ತುಮಕೂರು

ಮಾನವನಲ್ಲಿ ಧರ್ಮ ಪ್ರವೃತ್ತಿ ವೃದ್ಧಿಸಲಿ

Published On :

ಕ.ಪ್ರ.ವಾರ್ತೆ ,  ಕುಣಿಗಲ್ ,  ಡಿ.20
ಯಾವುದೇ ಮಾನವನಲ್ಲಿ ಧರ್ಮ ಪ್ರವೃತ್ತಿ ನಶಿಸಿದಲ್ಲಿ ಆತ ಎಲ್ಲವೂ ಕಳೆದುಕೊಂಡಂತೆ. ಈ ನಿಟ್ಟಿನಲ್ಲಿ  ಮಾನವರಲ್ಲಿ ಧರ್ಮ ಜಾಗೃತಿ ಅನಿವಾರ್ಯವಾಗಿದ್ದು,  ಈ ಸಂಬಂಧ ಜಾಗೃತಿ ಮೂಡಿಸುವಲ್ಲಿ ಮಠಾಧೀಶರು ಮುಂದಾಗಬೇಕು ಎಂದು ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ  ಕಿವಿಮಾತು ಹೇಳಿದರು.
ತಾಲೂಕಿನ ಹುತ್ರಿದುರ್ಗ ಹೋಬಳಿಯ ಬೆಟ್ಟಹಳ್ಳಿಮಠದ ಉರಿಗದ್ದಿಗೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶುಕ್ರವಾರ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದ್ದ ಅತಿರುದ್ರ ಮಹಾಯಾಗ, ವಿಶಿಷ್ಟ ಮಂಡಲ ಕಲಶ ಸ್ಥಾಪನೆ ಮತ್ತು ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಪುಣ್ಯಸ್ಮರಣೆ ಕಾರ್ಯಕ್ರಮದ ಪೂರ್ವಭಾವಿ ಸಿದ್ದತೆಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಲ ಕಾಲಕ್ಕೆ ಮಳೆಯಾಗುತ್ತಿಲ್ಲ. ದೇಶಕ್ಕೆ ಅನ್ನ ನೀಡುವ ಅನ್ನದಾತನಿಗೇ ಅನ್ನದ ಕೊರತೆಯಾಗುವಂತೆ ಗಂಭೀರ ಪರಿಸ್ಥಿತಿ ಜೊತೆಯಲ್ಲಿ ಹವಮಾನ ವೈಪರಿತ್ಯದಿಂದ ರೈತ ಸೇರಿದಂತೆ ಮನುಷ್ಯರು ಬಳಲುವಂತಾಗಿದೆ. ದೇಶದಲ್ಲಿ ಹಲವು ಅಹಿತಕರ ಘಟನೆಗಳು ನಡೆದು ಜನತೆ ಶಾಂತಿ-ನೆಮ್ಮದಿಗೆ ಹಪಹಪಿಸುವಂತಾಗಿದ್ದರೆ, ಕೆಲವು ಮಾರಣಾಂತಿಕ ಕಾಯಿಲೆಗಳಿಂದಾಗಿ, ಜಾನುವಾರು ಸೇರಿದಂತೆ ಪಶು ಸಂಕುಲ ವಿನಾಶದ ಅಂಚಿನಲ್ಲಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇಂದು-ನಾಳೆ ಯಾಗ: ಸಕಲ ಜನರ, ಪಶುಗಳ ಉದ್ಧಾರ ಮತ್ತು ಸುಭಿಕ್ಷೆಗಾಗಿ ಸಂಕಲ್ಪಿಸಿ, ಲೋಕ ಕಲ್ಯಾಣಾರ್ಥವಾಗಿ ಅತಿರುದ್ರ ಮಹಾಯಾಗವನ್ನು ಶ್ರೀಕ್ಷೇತ್ರದಲ್ಲಿ ಇದೇ 21 ಹಾಗೂ 22 ರಂದು ಹಮ್ಮಿಕೊಳ್ಳಲಾಗಿದ್ದು, ಶನಿವಾರ ಅತಿ ರುದ್ರಯಾಗದ ಪೂರ್ವ ಸಿದ್ದತೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, 22ರಂದು ಮಹಾಯಾಗ ಪೂರ್ಣಾಹುತಿ ಕಾರ್ಯಕ್ರಮ ನಡೆಲಿದೆ.
ಧಾರ್ಮಿಕ ಸಂಸ್ಮರಣಾ ಕಾರ್ಯಕ್ರಮ ಆಯೋಜಿಸಿದ್ದು, ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಡಾ.ಶಿವಕುಮಾರಸ್ವಾಮಿ ಸಾನ್ನಿಧ್ಯ ವಹಿಸಲಿದ್ದಾರೆ. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ವಿಧಾನಸಭೆ ವಿರೋಧಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸದಾನಂದ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಬಿ.ಜಯಚಂದ್ರ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.