ತುಮಕೂರು

ಆಟೋ ಪರವಾನಗಿ ನೀಡಿ: ಜಯಕರ್ನಾಟಕ ಸಂಘಟನೆ ಮನವಿ

Published On :

ತುಮಕೂರು: ಗುಬ್ಬಿ ತಾಲೂಕು ಕಡಬಾ ಹೋಬಳಿಗೆ ಆಟೋ ಪರವಾನಗಿ ನೀಡಬೇಕೆಂದು ಜಯಕರ್ನಾಟಕ ಸಂಘಟನೆ ಜಿಲ್ಲಾಡಳಿತ, ಆರ್ಟಿಓ ಅನ್ನು ಮನವಿ ಮಾಡಿದೆ. ಕಡಬಾ ಹೋಬಳಿ ಸುತ್ತಮುತ್ತ ಸುಮಾರು 250 ಕ್ಕೂ ಹೆಚ್ಚು ಆಟೋ ರಿಕ್ಷಾಗಳು ಓಡಾಡುತ್ತಿವೆ. ಸದರಿ ವ್ಯಾಪ್ತಿಗೆ ಆಟೋ ಪರ್ಮಿಟ್ ನೀಡಬೇಕೆಂದು ಜಯ ಕರ್ನಾಟಕ ಸಂಘಟನೆಯ ಎಸ್. ನಾಗೇಂದ್ರಯ್ಯ ಅವರು ಮನವಿ ಮಾಡಿದ್ದಾರೆ. ಆಟೋ ಇಟ್ಟುಕೊಂಡು ಬದುಕಿನ ನೊಗ ಹೊರಲು ಹೊರಟಿರುವ ಆಟೋ ಚಾಲಕರಿಗೆ ತುರ್ತಾಗಿ ಪರವಾನಗಿ ಬೇಕಾಗಿದೆ. ಈ ಸಂಬಂಧ ಆಟೋ ಚಾಲಕರಿಗೆ ಪರವಾನಗಿ ನೀಡಿದರೆ ಆಟೋ ಚಾಲಕರು ನೆಮ್ಮದಿಯ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದಿದ್ದಾರೆ. ಈಗಾಗಲೇ ಕಡಬಾ ಹೋಬಳಿ ಬೆಳೆಯುತ್ತಿದ್ದು ಆಟೋ ಬಳಸುವವರ ಸಂಖ್ಯೆಯೂ ಗಣನೀಯವಾಗಿದೆ. ಅಲ್ಲದೇ ಕೆಲವರು ಸ್ವಯಂ ಉದ್ಯೋಗ ಪಡೆಯುವ ಸಲುವಾಗಿ ಬ್ಯಾಂಕುಗಳಿಂದ ಸಾಲ ಮಾಡಿ ಆಟೋ ಗಳನ್ನು ಖರೀದಿಸಿದ್ದಾರೆ ಎಂದರು.


ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ತುಮಕೂರು ಸಾರಿಗೆ ಕೊಡುಗೆ ಅನನ್ಯ


ತುಮಕೂರು: ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ತುಮಕೂರು ಸಾರಿಗೆ ಸಂಸ್ಥೆಯ ಕೊಡುಗೆ ಅನನ್ಯವಾದುದು ಎಂದು ತುಮಕೂರು ಮಹಾನಗರ ಪಾಲಿಕೆ ಮೇಯರ್ ಗೀತಾ ರುದ್ರೇಶ್ ಶ್ಲಾಘಿಸಿದರು. ಅವರು ಮರಳೂರು ದಿಣ್ಣೆಯಲ್ಲಿ ನಿರ್ಮಿಸಲಾಗಿರುವ ಬಸ್ ನಿಲ್ದಾಣ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಸಿಟಿ ಬಸ್ ಸೇವೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತಿರುವ ತುಮಕೂರು ಸಾರಿಗೆ ಸಂಸ್ಥೆ ಮಾದರಿ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಪ್ರಶಂಸಿಸಿದರು. ಸಂಸ್ಥೆ ವತಿಯಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿ. ತುಮಕೂರು ಮೂಲೆ ಮೂಲೆಗೂ ಸಿಟಿ ಬಸ್ ಸೌಕರ್ಯವನ್ನು ಕಲ್ಪಿಸಿ. ಹಾಗೆಯೇ ಬಸ್ ನಿಲ್ದಾಣಗಳನ್ನು ನಿರ್ಮಿಸಲು ಮುಂದಾಗಲಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಸುರೇಶ್ ಮರಳೂರು ದಿಣ್ಣೆಯ ಕಾರ್ಪೋರೇಟ್ ಜಯಲಕ್ಷ್ಮೀ ವೆಂಕಟೇಗೌಡ ಇತರರುಹಾಜರಿದ್ದರು.


ಪದ್ಮಾ ಕೃಷ್ಣಮೂರ್ತಿಗೆ
ಸಾಹಿತ್ಯ ಶಿಲ್ಪಿ ಪುರಸ್ಕಾರ

ತುಮಕೂರು: ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿರುವ ತುಮಕೂರಿನ ಪದ್ಮಾ ಕೃಷ್ಣಮೂರ್ತಿ ಅವರಿಗೆ ಸಾಹಿತ್ಯ ಶಿಲ್ಪಿ ಪುರಸ್ಕಾರ ಲಭಿಸಿದೆ. ಈಗಾಗಲೇ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಪದ್ಮಾಕೃಷ್ಣಮೂರ್ತಿ ಅವರು ತುಮಕೂರಿನ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ಕನ್ನಡ ವಿಕಸನ ಕೇಂದ್ರ ಮತ್ತು ಮನೀಷ್ ಪ್ರಕಾಶನದ ವತಿಯಿಂದ ಡಾ. ವಿಷ್ಣುವರ್ಧನ್ ಪುಣ್ಯತಿಥಿ ಅಂಗವಾಗಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ನ ಶ್ರೀ ಕೃಷ್ಣರಾಜ ಪರಿಷತ್ನ್ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದ್ಮಾ ಕೃಷ್ಣಮೂರ್ತಿ ಅವರಿಗೆ ಸಾಹಿತ್ಯ ಶಿಲ್ಪಿ ಪ್ರಶಸ್ತಿ ನೀಡಲಾಯಿತು. ಈಗಾಗಲೇ ಕಥೆ, ಕವನ ಸೇರಿದಂತೆ ಎಲ್ಲಾ ಪ್ರಕಾರಗಳಲ್ಲಿ ಬರೆಯುತ್ತಿರುವ ಪದ್ಮಾಕೃಷ್ಣಮೂರ್ತಿ ಅವರು ಪುಸ್ತಕಗಳನ್ನು ರಚಿಸಿದ್ದಾರೆ. ಸಮಾರಂಭದಲ್ಲಿ ಜರಗನಹಳ್ಳಿ ಶಿವಶಂಕರ್, ಕನ್ನಡ ಸತೀಶ್, ಆಲೂರು ನಾಗಪ್ಪ, ಕಾ.ವೆಂ. ಶ್ರೀನಿವಾಸಮೂರ್ತಿ, ಡಾ. ಟಿ.ಎಚ್. ಆಂಜನಪ್ಪ, ಬಿ. ವಿಜಯಕುಮಾರ್ ಮುಂತಾದವರು ಇದ್ದರು.


ಮಾಹಿತಿ...

ತುಮಕೂರಿಗೆ ಆಗಮಿಸಿದ್ದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸಾದಿಯ ಸುಲ್ತಾನ್ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸುಜಾತ ಸ್ವಾಗತಿಸಿ ಜಿಲ್ಲೆಯ ಮಹಿಳೆಯರ ಅಭಿವೃದ್ಧಿ ಕುರಿತು ಮಾಹಿತಿ ನೀಡಿದರು.


ಪಂಚಪೀಠ ಜಗದ್ಗುರುಗಳಿಗೆ ಜ್ಞಾನೋದಯವಾಗಿಲ್ಲ


ತುಮಕೂರು: ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಇನ್ನೂ ಕೂರುತ್ತಿರುವ ಪಂಚಪೀಠ ಜಗದ್ಗುರುಗಳಿಗೆ ಇನ್ನೂ ಜ್ಞಾನೋದಯವಾಗಿಲ್ಲ ಎಂದು ಸಾಹಿತಿ ಪ್ರೊ. ಸಿ.ಎಚ್. ಮರಿದೇವರು ಆರೋಪಿಸಿದ್ದಾರೆ. ಅಡ್ಡಪಲ್ಲಕ್ಕಿ ಬಗ್ಗೆ ಈಗಾಗಲೇ ಆಕ್ಷೇಪಗಳು ಬಂದರೂ ಸಹ ಇನ್ನೂ ಪಂಚಪೀಠ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಮಾಡಿಸಿಕೊಳ್ಳುತ್ತಿರುವುದಕ್ಕೆ ಮರಿದೇವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕೂಡಲೇ ಅಡ್ಡಪಲ್ಲಕ್ಕಿ ರದ್ದುಗೊಳಿಸಿ ಪ್ರಜಾಪ್ರಭುತ್ವ ತತ್ವಗಳಿಗೆ ಮತ್ತು ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದಿದ್ದಾರೆ. ಇನ್ನೂ ಜ್ಞಾನೋದಯವಾಗದ ಪಂಚಪೀಠ ಜಗದ್ಗುರುಗಳಿಗೆ ಸಂವಿಧಾನದ ಪಾಠ ಹೇಳಲು ಸರ್ಕಾರ ಉಪನ್ಯಾಸಕರನ್ನು ನೇಮಿಸಬೇಕಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಕೆಲ ದಿವಸಗಳ ಹಿಂದೆ ತುಮಕೂರಿನಲ್ಲಿ ಉಜ್ಜನಿಮಠದ ಜಗದ್ಗುರುಗಳು ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ ರಂಬಾಪುರಿ ಜಗದ್ಗುರುಗಳು ಅಡ್ಡಪಲ್ಲಕ್ಕಿ ಮಾಡಿಸಿಕೊಂಡಿದ್ದು ಅಲ್ಲದೇ ಸಮರ್ಥಿಸಿಕೊಂಡಿದ್ದರು. ಈ ರೀತಿ ಅಡ್ಡಪಲ್ಲಕ್ಕಿ ಉತ್ಸವ ಮಾಡಿಸಿಕೊಳ್ಳುವುದು ಸಂವಿಧಾನಕ್ಕೆ ದ್ರೋಹ ಬಗೆದಂತೆ ಎಂದಿದ್ದಾರೆ.


ಜಿಎಸ್ಎಸ್ಗೆ ಕವಿತಾಕೃಷ್ಣ ಸಾಹಿತ್ಯ ಮಂದಿರದ ಶ್ರದ್ಧಾಂಜಲಿ


ತುಮಕೂರು: ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರಿಗೆ ತುಮಕೂರಿನ ಕವಿತಾಕೃಷ್ಣ ಸಾಹಿತ್ಯ ಮಂದಿರದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕವಿತಾಕೃಷ್ಣ ಮಾತನಾಡಿ ಡಾ. ಜಿ.ಎಸ್.ಎಸ್. ಕುವೆಂಪು ಅವರ ಪರಂಪರೆಯ ಕೊನೆಯ ಕೊಂಡಿಯಾಗಿದ್ದರು. ಕನ್ನಡ ಸಾಹಿತ್ಯ ಕ್ಷೇತ್ರದ ದೇವಶಿಲ್ಪಿಯ ಅಗಲಿಕೆಯಿಂದ ನಾಡು ನುಡಿಗೆ ಅಪಾರವಾದ ನಷ್ಟವಾಗಿದೆ ಎಂದಿದ್ದಾರೆ. ಸಾಹಿತ್ಯಾಗಸದ ಧೃವತಾರೆ ಕಳಚಿ ಬಿದ್ದಂತಾಗಿದೆ ಎಂದಿದ್ದಾರೆ. ಕಾವ್ಯ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿದ ಜಿ.ಎಸ್. ಶಿವರುದ್ರಪ್ಪನವರು ಸಾಮಗಾನದ ದೇವಶಿಲ್ಪಿಯಾಗಿದ್ದರು. ಅವರ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕ ನಿಜಕ್ಕೂ ಬಡವಾಗಿದೆ ಎಂದಿದ್ದಾರೆ. ಮಹಿಳಾ ಮಕ್ಕಳ ಸಾಹಿತ್ಯ ಕೂಟದ ಅಧ್ಯಕ್ಷೆ ಕಮಲಾ ಬಡ್ಡಿಹಳ್ಳಿ ಮಾತನಾಡಿ ಕುವೆಂಪು ಆಪ್ತ ಶಿಷ್ಯರಾಗಿ, ನಾಡಿನ ರಸಋಷಿಯಾಗಿದ್ದ ಜಿ.ಎಸ್. ಶಿವರುದ್ರಪ್ಪ ಅವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ಎಂದಿದ್ದಾರೆ. ಕವಿ ಸಿದ್ದಾಪುರ ನರಸಿಂಹಯ್ಯ, ಪದ್ಮಾಕೃಷ್ಣಮೂರ್ತಿ, ಉಮಾಶರ್ಮ ಇತರರು ಇದ್ದರು.


ಇಂದು ಆಮ್ ಆದಿ ಪಕ್ಷದ ಸಭೆ


ತುಮಕೂರು: ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿರುವ ಆಮ್ ಆದ್ಮಿ ಪಕ್ಷದ ತುಮಕೂರು ಘಟಕದ ವತಿಯಿಂದ ಡಿಸೆಂಬರ್ 29 ರಂದು ಬೆಳಗ್ಗೆ 10 ಗಂಟೆಗೆ ನಗರದ ಬಿ.ಎಚ್. ರಸ್ತೆಯಲ್ಲಿರುವ ಹೊಯ್ಸಳ ಹೋಟೆಲ್ (ಎಸ್.ಪಿ.ಕಚೇರಿ ಎದುರು)ನಲ್ಲಿ ಸಭೆಯನ್ನು ಏರ್ಪಡಿಸಲಾಗಿದೆ. ಆಮ್ ಆದ್ಮಿ ಪಕ್ಷದಲ್ಲಿ ಕಾರ್ಯ ನಿರ್ವಹಿಸಲು ಹಾಗೂ ಬೆಂಬಲ ನೀಡುವ ಆಸಕ್ತರನ್ನು ಜಿಲ್ಲೆಯ ಎಲ್ಲ ತಾಲೂಕುಗಳಿಂದ ಆಹ್ವಾನಿಸಲಾಗಿದ್ದು, ತಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ನೀಡಬಹುದಾಗಿದೆ. ಸಭೆಯಲ್ಲಿ ಮುಂದಿನ ಯೋಜನೆಗಳ ಬಗ್ಗೆ ತೀರ್ಮಾನಿಸಲಾಗುವುದು. ಪಕ್ಷದ ಧ್ಯೇಯೋದ್ದೇಶಗಳಾದ ಜನ ಸಾಮಾನ್ಯರಿಂದ ಅಧಿಕಾರ, ಭ್ರಷ್ಟಾಚಾರ ನಿಯಂತ್ರಣ, ಪಾರದರ್ಶಕ ಆಡಳಿತಕ್ಕಾಗಿ ಸುಧಾರಣೆಗಳು, ಕೃಷಿನೀತಿ ನಿಯಂತ್ರಣ, ಉದ್ಯೋಗಾವಕಾಶ, ಆರೋಗ್ಯ ಸೇವೆ, ಉಚಿತ ಶಿಕ್ಷಣ, ಬೆಲೆ ನಿಯಂತ್ರಣ ಮತ್ತಿತರ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ್ ದರ್ಶನ್ ತಿಳಿಸಿದ್ದಾರೆ.

ಆದರ್ಶ ಶಿಕ್ಷಕರಿಗೆ ನಿವೃತ್ತಿಯಿಲ್ಲ: ಜಿಎಸ್ಬಿ



ತುಮಕೂರು: ಆದರ್ಶ ಶಿಕ್ಷಕರಿಗೆ ಯಾವತ್ತೂ ನಿವೃತ್ತಿ ಎಂಬುದೇ ಇಲ್ಲ ಎಂದು ಸಂಸದ ಜಿ.ಎಸ್. ಬಸವರಾಜು ಅಭಿಪ್ರಾಯಪಟ್ಟರು. ಅವರು ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ನಡೆದ ಇಂಗ್ಲಿಷ್ ಕೈಪಿಡಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಆದರ್ಶ ಇಟ್ಟುಕೊಂಡಿರುವ ಗುರುಗಳು ವೃತ್ತಿಯಿಂದ ನಿವೃತ್ತರಾದರೂ ಸಮಾಜಕ್ಕೆ ಸದಾಕಾಲ ಮಾರ್ಗದರ್ಶಕರಾಗಿರುತ್ತಾರೆ. ಸಮಾಜಕ್ಕೆ ಅವರ ಅನುಭವ ಮತ್ತು ಜ್ಞಾನ ಸದ್ಬಳಕೆಯಾಗಬೇಕು ಎಂದರು. ಪ್ರಶಸ್ತಿಗಳು ಕೇಳಿ ಪಡೆಯುವಂತಾಗಬಾರದು. ಹೀಗಾದಾಗ ವಿದ್ವತ್ಗೆ ಬೆಲೆ ಎಂಬುದೇ ಇರುವುದಿಲ್ಲ. ವಿದ್ವತ್ ಅನ್ನು ಅಳಿಯುವ ಶಕ್ತಿ ಸಮಾಜಕ್ಕೆ ಇದೆ. ಪ್ರಶಸ್ತಿ, ಪದವಿಗಳು ಬೇಕಾಬಿಟ್ಟಿ ಹಂಚಿಕೆಯಾಗಬಾರದು. ಇದರಿಂದ ಸಮಾಜಕ್ಕೆ ತಪ್ಪು ಮಾರ್ಗದರ್ಶನ ಮಾಡಿದಂತೆ ಆಗುತ್ತದೆ. ಪ್ರಶಸ್ತಿ ಅಥವಾ ಪದವಿ ನೀಡುವಾಗ ಅರ್ಹರಿಗೆ ಅವು ತಲುಪುವ ನಿಟ್ಟಿನಲ್ಲಿ ಜಾಗೃತಿ ವಹಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಕಾಲೇಜಿನ ಪ್ರಾಂಶುಪಾಲ ಡಾ. ನಾಗಭೂಷಣ್ ಇತರರು ಇದ್ದರು.

ಇಂದು ಸ್ವರಚಿತ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ


ತಿಪಟೂರು: ಸಿರಿಗನ್ನಡ ವೇದಿಕೆ ಹಾಗೂ ತಾಲೂಕು ಕಾನೂನು ಪ್ರಾಧಿಕಾರ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಸ್ಮರಣೆ ಪ್ರಯುಕ್ತ ಸ್ವರಚಿತ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವು ಪಟ್ಟಣದ ಶ್ರೀ ರಾಮಮಂದಿರದಲ್ಲಿ ಇಂದು ಬೆಳಿಗ್ಗೆ 10ಗಂಟೆಗೆ ಏರ್ಪಡಿಸಲಾಗಿದೆ. ಉದ್ಘಾಟನೆಯನ್ನು ಹಿರಿಯ ಶ್ರೇಣಿ ನ್ಯಾಯಾಧೀಶರಾದ ರಾಜಶೇಖರ್ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಸಿರಿಗನ್ನಡ ವೇದಿಕೆ ತಾ.ಘಟಕದ ಅಧ್ಯಕ್ಷ ಕೆ.ಎಂ.ಪರಮೇಶ್ವರಯ್ಯ ವಹಿಸಲಿದ್ದಾರೆ. ವೇದಿಕೆಯ ಉಪಾಧ್ಯಕ್ಷೆ ಶೋಭಾ ಜಯದೇವ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಸ್ವರಚಿತ ಕವನ ಸಂಕಲನ ಕೃತಿ ಬಿಡುಗಡೆಯನ್ನು ಕಲ್ಪತರು ವಿದ್ಯಾ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ಜಿ.ಎಸ್.ರಮೇಶ್ ಮಾಡಲಿದ್ದು, ವೇದಿಕೆಯ ಗೌರವಾಧ್ಯಕ್ಷ ಎಚ್.ಎಸ್.ಜಗದೀಶ್ ಕೃತಿ ಪರಿಚಯಿಸಲಿದ್ದಾರೆ. ಡಾ.ಸಿದ್ದಗಂಗಯ್ಯ ಹೊಲತಾಳ್ ಕುವೆಂಪು ವೈಚಾರಿಕ ಪ್ರಜ್ಞೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.


ಪ್ರಶಸ್ತಿ...

ಗ್ರಾಮೀಣ  ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿ ನರಸಿಂಹದೇವರಹಟ್ಟಿ ಗ್ರಾಮದ ಶಿವಕುಮಾರ್ ಅವರ ಮಗ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪುರುಷೋತ್ತಮ ಗುಡ್ಡಗಾಡು ಓಟ, 1500 ಮೀಟರ್ ಓಟ, 800 ಮೀಟರ್ ಓಟದಲ್ಲಿ ಉತ್ತಮ ಪ್ರದರ್ಶನ ನೀಡಿದರು.

ರಾಷ್ಟ್ರಕವಿ ಜಿ.ಎಸ್.ಎಸ್.ಗೆ ಭಾವಪೂರ್ಣ ಶ್ರದ್ಧಾಂಜಲಿ


ತಿಪಟೂರು: ನಗರದ ಸಂಸ್ಕಾರ ಭಾರತಿ ವತಿಯಿಂದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಮಾರಂಭವನ್ನು ಸಂಸ್ಕಾರ ಭಾರತಿ ಅಧ್ಯಕ್ಷ ಹರಿಬಾಬು ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳುವ ಮೂಲಕ ಸದಸ್ಯೆರೆಲ್ಲರೂ ಮೌನ ಆಚರಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.  ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಕಾರ ಭಾರತಿ ಕಾರ್ಯದರ್ಶಿ ಎನ್.ಪ್ರಸಾದ್ ಕನ್ನಡ ಸಾಹಿತ್ಯದ ಬೆಳಕನ್ನು ಉಣಬಡಿಸಿದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ನಿಂತಿರುವ ಹೆಮ್ಮೆಯ ಮೇರು ಸಾಹಿತಿ, ಅತ್ಯುನ್ನತ ವಿಮರ್ಶಕರಾಗಿದ್ದರು. ಅವರ ನಿಧನ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.  ಪ್ರಾಂತ ಪ್ರಮುಖರಾದ ಶ್ರೀಧರ್ ಲಕ್ಕವಳ್ಳಿ ಮತ್ತು ರಾಜೀವಲೋಚನ ಮಾತನಾಡಿ ನವೋದಯ, ನವ್ಯ,ಬಂಡಾಯ ಸಾಹಿತ್ಯ ಎಲ್ಲಾ ಪ್ರಕಾರಗಳಲ್ಲೂ ತೊಡಗಿಸಿಕೊಂಡಿದ್ದು, ಕನ್ನಡದ ಕಂಪನ್ನು ಸಾಹಿತ್ಯ ಸುಧೆಯನ್ನು ಎಲ್ಲೆಡೆ ಪಸರಿಸಿದ ಅದ್ಭುತ, ಅದಮ್ಯ ಚೇತರಾಗಿದ್ದರು. ಸಮನ್ವಯ ಕವಿಗಳಲ್ಲಿ ಒಬ್ಬರಾದ ಇವರು ಕನ್ನಡಿಗರ ಮನೆ-ಮನಗಳಲ್ಲಿ ಸದಾನಿಲ್ಲುವಂತ ಅನೇಕ ಗೀತೆಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದರು ಎಂದರು.



 ಬಾಣಸಂದ್ರದ ವಿಎಸ್ಎಸ್ ಕಾಲೇಜಿನಲ್ಲಿ ಏಡ್ಸ್ ಮಾಸಾಚರಣೆ

ತುರುವೇಕೆರೆ: ತಾಲೂಕಿನ ಬಾಣಸಂದ್ರದ ವಿಎಸ್ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಏಡ್ಸ್ ಮಾಸಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಜಾಥಾವನ್ನು ನಡೆಸಲಾಯಿತು. ಕಾಲೇಜಿನ ನೂರಾರು ವಿದ್ಯಾರ್ಥಿಗಳು ಗ್ರಾಮದ ಬೀದಿಗಳಲ್ಲಿ ಸಂಚರಿಸಿ ಏಡ್ಸ್ ಬಗ್ಗೆ ಜನಜಾಗೃತಿ ಮೂಡಿಸಿದರು. ಪ್ರಾಚಾರ್ಯ ಟಿ.ರಂಗಪ್ಪ, ಕಾರ್ಯಕ್ರಮಾಧಿಕಾರಿ ಕನ್ನಡ ಉಪನ್ಯಾಸಕರಾದ ಟಿ.ಲಕ್ಷ್ಮಣಯ್ಯ, ದೈಹಿಕ ಶಿಕ್ಷಕರಾದ ಎನ್.ಎಂ. ಯಶ್ವಂತ್ ಮತ್ತು ಉಪನ್ಯಾಸಕರು ಹಾಗೂ ಸಹಶಿಕ್ಷಕರು  ಜಾಥಾದಲ್ಲಿ ಭಾಗವಹಿಸಿದ್ದರು.


ಸಾಹಿತ್ಯ ಕ್ಷೇತ್ರಕ್ಕೆ ಶಿವರುದ್ರಪ್ಪ ಮಹತ್ತರ ಸೇವೆ

ಗುಬ್ಬಿ: ರಾಷ್ಟ್ರ ಕವಿ ಜಿ.ಎಸ್.ಶಿವರುದ್ರರಪ್ಪ ಅವರು ಸಾಹಿತ್ಯ ಕ್ಷೇತ್ರಕ್ಕೆ ಮಹತ್ತರವಾದ ಸೇವೆ ಸಲ್ಲಿಸಿದ್ದು ಅವರ ಸಾಹಿತ್ಯ ಕೃತಿಗಳು ನಾಡಿನ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ ಎಂದು ಲಯನ್ಸ್ ಸಂಸ್ಥೆ ಅಧ್ಯಕ್ಷ ಜಿ.ಆರ್. ಶಿವಕುಮಾರ್ ತಿಳಿಸಿದರು. ಪಟ್ಟಣದ ಲಯನ್ಸ್ ಸಮುದಾಯ ಭವನದಲ್ಲಿ ಲಯನ್ಸ್ ಸಂಸ್ಥೆವತಿಯಿಂದ ಏರ್ಪಡಿಸಿದ್ದ ಜಿ.ಎಸ್. ಶಿವರುದ್ರಪ್ಪ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕನ್ನಡ ನಾಡಿನ ಹಿರಿಮೆಯನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ಏರುವಂತೆ ಮಾಡಿದ ಮಹಾನ್ ಚೇತನ ಅವರ ಆದರ್ಶಗಳು ಪ್ರಸ್ತುತ ಸಮಾಜಕ್ಕೆ ಮಾದರಿಯಾಗಿದ್ದು ಇಂದಿನ ಯುವಜನಾಂಗ ಅವರ ಕೃತಿಗಳನ್ನು ಓದುವ ಮೂಲಕ ಕನ್ನಡ ಸಾಹಿತ್ಯವನ್ನು ಪ್ರಗತಿಪಥದತ್ತ ಕೊಂಡೊಯ್ಯುವಂತೆ ಕರೆನೀಡಿದರು.


 ಟಿ.ಬಿ. ಜಯಚಂದ್ರ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ


ತುಮಕೂರು: ಖಾತೆ, ಪಹಣಿ ಸೇರ್ಪಡೆ ತಿದ್ದುಪಡಿ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಆದೇಶಕ್ಕೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲವೆಂದು ಬಿಜೆಪಿ ಮುಖಂಡ ನೇರಲಗುಡ್ಡ ಶಿವಕುಮಾರ್ ಆರೋಪಿಸಿದ್ದಾರೆ. ಶಿರಾ ತಾಲೂಕಿನಲ್ಲಿ ಜಮೀನಿನ ಖಾತ ಎಕ್ಸ್ಟ್ರ್ಯಾಕ್ಟ್ನಲ್ಲಿ ಭೂಮಾಲಿಕರ ಹೆಸರು, ಇನಿಷಿಯಲ್ಸ್, ತಂದೆಯ ಹೆಸರು ಬಹುತೇಕ ತಪ್ಪುಗಳಿಂದ ಕೂಡಿದೆ. ಇನ್ನು ಪಹಣಿಯಲ್ಲಿ ಎಕರೆ, ಗುಂಟೆ ತಪ್ಪಾಗಿ ಮುದ್ರಿತವಾಗಿದೆ. ಜಮೀನಿನಲ್ಲಿರುವ ತೆಂಗು, ಅಡಕೆ, ಹುಣಸೆ, ಮಾವು, ಬೇವಿನ ಮರಗಳ ಸಂಖ್ಯೆ ಕೂಡ ನಮೂದಾಗಿಲ್ಲ. ಪಹಣಿಯಲ್ಲಿ ಇವೆಲ್ಲಾ ಸರಿ ಇದ್ದರೆ ಮಾತ್ರ ತುಮಕೂರು- ದಾವಣಗೆರೆ ರೈಲು ಮಾರ್ಗದ ಫಲಾನುಭವಿಗಳಿಗೆ ಸರಿಯಾದ ಪರಿಹಾರ ಸಿಗುತ್ತದೆ. ಈ ಸಂಬಂಧ ಖಾತೆ, ಪಹಣಿ ಸೇರ್ಪಡೆ ತಿದ್ದುಪಡಿ ಸಪ್ತಾಹ ಮಾಡುವಂತೆ ಆದೇಶಿಸಿದ್ದರೂ ಜಿಲ್ಲಾಡಳಿತವಾಗಲಿ, ತಾಲೂಕು ಆಡಳಿತವಾಗಲಿ ಗಮನಹರಿಸಿಲ್ಲ ಎಂದಿದ್ದಾರೆ.



ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಇಂದು



ಮಧುಗಿರಿ: ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ  ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಆಶ್ರಯದಲ್ಲಿ ಡಿ.29ರ ಭಾನುವಾರ ಬೆಳಿಗ್ಗೆ 11 ಗಂಟೆಗೆ  ಮಧುಗಿರಿ  ಪಟ್ಟಣದ  ಮಾಲೀಮರಿಯಪ್ಪ ರಂಗಮಂದಿರದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲಾ ಮಟ್ಟದ ಎಸ್ಸಿ, ಎಸ್ಟಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ಶಿಕ್ಷಕರ ಬೃಹತ್ ಶೈಕ್ಷಣಿಕ ಸಮಾವೇಶ ಮತ್ತು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಸಂವಿಧಾನ ಶಿಲ್ಪಿ  ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಲಾ ಮೇಳದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಗುವುದು ಎಂದು ಅಧ್ಯಕ್ಷ ಸಿ.ರಾಮಣ್ಣ ತಿಳಿಸಿದ್ದಾರೆ.ಅಬಕಾರಿ ಸಚಿವ ಸತೀಶ್ಜಾರಕಿ ಹೊಳಿ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಅಂಬೇಡ್ಕರ್ ಜ್ಯೋತಿ ಬೆಳಗಿಸುವರು. ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಹಾಗೂ ಶಾಸಕ ಕೆ.ಎನ್.ರಾಜಣ್ಣ ಅಧ್ಯಕ್ಷತೆ ವಹಿಸುವರು.

ದಲಿತ ಮುಖಂಡ ಬಿ. ಶಾಂತರಾಜುಗೆ ಪ್ರಶಸ್ತಿ


ತುಮಕೂರು: ತುಮಕೂರು ನಗರದ ಉಪ್ಪಾರಹಳ್ಳಿ ವಾಸಿ, ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಹಾಗೂ ದಲಿತ ಮುಖಂಡ ಬಿ. ಶಾಂತರಾಜು ಅವರಿಗೆ ಭಗವಾನ್ ಬುದ್ಧ ಫೆಲೋಶಿಷ್ ರಾಷ್ಟ್ರೀಯ ಪುರಸ್ಕಾರ ಲಭಿಸಿದೆ. ನವದೆಹಲಿಯಲ್ಲಿರುವ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ 2013 ರ ಸಾಲಿಗೆ ಈ ಪ್ರಶಸ್ತಿ ನೀಡಲಾಗಿದೆ. ದೆಹಲಿಯ ಜರೋಡ ಬರೋರಿಯಲ್ಲಿರುವ ಅಂಬೇಡ್ಕರ್ ಮಂಟಪ ಪಂಚಶೀಲ ಆಶ್ರಮದಲ್ಲಿ ಎರಡು ದಿನಗಳ ಕಾಲ ನಡೆದ 29ನೇ ರಾಷ್ಟ್ರೀಯ ದಲಿತ  ಬರಹಗಾರರ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಶಾಂತರಾಜು ಅವರಿಗೆ ಪ್ರದಾನ ಮಾಡಲಾಯಿತು. ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಡಾ. ಎಸ್.ಪಿ. ಸುಮನಾಕ್ಷರ್ ಅವರು ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಸಂಘಟನಾತ್ಮಕ ಸೇರಿದಂತೆ ದಲಿತಪರ, ಕನ್ನಡ ಪರ ಹೋರಾಟಗಳ ಮುಂಚೂಣಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಶಾಂತರಾಜು ಅವರಿಗೆ ಈ ರಾಷ್ಟ್ರೀಯ ಪುರಸ್ಕಾರವನ್ನು ನೀಡಲಾಗಿದೆ.


ಎ.ಆರ್. ರಾಮಕೃಷ್ಣಪ್ಪ ನೂತನ ಅಧ್ಯಕ್ಷ



ಕುಣಿಗಲ್: ತಾಲೂಕು ಭಾರತೀಯ ಜನತಾ ಪಕ್ಷದ ಎಸ್ಸಿ ಮೋರ್ಚಾ ಘಟಕವನ್ನು ಪುನರ್ ರಚಿಸಲಾಗಿದ್ದು ನೂತನ ಅಧ್ಯಕ್ಷರನ್ನಾಗಿ ಎ.ಆರ್.ರಾಮಕೃಷ್ಣಪ್ಪನವರನ್ನು ಆಯ್ಕೆ ಮಾಡಲಾಗಿದ್ದು, ಮೋರ್ಚಾದ ಇತರೆಪದಾಧಿಕಾರಿಗಳಾದ ಉಪಾಧ್ಯಕ್ಷರಾಗಿ- ನಾಗಸಂದ್ರ ಮೀನಾ, ಶಿವಣ್ಣ, ಅಂಬೇಡ್ಕರ್ ನಗರದ ರಾಜೇಶ್, ಬೋವಿಕಾಲೋನಿ ತಿಪ್ಪಯ್ಯ, ಅಮೃತೂರು ಎಲ್ಲಪ್ಪ. ಸಹಕಾರ್ಯದರ್ಶಿ  ಉಜ್ಜಿನಿ ಶ್ರೀನಿವಾಸ, ದೊಡ್ಡಮಧರೆ ರಾಮಕೃಷ್ಣ, ಎನ್.ಎಂ.ಪುರ ರಮೇಶ, ಬೇಗೂರು ಪಾಪಯ್ಯ. ಖಜಾಂಚಿ  ಎ.ಎಂ.ಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಘಟಕದ ಪ್ರಕಟಣೆಯಲ್ಲಿ ತಿಳಿಸಿದೆ.



ನುಡಿ ನಮನ...


ಗುಬ್ಬಿ ತಾ. ಕಸಾಪ, ತಾ. ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಡಾ.ಜಿ.ಎಸ್.ಶಿವರುದ್ರಪ್ಪ ನುಡಿ ನಮನ ಕಾರ್ಯಕ್ರಮದಲ್ಲಿ ರಾಜೇಶ್ ಗುಬ್ಬಿ, ಬಿಜೆಪಿ. ಅಧ್ಯಕ್ಷ ಎಚ್.ಟಿ.ಭೈರಪ್ಪ, ಕರ್ನಾಟಕ ಜನಪದ  ಪರಿಷತ್ ಅಧ್ಯಕ್ಷ ಕೆ.ಟಿ.ಕೆ ಪ್ರಭು, ವರ್ತಕರ ಸಂಘದ ಅಧ್ಯಕ್ಷ ಎಚ್.ಎಸ್.ದಯಾನಂದ್ ಉಪಸ್ಥಿತರಿದ್ದರು.


ಅವರು  ಹೇಳಿದ್ದು

ವಿಧಾನಸೌಧ ಮಾಲ್ ಆಗಿಬಿಟ್ಟಿದೆ. ಅಲ್ಲಿ ಈಗ ಏನನ್ನು ಬೇಕಾದರೂ ಕ್ರಯ ಮಾಡಬಹುದು, ಏನನ್ನು ಬೇಕಾದರೂ ಮಾರಾಟ ಮಾಡಬಹುದು.
ಟಿ ವಿಶ್ವನಾಥ್, ಸಂಸದ



ಒಳಮರ್ಮ


ವಿಧಾನಸೌಧದಲ್ಲಿ ಕುಳಿತು ಏನೇ ಡೀಲ್ ಮಾಡಿದ್ರೂ ಯಾರೂ ಕೇಳಂಗಿಲ್ಲ. ಏಕೆಂದರೆ ಅದು 'ಮಾಲ್' ಎಂದು ಹೇಳುತ್ತಿದ್ದಾರೆ.



ಪ್ರಧಾನ ಸಂಪಾದಕರಿಗೆ ಟ್ವೀಟ್ ಮಾಡಿ
ಅಗ್ಝಝಢಿಜಝಢಿಝ್ಠಇಛಡಿ


ನಮ್ಮ ಕಚೇರಿ ವಿಳಾಸ

ಕನ್ನಡಪ್ರಭ ಕಾರ್ಯಾಲಯ, ವೀರಶೈವ ಕೋ-ಆಪರೇಟಿವ್ ಬ್ಯಾಂಕ್  ಪಕ್ಕ, ಡಾ. ರಾಧಾಕೃಷ್ಣ ರಸ್ತೆ, ಸೋಮೇಶ್ವರ ಪುರಂ, ತುಮಕೂರು. ದೂ.: 0816-2252698.


ಓದುಗರಲ್ಲಿ ಮನವಿ


ಕನ್ನಡಪ್ರಭ ಪತ್ರಿಕೆ ನಿಮ್ಮ ಮನೆಗೆ ಸರಿಯಾಗಿ ವಿತರಣೆ ಆಗುತ್ತಿಲ್ಲವೆ? ದೂ. : 9535145940

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.