ತುಮಕೂರು

ಹೇಮಾವತಿಯಿಂದ ಹೊನ್ನುಡಿಕೆ ಕೆರೆ ಕೋಡಿ

Published On :

ಕ.ಪ್ರ. ವಾರ್ತೆ    ತುಮಕೂರು    ಡಿ. 30
ಹೆಬ್ಬೂರು ಗೂಳೂರು ಏತ ನೀರಾವರಿ ಯೋಜನೆಯಿಂದ 14 ವರ್ಷದ ನಂತರ ಹೊನ್ನುಡಿಕೆ ಕೆರೆ ಕೋಡಿ ಬಿದ್ದಿದೆ.
ಈ ಸಂಬಂಧ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹೊನ್ನುಡಿಕೆ ಗ್ರಾಮದಲ್ಲಿ ಶಾಸಕ ಬಿ ಸುರೇಶ್ ಗೌಡರಿಗೆ ಹೊನ್ನಡುಕೆ ಗ್ರಾಮಸ್ಥರು ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ  ಸುರೇಶ್ಗೌಡ ಸುಮಾರು 14 ವರ್ಷಗಳಿಂದ ಹೊನ್ನುಡುಕೆ ಕೆರೆಯಲ್ಲಿ 1 ಡ್ರಾಪ್ ನೀರು ಇರಲಿಲ್ಲ.  ಇದರಿಂದಾಗಿ ಅಂತರ್ಜಲ ಮಟ್ಟ 1 ಸಾವಿರ ಅಡಿ ಆಳಕ್ಕೆ ಹೋಗಿದ್ದೂ ಅಲ್ಲದೆ ರೈತರು  ಜಮೀನು ಮಾರಾಟ ಮಾಡಿಕೊಂಡು ವಲಸೆ ಹೋಗುತ್ತಿರುವುದನ್ನು ಕಣ್ಣಾರೆ ಕಂಡಿದ್ದೇನೆ. ಈ ಹಿನ್ನೆಲೆಯಲ್ಲಿ ಹೆಬ್ಬೂರು ಗೂಳೂರು ಏತ ನೀರಾವರಿ ಯೋಜನೆಯಿಂದ ಹೊನ್ನುಡಿಕೆ ಕೆರೆಗೆ ಸತತವಾಗಿ ನೀರು ಹರಿಸಿ ಕೆರೆ ತುಂಬುವಂತೆ ಮಾಡಲಾಗಿದ್ದು ಇಂದು ಕೋಡಿ ಬಿದ್ದಿರುವುದು ಇತಿಹಾಸವೇ ಸರಿ ಎಂದರು.
ಕಾಮಗಾರಿ ಪೂರ್ಣ: ಈ ಭಾಗದಲ್ಲಿ ವೀರನಾಯಕನಹಳ್ಳಿ, ಹುಳ್ಳೇನಹಳ್ಳಿ, ಹೊಳಕಲ್ಲು, ಮುಳುಕುಂಟೆ, ಸಾಸಲು ದೇವರ ಅಮಾನಿಕೆರೆಗಳಿಗೆ ಹೇಮಾವತಿ ನೀರು ಹರಿಸಲಾಗಿದೆ ಎಂದು ಶಾಸಕರು ತಿಳಿಸಿದರು. ಹೊನ್ನುಡಿಕೆ ಕೆರೆಯ ನೀರನ್ನು  ಹೊನ್ನುಡಿಕೆ ಹಾಗೂ ಸುತ್ತ ಮುತ್ತ ಬರುವ 27 ಗ್ರಾಮಗಳಿಗೆ 6.99 ಕೋಟಿ ರು.ಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಶುದ್ಧ ಹೇಮಾವತಿ ನೀರು ಒದಗಿಸುವ ಯೋಜನೆ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದ ಶಾಸಕರು ಪ್ಲೋರೈಡ್ ನೈಟ್ರೇಟ್ ಮುಕ್ತ ನೀರು ಒದಗಿಸುವ ಯೋಜನೆ ಇದಾಗಿದ್ದು ಜನವರಿ ಒಳಗೆ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಸುರೇಶ್ ಗೌಡರು ಇದೇ ಸಂದರ್ಭದಲ್ಲಿ ತಿಳಿಸಿದರು.
ಅಭಿವೃದ್ಧಿ: ಹೊನ್ನುಡಿಕೆ ಗ್ರಾಮದಲ್ಲಿ ಸುಸಜ್ಜಿತ ಸಿಮೆಂಟ್ ರಸ್ತೆ ಸಿಮೆಂಟ್ ಮೋರಿ ನಿರ್ಮಾಣ ಮಾಡಲಾಗಿದ್ದು ಸಾರ್ವಜನಿಕರು  ಕಸ ಕಡ್ಡಿಯನ್ನು ಚರಂಡಿಗೆ ಹಾಕದೆ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಿದರು.
ಇತಿಹಾಸ ಪ್ರಸಿದ್ದ ಜನಾರ್ದನ ಸ್ವಾಮಿ ದೇವಸ್ಥಾನ ಅಭಿವೃದ್ಧಿಯನ್ನು ಅಂದಾಜು 32 ಲಕ್ಷ ರು.ಗಳಲ್ಲಿ ಅಭಿವೃದ್ಧಿ ಪಡಿಸುತ್ತಿದ್ದು ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ನವರು ದೇವಸ್ಥಾನದ ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದರು.
ಎಚ್ಚರಿಕೆಯಿಂದ ಮತ ನೀಡಿ: ಈ ದೇಶದ ಬಗ್ಗೆ ಈ ನಾಡಿನ ಬಗ್ಗೆ ಕಾಳಜಿ ಇರುವ ಈ ದೇಶ ಕಟ್ಟುವ ವ್ಯಕ್ತಿಗೆ ಮತದಾರ ಪ್ರಭುಗಳು ತಮ್ಮ ಅಮೂಲ್ಯವಾದ ಮತ ನೀಡಿದಾಗ ಮತದಾನಕ್ಕೆ ಬೆಲೆ ಬರುತ್ತದೆ ಎಂದು ತಿಳಿಸಿ ನಾವು ಎಲ್ಲಿಯವರೆಗೆ ನಮ್ಮ ಮತವನ್ನು ಹೆಂಡ ಹಣಕ್ಕೆ ಮಾರುತ್ತೇವೆಯೋ ಅಲ್ಲಿಯವರೆಗೆ ಈ ಪ್ರಜಾಪ್ರಭುತ್ವ ಸುಸ್ಥಿರತೆ ಕಾಣುವುದಿಲ್ಲ ಎಂದು ಶಾಸಕರು ತಿಳಿಸಿದರು.
ಯಾವುದೇ ಒಂದು ಪಕ್ಷವಾಗಲೀ ಒಂದು ಸಂಸ್ಥೆಯಾಗಲೀ ಜಾತಿ ವ್ಯವಸ್ಥೆಯಲ್ಲಿ ಸಿಲುಕಿದೆಯೋ ಅದು ಇಂದಲ್ಲ ನಾಳೆ ನಶಿಸಿ ಹೋಗಲಿದೆ ಎಂದು ಭವಿಷ್ಯ ನುಡಿದರು. ಜಾತಿ ಪದ್ಧತಿ ಈ ದೇಶದ ಅತೀ ದೊಡ್ಡ ದುರಂತ ಎಂದು ವಿಷಾದಿಸಿದರು.
ಶಿವಗಂಗಾ ಕ್ಷೇತ್ರದ ಶಾಂತವೀರ ಮಹಾಸ್ವಾಮೀಜಿ ಮಾತನಾಡಿ ತಾಯಿ ಹೊನ್ನಾದೇವಿಗೆ ಹೊನ್ನಿನಕುಡುಕೆಯನ್ನು ಹೊದಿಸಿದ ಇತಿಹಾಸ ಇರುವ ಗ್ರಾಮ ಹೊನ್ನುಡುಕೆಯಾಗಿದ್ದು ಈಗ ಇತಿಹಾಸ ನೆನಪಿಸುವಂತ ಸ್ಥಿತಿ ನಿರ್ಮಾಣವಾಗಲು ಕಾರಣೀಭೂತರಾದ ಈ ಕ್ಷೇತ್ರದ ಶಾಸಕರು ಆದ ಸುರೇಶ್ಗೌಡರು ಭವಿಷ್ಯದಲ್ಲಿ ನೀರಾವರಿ ಮಂತ್ರಿಗಳಾಗಿ ಈ ನಾಡಿಗೆಲ್ಲ ಇಂತಹ ಯೋಜನೆಗಳನ್ನು ಜಾರಿಗೆ ತಂದು ರೈತರ ಸಮಸ್ಯೆಗಳನ್ನು ದೂರ ಮಾಡುವಂತವರಾಗಲಿ ಎಂದು ಆಶೀರ್ವದಿಸಿದರು.  
ಗ್ರಾಮಪಂಚಾಯ್ತಿ ಅಧ್ಯಕ್ಷ ಶಿವರಾಜು, ತಾ ಪಂ ಸದಸ್ಯೆ ಭಾರತೀ ವಿಶ್ವನಾಥ, ನೀಲಕಂಠಪ್ಪ ಎಪಿಎಂಸಿ ಮಾಜಿ ನಿರ್ದೇಶಕ ಆನಂದಪ್ಪ, ಯೋಗೀಶ್, ಬಿಜೆಪಿ ಸದಸ್ಯರಾದ ಸಿದ್ದೇಗೌಡರು ಸಾಸಲು ಮೂರ್ತಿ  ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.