ಸಕಾಲದಲ್ಲಿ ಮಳೆ ಬಾರದೇ ರೈತರ ಬದುಕು ಹೈರಾಣ
ಕ,ಪ್ರ,ವಾರ್ತೆ ಮಧುಗಿರಿ ಡಿ.23
ಸರ್ಕಾರದ ಕೃಷಿ ಪರಿಕರ ಹಾಗೂ ಸೌಲಭ್ಯಗಳನ್ನು ರೈತರಿಗೆ ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾ.ಪಂ.ಅಧ್ಯಕ್ಷೆ ಸಿದ್ದಗಂಗಾಂಭಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಸೋಮವಾರ ಪಟ್ಟಣದ ಶಿರಾ ಗೇಟ್ ಬಳಿಯಿರುವ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆ ವತಿಯಿಂದ ಮಾಜಿ ಪ್ರಧಾನಿ ಚೌಧರಿ ಚರಣ್ಸಿಂಗ್ ಅವರ ಜನ್ಮ ದಿನದ ಪ್ರಯುಕ್ತ ಏರ್ಪಟಾಗಿದ್ದ ರೈತರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲೂಕಿನಲ್ಲಿ ಸಕಾಲದಲ್ಲಿ ಮಳೆ ಬಾರದೇ ರೈತರ ಬದುಕು ಹೈರಾಣಾಗಿ ವ್ಯವಸಾಯ ಕುಂಠಿತವಾಗಿದೆ. ಆದ ಕಾರಣ ಅಧಿಕಾರಿಗಳು ಸರ್ಕಾರದಿಂದ ಬರುವ ಎಲ್ಲ ಸೌಲಭ್ಯಗಳನ್ನು ಚಾಚು ತಪ್ಪದೆ ರೈತರಿಗೆ ನೇರವಾಗಿ ತಲುಪಿಸಬೇಕು. ರೈತರು ಕೂಡ ಸರ್ಕಾರದ ಸೌಲಭ್ಯಗಳನ್ನು ಸಕಾಲಕ್ಕೆ ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರುವ ಜತೆಗೆ ತಮ್ಮ ಜೀವನ ಮಟ್ಟ ಸುಧಾರಿಸಕೊಳ್ಳುವಂತೆ ಸಲಹೆ ನೀಡಿದರು. ಕೃಷಿಕ ಸಮಾಜದ ಸದಸ್ಯ ಕೆ. ಗೋವಿಂದರೆಡ್ಡಿ ರೈತರಿಗೆ ಕೇವಲ 25 ಸಾವಿರ ರು.ಸಾಲ ಮನ್ನಾ ಮಾಡಿದರೆ ಸಾಲದು 1 ಲಕ್ಷ ರು. ಸಾಲ ಮನ್ನಾ ಮಾಡುವ ಮೂಲಕ ರೈತರ ಆತ್ಮಹತ್ಯೆ ತಪ್ಪಿಸಲು ಸರ್ಕಾರ ಮುಂದಾಗಬೇಕು ಎಂದರು. ಪ್ರೊ.ಮ.ಲ.ನ.ಮೂರ್ತಿ ಕೃಷಿ ಇಲಾಖೆ ಮತ್ತು ಸರ್ಕಾರ ರೈತರ ಪ್ರಗತಿ ಬಗ್ಗೆ ಗಂಭೀರವಾಗಿ ಉತ್ತಮ ಯೋಜನೆ ರೂಪಿಸಿ ರೈತರ ಬದುಕನ್ನು ಸದೃಢಗೊಳಿಸಬೇಕು. ಆ ನಿಟ್ಟಿನಲ್ಲಿ ಸರ್ಕಾರ ಸೌಲಭ್ಯಗಳನ್ನು ಸೂಕ್ತ ಸಮಯದಲ್ಲಿ ವಿತರಿಸಬೇಕು. ಅಧಿಕಾರಿಗಳು ಕೂಡ ರೈತರ ಮಕ್ಕಳೇ ಆಗಿರುವುದರಿಂದ ರೈತರ ಬಗ್ಗೆ ಕಾಳಜಿ ವಹಿಸಬೇಕು ಎಂದು ಅವರು ಹೇಳಿದರು.ಸಾಕಷ್ಟು ಶ್ರಮಿಸಿದ್ದರು: ಸಹಾಯಕ ಕೃಷಿ ಅಧಿಕಾರಿ ದೀಪಶ್ರೀ ಮಾತನಾಡಿ, ಮಾಜಿ ಪ್ರಧಾನಿ ಚೌಧರಿ ಚರಣ್ಸಿಂಗ್ ಅವರ ಜನ್ಮದಿನದ ಪ್ರಯುಕ್ತ ರೈತರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಚರಣ್ಸಿಂಗ ಅವರು ರೈತರ ಏಳಿಗೆಗಾಗಿ ಸಾಕಷ್ಟು ಶ್ರಮಿಸಿದ್ದರು ಎಂದರು. ರೇಷ್ಮೆ ವಿಸ್ತರಣಾಧಿಕಾರಿ ಟಿ.ಲಕ್ಷ್ಮೀನರಸಯ್ಯ, ಹೀರೆಹಳ್ಳಿ ಕೃಷಿ ಅಧಿಕಾರಿ ಸೋಮಶೇಖರ್, ತಾ.ಪಂ.ಮಾಜಿ ಅಧ್ಯಕ್ಷೆ ಯಶೋಧ ರಾಜಣ್ಣ, ಪಶು ವೈದ್ಯಾಧಿಕಾರಿ ನಾಗಭೂಷಣ್ ಮಾತನಾಡಿದರು. ಜಿ.ಪಂ.ಸದಸ್ಯೆ ಸುಮನ, ಮಂಜುಳಾ, ತಾ.ಪಂ.ಸದಸ್ಯರಾದ ಕೆಂಚಣ್ಣ, ಚಂದ್ರಕಲಾ, ಮಹಾಲಕ್ಷ್ಮೀ, ಕೃಷಿಕ ಸಮಾಜದ ಸದಸ್ಯ ಮುದ್ದರಿಯಪ್ಪ, ತೋಟಗಾರಿಕೆ ಅಧಿಕಾರಿ ಆದರ್ಶ, ಚನ್ನಿಂಗಣ್ಣ ಉಪಸ್ಥಿತರಿದ್ದರು. ಸುನೀಲ್ ಕುಮಾರ್ ಸ್ವಾಗತಿಸಿದರು. ಕೃಷಿಗೆ ಸಂಬಂಧಪಟ್ಟಂತೆ ವಿವಿಧ ಇಲಾಖೆಗಳಿಂದ ರೈತರಿಗೆ ದೊರಕುವ ಸೌಲಭ್ಯಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

