ತುಮಕೂರು

ನಿವೃತ್ತ ಶಿಕ್ಷಕ ಸೋಮಶೇಖರ್ ಪತ್ನಿಯಿಂದ ನೇತ್ರದಾನ

Published On :

ತುಮಕೂರು: ತುಮಕೂರಿನ ನಿವೃತ್ತ ಶಿಕ್ಷಕ ಸೋಮಶೇಖರ್ ಪತ್ನಿ ಸುನಂದ ಸೋಮಶೇಖರ್ ನಿಧನರಾಗಿದ್ದು ಅವರ ಎರಡು ಕಣ್ಣುಗಳನ್ನು ಅವರ ಕುಟುಂಬದವರು ದಾನ ನೀಡಿದ್ದಾರೆ. ಎನ್.ಎಸ್.ಐ ಕಲೆಕ್ಷನ್ ಸೆಂಟರ್ ಮುಖ್ಯಸ್ಥ  ಶ್ರೀಧರ್, ನಾಗದೀಶ್ ಎನ್.ಎಸ್., ಹಾಗೂ ತುಮಕೂರು ಸರ್ಕಾರಿ ಆಸ್ಪತ್ರೆಯ ಹೆಸರಾಂತ ನೇತ್ರ ತಜ್ಞ ಡಾ. ದಿನೇಶ್‌ಕುಮಾರ್ ಅವರ ಸಹಕಾರದೊಂದಿಗೆ ಪಡೆದ ಎರಡು ನೇತ್ರಗಳನ್ನು ಬೆಂಗಳೂರು ಲಯನ್ಸ್ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಈ ಕಾರ್ಯದಿಂದ ಇಬ್ಬರು ದೃಷ್ಟಿಹೀನರಿಗೆ ದೃಷ್ಟಿ ಕೊಟ್ಟಂತಾಗಿ ಪಡೆದ ಭಾಗ್ಯವಂತರು ಟ್ರಸ್ಟ್‌ನ ಸದಸ್ಯರು ಮೃತರಿಗೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ. ಇದೇ ರೀತಿ ನೇತ್ರದಾನ ಹಾಗೂ ದೇಹ ದಾನ ಮಾಡುವವರು ಸ್ಥಳೀಯ ತಜ್ಞರನ್ನಾಗಲಿ ಅಥವಾ ಎನ್.ಎನ್. ಶ್ರೀಧರ್, ಮುಖ್ಯಸ್ಥರು, ಎನ್.ಎಸ್.ಐ.ಕಲೆಕ್ಷನ್ ಸೆಂಟರ್, ಎನ್.ಎಸ್. ಜ್ಯೂಯಲರಿ ಪ್ಯಾಲೇಸ್, ಬಿ.ಹೆಚ್. ರಸ್ತೆ, ತುಮಕೂರು ದೂ.0816-2273479 ಸಂಪರ್ಕಿಸಬಹುದು.

ಗಮನಸೆಳೆದ ಪೋಲಿಕಿಟ್ಟಿ ದಾಕ್ಷಾಯಿಣಿ ಭಟ್ ನಿರ್ದೇಶನ
ತುಮಕೂರು:
ತುಮಕೂರು ಸಮೀಪದ ಮೆಳೇಹಳ್ಳಿಯ ವಿ. ರಾಮಮೂರ್ತಿ ರಂಗಸ್ಥಳದಲ್ಲಿ ಯುವ ನಿರ್ದೇಶಕಿ ದಾಕ್ಷಾಯಿಣಿ ಭಟ್ ನಿರ್ದೇಶಿಸಿದ ಪೋಲಿ ಕಿಟ್ಟಿ  ನಾಟಕ ಯಶಸ್ವಿ ಪ್ರದರ್ಶನ ಕಂಡಿತು. ಮೆಳೇಹಳ್ಳಿಯ ಡಮರುಗ ರಂರಗ ತಂಡದ ಸಹಯೋಗದಲ್ಲಿ ದೃಶ್ಯ ರಂಗ ತಂಡವು ಈ ನಾಟಕ ಪ್ರದರ್ಶಿಸಿತು. ಪ್ರೇಕ್ಷಕ ಗಣ್ಯರಾಗಿ ಯುವ ನಿರ್ದೇಶಕ ಅವಿನಾಶ್ ಪಟವರ್ಧನ್, ಸ್ಟೂಡೆಂಟ್ ಬಂಕ್ ಕಂಪನಿ ನಿರ್ದೇಶಕ ಸದಾಶಿವ ಮಂಗಳೂರು ಭಾಗವಹಿಸಿದ್ದರು. ಕನ್ನಡಕ್ಕೊಬ್ಬನೇ ಕೈಲಾಸಂ ಎನ್ನುವಷ್ಟು ಗಟ್ಟಿ ಸಾಹಿತ್ಯವನ್ನು ಕನ್ನಡ ನಾಟಕ ಸಾಹಿತ್ಯದಲ್ಲಿ ಕೃಷಿ ಮಾಡಿದವರು ಕೈಲಾಸಂ ಎಂದು ದಾಕ್ಷಾಯಿಣಿ ಬಣ್ಣಿಸಿದರು. ಪೋಲಿ ಕಿಟ್ಟಿ ನಾಟಕ ಸಮಾಜದ ದೃಷ್ಟಿಯಲ್ಲಿ ಪೋಲಿಯಾದವನು ಬದುಕಿನಲ್ಲಿ ಎಲ್ಲರಿಗಿಂತ ಮೇಲೆ ನಿಲ್ಲುತ್ತಾನೆ ಎಂಬ ಆಶಯವನ್ನು ನಾಟಕ ಅನಾವರಣಗೊಳಿಸುತ್ತದೆ. ಲಘು ಹಾಸ್ಯದಿಂದ ಆರಂಭವಾಗುವ ಈ ನಾಟಕ ಸಮಾಜದ ದೃಷ್ಟಿಯಲ್ಲಿ ಪೋಲಿಯಾದವನು ಬೇರೆಯಾಗಿಯೇ ನಿಲ್ಲುತ್ತಾನೆ ಎಂಬ ಸಂದೇಶವನ್ನು ನಾಟಕ ಸಾರುತ್ತದೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕಾರಿಣಿ ಸಭೆ
ತುಮಕೂರು:
ತುಮಕೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಗರ ಕಾಂಗ್ರೆಸ್ ಸಮಿತಿ ಕಾರ್ಯಕಾರಿಣಿ ಸಮಿತಿ ಸಭೆ ನಡೆಯಿತು. ತುಮಕೂರು ನಗರಸಭೆಯನ್ನು ನಗರಪಾಲಿಕೆಯನ್ನಾಗಿ ಪರಿವರ್ತಿಸಲು ಶ್ರಮಿಸಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ತುಮಕೂರು ವಿಧಾನಸಭಾ ಕ್ಷೇತ್ರದ ಕೆಲ ಬೂತ್‌ಗಳನ್ನು ಬದಲಾಯಿಸಬೇಕಾಗಿದ್ದು ಈ ಬಗ್ಗೆ ಚುನಾವಣಾ ಅಧಿಕಾರಿಗಳಲ್ಲಿ ಲಿಖಿತ ಮನವಿ ಮಾಡಿಕೊಳ್ಳಲು ನಿರ್ಧರಿಸಲಾಯಿತು. ನಗರದ 223 ಬೂತ್‌ಗಳ ಪೈಕಿ 15 ಬೂತ್‌ಗಳನ್ನು ಬದಲಾಯಿಸಬೇಕಾಗಿದ್ದು ಈ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲು ನಿರ್ಧರಿಸಲಾಯಿತು. ಸರ್ಕಾರದ ಆಶ್ರಯ ಯೋಜನೆ, ರಾಜೀವ್‌ಗಾಂಧಿ ಆಶ್ರಯ ಯೋಜನೆಯಡಿ ಸರ್ಕಾರದಿಂದ ಅನುದಾನ ಪಡೆದು ಫಲಾನುಭವಿಗಳಿಗೆ ಆಶ್ರಯ ನಿವೇಶನ ನೀಡಲು ಶಾಸಕರ ಮೂಲಕ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು. ಪಕ್ಷದ ಗೆಲವಿಗೆ ಶ್ರಮಿಸಿದ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ನಾಮನಿರ್ದೇಶನ ಮಾಡುವಲ್ಲಿ ಜಿಲ್ಲಾಧ್ಯಕ್ಷರು, ಶಾಸಕರ ಮೂಲಕ ಗಮನ ಸೆಳೆಯುವ ಬಗ್ಗೆ ಚರ್ಚಿಸಲಾಯಿತು.

ಸೌಹಾರ್ದ ಕ್ರಿಕೆಟ್ ಪಂದ್ಯ...
ತುಮಕೂರಿನ ಡಿಎಆರ್ ಮೈದಾನದಲ್ಲಿ ನಡೆಯುತ್ತಿರುವ ಪೊಲೀಸ್ ಕ್ರೀಡಾಕೂಟದಲ್ಲಿ ಪೊಲೀಸ್ ಹಾಗೂ ಮಾಧ್ಯಮ ತಂಡಗಳ ನಡುವೆ ಸೌಹಾರ್ದ ಕ್ರಿಕೆಟ್ ಪಂದ್ಯದಲ್ಲಿ  ಜಯಗಳಿಸಿದ ಪೊಲೀಸ್ ತಂಡ.

ವಿಷ್ಣು ನೆನಪಲ್ಲಿ ನೃತ್ಯ ಸ್ಪರ್ಧೆ,ಭರತನಾಟ್ಯ, ಸೋಲೋ ಡ್ಯಾನ್ಸ್
ತುಮಕೂರು:
ತುಮಕೂರಿನ ಡಾ. ವಿಷ್ಣು ಸೇನಾ ಸಮಿತಿಯ ವತಿಯಿಂದ ಡಾ. ವಿಷ್ಣುವರ್ಧನ್ ಅವರ ಸ್ಮರಣಾರ್ಥವಾಗಿ ಇದೇ ತಿಂಗಳ 30 ರಂದು ಸೋಮವಾರ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಲಾಗಿದೆ. ಭರತನಾಟ್ಯ, ಫ್ಯಾನ್ಸಿ ಡ್ರಸ್, ಸೋಲೋ ಡ್ಯಾನ್ಸ್, ಜಾನಪದ ನೃತ್ಯ, ಚಲನಚಿತ್ರ ನೃತ್ಯ, ಸಮೂಹ ನೃತ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಭಾಗವಹಿಸಿದ ವಿಜೇತರಾದ ತಂಡಕ್ಕೆ ಆಕರ್ಷಕ ಬೆಳ್ಳಿ ನಾಣ್ಯಗಳನ್ನು ನೀಡಲಾಗುವುದು.ಭಾಗವಹಿಸಲು ಇಚ್ಛಿಸುವ ತಂಡಗಳು  ಈ ಕೆಳಕಂಡ ವಿಳಾಸದಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳತಕ್ಕದ್ದು. ವಿಷ್ಣುಸೇನಾ ಸೌಹಾರ್ದ ಪತ್ತಿನ ಸಹಕಾರಿ, ಎಸ್‌ಐಟಿ ಮುಖ್ಯ ರಸ್ತೆ, ಉಪ್ಪಿನಕೊಳಗ ಒಕ್ಕಲಿಗರ ಹಾಸ್ಟೆಲ್ ಮುಂಭಾಗ, ತುಮಕೂರು. ಮೊಬೈಲ್ ಸಂಖ್ಯೆ 99864 24887, 9845114013 ಸಂಪರ್ಕಿಸಬಹುದು ಎಂದು ಡಾ. ವಿಷ್ಣು ಸೇನಾ ಸಮಿತಿ ಜಿಲ್ಲಾಧ್ಯಕ್ಷ ಆರ್. ಸ್ವಾಧೀನ್‌ಕುಮಾರ್ ಮತ್ತು ಸಂಘಟನಾ ಕಾರ್ಯದರ್ಶಿ ಟಿ.ಆರ್. ಸಂಜು ಅವರು ತಿಳಿಸಿದ್ದಾರೆ.

ಧ್ಯಾನ, ಭಜನೆಗಳಿಂದ ಏಕಾಗ್ರತೆ ಸಾಧ್ಯ
ತುಮಕೂರು:
ಧ್ಯಾನ, ಭಜನೆಗಳಿಂದ ಏಕಾಗ್ರತೆ, ಜ್ಞಾನ ಮತ್ತು ನೆಮ್ಮದಿ ಸಾಧ್ಯ ಎಂದು ತುಮಕೂರಿನ ಹಿರೇಮಠಾಧ್ಯಕ್ಷ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ತುಮಕೂರಿನ ಜಯನಗರ ಪೂರ್ವ ಬಡಾವಣೆಯಲ್ಲಿ ದತ್ತ ಜಯಂತಿ ಆಚರಣೆ ಅಂಗವಾಗಿ ಏರ್ಪಡಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಧ್ಯಾನ ಎಂಬ ಪದಕ್ಕೆ ಸರಿಸಮನಾದ ಪದ ಜಗತ್ತಿನಲ್ಲಿ ಇನ್ನೊಂದಿಲ್ಲ. ಕೋಟ್ಯಂತರ ಪುಸ್ತಕಗಳಲ್ಲಿನ ಸಾರ ಸೇರಿದರೂ ಧ್ಯಾನದಲ್ಲಿ ಸಂಪೂರ್ಣವಾಗಿ ತಲ್ಲೀನನಾದವನ ಶಕ್ತಿಗೆ ಸರಿಸಮಾನವಾಗಲಾರದು. ಧ್ಯಾನ ಒಬ್ಬ ವ್ಯಕ್ತಿಯಲ್ಲಿ ಪರಿಪೂರ್ಣತೆ ಉಂಟು ಮಾಡುತ್ತದೆ ಎಂದರು. ಧ್ಯಾನದಿಂದ ಮನುಷ್ಯನಿಗೆ ಸಾಕಷ್ಟು ಅನುಕೂಲವಿದೆ. ಏಕಾಗ್ರತೆ ಪಡೆಯಲು ಅತ್ಯುನ್ನತ ಮಾರ್ಗವೆಂದರೆ ಧ್ಯಾನವೇ ಆಗಿದೆ. ಧ್ಯಾನದಿಂದ ನಮ್ಮ ಒಳಗಣ್ಣನ್ನು ಕಾಣಬಹುದು. ನಿಯಮಿತವಾಗಿ ಧ್ಯಾನ ಮಾಡುತ್ತಿದ್ದಾರೆ ನಮ್ಮಲ್ಲಿನ ಕೋಪ, ಕ್ರೌರ್ಯಗಳನ್ನು ಸಾಯಿಸಬಹುದು ಎಂದರು.

ಅಡಮಾನ ಸಾಲ ಯೋಜನೆ ಜಾರಿ
ತುಮಕೂರು:
ತುಮಕೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಅಡಮಾನ ಸಾಲ ಯೋಜನೆಯನ್ನು ಜಾರಿಗೆ ತರಲಾಗಿದೆ. ರೈತಾಪಿ ವರ್ಗದವರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ನಿಯಮಾನುಸಾರ ಅಡಮಾನ ಮಾಡಿ ಉತ್ಪನ್ನಗಳ ಮೌಲ್ಯದ ಶೇ. 60 ರಷ್ಟು ಮೊತ್ತವನ್ನು 90 ದಿನಗಳ ವರೆಗೆ ಬಡ್ಡಿರಹಿತ ಸಾಲವನ್ನಾಗಿ ಪಡೆಯಬಹುದಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ವಂಚಿಸಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿ ಈಗಾಗಲೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಂದ ಆನ್‌ಲೈನ್ ಮೂಲಕವೇ ಪರ್ಮಿಟ್ ಪಡೆದು ರಾಜ್ಯದ ಯಾವುದೇ ಮಾರುಕಟ್ಟೆಯಿಂದ ಕೃಷಿ ಉತ್ಪನ್ನಗಳನ್ನು ಸಾಗಾಣಿಕೆಗೆ ಅನುಕೂಲ ಮಾಡಿರುವುದರಿಂದ ತೆರಿಗೆ, ಮಾರುಕಟ್ಟೆ ಶುಲ್ಕ ವಂಚಿಸಲು ಸಾಧ್ಯವಿಲ್ಲ. ರೈತರ ಉತ್ಪನ್ನಗಳನ್ನು ಎಲೆಕ್ಟ್ರಾನಿಕ್ ತೂಕದ ಯಂತ್ರದ ಮೂಲಕವೇ ತೂಕ ಮಾಡಲು ಕಡ್ಡಾಯ ಪಡಿಸಿರುವುದರಿಂದ ತೂಕದಲ್ಲಿನ ವಂಚನೆಯನ್ನು ತಡೆಯಲಾಗಿದೆ ಎಂದರು.

ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ದಕ್ಷ ಆಡಳಿತಗಾರ
ತುಮಕೂರು:
ಬಿಜೆಪಿ ಪ್ರಧಾನಿ ಅಭ್ಯರ್ಥಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ದಕ್ಷ ಆಡಳಿತಗಾರ. ಆದರೆ ಸಿಟಿಗೆ ಸೀಮಿತವಾಗಿದ್ದಾರೆ. ಮೋದಿ ಅಲೆ ಹಳ್ಳಿಯಲ್ಲಿ ಕಂಡು ಬಂದಿಲ್ಲ. ಇದು ತಮ್ಮ ಗಮನಕ್ಕೆ ಬಂದಿರುವ ಸಂಗತಿ. ಇನ್ನು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ಆಯಾ ರಾಜ್ಯದ ರಾಜಕೀಯ ಸ್ಥಿತಿ-ಗತಿ, ಆಡಳಿತ ವಿರೋಧಿ ಅಲೆಗೆ ಸಂಬಂಧಿಸಿದ್ದು. ರಾಜಾಸ್ಥಾನದಲ್ಲಿ ಆಡಳಿತ ವಿರೋಧಿ ಅಲೆಗೆ ಕಾಂಗ್ರೆಸ್ ಸೋತಿದೆ. ಬಿಜೆಪಿ ಗೆದ್ದಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಅವರ ದಕ್ಷ ಆಡಳಿತದಿಂದ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಪೈಪೋಟಿ ನಡುವೆಯೂ ಬಿಜೆಪಿ ಅಧಿಕಾರಕ್ಕೆ ಬಂದಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಪ್ರಬಲವಾಗಿ ಹೊರ ಹೊಮ್ಮಿದೆ. ಇಲ್ಲೆಲ್ಲಾ ಮೋದಿ ಪ್ರಭಾವ ಇಲ್ಲವೇ ಇಲ್ಲ  ಎಂದ ಜಿಎಸ್‌ಬಿ, ಅರವಿಂದ್ ಕ್ರೇಜಿವಾಲ್ ಕರ್ನಾಟಕದ ವಾಟಾಳ್ ನಾಗರಾಜ್ ಅವರಂತೆ ಇದ್ದಾರೆ ಎಂದು ವಿಶ್ಲೇಷಿಸಿದರು.

ಅಧ್ಯಕ್ಷರಿಗೆ ಅವಕಾಶ ನೀಡಲಿ ಸಂಯುಕ್ತ ಜನತಾದಳ ಆಗ್ರಹ
ತುಮಕೂರು:
ನಗರಸಭಾ ಸಭೆಗಳಲ್ಲಿ ಇತ್ತೀಚೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಉಪಸ್ಥಿತಿ ಕಾಣುತ್ತಿದ್ದು ಉಳಿದ ಪಕ್ಷಗಳ ಅಧ್ಯಕ್ಷರಿಗೂ ಅವಕಾಶ ಕಲ್ಪಿಸಬೇಕೆಂದು ಸಂಯುಕ್ತ ಜನತಾದಳ ಆಗ್ರಹಿಸಿದೆ. ನಗರಸಭೆಯಲ್ಲಿ ಕೇವಲ ಕಾಂಗ್ರೆಸ್ ಅಧ್ಯಕ್ಷರಿಗೆ ಮಾತ್ರ ರಹದಾರಿ ನೀಡಲಾಗಿದೆಯೇ. ಈ ರೀತಿಯ ಸಭೆಗಳಲ್ಲಿ ಕಾಂಗ್ರೆಸ್ ಅಧ್ಯಕ್ಷರು ಸ್ಥಾನ ಅಲಂಕರಿಸುವುದು ತಪ್ಪು. ಇದನ್ನು ಸಕ್ರಮ ಎಂದು ಭಾವಿಸುವುದಾದರೆ ಎಲ್ಲಾ ರಾಜಕೀಯ ಪಕ್ಷದ ಅಧ್ಯಕ್ಷರು ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು. ಕಾಂಗ್ರೆಸ್ ಅಧ್ಯಕ್ಷರಿಗೆ ಮಾತ್ರ ಸ್ಥಾನ ಮೀಸಲಿಟ್ಟು ಇತರ ಅಧ್ಯಕ್ಷರನ್ನು ಆಹ್ವಾನಿಸದೇ ಇರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಸಂಯುಕ್ತ ಜನತಾದಳದ ಜಿಲ್ಲಾ ಅಧ್ಯಕ್ಷ ಕೆ.ಜಿ.ಎಲ್. ರವಿ ತಿಳಿಸಿದ್ದಾರೆ. ನಗರಸಭಾ ಆಯುಕ್ತರು ಮುಂದಿನ ನಗರಸಭಾ ಕಾರ್ಯಕಲಾಪಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರನ್ನು ಸಭೆಗೆ ಆಹ್ವಾನಿಸಬೇಕೆಂದು ಇದೇ ಸಂದರ್ಭದಲ್ಲಿ ಕೆಜಿಎಲ್ ರವಿ ಅವರು ಆಗ್ರಹಿಸಿದ್ದಾರೆ.

ತಂಬಾಕು ಲಾಬಿಗೆ ಅಡಕೆ ಬಲಿಯಾಗುತ್ತಿದೆ
ತುಮಕೂರು:
ತಂಬಾಕು ಲಾಬಿಗೆ ಅಡಿಕೆ ಬಲಿಯಾಗುತ್ತಿದೆ. ತಂಬಾಕು ಲಾಬಿ ನಿರಂತರವಾಗಿ ಅಡಕೆ ಬೆಳೆ ಮೇಲೆ ವಕ್ರ ದೃಷ್ಟಿ ಹರಿಸಿದೆ ಎಂದು ತುಮಕೂರು ಸಂಸದ ಜಿ.ಎಸ್. ಬಸವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅವರು ಈ ಕುರಿತು ಹೇಳಿಕೆ ನೀಡಿದ್ದು, ವೈಜ್ಞಾನಿಕವಾಗಿ ಅಡಿಕೆ ಆರೋಗ್ಯಕ್ಕೆ ಹಾನಿಕರ ಎಂದು ಯಾವುದೇ ವರದಿಯಿಲ್ಲ. ಗುಟ್ಕಾ ಕಂಪನಿಗಳು ಅಡಿಕೆಗೆ ಕೆಮಿಕಲ್ ಬೆರೆಸುವ ಮೂಲಕ ಅಡಕೆಗೆ ಕಳಂಕ ತಂದಿರುವುದು ಖಂಡನೀಯ ಎಂದು ಹರಿಹಾಯ್ದಿದ್ದಾರೆ. ಕೇಂದ್ರ ಅಥವಾ ರಾಜ್ಯ ಸರ್ಕಾರ ಅಡಕೆ ಬೆಳೆಗೆ ನಿಷೇಧ ಹೇರುವ ಯಾವುದೇ ಪ್ರಸ್ಥಾಪ ಕೈಗೊಂಡಿಲ್ಲ. ಆದರೆ ತಂಬಾಕು ಲಾಬಿ ಈ ರೀತಿಯ ವ್ಯವಸ್ಥಿತ ಪಿತೂರಿ ನಡೆಸುತ್ತಿದೆ. ಯಾವುದೇ ಕಾರಣಕ್ಕೂ ಅಡಕೆ ಬೆಳೆ ನಿಷೇಧಿಸಲು ಬಿಡುವುದಿಲ್ಲ. ಈ ಬಗ್ಗೆ ಕೇಂದ್ರ ವಾಣಿಜ್ಯ ಸಮಿತಿಯಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ತಾವೂ ಸಹ ಸಮಿತಿಯ ಸದಸ್ಯನಾಗಿದ್ದು, ಆಮದು ಮಾಡಿಕೊಳ್ಳುವ ಅಡಕೆಗೆ ತೆರಿಗೆ ಹೆಚ್ಚಿಸಲು ಒತ್ತಡ ಹಾಕುವ ಮೂಲಕ ರಾಜ್ಯ ಮತ್ತು ದೇಶದ ಅಡಿಕೆ ಬೆಳೆಗಾರರಿಗೆ ಹೆಚ್ಚಿನ ಬೆಲೆ ದೊರಕಿಸಲು ನಿರಂತರವಾಗಿ ಶ್ರಮಿಸಿದ್ದೇನೆ. ಅಡಿಕೆ ಕುರಿತ ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ನಿರ್ಭಯದಿಂದ ಇರುವಂತೆ ಜಿಎಸ್‌ಬಿ ಕರೆ ನೀಡಿದ್ದಾರೆ.

ಪಾಲಿಕೆ ಘೋಷಣೆ: ಬಿಜೆಪಿ ಸ್ವಾಗತ
ತುಮಕೂರು:
ತುಮಕೂರು ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಸರ್ಕಾರ ಅಧಿಕೃತ ವಿಶೇಷ ರಾಜ್ಯ ಪತ್ರಿಕೆ ಸಂಖ್ಯೆ ಯುಡಿಡಿ 154 ಎಂಎಲ್‌ಆರ್ 2013 ರಡಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗಳು ಘೋಷಿಸಿರುವುದಕ್ಕೆ ಬಿಜೆಪಿ ಸ್ವಾಗತಿಸಿದೆ. ತುಮಕೂರು ಮಹಾನಗರಪಾಲಿಕೆಯನ್ನಾಗಿ 2011 ರ ಜನಗಣತಿ ಆಧಾರ ಮತ್ತು ರಾಜ್ಯ ಉಚ್ಚ ನ್ಯಾಯಾಲಯ ಈ ಹಿಂದೆ ನೀಡಿದ ತೀರ್ಮಾನ ನೀಡಿದಂತೆ ಘೋಷಿತವಾಗಿರುವುದನ್ನು ತುಮಕೂರು ನಗರ ಬಿಜೆಪಿ ಘಟಕವು ಸ್ವಾಗತಿಸುತ್ತದೆ ಎಂದು ನಗರಾಧ್ಯಕ್ಷ ಕೆ.ಪಿ.ಮಹೇಶ ಹೇಳಿಕೆ ತಿಳಿಸಿದ್ದಾರೆ. ನಗರಪಾಲಿಕೆಗೆ ಸರ್ಕಾರ ನೀಡುವ ಭಾರೀ ಪ್ರಮಾಣದ ವಿವಿಧ ಬಾಬ್ತುಗಳ ಮೂಲಕ ನೀಡುವ ಅನುದಾನ ಮತ್ತು ಅಗತ್ಯ ಸಿಬ್ಬಂದಿ ನೇಮಕಕ್ಕೆ ಸರ್ಕಾರ ತಕ್ಷಣವೇ ಕ್ರಮವಹಿಸುವಂತೆ ಒತ್ತಾಯಿಸಿದ್ದಾರೆ. ಮಹಾನಗರಪಾಲಿಕೆಯ ನಿಯಮಾವಳಿಗಳಂತೆ ಸರ್ಕಾರ ಕ್ರಮವಹಿಸಿ, ಪ್ರಾಮಾಣಿಕ ಅಧಿಕಾರಿಗಳ ಮೂಲಕ ಪಾಲಿಕೆ ನೀಡುವ ಅನುದಾನದ ಸದ್ಬಳಕೆ, ನಗರದ ನಾಗರೀಕರ ಮೂಲಭೂತ ಸೌಲಭ್ಯ, ಸಮಗ್ರ ಅಭಿವೃದ್ಧಿಗೆ ಮುಂದಾಗುವಂತೆ ಕೆ.ಪಿ.ಮಹೇಶ ಆಗ್ರಹಿಸಿದ್ದಾರೆ.

ಶತಮಾನ ಸಂಭ್ರಮ: ನಗೆ ಹಬ್ಬ ಕಾರ್ಯಕ್ರಮ
ರಾಮನಗರ:
ಚನ್ನಪಟ್ಟಣ ತಾಲೂಕಿನ ಮತ್ತೀಕೆರೆ-ಶೆಟ್ಟಿಹಳ್ಳಿ ಅವಳಿ ಗ್ರಾಮದಲ್ಲಿರುವ ಕುವೆಂಪು ಶತಮಾನೋತ್ಸವ ಶಾಲೆಯ ಶತಮಾನ ಸಂಭ್ರಮಾಚರಣೆ, ಪ್ರೊ.ಎಂ. ಕೃಷ್ಣೇಗೌಡ ಮತ್ತು ತಂಡದಿಂದ ನಗೆಹಬ್ಬ ಕಾರ್ಯಕ್ರಮ ಡಿ.26ರಂದು ನಡೆಯಲಿದೆ ಎಂದು ಮುಖ್ಯ ಶಿಕ್ಷಕ ಆರ್. ರಾಜೇಶ್ ತಿಳಿಸಿದರು.  ಶಾಲಾ ಆವರಣದಲ್ಲಿ ಮಧ್ಯಾಹ್ನ 3ಕ್ಕೆ ಶತಮಾನ ಸಂಭ್ರಮಾಚರಣೆ, ಸಂಜೆ 6ಕ್ಕೆ ನಗೆ ಹಬ್ಬ ನಡೆಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಶಾಲೆಯ 20ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಶಾಸಕ ಸಿ.ಪಿ.ಯೋಗೇಶ್ವರ್ ಕಾರ್ಯಕ್ರಮ ಉದ್ಘಾಟಿಸುವರು. ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಸಂಸದ ಡಿ.ಕೆ.ಸುರೇಶ್, ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು ಮತ್ತಿತರರು ಭಾಗವಹಿಸಲಿದ್ದರೆ. ಶಾಲಾ ಮಕ್ಕಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ನಾಳೆ ಜಾರ್ಜ್ ನೇತೃತ್ವದಲ್ಲಿ ಕೆಡಿಪಿ ಸಭೆ
ರಾಮನಗರ:
ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕೆ.ಜೆ.ಜಾರ್ಜ್ ಮಾಡಿದ ಸಾಧನೆ, ತೋರಿದ ಕಾಳಜಿ ಅಷ್ಟಕ್ಕಷ್ಟೇ. ಹೊಣೆ ಹೊತ್ತ ನಂತರ ಇದೀಗ ಅವರು ತಮ್ಮ ಅಧ್ಯಕ್ಷತೆಯಲ್ಲಿ ಎರಡನೇ ಪ್ರಗತಿ ಪರಿಶೀಲನಾ ಸಭೆಯನ್ನು ಡಿ.23ಕ್ಕೆ ನಿಗದಿಪಡಿಸಿದ್ದಾರೆ.  ಗೃಹ ಸಚಿವರ ಉಸ್ತುವಾರಿಯಲ್ಲಿರುವ ಈ ಜಿಲ್ಲೆಯಲ್ಲಿ ಮರಳು ಮಾಫಿಯಾ ಎಗ್ಗಿಲ್ಲದೆ ದಂಧೆಯನ್ನು  ಮುಂದುವರೆಸಿದೆ. ಜಿಲ್ಲಾಡಳಿತ, ಜಿ.ಪಂ. ಸಹಿತ ಸ್ಥಳೀಯ ಆಡಳಿತದಲ್ಲಿ ಅರಾಜಕತೆ ಎದುರಾಗಿದೆ. ನರೇಗಾದಂತಹ ಮಹತ್ವಾಕಾಂಕ್ಷಿ ಕಾರ್ಯಕ್ರಮ ಹಳ್ಳ ಹಿಡಿದಿದೆ. ಇದೆಲ್ಲದರ ಬಗ್ಗೆ ಉಸ್ತುವಾರಿ ಸಚಿವರು ಕಾಳಜಿ ವಹಿಸಿಯೇ ಇಲ್ಲ.  ರಾಮನಗರಕ್ಕೆ ಬರಲು ಪುರುಸೊತ್ತಿಲ್ಲದ ಸಚಿವ ಜಾರ್ಜ್ ಕೆಲ ದಿನಗಳ ಹಿಂದೆ ಇಲ್ಲಿನ ಅಧಿಕಾರಿಗಳನ್ನು  ಬೆಂಗಳೂರಿಗೇ ಕರೆಸಿಕೊಂಡು ಸಭೆ ನಡೆಸಿದ್ದರು. ಸಚಿವರು ರಾಮನಗರದ ಪಾಲಿಗೆ ಅತಿಥಿ ನಟರಂತಾಗಿರುವುದೇ ಇಲ್ಲಿನ ಆಡಳಿತ ಅದ್ವಾನವಾಗಲು ಕಾರಣವೆನ್ನುವುದು ನಿರ್ವಿವಾದ ಸತ್ಯ. ಇನ್ನಾದರೂ ಅವರು ಸಕ್ರಿಯರಾಗಬೇಕಿದೆ.

ಸಿದ್ಧ ಉಡುಪು ತಯಾರಿಕಾ ತರಬೇತಿ
ರಾಮನಗರ:
ನೆಲಮಂಗಲ ತಾಲೂಕು ಅರಿಶಿನಕುಂಟೆಯ ರುಡ್ ಸೆಟ್ ಸಂಸ್ಥೆಯಿಂದ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ವ್ಯಾಪ್ತಿಯ ನಿರುದ್ಯೋಗಿ ಮಹಿಳೆಯರಿಗಾಗಿ ಸಿದ್ಧ ಉಡುಪು ತಯಾರಿಕೆ ಮತ್ತು ಬ್ಯೂಟಿ ಪಾರ್ಲರ್ ಮ್ಯಾನೇಜ್‌ಮೆಂಟ್ ತರಬೇತಿ ಆಯೋಜಿಸಲಾಗಿದೆ.  ತರಬೇತಿಯು 2014ರ ಜನವರಿ ಮಾಹೆಯಲ್ಲಿ ಪ್ರಾರಂಭವಾಗಲಿದೆ. 18 ರಿಂದ 45 ವಯೋವುತಿಯಲ್ಲಿರುವ, ಕನ್ನಡ ಓದಲು ಮತ್ತು ಬರೆಯಲು ಬಲ್ಲ ಅಭ್ಯರ್ಥಿಗಳು ಅರ್ಜಿಯನ್ನು ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ-ಅಂಚೆ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಈ ವಿಳಾಸಕ್ಕೆ ಸಲ್ಲಿಸಬಹುದಾಗಿದೆ. ತರಬೇತಿಗೆ ಆಯ್ಕೆಯಾದವರಿಗೆ ಭತ್ಯೆ, ಸ್ವಂತ ಉದ್ಯೋಗ ಕೈಗೊಳ್ಳಲು ಅಗತ್ಯ ನೆರವು ಒದಗಿಸುವ ನಿಟ್ಟಿನಲ್ಲಿ ಪ್ರಾಯೋಜಕತ್ವ ಸಂಸ್ಥೆ ಮುಂದಾಗಲಿದೆ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ ದೂ. 080-27728166, ಮೊಬೈಲ್ 9481778047, 9741129429 ಸಂಪರ್ಕಿಸಬೇಕೆಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ
ರಾಮನಗರ: 
ಜಿಲ್ಲಾಡಳಿತ, ಜಿ.ಪಂ., ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿವಿಧ ಮಹಿಳಾ ಉದ್ದಿಮೆದಾರರಿಂದ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ನಗರದಲ್ಲಿ ಡಿ.23 ರಿಂದ 27ರವರೆಗೆ ಆಯೋಜಿಸಲಾಗಿದೆ. ಡಿ.23 ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸುವರು. ವಿಧಾನಸಭೆ ವಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸುವರು. ಸಂಸದ ಡಿ.ಕೆ.ಸುರೇಶ್, ಶಾಸಕರಾದ ಡಿ.ಕೆ.ಶಿವಕುಮಾರ್, ಸಿ.ಪಿ.ಯೋಗೇಶ್ವರ್,ಬಾಲಕೃಷ್ಣ, ಕೆ.ಶ್ರೀನಿವಾಸಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ರಾಮಚಂದ್ರಗೌಡ, ರಾಜಶೇಖರನ್, ಪುಟ್ಟಣ್ಣ, ಇ.ಕೃಷ್ಣಪ್ಪ, ಸೈಯದ್ ಮದೀರ್ ಆಗಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  ಜಿ.ಪಂ. ಅಧ್ಯಕ್ಷ  ಎಚ್.ಸಿ.ರಾಜು, ಉಪಾಧ್ಯಕ್ಷೆ ಗೌರಮ್ಮ, ರಾಮನಗರ ತಾ.ಪಂ.  ಅಧ್ಯಕ್ಷೆ  ಲಕ್ಷ್ಮೀ ಮಂಜುನಾಥ್, ಉಪಾಧ್ಯಕ್ಷರಾದ ಕೆ.ಎಸ್.ಶಂಕರಯ್ಯ  ಭಾಗವಹಿಸಲಿದ್ದಾರೆ.  ಈ ಮೇಳದಲ್ಲಿ ರಾಮನಗರವಲ್ಲದೆ ಹೊರ ಜಿಲ್ಲೆಗಳ ವಿವಿಧ ಉದ್ದಿಮೆದಾರರು ಮಳಿಗೆ ತೆರೆಯಲಿದ್ದಾರೆ.

ಚಿಗುರು ಕಾರ್ಯಕ್ರಮ
ಹಾಸನದ ಶ್ರೀರಾಮನಗರದ ರಾಜು ಹಿರಿಯ  ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ .ಕನ್ನಡ ಮತ್ತು  ಸಂಸ್ಕತಿ ಇಲಾಖೆ ವತಿಯಿಂದ  ನಡೆದ ಚಿಗುರು ಕಾರ್ಯಕ್ರಮದಲ್ಲಿ  ಲೇಖಕ ಗೊರೂರು ಅನಂತರಾಜು ಮಾತನಾಡಿದರು. ಶ್ರೀ ರಂಗನಾಥ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶೇಖರ್, ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ತಿ. ರಾಮಕೃಷ್ಣಯ್ಯ, ಗಾಯಕ ಗಂಗಾಧರ್, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ನೌಕರ  ಕುಮಾರ್ ಇದ್ದಾರೆ.

ಲೋಕ ಕಲ್ಯಾಣಾರ್ಥ ಚಂಡಿಕಾ ಹೋಮ
ಅರಸೀಕೆರೆ:
ಪಟ್ಟಣದ ವಿದ್ಯಾನಗರ ಬಡಾವಣೆಯ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಇತ್ತೀಚೆಗೆ ಲೋಕ ಕಲ್ಯಾಣಾರ್ಥ ಹಾಗೂ ತಾಲ್ಲೂಕಿನ ಬರಪರಿಹಾರಕ್ಕಾಗಿ ಚಂಡಿಕಾ ಹೋಮ ಹವನಗಳನ್ನು ನಡೆಸಲಾಯಿತು. ಪಟ್ಟಣದ ಹಾಸನ ರಸ್ತೆಯಲ್ಲಿನ ವಿದ್ಯಾನಗರ ಬಡಾವಣೆಯ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಬೆಳಗ್ಗೆ ಆಶ್ರಮದ ಶ್ರೀ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.  ಸತೀಶ್ ಶರ್ಮ ಸ್ವಾಮೀಜಿ ಮಾರ್ಗದರ್ಶನದಲ್ಲಿ ಋತ್ವಿಕರ ಸಮೂಹ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾ ಹೋಮ ಮತ್ತು ಹವನಗಳನ್ನು ನಡೆಸಿದರು.
ಧಾರ್ಮಿಕ ಕಾರ್ಯಕ್ರಮಗಳು ಮುಕ್ತಾಯ ನಂತರ ಭಾಗವಹಿಸಿದ್ದ ಎಲ್ಲ ಭಕ್ತರಿಗೂ  ಆಶ್ರಮದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಆಶ್ರಮದ ಆಡಳಿತಾಧಿಕಾರಿ ಬಿ.ಎಸ್.ಸೇತುರಾಮು, ಮುರುಳಿ ಮಂದಾರ್ತಿ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ಭಗವದ್ಗೀತೆ ವಿಷಯ ಕುರಿತು ಸ್ಪರ್ಧೆ
ಅರಸೀಕೆರೆ:
ಶ್ರೀಮತ್ ಭಗವದ್ಗೀತೆ, ನಮಗೆಷ್ಟು ಗೊತ್ತು  ಎಂಬ ವಿಷಯದ ಬಗ್ಗೆ ರಾಜ್ಯ ಮಟ್ಟದಲ್ಲಿ ದ್ವಿತೀಯ ವರ್ಷದ ಸ್ಪರ್ಧೆಗಳನ್ನು ಜ. 12ರಂದು ಪಟ್ಟಣದಲ್ಲಿ ಶ್ರೀರಾಮಕೃಷ್ಣ ವಿದ್ಯಾ ಕೇಂದ್ರದಲ್ಲಿ ಆಯೋಜಿಸಲಾಗಿದೆ ಎಂದು ವಿದ್ಯಾ ಕೇಂದ್ರದ ಕಾರ್ಯದರ್ಶಿ ಕೆ.ಕೆ. ವೇಣುಗೋಪಾಲ್ ತಿಳಿಸಿದ್ದಾರೆ.  ಆಸಕ್ತರು ತಮ್ಮ ಹೆಸರುಗಳನ್ನು ಡಿ. 31ರೊಳಗೆ ನೋಂದಾಯಿಸಿಕೊಳ್ಳಬೇಕು. ಸ್ಪರ್ಧೆಗೆ ಪರ ಊರುಗಳಿಂದ ಬರುವವರಿಗೆ ಉಚಿತ ವಸತಿ ವ್ಯವಸ್ಥೆ ಇದೆ.  ಎಲ್ಲಾ ಸ್ಪರ್ಧೆಗಳು 4ನೇ ಅಧ್ಯಾಯಕ್ಕೆ ಸೀಮಿತವಾಗಿದ್ದು, ಕಂಠಪಾಠ ಸ್ಪರ್ಧೆಗೆ 4ನೇ ಅಧ್ಯಾಯ ಪೂರ್ಣವಾಗಿರುತ್ತದೆ. ಭಾಷಣ ಸ್ಪರ್ಧೆ, ಮೌಖಿಕ ರಸ ಪ್ರಶ್ನಾ ಸ್ಪರ್ಧೆ, ಪದಬಂಧ ಸ್ಪರ್ಧೆ, ಲಿಖಿತ ಪರೀಕ್ಷಾ ಸ್ಪರ್ಧೆಗಳನ್ನು ಪ್ರತ್ಯೇಕವಾಗಿ ಆಯೋಜಿಸಿದ್ದು, ಈ ಎಲ್ಲಾ ಸ್ಪರ್ಧೆಗಳನ್ನು ಮೂರು ವಿಭಾಗಗಳಾಗಿ ಮಾಡಿದ್ದು, 1ನೇ ವಿಭಾಗದಲ್ಲಿ ಕಿರಿಯ ವಿದ್ಯಾರ್ಥಿಗಳ ವಿಭಾಗದಲ್ಲಿ 9ನೇ ತರಗತಿ ವಿದ್ಯಾರ್ಥಿಗಳು, 2ನೇ ವಿಭಾಗದಲ್ಲಿ ಹಿರಿಯ ವಿದ್ಯಾರ್ಥಿಗಳ ವಿಭಾಗದಲ್ಲಿ 10ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. 3ನೇ ವಿಭಾಗದಲ್ಲಿ ಸಾರ್ವಜನಿಕರು ವಯೋವುತಿ ಇಲ್ಲದೆ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ, ಮೊ-  98807 96056 ಮತ್ತು 99729 71063 ಸಂಪರ್ಕಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.