ಸ್ತ್ರೀಯರು ಸ್ವಾವಲಂಬನೆಯತ್ತ ಮುನ್ನುಗ್ಗಲಿ
ಕ.ಪ್ರ.ವಾರ್ತೆ , ತುಮಕೂರು , ಡಿ. 20
ಸ್ತ್ರೀ ಶಕ್ತಿ, ಸ್ವ ಸಹಾಯ ಸಂಘಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಮಹಿಳೆಯರು ಇಂದು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿದ್ದು, ಈ ಮೂಲಕ ಸಮಾಜದಲ್ಲಿ ತಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಎಂದು ತುಮಕೂರು ಜಿಪಂ ಅಧ್ಯಕ್ಷೆ ಸಾಕಮ್ಮ ನಾಗರಾಜ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಪಂ ಆಶ್ರಯದಲ್ಲಿ ಮಹಿಳಾ ಉದ್ಯಮಿಗಳು, ಸ್ತ್ರೀಶಕ್ತಿ, ಮಹಿಳಾ ಸ್ವಸಹಾಯ ಸಂಘಗಳು ಉತ್ಪಾದಿಸುವ ವಸ್ತುಗಳ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಸದುಪಯೋಗವಾಗಲಿ: ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಲ್ಲಿ ಬ್ಯಾಂಕ್ಗಳು ಇಂದು ಅನೇಕ ಸಾಲ ಸೌಲಭ್ಯವನ್ನು ಒದಗಿಸುತ್ತಿದ್ದು, ಮಹಿಳೆಯರು ಈ ಸಾಲ ಸೌಲಭ್ಯದ ಪ್ರಯೋಜನ ಪಡೆದು ಪುರುಷರಿಗಿಂತ ತಾವು ಯಾವುದರಲ್ಲೂ ಕಡಿಮೆ ಇಲ್ಲ ಎಂದು ಸಾಧಿಸಿ ತೋರಿಸಬೇಕು ಎಂದು ಕರೆ ನೀಡಿದರು.
ಹಪ್ಪಳ ತಯಾರಿಕೆ, ಉಪ್ಪಿನಕಾಯಿ ಸಿದ್ದಪಡಿಸುವಿಕೆ, ಸೀರೆ ನೇಯುವಿಕೆ, ಮ್ಯಾಟ್ ತಯಾರಿಕೆ ಹೀಗೆ ತಮ್ಮ ಆಸಕ್ತಿದಾಯಕ ಕ್ಷೇತ್ರವನ್ನು ಆರಿಸಿಕೊಂಡು ತಮ್ಮ ಪ್ರತಿಭೆಯನ್ನು ಹೊರ ಹೊಮ್ಮಿಸಬೇಕು ಎಂದು ಅವರು ಕರೆ ನೀಡಿದರು.
ಸಾಮರ್ಥ್ಯ ನಿರೂಪಿಸಿ: ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ಅವರು ಮಾತನಾಡಿ, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಶೇ. 50 ರಷ್ಟು ಮೀಸಲಾತಿ ಮಹಿಳೆಯರಿಗೆ ಕೊಟ್ಟ ಮೇಲೆ ಎಲ್ಲೆಡೆ ಉತ್ತಮ ಮತ್ತು ಆರೋಗ್ಯಕರ ಆಡಳಿತ ನಡೆಸಲಾಗುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 32 ಸಾವಿರ ಸಂಘಗಳು: ಇಂದು ಸ್ತ್ರೀ ಶಕ್ತಿ ಸಂಘಗಳು ಸಕ್ರಿಯವಾಗಿ, ಆರ್ಥಿಕ ಸಬಲತೆಯಿಂದ ರಾಜ್ಯಾದ್ಯಂತ ಕೆಲಸ ಮಾಡುತ್ತಿದ್ದು, ತುಮಕೂರು ಜಿಲ್ಲೆಯೊಂದರಲ್ಲಿಯೇ ಸುಮಾರು 32 ಸಾವಿರದಷ್ಟು ಸ್ತ್ರೀ ಶಕ್ತಿ ಸಂಘಗಳು ಜಿಲ್ಲೆಯಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ನಿರಂತರ ಸಭೆ, ನಿರಂತರ ಉಳಿತಾಯ, ನಿರಂತರ ಸಾಲ, ನಿರಂತರ ಮರು ಪಾವತಿ ಮತ್ತು ಲೆಕ್ಕಪತ್ರ ನಿರ್ವಹಣೆ ಈ ಪಂಚಸೂತ್ರ ಅಳವಡಿಸಿಕೊಂಡ ಸ್ತ್ರೀ ಶಕ್ತಿ ಸಂಘಗಳು ಜಿಲ್ಲೆಯಲ್ಲಿ ಸುಮಾರು ರು.108 ಕೋಟಿ ಉಳಿತಾಯ ಮಾಡಿವೆ ಎಂದು ತಿಳಿಸಿದರು.
ಕೌಶಲ್ಯ ತರಬೇತಿಗೆ ಒತ್ತು: ರಾಜೀವ್ ಚೈತನ್ಯ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ 40 ಮಂದಿ ಯುವಕ, ಯುವತಿಯರನ್ನು ಆಯ್ಕೆ ಮಾಡಿ, ಅವರ ಆಸಕ್ತಿದಾಯಕ ಕ್ಷೇತ್ರದಲ್ಲಿ ತರಬೇತಿ ನೀಡಿ ಜೀವನ ನಿರ್ವಹಣೆಗೆ ಉದ್ಯೋಗ ದೊರಕಿಸಿಕೊಡುವ ಕಾರ್ಯಕ್ರಮವಿದ್ದು, ಮುಂಬರುವ ಜ.1 ರಿಂದ ಜಿಲ್ಲೆಯಲ್ಲಿನ ಸುಮಾರು 12,840 ಗ್ರಾಮೀಣ ಯುವಕ, ಯುವತಿಯರಿಗೆ ತರಬೇತಿ ನೀಡಲಿದ್ದು, ಗ್ರಾಮೀಣ ಪ್ರದೇಶದ ಯುವಕ, ಯುವತಿಯರು ತಮ್ಮ ಹಳ್ಳಿಗಳನ್ನು ತ್ಯಜಿಸದೆ ತಮ್ಮ ಊರಿನಲ್ಲಿಯೇ ಸ್ವಾವಲಂಬಿಗಳನ್ನಾಗಿ ಮಾಡುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ ಎಂದು ವಿವರಿಸಿದರು.
ಸ್ತ್ರೀಶಕ್ತಿ ಸಂಘಗಳು ಬೆಲೆಬಾಳುವ ಗುಣಮಟ್ಟದ ಉತ್ಪನ್ನಗಳನ್ನು ಅತಿ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿವೆ. ಸಾರ್ವಜನಿಕರು ಇಂತಹ ಮಾರಾಟ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುಣಮಟ್ಟದ ವಸ್ತುಗಳನ್ನು ಖರೀದಿಸಿದಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಸಹಕಾರಿಯಾಗುತ್ತದೆ. ಅಲ್ಲದೆ ಇಂತಹ ಮಾರಾಟ ಮೇಳಗಳು ಹೊಸ ಉತ್ಪನ್ನಗಳ ಕುರಿತಂತೆ ಪರಸ್ಪರ ಅರಿವು, ತಿಳುವಳಿಕೆ ಮೂಡಿಸಲು ಮತ್ತು ಮಾರುಕಟ್ಟೆ ವ್ಯಾಪ್ತಿಯನ್ನು ಗುರುತಿಸಲು ಸ್ತ್ರೀಶಕ್ತಿ ಸಂಘಗಳಿಗೆ ಅನುಕೂಲಕರ ಎಂದು ಅಭಿಪ್ರಾಯಪಟ್ಟರು.
ಹೈನುಗಾರಿಕೆ ಕೈ ಹಿಡಿಯುತ್ತದೆ: ಜಿಪಂ ಸದಸ್ಯ ಉಮೇಶ್ ಮಾತನಾಡಿ, ಸ್ತ್ರೀ ಶಕ್ತಿ ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರು ಇಂದು ಆರ್ಥಿಕವಾಗಿ ಸದೃಢರಾಗಿ ತಮ್ಮ ಕುಟುಂಬವನ್ನು ನಿರ್ವಹಿಸಲು ಸಶಕ್ತರಾಗಿದ್ದಾರೆ. ಇದರ ಜೊತೆಗೆ ಮಹಿಳೆಯರು ಹೈನುಗಾರಿಕೆ ಕ್ಷೇತ್ರದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು. ಅನೇಕ ಬ್ಯಾಂಕ್ಗಳು ಈ ನಿಟ್ಟಿನಲ್ಲಿ ಸಾಲಸೌಲಭ್ಯವನ್ನು ಅತ್ಯಂತ ಸರಳ ರೀತಿಯಲ್ಲಿ ಒದಗಿಸುತ್ತಿದ್ದು, ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮತ್ತಷ್ಟು ಯೋಜನೆ ರೂಪಿಸಲಿ: ಅಧ್ಯಕ್ಷತೆ ವಹಿಸಿದ್ದ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹುಚ್ಚಯ್ಯ ಮಾತನಾಡಿ, ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸುವ ಇಲಾಖೆಗಳು ಅತ್ಯಂತ ಕ್ರಿಯಾತ್ಮಕವಾಗಿ ಯೋಜನೆ ರಚಿಸಬೇಕು ಎಂದು ಕರೆ ನೀಡಿದರು.
ಹೆಣ್ಣು ಸಮಾಜದ ಕಣ್ಣು ಇದ್ದಹಾಗೆ. ಇಂದು ಹೆಣ್ಣುಮಕ್ಕಳು ಕುಟುಂಬದ ಆರ್ಥಿಕತೆ ಕಾಪಾಡಿಕೊಳ್ಳುವ ಮೂಲಕ ಸಮಾಜದ ಪ್ರಗತಿಯಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಬ್ಯಾಂಕ್ಗಳು ಸ್ತ್ರೀಶಕ್ತಿ ಸಂಘಗಳ ಚಟುವಟಿಕೆಗಳಿಗೆ ಹೆಚ್ಚಿನ ಹಣ ಮೀಸಲಿರಿಸಿದಲ್ಲಿ ಸಾವಿರಾರು ಕೋಟಿ ರೂ. ಹಣ ಉಳಿತಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ನೂರಾರು ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

