ತುಮಕೂರು

ವಾಲ್ಮೀಕಿ ಸಮಾವೇಶಕ್ಕೆ ಜಿಲ್ಲೆಯಿಂದ ಲಕ್ಷ ಜನ

Published On :

ತುಮಕೂರು: ಮುಂದಿನ 2014 ರ ಜನವರಿ 11 ರಂದು ಚಿತ್ರದುರ್ಗದಲ್ಲಿ ನಡೆಯುವ ಬೃಹತ್ ವಾಲ್ಮೀಕಿ ಹಕ್ಕೊತ್ತಾಯ ಸಮಾವೇಶಕ್ಕೆ ತುಮಕೂರು ಜಿಲ್ಲೆಯಿಂದ ಒಂದು ಲಕ್ಷ ವಾಲ್ಮೀಕಿ ಸಮುದಾಯದ ಜನರು ಭಾಗವಹಿಸುವಂತೆ ಜಿಲ್ಲಾ ಉಸ್ತುವಾರಿ ಹೊತ್ತಿರುವ ರವಿನಾಯಕ ತಿಳಿಸಿದ್ದಾರೆ.
ನಗರದ ಬಾರ್‌ಲೈನ್ ರಸ್ತೆಯಲ್ಲಿರುವ ರಾಮಮಂದಿರದಲ್ಲಿ ಜನವರಿ 11 ರಂದು ನಡೆಯುವ ಬೃಹತ್ ವಾಲ್ಮೀಕಿ ಹಕ್ಕೊತ್ತಾಯ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಪಕ್ಷಗಳ ಪರಿಶಿಷ್ಟ ಪಂಗಡದ ಮುಖಂಡರು, ವಾಲ್ಮೀಕಿ ಸಮುದಾಯದ ಹಿರಿಯರನ್ನು ಉದ್ದೇಶಿಸಿ ಮಾತನಾಡಿದರು.
ವಾಲ್ಮೀಕಿ ಸಮುದಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪಾಳೇಗಾರರಾಗಿ ದೇಶ ಆಳಿದ ನಾವು ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ. ಆದ್ದರಿಂದ ಕೇಂದ್ರದ ರೀತಿ ರಾಜ್ಯ ಸರಕಾರವೂ 7.5 ಮೀಸಲಾತಿಯನ್ನು ವಾಲ್ಮೀಕಿ ಸಮುದಾಯಕ್ಕೆ ಕಲ್ಪಿಸಬೇಕು ಹಾಗೂ ಇನ್ನಿತರ 18 ಬೇಡಿಕೆಗಳನ್ನು ಒಳಗೊಂಡಂತೆ ಮನವಿ ಪತ್ರವನ್ನು ಸಮಾವೇಶದ ಉದ್ಘಾಟನೆಗೆ ಬರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು ಎಂದು ರವಿನಾಯಕ ತಿಳಿಸಿದರು.
ಒಕ್ಕಟ್ಟು ಪ್ರದರ್ಶಿಸಿ: ಜಿಲ್ಲಾ ಕಾಂಗ್ರೆಸ್‌ನ ಎಸ್.ಟಿ. ಘಟಕದ ಅಧ್ಯಕ್ಷ ಟಿ.ಬಿ. ಮಲ್ಲೇಶ್ ಮಾತನಾಡಿ, ಜಿಲ್ಲೆಯಲ್ಲಿ ವಾಲ್ಮೀಕಿ ಸಮುದಾಯವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಚಿತ್ರದುರ್ಗದಲ್ಲಿ ನಡೆಯುವ ಹಕ್ಕೊತ್ತಾಯ ಸಮಾವೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕಾಗಿದೆ. ಎಲ್ಲರೂ ಪಕ್ಷಭೇದ ಮರೆತು ಈ ಸಮಾವೇಶದಲ್ಲಿ ಪಾಲ್ಗೊಂಡು  ಶಕ್ತಿಯನ್ನು ಪ್ರದರ್ಶಿಸಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ವಾಲ್ಮೀಕಿ ಸೇನೆಯ ರಾಜ್ಯಾಧ್ಯಕ್ಷ ವಿ.ಪ್ರತಾಪ್ ನಮ್ಮ ಸಮುದಾಯಕ್ಕೆ 5 ಸಾವಿರ ವರ್ಷಗಳ ಇತಿಹಾಸವಿದೆ. ದಕ್ಷಿಣ ಭಾರತದಲ್ಲಿ 77 ಪಾಳಿಪಟ್‌ಗಳನ್ನು ಸ್ಥಾಪಿಸಿ ಆಡಳಿತ ನಡೆಸಿದ ಹಿರಿಯರು ಕೆರೆ ಕಟ್ಟೆ, ಸಾಲುಮರಗಳನ್ನು ನಿರ್ಮಿಸುವ ಮೂಲಕ ಇತರೆ ಸಮುದಾಯಗಳಿಗೆ ಮಾದರಿಯಾಗಿದ್ದಾರೆ. ಅಲ್ಲದೆ ಬ್ರಿಟಿಶರ ವಿರುದ್ಧ ಮೊದಲ ಬಾರಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ವಾಲ್ಮೀಕಿ ಸಮುದಾಯದ ಮುಖಂಡರು. ಇಂತಹ ಭವ್ಯ ಇತಿಹಾಸವನ್ನು ಹೊಂದಿರುವ ವಾಲ್ಮೀಕಿ ಸಮುದಾಯ ನಮ್ಮ ಹಕ್ಕನ್ನು ಪಡೆಯುವ ನಿಟ್ಟಿನಲ್ಲಿ ಒಂದುಗೂಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಸಮಾವೇಶಕ್ಕೆ ಜಿಲ್ಲೆಯಲ್ಲಿಂದ ಕನಿಷ್ಠ 1 ಲಕ್ಷ ಜನರು ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿದೆ ಎಂದರು.
ಸಭೆಯಲ್ಲಿ ಯುವಮುಖಂಡರಾದ ಜಿ.ಆರ್. ರವಿಕುಮಾರ್, ಜೆಡಿಎಸ್ ಎಸ್ಟಿ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ದಯಾನಂದ, ಮದಕರಿನಾಯಕ ಸೇನೆಯ ಅಧ್ಯಕ್ಷ ಎಸ್.ಕೆ. ರಾಜಣ್ಣ, ಗಿರಿಜನ ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷ ತುಳಸಿರಾಮಯ್ಯ, ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಜಿ. ಕೃಷ್ಣಪ್ಪ, ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪುರುಷೋತ್ತಮ, ಮುಖಂಡರಾದ ಡಾ. ಅಂಜನಕುಮಾರ್ ವಾಲ್ಮೀಕಿ, ಕರ್ನಾಟಕ ವಾಲ್ಮೀಕಿ ಸೇನೆಯ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.