ರೈತನಿಗೆ ಉಳಿದಿರೋದು ಆತ್ಮಹತ್ಯೆ ಪ್ರಶಸ್ತಿಯೊಂದೇ
ಕ.ಪ್ರ.ವಾರ್ತೆ ತುಮಕೂರು ಡಿ.26
ಅನ್ನದಾತ ರೈತನಿಗೆ ಯಾವುದೇ ರತ್ನ ಪ್ರಶಸ್ತಿ, ಪದ್ಮ ಪ್ರಶಸ್ತಿ, ನಾಡೋಜ ಪ್ರಶಸ್ತಿಯೂ ಇಲ್ಲ. ಆತನಿಗೆ ಉಳಿದಿರೋದು ಆತ್ಮಹತ್ಯೆ ಪ್ರಶಸ್ತಿಯೊಂದೇ. ರೈತನ ತ್ಯಾಗಕ್ಕೆ ಸರ್ಕಾರ ಸದಾಕಾಲ ಕೊಡ ಮಾಡುವ ಪ್ರಶಸ್ತಿ ಅದೊಂದೇ ಎಂದು ರಾಜ್ಯ ರೈತ ಸಂಘದ ಮುಖ್ಯಸ್ಥ ಹಾಗೂ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಮಾರ್ಮಿಕವಾಗಿ ನುಡಿದರು.
ಅವರು ತುಮಕೂರು ಗ್ರಾಮಾಂತರ ಹೆಬ್ಬೂರಿನಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೆಬ್ಬೂರು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರೈತರ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದರು.
ಆಹಾರಭದ್ರತೆಯ ಏಕೈಕ ಆಶಾಕಿರಣ, ದೇಶದ ಜನತೆಯ ಹಸಿವನ್ನು ನೀಗಿಸಲು ಮಳೆ, ಚಳಿ, ಬಿಸಿಲೆನ್ನದೆ ವರ್ಷವೆಲ್ಲಾ ದುಡಿಯುವ ರೈತನಿಗೆ ಈಗ ಉಳಿದಿರೋದು ಆತ್ಮಹತ್ಯೆ ಪ್ರಶಸ್ತಿಯೊಂದೇ. ಬರಗಾಲ, ಸಾಲದ ಸುಳಿಗೆ ಸಿಲುಕಿ ಸದಾ ನಲುಗುತ್ತಿರುವ ರೈತ ಸದಾ ಕಾಲ ಅನ್ನ ನೀಡುವ ಬಗ್ಗೆಯೇ ಚಿಂತಿಸುತ್ತಿರುತ್ತಾನೆ. ಕೊನೆಗೆ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಹಾದಿ ಹಿಡಿದಿದ್ದಾನೆ. ಆದರೆ ರಾಜ್ಯ ಅಥವಾ ಕೇಂದ್ರ ಸರ್ಕಾರ ರೈತನಿಗಾಗಿ ಯಾವ ಪ್ರಶಸ್ತಿಯನ್ನೂ ನೀಡುತ್ತಿಲ್ಲ. ಪ್ರಶಸ್ತಿ ಹಾಳಾಗಿ ಹೋಗಲಿ, ಆತ ಗೌರವಯುತವಾಗಿ ಬದುಕಲು ವ್ಯವಸ್ಥೆಯನ್ನು ಮಾಡುತ್ತಿಲ್ಲ. ಆದರೆ ಸರ್ಕಾರಗಳು ರೈತರ ಪರ ಪ್ರತಿವರ್ಷ ಮೊಸಳೆ ಕಣ್ಣೀರು ಸುರಿಸುತ್ತಲೇ ಬಂದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೈಗಾರಿಕೆಗಳಿಗೆ ಕೋಟಿ-ಕೋಟಿ ಸಾಲ ಮನ್ನಾ ಮಾಡುವ ಸರ್ಕಾರ ಅನ್ನದಾತ ರೈತನಿಗೆ ಒದಗಿಸಿರುವ ನೀರು, ಬೀಜ, ಕರೆಂಟ್, ಮಾರುಕಟ್ಟೆ ಸೌಲಭ್ಯವೆಷ್ಟು ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಯಾವ ಆರ್ಥಿಕ ನೀತಿ: ರೈತರ ಆತ್ಮಹತ್ಯೆ ತಪ್ಪಿಸಲು ಯಾವ ಆರ್ಥಿಕ ನೀತಿ ಇದೆ. ಐಎಎಸ್ ಅಧಿಕಾರಿಗಳಿಗೆ ರೈತರ ಸಮಸ್ಯೆಗಳೆಷ್ಟು ಗೊತ್ತಿದೆ. ಮನಮೋಹನ್ಸಿಂಗ್ ಯಾವ ಕೃಷಿ ತಜ್ಞ. ಅರೆ ಖುಷ್ಕಿ ಬೆಳೆಗಳಿಗೆ ದೇಶದ ಯಾವ ರಾಜ್ಯದಲ್ಲಿ ನೀರೊದಗಿಸುವ ಸೌಲಭ್ಯವಿದೆ. ಬಯಲುಸೀಮೆ, ಬರಗಾಲ ಪೀಡಿತ ಪ್ರದೇಶಗಳ ರೈತರತ್ತ ಸದಾಕಾಲ ಮಲತಾಯಿ ಧೋರಣೆ ಅನುಸರಿಸುತ್ತಲೇ ಬಂದಿರುವ ಸರ್ಕಾರಗಳು ತೋರಿಕೆಗಾಗಿ ರೈತಪರ ಎಂದು ನಾಟಕವಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವತಂತ್ರ ಭಾರತದಲ್ಲಿ ಅತಂತ್ರ: ದೇಶವನ್ನಾಳಿದ ಎಷ್ಟೋ ದೇಸಿ ರಾಜ ಮನೆತನಗಳ ಕಾಲದಲ್ಲಿ ರೈತ ಸುಭಿಕ್ಷವಾಗಿದ್ದ. ವಿದೇಶಿಯರಾಗಿದ್ದ ಮೊಗಲರು, ಬ್ರಿಟಿಷರ ಕಾಲದಲ್ಲಿ ಇಲ್ಲದ ದುಃಸ್ಥಿತಿ ಸ್ವತಂತ್ರ ಭಾರತದಲ್ಲಿ ರೈತರು ಎದುರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಅಷ್ಟೇ ಅಲ್ಲ ಕೃಷಿ ಪ್ರಧಾನ ದೇಶದಲ್ಲಿ ರೈತ ಆತ್ಮಹತ್ಯೆಗಳು ನಿರಂತರವಾಗಿ ನಡೆದಿರೋದು ದೇಶ ಬೌದ್ಧಿಕವಾಗಿ ದಿವಾಳಿಯೆದ್ದಿರುವುದರ ಸಂಕೇತ ಎಂದು ಪುಟ್ಟಣ್ಣಯ್ಯ ವಿಶ್ಲೇಷಿಸಿದರು.
ನೀರೇ ಆಧಾರ: ಅಂತರ್ಜಲ ರಕ್ಷಿಸದೆ ಹೋದರೆ ಯಾರಿಗೂ ಉಳಿಗಾಲವಿಲ್ಲ. ಆದರೆ ಅಂತರ್ಜಲ ರಕ್ಷಿಸುವ ಕುರಿತಂತೆ ಸರ್ಕಾರಕ್ಕೆ ಯಾವ ಕಾಳಜಿಯೂ ಇಲ್ಲ. ಪರಿಸರಕ್ಕೆ ದಕ್ಕಯಾಗದಂತೆ, ದೊಡ್ಡ-ದೊಡ್ಡ ಯೋಜನೆ, ಪೈಪ್ಲೈನ್ಗಳ ಮೂಲಕ ನೀರೋದಗಿಸುವ ಸಾಧ್ಯತೆಯಿದ್ದರೂ ಸರ್ಕಾರಕ್ಕೆ ಆಸಕ್ತಿಯಿಲ್ಲ. ಯಾವುದೇ ಪ್ಲಾನ್ ರೂಪಿಸುತ್ತಿಲ್ಲ ಎಂದು ವಿಷಾದಿಸಿದರು.
ಗುಳೆ ತಪ್ಪಿಸಲು ಯಾವ ನೀತಿಯಿದೆ: ಪ್ರತಿ ಹಳ್ಳಿ ಸರ್ಕಾರವಾಗಬೇಕು. ಹಳ್ಳಿಗೆ ಆರ್ಥಿಕ ಭದ್ರತೆಯಿರಬೇಕು ಎಂಬುದು ಗಾಂಧೀಜಿ ಕನಸಾಗಿತ್ತು. ಇಂದು ಗಾಂಧಿ ಕನಸು ಏನಾಗಿದೆ. ನಿರುದ್ಯೋಗ, ಬರಗಾಲದಿಂದಾಗಿ ಗುಳೆ ಹೋಗುವುದೇ ರೈತನ ನಿತ್ಯ ಕಾಯಕವಾಗಿ ಹೋಗಿದೆ. ಗುಳೆ ತಪ್ಪಿಸಲು ಯಾವ ನೀತಿ ಇದೆ ಎಂದರು.
ಕಾರ್ಯಕ್ರಮದಲ್ಲಿ ಸೋಮಗುದ್ದ ರಂಗಸ್ವಾಮಿ, ಕೆ.ಟಿ. ಗಂಗಾಧರ್, ನಂದಿನಿ ಜಯರಾಂ, ಬಡಗಲಪುರ ನಾಗೇಂದ್ರ, ಗೋವಿಂದರಾಜು ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

