ರೈತರಿಗೆ ಅನುಕೂಲವಾಗುವ ನೀರಾವರಿ ಯೋಜನೆ
ಕನ್ನಡಪ್ರಭ ವಾರ್ತೆ, ಕೊರಟಗೆರೆ, ಡಿ.28
ಕೊರಟಗೆರೆ ಕ್ಷೇತ್ರದ ರೈತರಿಗೆ ಅನುಕೂಲವಾಗುವ ನೀರಾವರಿ ಯೋಜನೆಗಳು ಸೇರಿದಂತೆ ಇನ್ನಿತರ ಅನುಕೂಲಕರ ಯೋಜನೆಗಳನ್ನು ತರಲು ಶ್ರಮಿಸುವುದಾಗಿ ಶಾಸಕ ಪಿ.ಆರ್. ಸುಧಾಕರಲಾಲ್ ತಿಳಿಸಿದರು.
ಅವರು ತಾಲೂಕಿನ ಕೋಳಾಲ ಹೋಬಳಿಯ ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಗ್ರಾಮ ಸಭೆಗಳನ್ನು ಉದ್ದೇಶಿಸಿ ಮಾತನಾಡಿ ಗ್ರಾಮೀಣ ಭಾಗಗಳಲ್ಲಿ ಮೂಲಭೂತ ಸೌಕರ್ಯಗಳು ಕಡಿಮೆ ಇದ್ದು ಅವುಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದರು.
ಈ ಭಾಗಗಳಲ್ಲಿ ಕುಡಿಯುವ ನೀರಿನ ಕೊರತೆ ಸಾಕಷ್ಟು ಇದ್ದು, ಅವಶ್ಯಕತೆ ಇರುವ ಕಡೆ ನೂತನವಾಗಿ ಕೊಳವೆ ಬಾವಿಗಳನ್ನು ಕೊರೆಸಿ ನೀರು ಸರಬರಾಜು ಮಾಡಲಾಗುವುದು ಹಾಗೂ ಕೊರಟಗೆರೆ ಕ್ಷೇತ್ರ ಬರಪೀಡಿತ ಕ್ಷೇತ್ರವೆಂದು ಘೋಷಿಸಲು ವಿಧಾನ ಸಭೆಯಲ್ಲಿ ನಾನು ಮಾಡಿದ ಒತ್ತಾಯಕ್ಕೆ ಮನ್ನಣೆ ನೀಡಿ ಕ್ಷೇತ್ರವನ್ನು ಬರಗಾಲ ಪಟ್ಟಿಯಲ್ಲಿ ಸೇರಿಸಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್, ಕೃಷಿ ಸಚಿವ ಕೃಷ್ಣಬೈರೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ರವರಗೆ ಈ ಸಂದರ್ಭದಲ್ಲಿ ಅಭಿನಂದಿಸಿದರು.
ಗ್ರಾಮೀಣ ಮಕ್ಕಳಿಗೆ ವಿದ್ಯಾಭ್ಯಾಸದ ಮಟ್ಟ ಉತ್ತಮಗೊಳಿಸಲು ಎಜುಸ್ಯಾಟ್ ಯೋಜನೆಯನ್ನು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭಿಸುವ ಉದ್ದೇಶ ಹೊಂದಿದ್ದು ಇದರಿಂದ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಮುಖ್ಯತೆ ನೀಡಿದಂತ್ತಾಗುತದೆ ಎಂದರು.
ಸ್ವಚ್ಛತೆ ಕೊರತೆ: ಜಿ.ಪಂ. ಅಧ್ಯಕ್ಷೆ ಸಾಕಮ್ಮ ಮಾತನಾಡಿ ಗ್ರಾಮೀಣ ಭಾಗಗಳಲ್ಲಿ ಸ್ವಚ್ಛ ವಾತಾವರಣದ ಕೊರತೆ ಇದ್ದು ಪ್ರತಿ ಮನೆಗೂ ಶೌಚಾಲಯ ನಿರ್ಮಿಸಿ ಕೊಳ್ಳಲು ಸಾಕಷ್ಟು ಯೋಜನೆ ನೀಡುತಿದೆ, ಆದರೆ ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಓ ಕುಂಟು ನೆಪಗಳನ್ನು ನೀಡಿ ಫಲಾನುಭವಿಗಳಿಗೆ ಶೌಚಾಲಯ ನಿರ್ಮಾಣದ ಹಣವನ್ನು ನೀಡದಿರುವುದು ಗಮನಕ್ಕೆ ಬಂದಿದ್ದು ಕೂಡಲೇ ಅವರಿಗೆ ಹಣ ಬಿಡುಗಡೆ ಮಾಡಬೇಕು. ಈ ಪ್ರಕರಣಗಳು ಮುಂದಿನ ದಿನಗಳಲ್ಲಿ ಮರುಕಳಿಸಿದರೆ ಪಿಡಿಓ ಸೇರಿದಂತೆ ಸಂಬಂದಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜೆಡಿಎಸ್ ಮುಖಂಡ ಮಹಾಲಿಂಗಯ್ಯ ಮಾತನಾಡಿ ಶಾಸಕರು ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಜನರ ಹತ್ತಿರ ಬಂದು ಸಮಸ್ಯೆಗಳನ್ನು ಪರಿಹಸುತ್ತಿದ್ದಾರೆ. ತುಮಕೂರು ಜಿಲ್ಲೆಗೆ ಯಾವುದೇ ನೀರಾವರಿ ಯೋಜನೆಗಳ ಬಂದರೂ ಅವು ಕೋಳಾಲದ ಮುಖಾಂತರವೇ ಹಾದು ಹೋಗಬೇಕಾಗಿದೆ. ಆದರೆ ಈ ಯೋಜನೆಗಳು ಸಹಕಾರವಾಗಲು ಹಲವು ವರ್ಷಗಳು ಬೇಕಾಗಿದೆ. ಆದ್ದರಿಂದ ತುಮಕೂರು ಗ್ರಾಮಾಂತರ ಕ್ಷೇತ್ರದ ಉರ್ಡಿಗೆರೆ ಹೋಬಳಿಗೆ ಹರಿಸಿರುವ ಹೇಮಾವತಿ ಕುಡಿಯುವ ನೀರು ಯೋಜನೆಯನ್ನು ಕೊರಟಗೆರೆ ಕ್ಷೇತ್ರದ ಕೋಳಾಲ ಸೇರಿದಂತೆ ಹಲವು ಹೋಬಳಿಗಳಿಗೆ ನೀರು ಹರಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಶಾಸಕರ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದರು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಚೌಡಮ್ಮ, ಉಪಾಧ್ಯಕ್ಷೆ ಜಯಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವಾರ್ಡ್ ಸದಸ್ಯರ, ಗುತ್ತಿಗೆದಾರರ
ಅಪವಿತ್ರ ಮೈತ್ರಿಯಿಂದಾಗಿ ಕಾಮಗಾರಿ ಅಪೂರ್ಣ
ಚಿಕ್ಕನಾಯಕನಹಳ್ಳಿ ಪಟ್ಟಣದ ಬಸ್ನಿಲ್ದಾಣದಿಂದ ಊರಿನ ಮಧ್ಯಭಾಗಕ್ಕೆ ಸಂಪರ್ಕ ಕಲ್ಪಿಸುವ ಬೀದಿಯ ಸ್ಥಿತಿ ಇದು. ಖಾಸಗಿ ಬಸ್ ನಿಲ್ದಾಣದಿಂದ ಊರಿನ ಮಧ್ಯಭಾಗದವರಗೆ ಸಂಪಕ ಕಲ್ಪಿಸುವ ಏಕೈಕ ನೇರವಾದ ಬೀದಿಯಾಗಿದ್ದರೂ ಇಲ್ಲಿನ ಪುರಸಭೆ ಆಡಳಿತ ಈ ಬಗ್ಗೆ ಗಮನ ಹರಿಸಿಲ್ಲ.
ಈ ಹಿಂದೆ ಈ ರಸ್ತೆಗೆ 40 ಲಕ್ಷ ರು.ಗಳಷ್ಟು ಅನುದಾನವನ್ನು ನೀಡಲಾಗಿತ್ತು. ವಾರ್ಡ್ ಸದಸ್ಯರ ಮತ್ತು ಗುತ್ತಿಗೆ ದಾರರ ಅಪವಿತ್ರ ಮೈತ್ರಿಯಿದಾಗಿ ಕಾಮಗಾರಿ ಅಪೂರ್ಣವಾಗಿದ್ದು, ಹಣ ಮಾತ್ರ ಪೂರ್ತಿ ಬಟವಾಡೆಯಾಗಿದೆ ಎಂಬುದು ಇಲ್ಲಿನ ನಾಗರಿಕರ ಆರೋಪವಾಗಿದೆ.
ಆದರೆ ಪುರಸಭೆ ತನಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಕಣ್ಣು ಮುಚ್ಚಿ ಕುಳಿತಿದೆ. ಆದರೆ ಕೆಲವು ಜನ ಸಾವಜನಿಕರು ಈ ಬೀದಿಯಲ್ಲಿಯೇ ತಮ್ಮ ನಿತ್ಯಕರ್ಮಗಳನ್ನು ಪೂರೈಸುವುದರಿಂದ ಸದರಿ ರಸ್ತೆ ಬಯಲು ಶೌಚಾಲಯವಾಗಿದೆ.
ಈ ರಸ್ತೆಯಲ್ಲಿ ವಾಸಿಸುವ ಮನೆಗಳ ಜನರ ಪಾಡು ಹೇಳತೀರದಾಗಿದೆ. ನಿತ್ಯಕರ್ಮಗಳನ್ನು ಈ ಮಾರ್ಗದಲ್ಲೇ ಮಾಡುವುದರಿಂದ ಜನ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಹಲವಾರು ಬಾರಿ ರಸ್ತೆ ದುರಸ್ತಿಗೆ ಒತ್ತಾಯಿಸಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಪುರಸಭೆ ಎಚ್ಚೆತ್ತುಕೊಳ್ಳದೇ ಇದ್ದರೆ ಹೋರಾಟದ ಹಾದಿ ಹಿಡಿಯುವ ನಿರ್ಧಾರಕ್ಕೆ ಜನ ಬಂದಿದ್ದಾರೆ.
ದುಸ್ಥಿತಿಯಲ್ಲಿ ಬ್ರಿಟೀಷ್ ಕಾಲದ ಸೌಧ
ಬ್ರಿಟೀಷ್ ಕಮಿಷನರ್ ಕಾಲದಲ್ಲಿ ಕಟ್ಟಿದ ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿ ಕಟ್ಟಡ ದುಸ್ಥಿತಿಯಲ್ಲಿದೆ. ನೂರಾರು ವರ್ಷಗಳ ಕಾಲ ಈ ಕಟ್ಟಡ ಜನಸಾಮಾನ್ಯರ ಒಡನಾಡಿಯಾಗಿತ್ತು. ಕಟ್ಟಡ ತುಂಬ ಗಟ್ಟಿಮುಟ್ಟಾಗಿದ್ದರು ಸಹ ಜಡ್ಡುಗಟ್ಟಿದ ತಾಲೂಕು ಆಡಳಿತ ಇದನ್ನು ರಿಪೇರಿ ಮಾಡಿಸುವ ಗೋಜಿಗೆ ಹೋಗಿಲ್ಲ. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಪಟ್ಟಣದ ವೀರಮಹಿಳೆ ಭಾಗೀರಥಮ್ಮ ಎಂಬುವರು ಕ್ವಿಟ್ಇಂಡಿಯಾ ಚಳವಳಿಯ ವೇಳೆ ತಾಲೂಕು ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಇತಿಹಾಸವಿದೆ.
ಅಂತಹ ಕಟ್ಟಡವನ್ನು ಸರ್ಕಾರ ನಿರ್ಲಕ್ಷಿಸಿದೆ. ಇದನ್ನು ದುರಸ್ಥಿ ಮಾಡಿದರೆ, ಅನೇಕ ಸಣ್ಣಪುಟ್ಟ ಕಚೇರಿಗಳನ್ನು ಇಲ್ಲಿಯೇ ತೆರೆದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.
ಈಗಾಗಲೇ ಬಾಡಿಗೆ ಕಟ್ಟಡದಲ್ಲಿ ಕೆಲವೊಂದು ಕಚೇರಿಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಸರ್ಕಾರಕ್ಕೆ ಹಣವು ಉಳಿತಾಯ. ಆದರೆ ಜನಪ್ರತಿನಿಧಿಗಳಿಗೆ ಈ ಕಟ್ಟಡದ ದುರಸ್ತಿ ಬಗ್ಗೆ ಚಿಂತಿಸಲು ಕಾಲಾವಕಾಶವಿಲ್ಲ. ಚಿಕ್ಕನಾಯಕನಹಳ್ಳಿ ತಾಲೂಕಿಗೆ ಸಾಕ್ಷಿ ಪ್ರಜ್ಞೆಯಂತಿರುವ ಈ ಕಟ್ಟಡಕ್ಕೆ ಚಾರಿತ್ರಿಕ ಮಹತ್ವವಿದೆ. ಹೀಗಾಗಿ ಇದನ್ನು ತುರ್ತಾಗಿ ದುರಸ್ಥಿ ಮಾಡಿಸಬೇಕು. ಇಲ್ಲದಿದ್ದರೆ ಅತ್ಯಂತ ಪುರಾತನವಾದ ಈ ಕಟ್ಟಡ ಇತಿಹಾಸದ ಪುಟ ಸೇರುವುದರಲ್ಲಿ ಅನುಮಾನವಿಲ್ಲ.
ಈ ಕಟ್ಟಡ ದುರಸ್ತಿಗೆ ಆಗ್ರಹಿಸಿ ಹಲವಾರು ಬಾರಿ ಮನವಿ ಸಲ್ಲಿಸಿದರೂ ಕೂಡ ತಾಲೂಕು ಆಡಳಿತ ಕ್ಯಾರೇ ಅಂದಿಲ್ಲ. ಈಗಲಾದರೂ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಈ ಭವ್ಯ ಕಟ್ಟಡವನ್ನು ದುರಸ್ತಿಗೊಳಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಹತ್ತಾರು ವರ್ಷಗಳಿಂದ ದುರಸ್ತಿಯಾಗದ ರಸ್ತೆ
ಚಿಕ್ಕನಾಯಕನಹಳ್ಳಿ ತಾಲೂಕಿನ ಪ್ರಮುಖ ರಸ್ತೆಗಳಲ್ಲೊಂದಾದ ಚಿ.ನಾ.ಹಳ್ಳಿ ತಿಪಟೂರು ರಸ್ತೆ ಕಳೆದ ಹತ್ತಾರು ವರ್ಷಗಳಿಂದ ದುರಸ್ತಿಯಾಗಿಲ್ಲ. ಜನರಿರಲಿ ಪ್ರಾಣಿಗಳು ಸಂಚರಿಸಲು ಯೋಗ್ಯವಾಗಿಲ್ಲವಾಗಿದೆ. ಇತ್ತೀಚೆಗೆ ತಾಲೂಕಿನಲ್ಲಿ ಗಣಿಗಾರಿಕೆ ಬಾರಿ ಪ್ರಮಾಣದಲ್ಲಿ ನಡೆಯುತ್ತಿದ್ದ ವೇಳೆಯಲ್ಲಿ ಪ್ರತಿನಿತ್ಯ ನೂರಾರು ಅದಿರು ತುಂಬಿದ ಲಾರಿಗಳು ಸಂಚರಿಸುತ್ತಿದ್ದವು.
ಸುತ್ತಿ ಬಳಸಿ ಮಂಗಳೂರಿಗೆ ಹೋಗುವುದರಿಂದ ಸಮಯ ಮತ್ತು ಶ್ರಮ ಎರಡು ನಷ್ಟ. ಆದ್ದರಿಂದ ಚಿ.ನಾ.ಹಳ್ಳಿ -ಹಾಸನ ರಸ್ತೆಯನ್ನು ಟೋಲ್ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವ ಯೋಜನೆ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಯು ಪ್ರಾರಂಭವಾಯ್ತು. ಆದರೆ ಕೆಲವೊಂದು ಕಾರಣದಿಂದ ಕಾಮಗಾರಿ ಮಧ್ಯದಲ್ಲೇ ನಿಂತ ಪರಿಣಾಮ ಕಾಮಗಾರಿಗಾಗಿ ಕಿತ್ತುಹಾಕಿದ್ದ ರಸ್ತೆಯನ್ನು ದುರಸ್ತಿ ಪಡಿಸದಿರುವವುದರಿಂದ ಸಂಚಾರಕ್ಕೆ ಹರಸಾಹಸ ಪಡಬೇಕಾಗಿದೆ. ಇದರಿಂದ ರಸ್ತೆಯಲ್ಲಿ ಹೆಜ್ಜೆಹೆಜ್ಜೆಗೂ ಗುಂಡಿ ಬಿದ್ದು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳು ನಿಂತು ಹೋಗಿವೆ.
ಕೇವಲ 24 ಕಿ.ಮೀ. ಕ್ರಮಿಸಲು 1.30 ಗಂಟೆ ಸಮಯ ಮತ್ತು ಶ್ರಮ ಎರಡನ್ನು ತಪ್ಪಿಸಲು ವಾಹನಗಳು ಬದಲಿ ಮಾರ್ಗ ಅಂದರೆ ಕೆ.ಬಿ.ಕ್ರಾಸ್ ಮಾರ್ಗವಾಗಿ ತಿಪಟೂರಿಗೆ ಹೋಗುತ್ತಿವೆ. ಇದರಿಂದ ಈ ಭಾಗದಲ್ಲಿ ತಿಪಟೂರಿಗೆ ಹೋಗುವ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯವಿಲ್ಲದಂತಾಗಿದ್ದು, ಇದಕ್ಕೆ ಕಾರಣ ಹದಗೆಟ್ಟ ರಸ್ತೆ. ಈಗಾಗಲೇ ರಸ್ತೆ ಕಾಮಗಾರಿ ಪ್ರಾರಂಭವಾಗಿ ವರ್ಷಗಟ್ಟಲೆ ಸಮಯ ಕಳೆದಿದ್ದು, ಗುತ್ತಿಗೆದಾರರು ಸದ್ಯ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವ ಸ್ಥಿತಿಯಲ್ಲಿಲ್ಲದ ಕಾರಣ ಸದರಿ ಮಾರ್ಗದ ಜನರಿಗೆ ಇನ್ನು ಈ ಕಷ್ಟದಿಂದ ಪಾರಾಗುವ ಸೂಚನೆಗಳು ಕಂಡುಬರುತ್ತಿಲ್ಲ.
ಕಲಿಕಾ ಹಬ್ಬ,ಕಲಿಕೋತ್ಸವ
ಕೊರಟಗೆರೆ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಬೆಯನ್ನು ಹೊರ ತರಲು ಪಠ್ಯ ಪುಸ್ತಕದಲ್ಲಿರುವ ವಿಷಯವನ್ನೇ ಪಠ್ಯೇತರ ಚಟುವಟಿಕೆಗಳಲ್ಲಿ ಅಳವಡಿಸಿ ಪ್ರತಿಭಾ ಕಾರಂಜಿ, ಕ್ರೀಡೋತ್ಸವ ಹಾಗೂ ಕಲಿಕೋತ್ಸವ ಮೂಲಕ ರೂಪಿಸಲಾಗಿದೆ ಎಂದು ಉಪನಿರ್ದೇಶಕ ಕಚೇರಿಯ ವಿಷಯ ಪರಿವೀಕ್ಷಕ ವೇದಮೂರ್ತಿ ತಿಳಿಸಿದರು. ಅವರು ಪಟ್ಟಣದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಕಸಬಾ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕಲಿಕಾ ಹಬ್ಬ ಕಲಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯ ಜೋತೆಗೆ ಗ್ರಾಮೀಣ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಹೆಚ್ಚಿನ ಆಸಕ್ತಿಯಲ್ಲಿದ್ದು ಮಕ್ಕಳಲ್ಲಿ ಅಡಗಿರುವ ಕೆಲೆಯನ್ನು ಗುರುತಿಸುವಂತಹ ಕಾರ್ಯಕ್ರಮ ನಡೆಯುತ್ತಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

