ತುಮಕೂರು

ಶಿಕ್ಷಣ ಸಂಪತ್ತಿನ ಸಮಾನ ಹಂಚಿಕೆಯಾಗಲಿ: ಶಿವಣ್ಣ

Published On :

ಕ.ಪ್ರ.ವಾರ್ತೆ   ಆನೇಕಲ್ಲು   ಡಿ.26
ಶಿಕ್ಷಣವು ಅಮೂಲ್ಯ ಸಂಪತ್ತಾಗಿದ್ದು ದೇಶವಾಸಿಗಳ ನಡುವೆ ತಾರತಮ್ಯವಿಲ್ಲದೇ ಸಮಾನ ಹಂಚಿಕೆಯಾಗಬೇಕಿದೆ ಎಂದು ಶಾಸಕ ಬಿ.ಶಿವಣ್ಣ ತಿಳಿಸಿದ್ದಾರೆ.
ಅವರು ಆನೇಕಲ್ಲಿನ ಅಲಯನ್ಸ್ ವಿಶ್ವವಿದ್ಯಾನಿಲಯದಲ್ಲಿ ಸಾ.ಶಿ.ಇ. ಚುನಾಯಿತ ಪ್ರತಿನಿಧಿಗಳಿಗಾಗಿ ಏರ್ಪಡಿಸಿದ್ದ ಉಚಿತ ಹಾಗೂ ಕಡ್ಡಾಯ ಮಕ್ಕಳ ಶಿಕ್ಷಣ ಕಾಯಿದೆ ಕಾರ್ಯಾಗಾರದಲ್ಲಿ ಮಾತನಾಡಿ ಸಾಕ್ಷರತೆಯ ನಾಡು ಹಾಗೂ ದೇಶದ ಅಭಿವೃದ್ಧಿಗಾಗಿ ಎಲ್ಲರೂ ಶಿಕ್ಷಣ ಪಡೆಯಬೇಕಿದೆ. ಗುಣಮಟ್ಟದ ಶಿಕ್ಷಣ ಹಾಗೂ ಅಗತ್ಯ ಮೂಲ ಸೌಕರ್ಯಗಳ ಸಹಿತ ಆರೋಗ್ಯವಂತ ಕಲಿಕಾ ವಾತಾವರಣ ಎಲ್ಲೆಡೆ ಮೂಡಿಬರಬೇಕಿದೆ ಎಂದರು. ಸಮಾನತೆಯ ನಿಟ್ಟಿನಲ್ಲಿ ಉಳ್ಳವರ ಮಕ್ಕಳು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳು ಒಂದೇ ಸೂರಿನಡಿ ಕಲಿತು ಭಾವೈಕ್ಯತೆಯನ್ನು ಬೆಳೆಸಿಕೊಳ್ಳಬೇಕಿದೆ. ಚುನಾಯಿತ ಪ್ರತಿನಿಧಿಗಳು ಆರ್.ಟಿ.ಇ. ಕಾಯಿದೆಯಡಿ ಶೇ. 25 ಬಡ ವರ್ಗದ ಮಕ್ಕಳು ಖಾಸಗೀ ಶಾಲೆಯಲ್ಲಿ ದಾಖಲಾಗುವಂತೆ ಜಾಗ್ರತೆ ವಹಿಸಬೇಕೆಂದರು.
ಮೇಲ್ಮನೆ ಸದಸ್ಯ ಬಿ.ಟಿ. ದಯಾನಂದ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಹಲವು ಕೋಟಿ ವೆಚ್ಚ ಮಾಡುತ್ತಿದ್ದು ಉತ್ತಮ ಹಾಗೂ ವಿದ್ಯಾವಂತ ಪ್ರಜೆಗಳನ್ನು ತಯಾರು ಮಾಡುವ ಛಲ ಹೊಂದಿದೆ. ಹೊಸ ಶಿಕ್ಷಣ ನೀತಿಯ ಜಾರಿಯಿಂದಾಗಿ ಬಾಲ್ಯದಿಂದಲೇ ಸಮಾನತೆ ಮೂಡಿ ಉತ್ತಮ ಪ್ರತಿಭೆಗಳಿಗೆ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಹಾಗೂ ಅವಕಾಶ ಸಿಗುತ್ತದೆ. ಚುನಾಯಿತ ಪ್ರತಿನಿಧಿಗಳು ಶಿಕ್ಷಣ ಕ್ಷೇತ್ರದಲ್ಲಾದರೂ ರಾಜಕೀಯ ರಹಿತವಾಗಿ ಸಾಮಾಜಿಕ ನ್ಯಾಯ ಅನುಷ್ಠಾನಕ್ಕಾಗಿ ಪಣ ತೊಡಬೇಕೆಂದು ಮನವಿ ಮಾಡಿದರು. ಸರ್ಕಾರ ಬದಲಾದಂತೆಲ್ಲಾ ಕಾಯಿದೆಗಳು ಬದಲಾಗಬೇಕಿಲ್ಲ ಎಂದ ಅವರು ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಅವಶ್ಯವಿದ್ದಲ್ಲಿ  ತಿದ್ದುಪಡಿಗಳನ್ನು ತರಬಹುದು. ಖಾಸಗೀ ಶಿಕ್ಷಣ ಸಂಸ್ಥೆಗಳೂ ಮಕ್ಕಳ ನಡುವೆ ಸಾಮರಸ್ಯ ಮೂಡಿ ಸಮಾನತೆಯ ಮನೋಭಾವ ಮೂಡಿಸಿಕೊಳ್ಳುವ ಭೂಮಿಕೆ ಸಿದ್ಧಪಡಿಸಬೇಕೆಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಶೇಕರಪ್ಪ ಮಾಹಿತಿ ನೀಡಿ ಹೊಬಳಿಗೊಂದು ಮಾದರಿ ಶಾಲೆ ಪೈಲೆಟ್ ಯೋಜನೆ ಜಾರಿ ಮಾಡಲು ಇಲಾಖೆ ಬದ್ಧವಾಗಿದೆ. ಚುನಾಯಿತ ಪ್ರತಿನಿಧಿಗಳು ಸಹಕಾರ ನೀಡಬೇಕೆಂದು  ಕೋರಿದರು. ಅನುದಾನಿತ, ಅನುದಾನ ರಹಿತ ಶಾಲೆಗಳು ಸರ್ಕಾರಿ ನೀತಿಯಡಿ ಶೇ. 25 ಮೀಸಲಾತಿ ನಿಗದಿ ಮಾಡಿ ದಾಖಲು ಮಾಡಿಕೊಳ್ಳಬೇಕೆಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.