಟರ್ ನಿರ್ವಾಹಕಿ ನಾಗರತ್ನ ಅವರಿಗೆ  ಗೊತ್ತಿದೆ, ಅವರೇ ಮಾಡಿರಬೇಕು. ತಾವು ರಜೆಯಲ್ಲಿದ್ದು, ತಮಗೂ ಇದಕ್ಕೂ ಸಂಬಂಧ ಇಲ್ಲವೆಂದಾಗ, ಗ್ರಾಪಂ ಸದಸ್ಯ ಸೋಬಗಯ್ಯ, ರಾಮಣ್ಣ ಸೇರಿದಂತೆ ಇತರರು ಆಕ್ಷೇಪಿಸಿ, ಸರ್ಕಾರ ನೀಡುವ ಗುಪ್ತಸಂಖ್ಯೆ ಬಗ್ಗೆ, ಕಾರ್ಯದರ್ಶಿಬೇಜವಾಬ್ದಾರಿ ಉತ್ತರ ಖಂಡಿಸಿ, ಅಕ್ರಮವಾಗಿ ತೆಗೆದಿರುವ ಎನ್‌ಎಂಆರ್ ರದ್ದುಗೊಳಿಸುವಂತೆ, ಈಗಾಗಲೆ ಶೌಚಾಲಯ ನಿರ್ಮಿಸಿರುವುದಕ್ಕೆ ಹಣ ನೀಡುವಂತೆ ಇಒ ಅವರನ್ನು ಆಗ್ರಹಿಸಿದರು. ಕೆಲಕಾಲ ವಾದವಿವಾದ ನಡೆಯಿತು.
ಅಂತಿಮವಾಗಿ, ಇಒ ಶಂಕರಪ್ಪ, ಗುಪ್ತಸಂಖ್ಯೆಯನ್ನು ಕಾರ್ಯದರ್ಶಿಗೆ ನೀಡಿದ್ದು, ಈ ಬಗ್ಗೆ ಹೊಣೆಗಾರಿಕೆಯಿಂದ ಕಾರ್ಯದರ್ಶಿ ತಪ್ಪಿಸಿಕೊಳ್ಳುವಂತಿಲ್ಲ, ಇನ್ನು ಈ ಬಗ್ಗೆ ಕಂಪ್ಯೂಟರ್ ನಿರ್ವಾಹಕಿ ತಪ್ಪೆಸಗಿದ್ದರೆ ಆಕೆ ವಿರುದ್ಧ ಪೊಲೀಸರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ, ಈಗಾಗಲೆ ಅಕ್ರಮವಾಗಿ ತೆಗೆದಿರುವ ಎನ್‌ಎಂಆರ್‌ಗಳ ರದ್ದತಿಗೆ ತಮಗೆ ಅರ್ಜಿಸಲ್ಲಿಸುವಂತೆ ಸೂಚಿಸಿ, ಗ್ರಾಪಂನಲ್ಲಿ ಬಾಕಿ ಇರುವ ಕೂಲಿಯ ನಿಧಿ 2.74ಲಕ್ಷ, ಸಾಮಗ್ರಿಗಳ ನಿಧಿ 3.74 ಲಕ್ಷ ಕೂಡಲೆ ಪಾವತಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿ, ಮುಂದಿನ ದಿನಗಳಲ್ಲಿ ಯಾವುದೇ ಅಕ್ರಮವಾದಲ್ಲಿ, ಕಾರ್ಯದರ್ಶಿಗಳನ್ನೆ ನೇರಹೊಣೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಗ್ರಾಪಂ ಅಧ್ಯಕ್ಷ ಶಿವಣ್ಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.