ಮತಾಂತರ ತಡೆಯಲು ಅಸ್ಪೃಶ್ಯತೆ ಅಳಿಸಿ: ಮುನಿರಾಜು
ಚಿಕ್ಕನಾಯಕನಹಳ್ಳಿ: ದಲಿತರ ಮತ್ತು ಸಾರ್ವಜನಿಕರ ರಕ್ಷಣೆಗಾಗಿ ಪೊಲೀಸ್ಠಾಣೆ 24್ಢ7 ಸಮಯ ತೆರೆದಿರುತ್ತದೆ ಎಂದು ಆರಕ್ಷಕ ಉಪನಿರೀಕ್ಷಕರಾದ ಎಸ್. ಮುನಿರಾಜು ನುಡಿದರು.
ಸೋಮವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರೆದಿದ್ದ ದಲಿತ ಹಿತರಕ್ಷಣಾ ಸಭೆಯಲ್ಲಿ ಮಾತನಾಡುತ್ತಿದ್ದರು. ಹಿಂದೆ ಕೈಗೊಂಡ ತೀರ್ಮಾನದಂತೆ ಪ್ರತಿ ಭಾನುವಾರ ಹಿತರಕ್ಷಣಾ ಸಭೆ ಕರೆಯಲು ನಿರ್ಧರಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಸಭೆ ಕರೆಯಲಾಗದ್ದಕ್ಕೆ ಕ್ಷಮೆಯಿರಲಿ ಎಂದರು. ಕಾನೂನು ಸುವ್ಯಸ್ಥೆ ಬಗ್ಗೆ ನಿಮ್ಮಿಂದ ನಮಗೆ ಸಹಾರ ಸಿಕ್ಕಲ್ಲಿ ಯಾವುದೇ ಸಮಸ್ಯೆಯಿರಲಿ ಕ್ಷಣಮಾತ್ರದಲ್ಲಿ ಸ್ಪಂದಿಸುತ್ತೇವೆ. ನಮ್ಮ ಠಾಣೆ ನಿರಂತರವಾಗಿ ದಿನದ 24 ಗಂಟೆಯು ಕರ್ತವ್ಯ ನಿರ್ವಹಿಸುತ್ತಿರುತ್ತದೆ. ಸಮಾಜಘಾತುಕ ವ್ಯಕ್ತಿಗಳ ಮತ್ತು ಶಕ್ತಿಗಳ ಬಗ್ಗೆ ನೀವು ರಹಸ್ಯವಾಗಿ ಮಾಹಿತಿ ನೀಡಬಹುದು. ಒಂದು ವೇಳೆ ನಿಮಗೆ ಬಹಿರಂಗವಾಗಿ ಮಾಹಿತಿ ನೀಡಲು ಭಯವಿದ್ದರೆ ನಿಮಗೆ ನಂಬಿಕೆ ಇರುವ ಸಿಬ್ಬಂದಿಗೆ ಮಾಹಿತಿ ನೀಡಿ ಎಂದರು.
ಹಿರಿಯ ದಲಿತ ಮುಖಂಡರಾದ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿ ಇಂದಿನ ಸಭೆಗೆ ಯಾವುದೇ ನಿದಿಷ್ಟ ವಿಷಯವಿಲ್ಲವೆ ಎಂದು ಪ್ರಶ್ನಿಸಿದರು. ಮಾನವ ಸಂಪನ್ಮೂಲ ಸಮಾಜದ ಎಲ್ಲಾ ಜನರಿಗೂ ಸಮಾನವಾಗಿ ಹಂಚಿಕೆಯಾಗಬೇಕೆಂಬುದು ಸಂವಿಧಾನದ ಆಶಯ. ಆದರೆ ತಾಲೂಕಿನಲ್ಲಿ ಕೆಲವು ದೇವಾಲಯಗಳಲ್ಲಿ ಹರಿಜರಿಗೆ ಪ್ರವೇಶ ನಿಷಿದ್ಧವಾಗಿದೆ. ಆಡಳಿತ ಯಂತ್ರ ಮತ್ತು ಸಾರ್ವಜನಿಕರು ಸೇರಿ ನಮ್ಮನ್ನು ದೂರವಿಟ್ಟಿದ್ದೀರಿ.ನಮ್ಮನ್ನು ಮನುಷ್ಯರಂತೆ ಕಾಣಿ ಎಂಬುದೇ ನಮ್ಮ ಬೇಡಿಕೆ. ಅಸ್ಪೃಶ್ಯತೆ ಆಚರಣೆಯಿಂದಾಗಿ ನೊಂದ ಕೆಲವು ದಲಿತರು ಅಮಿಷಕ್ಕೊಳಗಾಗಿ ಮತಾಂತರವಾಗುತ್ತಿದ್ದಾರೆ. ಇಂತಹ ದೌರ್ಬಲ್ಯವನ್ನು ಉಪಯೋಗಿಸಿಕೊಂಡು 25 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಇದೇ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹ್ಯಾರಿ ಎಂಬ ಕ್ರೈಸ್ತ ಧರ್ಮೀಯ ತಾಲೂಕಿನಲ್ಲಿ ವ್ಯಾಪಕವಾಗಿ ಹರಿಜನರನ್ನೇ ಮತಾಂತರ ಮಾಡುತ್ತಿದ್ದಾನೆ. ಇದನ್ನು ತಡೆಯಲು ಇರುವ ಮಾರ್ಗ ಅಸ್ಪೃಶ್ಯತೆ ನಿವಾರಣೆಯೊಂದೇ ಎಂದರು. ಮತ್ತೋರ್ವ ದಲಿತ ಮುಖಂಡ ಲಿಂಗದೇವರು ಮಾತನಾಡಿ ತಾಲೂಕಿನಲ್ಲಿರುವ ಮುಜುರಾಯಿ ದೇವಾಲಯಗಳ ಪಟ್ಟಿ ತಯಾರಿಸಿ ಅವುಗಳಲ್ಲಿ ದಲಿತರಿಗೆ ಪ್ರವೇಶ ಕಲ್ಪಿಸುವ ಬಗ್ಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಬಗೆಹರಿಸೋಣ: ಇದಕ್ಕೆ ಪ್ರತಿಕ್ರಿಯಿಸಿದ ಪಿಎಸ್ಐ ಅವರು ಮುಂದಿನ ತಾಲೂಕು ತಹಸೀಲ್ದಾರ್ ಅವರೇ ಮುಜುರಾಯಿ ಅಧಿಕಾರಿಗಳಾಗಿರುವುದರಿಂದ ಸದರಿ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಮಂಡಿಸಲಾಗುವುದು. ಕೈಗೆ ಕೈ ಸೇರಿದರೆ ಚಪ್ಪಾಳೆ, ಜನಜಂಗುಳಿ ಸೇರಿದರೆ ಜಾತ್ರೆ ಎಂಬಂತೆ ಹಿಂದುಗಳಲ್ಲಿ ಒಂದು ಭಾಗವೇ ಆಗಿರುವ ದಲಿತರನ್ನು ಹೊರಗಿಡುವುದು ಸಮ್ಮತವಲ್ಲ ಎಂದರು. ಇದನ್ನು ಸರ್ವಸಮ್ಮತವಾಗಿ ಮತ್ತು ಸೌಹಾರ್ದಯುತವಾಗಿ ಬಗೆಹರಿಸೋಣ ಎಂದರು.
ಕಾರ್ಯವೈಖರಿಗೆ ದೂರು: ಸಭೆಯಲ್ಲಿ ಕಂದಾಯ ಇಲಾಖೆಯ ಕಾರ್ಯವೈಖರಿ ಬಗ್ಗೆ ದೂರುಗಳು ಬಂದವು. ಕಂದಾಯ ಇಲಾಖೆ ನಿಷ್ಕ್ರಿಯವಾಗಿದೆ. ರೈತರ ಜಮೀನಿನ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ, ರೈತರನ್ನು ಸಿಕ್ಕಿಸಿ ಜೀವ ಹಿಂಡುತ್ತಿದ್ದಾರೆ ಎಂದು ಆರೋಪಿಸಿದರು. ಆಗ ಮಾತನಾಡಿದ ಪಿಎಸ್ಐ ಅವರು ನಮ್ಮ ಕುಟುಂಬದ ವಿಭಾಗ ಪತ್ರದ ಪ್ರಕಾರ ಖಾತೆ ಮಾಡಲು ಅರ್ಜಿಸಲ್ಲಿದರೆ 2-00 ಎಕರೆ ವಿಸ್ತೀರ್ಣದ ಬದಲಿಗೆ ಕೇವಲ 19 ಗುಂಟೆ ಜಮೀನನ್ನು ನನ್ನ ಹೆಸರಿಗೆ ಖಾತೆ ಮಾಡಿದ್ದಾರೆ. ಕೇಳಿದರೆ ನಿಮಗೆ ಬರುವ ಜಮೀನು ಇಷ್ಟೇ ಎಂದು ಉತ್ತರಿಸುತ್ತಾರೆ, ಕಂದಾಯ ಇಲಾಖೆಯ ಕಾರ್ಯವೈಖರಿಗೆ ಇದು ಕೈಗನ್ನಡಿ, ನಮ್ಮಂತಹ ವಿದ್ಯಾವಂತರಿಗೆ ಈ ಸ್ಥಿತಿಯಾದರೆ ಇನ್ನು ಗ್ರಾಮೀಣ ಜನರ ಪರಿಸ್ಥಿತಿಯೇನು ಎಂದರು. ದೇವಾಲಯ ಪ್ರವೇಶ ಮತ್ತು ಕಂದಾಯ ದಾಖಲಾತಿಗಳ ನಿರ್ವಹಣೆ ಬಗ್ಗೆ ತಹಸೀಲ್ದಾರ್ ಸಭೆಯಲ್ಲಿ ಚರ್ಚಿಸೋಣ.ಈ ಬಗ್ಗೆ ಜಿಲ್ಲಾಧಿಕಾರಿಗಳಿಗು ಪತ್ರ ಬರೆಯುವುದಾಗಿ ಅವರು ಉತ್ತರಿಸಿದರು.
ಸಭೆಯಲ್ಲಿ ಮಲ್ಲಿಕಾರ್ಜುನ, ಎಪಿಎಂಸಿ ಸದಸ್ಯ ಡಿ.ಆರ್.ರುದ್ರೇಶ್, ನಾರಾಯಣ್ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

