ತುಮಕೂರು

ರಂಜಿತಾಗೆ ದೀಕ್ಷೆ ತಪ್ಪಲ್ಲ: ಪ್ರಮೀಳಾ ನೇಸರ್ಗಿ

Published On :

ಕ.ಪ್ರ. ವಾರ್ತೆ  ತುಮಕೂರು  ಡಿ. 28
ವಿವಾದಾತ್ಮಕ ನಟಿ ರಂಜಿತಾ ಪರ ಹಿರಿಯ ವಕೀಲೆ ಹಾಗೂ ಮಾಜಿ ಶಾಸಕಿ ಪ್ರಮೀಳಾ ನೇಸರ್ಗಿ ವಕಾಲತ್ತು ವಹಿಸಿದ್ದಾರೆ.  
ರಂಜಿತಾ ಸನ್ಯಾಸ ದೀಕ್ಷೆ ಪಡೆದಿರುವುದು ತಪ್ಪಲ್ಲ. ರಂಜಿತಾಗೆ ದೀಕ್ಷೆ ಕೊಟ್ಟರೆ ಹೊಟ್ಟೆಯುರಿಯೇಕೆ ಎಂದು ಹಿರಿಯ ವಕೀಲೆ ಹಾಗೂ ಮಾಜಿ ಶಾಸಕಿ ಪ್ರಮೀಳಾ ನೇಸರ್ಗಿ ಪ್ರಶ್ನಿಸಿದ್ದಾರೆ.
ಅವರು ತುಮಕೂರಿನ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ತುಮಕೂರಿನ ವೀರಶೈವ ಸೇವಾ ಸಮಿತಿಯ ಮೈತ್ರಿ ಮಹಿಳಾ ಸಂಘದ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಂಜಿತಾ ದೀಕ್ಷೆಯನ್ನು ತಪ್ಪು ಎಂಬಂತೆ ಬಿಂಬಿಸಲಾಗುತ್ತಿದೆ. ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯವಿದೆ ಎಂಬುದನ್ನು ಮರೆತಂತಿದೆ. ದೀಕ್ಷೆ ಕೇವಲ ಪುರುಷರಿಗೆ ಮಾತ್ರ ಎಂಬಂತೆ ಬಿಂಬಿಸಲಾಗುತ್ತಿದೆ. ಈ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ನೀಡಲಾಗುತ್ತಿದೆ. 12 ನೇ ಶತಮಾನದಲ್ಲೇ ಅಕ್ಕ ಮಹಾದೇವಿ ದೀಕ್ಷೆ ಪಡೆದಿರಲಿಲ್ಲವೇ ದೀಕ್ಷೆ ಪಡೆದು ಅಲ್ಲಮಪ್ರಭುಗಳ ಅನುಭವ ಮಂಟಪಕ್ಕೆ ಬಂದಿರಲಿಲ್ಲವೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಮಹಿಳೆಗೂ ಧಾರ್ಮಿಕ ಸ್ವಾತಂತ್ರ್ಯವಿದೆ. ಧಾರ್ಮಿಕ ಸ್ವಾತಂತ್ರ್ಯ ಬೇಕು. ಇದು ಪುರುಷರಿಗಷ್ಟೇ ಸೀಮಿತವಲ್ಲ. ಮಹಿಳೆಯರು ಸಂಘಟಿತರಾಗಬೇಕು. ಪುರುಷರಿಗೆ ಸವಾಲಾಗುವಂತೆ ಬೆಳೆಯಬೇಕು. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ತನ್ನತನ ಸಾಬೀತುಪಡಿಸಬೇಕು. ಅಚ್ಚೊತ್ತಬೇಕು ಎಂದು ಕರೆ ನೀಡಿದರು.
ಹೆಣ್ಣು ಕುಟುಂಬದ ಕಣ್ಣು. ದೀಪದಲ್ಲಿನ ಬತ್ತಿಯಿದ್ದಂತೆ. ಹೆಣ್ಣನ್ನು ನದಿಗೆ ಹೋಲಿಸಿದ್ದಾರೆ. ನದಿ ಎರಡು ದಂಡೆಗಳನ್ನು ರಕ್ಷಿಸಿದ ಹಾಗೆ. ಹೆಣ್ಣು ಹುಟ್ಟಿದ ಮನೆ, ಕೊಟ್ಟ ಮನೆ ಎರಡನ್ನೂ ಬೆಳಗುವ ದೀಪ. ಇಂತಹ ಹೆಣ್ಣನ್ನು ಪೂಜಿಸುತ್ತಲೇ ಅವಳ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿಯುವ ಕೆಲಸ ನಿರಂತರವಾಗಿ ನಡೆದಿದೆ. ಸಮಾನತಾ ತತ್ವದಿಂದ ವಂಚಿಸಲಾಗುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಮೈತ್ರಿ ಶ್ಲಾಘನೆ: ವೀರಶೈವ ಸೇವಾ ಸಮಿತಿಯ ಮೈತ್ರಿ ಮಹಿಳಾ ಸಂಘ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸ ಹಾಗೂ ಶ್ಲಾಘನೀಯ. ಮೈತ್ರಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮಾದರಿಯಾಗಿದೆ. ಮೈತ್ರಿ ಸೇವಾ ಕಾರ್ಯಗಳು ಇನ್ನಷ್ಟು ವಿಸ್ತರಿಸಲಿ ಎಂದು ನೇಸರ್ಗಿ ಆಶಯ ವ್ಯಕ್ತಪಡಿಸಿದರು.
ಎನ್. ಆರ್. ಜಗದೀಶ್ಗೆ ಶ್ಲಾಘನೆ: ತುಮಕೂರು ವೀರಶೈವ ಸಮಾಜದ ಮುಖಂಡ ಹಾಗೂ ಕೈಗಾರಿಕೋದ್ಯಮಿ ಎನ್. ಆರ್.ಜಗದೀಶ್ ವೀರಶೈವ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ವೀರಶೈವರನ್ನು ಬೆಳೆಸುತ್ತಿದ್ದಾರೆ. ಸಂಘಟನೆಗಳನ್ನು ಬೆಳೆಸುತ್ತಿದ್ದಾರೆ. ಎನ್.ಆರ್. ಜಗದೀಶ್  ಕಾರ್ಯ ಶ್ಲಾಘನೀಯ ಎಂದು ನೇಸರ್ಗಿ ಪ್ರಶಂಶಿಸಿದರು.
ಮುಖ್ಯ ಅತಿಥಿಗಳಾಗಿ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಡಾ. ಉಮಾ ಗಲಗಲಿ, ಕೈಗಾರಿಕೋದ್ಯಮಿ ಎನ್.ಆರ್. ಜಗದೀಶ್, ಸಂಸದ ಜಿ.ಎಸ್. ಬಸವರಾಜು, ಡಾ.ಎಂ.ಆರ್. ಹುಲಿನಾಯ್ಕರ್, ಲೋಕೇಶ್ವರಿ ಪ್ರಭು, ಮೀನಾ ಮಹೇಶ್, ಪಾರ್ವತಿ ಜಗದೀಶ್ ಹಾಗೂ ಮೈತ್ರಿ ಮಹಿಳಾ ಸಂಘದ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.