ವೈಜ್ಞಾನಿಕ ಬೆಲೆ ಸಿಕ್ಕದೆ ರೈತ ಕಂಗಾಲು
ಶಿರಾ: ಬೀಜ ಉಪಕರಣ ಗೊಬ್ಬರ ಕೂಲಿ ಎಂದು ಹೆಚ್ಚು ಖರ್ಚು ಮಾಡಿ ಬೆಳೆ ಬೆಳೆಯುವ ರೈತನಿಗೆ ವೈಜ್ಞಾನಿಕ ಬೆಲೆ ಸಿಕ್ಕದೆ ಕಂಗಾಲಾಗಿರುವ ರೈತರು ಕೃಷಿಯಿಂದ ವಿಮುಖರಾಗುತ್ತಿರುವುದು ವಿಷಾದನೀಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅರೇಹಳ್ಳಿ ರಮೇಶ್ ನುಡಿದರು.
ಅವರು ಕೃಷಿ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯುಕ್ತಾಶ್ರಯದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಶೇ.70ರಷ್ಟು ರೈತರು ಕೃಷಿಯನ್ನೇ ಅವಲಂಬಿಸಿದ್ದರೂ ಜೀವನ ಸ್ಥಿತಿ ಉತ್ತಮವಾಗಿಲ್ಲ. ಸಾಂಪ್ರದಾಯಿಕ ವ್ಯವಸಾಯ ಪದ್ಧತಿ ಜೊತೆಗೆ ತೋಟಗಾರಿಕೆ ಹೈನುಗಾರಿಕೆ ಮೊದಲಾಗಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಮತ್ತೊಬ್ಬ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಆರ್. ಉಮೇಶ್ ಮಾತನಾಡಿ ರೈತ ಕಷ್ಟ ಜೀವಿ, ಕಾಯಕಕ್ಕೆ ಸದಾ ಸಿದ್ಧ. ಕಳೆದ 8-10 ವರ್ಷಗಳಿಂದ ಕಾಲಕ್ಕೆ ತಕ್ಕಂತೆ ಸುರಿಯದೇ ಇರುವ ಮಳೆ ಪ್ರಕೃತಿಯೊಡನೆ ಹಾವು ಏಣಿ ಆಟವಾಡಿ ರೈತನ ಬೆನ್ನು ಮೂಳೆ ಮುರಿದಿದೆ. ಸರಕಾರ ನೀಡುತ್ತಿರುವ ಬೆಳೆ ಪರಿಹಾರ ಯಾವುದಕ್ಕೂ ಸಾಲುತ್ತಿಲ್ಲ. ದೇಶಕ್ಕೆ ಅನ್ನ ನೀಡುವ ರೈತ ಸರಕಾರದ ಮುಂದೆ ಕೈ ಚಾಚುವ ಹೀನ ಸ್ಥಿತಿ ಬದಲಾಗಬೇಕು ಎಂದು ಒತ್ತಾಯಿಸಿದರು.
ಖಂಡನೆ: ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ್ ಮಾತನಾಡಿ ರಾಜಕಾರಣಿಗಳು ರೈತನನ್ನು ಧೀಮಂತ, ಅನ್ನದಾತ ಎಂದೆಲ್ಲಾ ಹೊಗಳುತ್ತಾರೆ. ದೇಶದಲ್ಲಿ ಶೇ. 70ರಷ್ಟು ರೈತರಿದ್ದಾರೆ ಎನ್ನುತ್ತಾರೆ. ರೈತರ ಸಂಖ್ಯೆ ಶೇ. 50ಕ್ಕೂ ಕಮ್ಮಿಯಾಗಿದೆ. ಅನ್ನದಾತನಿಗೆ ಸುಲಭವಾಗಿ ಸಾಲ ಸಿಕ್ಕುವುದಿಲ್ಲ. ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಕ್ಕುವುದಿಲ್ಲ. ಟೌನ್ಶಿಪ್ ಇಂಡಸ್ಟ್ರೀಯಲ್ ಕಾರಿಡಾರ್ ನೆಪದಲ್ಲಿ ರೈತರ ಜಮೀನುಗಳನ್ನು ಆಕ್ರಮಿಸಿಕೊಳ್ಳಲಾಗುತ್ತಿದೆ. ಜಾಗತೀಕರಣದ ನೆಪದಲ್ಲಿ ಕೃಷಿಯನ್ನು ಕಡೆಗಣಿಸಲಾಗುತ್ತಿದೆ ಎಂದರು.
ನಂತರ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ಪರಮಶಿವಯ್ಯ ಉತ್ತು ಬಿತ್ತು ಪ್ರಕೃತಿಯೊಡನೆ ಹೋರಾಡಿ ಕಷ್ಟಪಟ್ಟು ಬೆಳೆ ಬೆಳೆಯುವುದು ರೈತರಾದರೆ ಅದಕ್ಕೆ ಬೆಲೆ ಕಟ್ಟುವುದು ದಲ್ಲಾಳಿಗಳು. ಈ ಪದ್ಧತಿ ಬದಲಾಗಬೇಕು. ಬೆಳೆ ಬೆಳೆದ ರೈತನಿಗೇ ದರ ನಿಗದಿಪಡಿಸುವ ಅಧಿಕಾರ ದೊರೆಯಬೇಕು. ಈ ಬಗ್ಗೆ ನಾಲ್ಕೈದು ವಾರದಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಹೋರಾಡುತ್ತಿದ್ದೇವೆ ಯಾವ ರಾಜಕಾರಣಿಯಾದರೂ ಕ್ಯಾರೆ ಅಂದಿದ್ದಾರಾ ಎಂದು ಆಕ್ರೋಶಿಸಿದರು.
ಮರಳು ಸಾಗಣೆ: ತಾಲೂಕಿನ ಕೆರೆ ಹಳ್ಳ-ಕೊಳ್ಳಗಳೆನ್ನದೆ ಎಲ್ಲೆಡೆ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಭೂ ಒಡಲನ್ನು ಬಗೆದು 50 ಅಡಿಗೂ ಹೆಚ್ಚು ಆಳದಿಂದ ಮರಳು ತೆಗೆಯಲಾಗುತ್ತಿದೆ. ಅಂತರ್ಜಲ ಸಾವಿರಾರು ಅಡಿ ಆಳಕ್ಕೆ ಕುಸಿದು ರೈತ ಕಂಗಾಲಾಗಿದ್ದಾನೆ. ಸಾಲದ ಒತ್ತಡದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂದರು.
ಕಾರ್ಯಾಗಾರ: ಬೆಳೆಗಳಿಗೆ ಔಷಧಿ ಸಿಂಪಡಿಸುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಮತ್ತು ಅನುಸರಿಸ ಬೇಕಾದ ವಿಧಾನಗಳ ಕುರಿತು ಭೋಜನಾನಂತರ ವಿಶೇಷ ಕಾರ್ಯಾಗಾರ ನಡೆಸಿಕೊಡಲಾಯಿತು. ರೈತ ದಿನಾಚರಣೆ ಮಹತ್ವ ಕುರಿತು ಸಹಾಯಕ ಕೃಷಿ ನಿರ್ದೇಶಕ ನಾಗರಾಜು ವಿವರಿಸಿದರು.
ತಾಪಂ ಅಧ್ಯಕ್ಷೆ ಗಂಗಮ್ಮ ಸಿದ್ದಹನುಮಯ್ಯ, ಉಪಾಧ್ಯಕ್ಷ ಉದಯಶಂಕರ್, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಕೆ.ಬಡೀರಣ್ಣ, ತಾಲೂಕು ಪಂಚಾಯಿತಿ ಸದಸ್ಯರಾದ ಕಾಳೇಗೌಡ, ನಾಗರಾಜು, ಶ್ರೀನಿವಾಸ್, ಕೃಷ್ಣಪ್ಪ, ನಗರ ಸಭೆ ಸದಸ್ಯೆ ರೇಣುಕಮ್ಮ, ಕೃಷಿ ಮಾರುಕಟ್ಟೆ ನಿರ್ದೇಶಕ ಬಂಡೇರಾಮಕೃಷ್ಣ, ಕೃಷಿ ವಿಜ್ಞಾನಿ ಪ್ರಶಾಂತ್, ಕೃಷಿಕ ಸಮಾಜದ ಮುಖಂಡ ಜಯಕುಮಾರ್, ಸೋಮಶೇಖರ್, ತಾಲೂಕು ತೋಟಗಾರಿಕೆ ಬೆಳೆಗಾರರ ಸಂಘದ ಅಧ್ಯಕ್ಷ ರಾಮದಾಸ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

