ಬಿಎಸ್ವೈ ಕುರಿತು ಜಿಎಸ್ಬಿ ಹಗುರ ಮಾತನಾಡದಿರಲಿ
ಕನ್ನಡಪ್ರಭ ವಾರ್ತೆ, ತಿಪಟೂರು.ಡಿ.30
ರಾಜಕೀಯವಾಗಿ ಮೂಲೆಗುಂಪಾಗಿದ್ದ ಸಂಸದ ಜಿ.ಎಸ್.ಬಸವರಾಜು ಅವರನ್ನು ಬಿಜೆಪಿಗೆ ಕರೆತಂದು ಸಂಸದರನ್ನಾಗಿ ಮಾಡಿದ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಸಂಸದರ ನಡವಳಿಕೆಯನ್ನು ಖಂಡಿಸುತ್ತೇವೆಂದು ಕೆಜೆಪಿ ಮುಖಂಡ ಲೋಕೇಶ್ವರ ತಿಳಿಸಿದರು.
ಪಟ್ಟಣದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಸ್ವೈ ಎಂದೂ ತುಮಕೂರಿನಿಂದ ಸ್ಪರ್ಧಿಸುವುದಾಗಿ ಹೇಳಿಲ್ಲ. ಸ್ಪರ್ಧಿಸಿದರೂ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಅದನ್ನು ಸ್ವಾಗತಿಸಬೇಕು. ಅದನ್ನು ಬಿಟ್ಟು ಅವರ ವಿರುದ್ಧವೇ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿರುವುದು ಜಿ.ಎಸ್.ಬಿ ಅವರ ನೈತಿಕ ಅಧಃಪತನ ತೋರಿಸುತ್ತದೆ. ಬಿಜೆಪಿಗೆ ಜಿ.ಎಸ್. ಬಸವರಾಜು ಬಂದಾಗ ಯಾರೂ ಅವರ ಹಿಂದೆ ಬರಲಿಲ್ಲ. ಈಗ ಹೋಗುವಾಗಲೂ ಯಾರೂ ಹೋಗುವುದಿಲ್ಲ. ಒಂದು ರಾಷ್ಟ್ರಮಟ್ಟದ ಪಕ್ಷದ ಸಾಮಾನ್ಯ ಕಾರ್ಯಕರ್ತನಿಂದ ರಾಷ್ಟ್ರಮಟ್ಟದ ನಾಯಕರವರೆಗೆ ಬಿಎಸ್ವೈ ಆಗಮನವನ್ನು ಕಾತುರದಿಂದ ನಿರೀಕ್ಷಿಸುತ್ತಿದ್ದು, ಯಡಿಯೂರಪ್ಪರವರ ಬಗ್ಗೆ ಸಂಸದರು ಈ ರೀತಿ ಮಾತನಾಡಬಾರದಿತ್ತು ಎಂದರು.
ಶೋಭಾ ಉತ್ತಮ ಕಾರ್ಯ: ಇತ್ತೀಚಿನ ರೈತ ಸಮಾವೇಶದಲ್ಲಿ ಸ್ಥಳೀಯ ಶಾಸಕರು ವಿದ್ಯುತ್ ಸಮಸ್ಯೆಗೆ ಶೋಭಾ ಕರಂದ್ಲಾಜೆ ಕಾರಣ ಎಂದು ಆಪಾದಿಸಿರುವುದಕ್ಕೆ ಪ್ರತಿಕ್ರಿಯಿಸಿದ ಲೋಕೇಶ್ವರ ಸ್ವಾತಂತ್ರ್ಯಾ ನಂತರ ಬಂದ ಯಾವುದೇ ಕಾಂಗ್ರೆಸ್ ಸರ್ಕಾರವೂ ವಿದ್ಯುತ್ ಉತ್ಪಾದನೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಿಲ್ಲ. ಅಂತಹದರಲ್ಲಿ ಶೋಭಾ ಅವರು ಅಧಿಕಾರ ಹಿಡಿದ ತಕ್ಷಣವೇ ಛತ್ತೀಸ್ಘಡದಲ್ಲಿ ವಿದ್ಯುತ್ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡು, ರಾಜ್ಯದಲ್ಲೂ ವಿದ್ಯುತ್ ಉತ್ಪಾದನೆಗೆ ತಯಾರಿ ನಡೆಸಿದ ಅವರು ಸಚಿವ ಸ್ಥಾನ ತ್ಯಜಿಸಿದ ತಕ್ಷಣದಿಂದಲೇ ವಿದ್ಯುತ್ ತೊಂದರೆ ಪ್ರಾರಂಭವಾಯಿತು ಎಂದರು.
ಬರಪಟ್ಟಿಗೆ ಸೇರಿಸಲು ಆಗ್ರಹ: ತಿಪಟೂರು ತಾಲೂಕಿಗೆ ಮಳೆ ಇಲ್ಲದೆ ಬರಪೀಡಿತವಾಗಿದ್ದು, ರೈತರು ಆತಂಕದ ಕ್ಷಣಗಳಲ್ಲಿ ಬದುಕು ಸಾಗಿಸುವಂತಾಗಿದ್ದು ಶಾಸಕರು ಬರದ ಸ್ಪಷ್ಟ ಮಾಹಿತಿಯನ್ನು ಈಗಲಾದರೂ ಸರ್ಕಾರಕ್ಕೆ ಸಲ್ಲಿಸಿ ಬರಪೀಡಿತ ಪಟ್ಟಿಗೆ ತಿಪಟೂರನ್ನು ಸೇರ್ಪಡೆ ಮಾಡಲು ಒತ್ತಾಯಿಸಿದರು. ತಾಲೂಕಿನ 18 ಕೆರೆಗಳಿಗೆ ಹೇಮಾವತಿ ನೀರು ಹರಿಸಿರುವುದಾಗಿ ಶಾಸಕರು ಹೇಳಿಕೊಳ್ಳುತ್ತಾರೆ. ಆದರೆ ಮೂರನೇ ಒಂದು ಭಾಗದ ಕೆರೆಗಳಿಗೂ ನೀರು ಹರಿದಿಲ್ಲ.ತಕ್ಷಣವೇ ಹೆಚ್ಚಿನ ಸಾಮರ್ಥ್ಯದ ಪಂಪ್ ಅಳವಡಿಸಿ ಕೆರೆಗಳನ್ನು ತುಂಬಿಸಲು ಮುಂದಾಗಲಿ ಎಂದರು.
ಪೊಲೀಸ್ ವೈಫಲ್ಯ: ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಮತ್ತು ಮಟ್ಕಾದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಸರಗಳ್ಳತನಗಳಿಗಂತೂ ಕೊನೆಯೇ ಇಲ್ಲ. ಪೊಲೀಸ್ ಇಲಾಖೆಯಿಂದ ಸಾರ್ವಜನಿಕ ಸಂಪರ್ಕ ಸಭೆ ನಡೆದಿಲ್ಲ. ತಕ್ಷಣವೇ ಕುಂದುಕೊರತೆ ಸಭೆ ಕರೆದರೆ ಸಾಮಾನ್ಯ ಜನರ ತೊಂದರೆಗಳನ್ನು ತಿಳಿದು ಪರಿಹರಿಸಬಹುದು ಎಂದರು.
ಪರಿಹಾರಕ್ಕೆ ಒತ್ತಾಯ: ತಾಲೂಕಿನ ರೈತರಿಗೆ ತೆಂಗು ಪರಿಹಾರ ಇನ್ನೂ ಸಿಕ್ಕಿಲ್ಲ. ರಸ್ತೆ, ನೀರು, ಚರಂಡಿ, ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸುವ ಕಡೆ ಶಾಸಕರು ಮತ್ತು ಜಿಲ್ಲಾಡಳಿತ ಗಮನ ನೀಡದಿದ್ದರೆ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಿಲಾಮಂತ್ರಿ ಜಯಚಂದ್ರರವರಂತೂ ಕೇವಲ ಒಂದೆರಡು ತಾಲೂಕುಗಳಿಗೆ ಮಾತ್ರ ಜಿಲ್ಲಾಮಂತ್ರಿಯಂತೆ ಕೆಲಸ ಮಾಡುತ್ತಿದ್ದು ತಿಪಟೂರಿನಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳು ಹಾಗೂ ತೆಂಗು ಪರಿಹಾರದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆ ಹೇಳತೀರದಾಗಿದ್ದು ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಮಹಿಳಾ ವಕೀಲರ ನೇಮಿಸಿ: ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಾಂತ್ವನ ಕೇಂದ್ರಗಳು ನೊಂದವರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರ ಪುನರ್ ಪರಿಶೀಲನೆ ಆಗಬೇಕಿದೆ. ಅಲ್ಲಿ ಸಮಸ್ಯೆ ಹೇಳಿಕೊಂಡು ಬರುವವರು ಮಹಿಳೆಯರಾದ್ದರಿಂದ ಇಲಾಖೆ ಕಡ್ಡಾಯವಾಗಿ ಒಬ್ಬರು ಮಹಿಳಾ ಅಡ್ವೋಕೇಟ್ರನ್ನು ನೇಮಿಸಬೇಕೆಂದು ಲೋಕೇಶ್ವರ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಾಧ್ಯಕ್ಷ ನಾಜೀರ್ ಖಾನ್, ನಗರಸಭಾ ಸದಸ್ಯರಾದ ನಿಜಗುಣ, ಗಂಗಮ್ಮ, ಗ್ರಾ.ಪಂ.ಮಾಜಿ ಅಧ್ಯಕ್ಷ ರೇಣು, ತೀರ್ಥಕುಮಾರ್ ಮತ್ತಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

