ನರೇಗಾ ಕಾಮಗಾರಿ ವಿಳಂಬ ಸಲ್ಲದು
ಕನ್ನಡಪ್ರಭ ವಾರ್ತೆ, ತುಮಕೂರು, ಡಿ.30
ನರೇಗಾ ಕಾಮಗಾರಿಗಳ ವಿಳಂಬ ಸಲ್ಲದು ಎಂಬ ಎಚ್ಚರಿಕೆಯನ್ನು ಜಿ.ಪಂ. ಸಿಇಓ ಗೋವಿಂದರಾಜು ನೀಡಿದರು. ಅವರು ಜಿಲ್ಲಾ ಪಂಚಾಯಿತಿ ಸಭಾಗಂಣದಲ್ಲಿ ಸೋಮವಾರ ಜಿ.ಪಂ. ಅಧ್ಯಕ್ಷೆ ಸಾಕಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಾ ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಉದ್ಯೋಗ ನೀಡುವ ಎಂಎನ್ಆರ್ಇಜಿಎ ಕ್ರಿಯಾ ಯೋಜನೆಯ ಅನುಮೋದನೆ ಸಿಕ್ಕಿಲ್ಲ ಎಂಬ ನೆಪ ಹೇಳಿ ನರೇಗಾ ಕಾಮಗಾರಿಗಳ ವಿಳಂಬ ಮಾಡಬಾರದು ಅವರು ತಾಕೀತು ಮಾಡಿದರು.
ಚೇಳೂರು ಕ್ಷೇತ್ರದ ಜಿ.ಪಂ. ಸದಸ್ಯ ಚಂದ್ರಶೇಖರ್, ರಾಜಕೀಯ ಮುಖಂಡರು ಹಾಗೂ ಪ್ರಭಾವಿಗಳು ಮಾತ್ರ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚು ಸೌಲಭ್ಯ ಪಡೆಯುತ್ತಿದ್ದಾರೆ. ಗ್ರಾ.ಪಂ. ಅಧಿಕಾರಿಗಳನ್ನು ಕೇಳಿದರೆ ಈ ವರ್ಷದ ಪಟ್ಟಿ ತಯಾರಿಸಿ ತಾಲೂಕು ಪಂಚಾಯಿತಿಗೆ ಕಳುಹಿಸಲಾಗಿದೆ ಎಂದು ಹಾರಿಕೆಯ ಉತ್ತರ ನೀಡುತ್ತಾರೆ ಗ್ರಾ.ಪಂ.ಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿದರು.
ಔಷಧದ ಕೊರತೆಯಿಲ್ಲ: ಕಾಲುಬಾಯಿ ರೋಗಕ್ಕೆ ಸಂಬಂಧಿಸಿದಂತೆ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಪರಮೇಶಪ್ಪ, ಜಿಲ್ಲೆಯಲ್ಲಿ ಕಾಲುಬಾಯಿ ರೋಗ ನಿಯಂತ್ರಣವಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 7 ಲಕ್ಷ ಜಾನುವಾರುಗಳಿದ್ದು, ಇವುಗಳಲ್ಲಿ 3322 ಜಾನುವಾರುಗಳಲ್ಲಿ ಕಾಲುಬಾಯಿ ರೋಗ ಕಾಣಿಸಿಕೊಂಡಿದ್ದು, ಇದರಲ್ಲಿ 487 ಜಾನುವಾರುಗಳು ಸಾವನ್ನಪ್ಪಿವೆ. 385 ಜಾನುವಾರುಗಳ ಮಾಲೀಕರಿಗೆ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಇದಕ್ಕೆ ಸುಮಾರು 10 ಲಕ್ಷ ಹಣದ ಅವಶ್ಯಕೆಯಿದೆ. ಕೇಂದ್ರ ಸರ್ಕಾರದಿಂದ ಸುಮಾರು 10 ಕೋಟಿ ಅನುದಾನ ನಿರೀಕ್ಷೆ ಮಾಡಲಾಗಿದೆ ಎಂದರು.
ಶೇ.3ರ ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸಿ: ಜಿ.ಪಂ. ಸದಸ್ಯ ಅಂಜಿನಪ್ಪ ಮಾತನಾಡಿ ಶೇ.3 ರಷ್ಟು ಅನುದಾನವನ್ನು ಅಂಗವಿಕಲರ ಕಲ್ಯಾಣಕ್ಕೆ ಬಳಸಬೇಕು ಎಂಬ ನಿಯಮವಿದ್ದರೂ ಕ್ರಿಯಾ ಯೋಜನೆಯನ್ನೇ ಸಿದ್ದಪಡಿಸುತ್ತಿಲ್ಲ. ಪಾಗವಡ ತಾಲೂಕಿನಲ್ಲಿ ಎಲ್ಲ ಇಲಾಖೆಗಳ ಶೇ.3ರಷ್ಟು ಅನುದಾನವನ್ನು ಕ್ರೋಢೀಕರಿಸಿ ಕ್ರಿಯಾ ಯೋಜನೆ ಸಿದ್ಧ ಪಡಿಸಿ ಅಂಗವಿಕಲರಿಗೆ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಲಾಗಿದೆ.
ಹಾಗೆಯೇ ಅಂಗವಿಕಲರು ಎಂದರೆ ಮೂರು ಚಕ್ರದ ವಾಹನ, ಇತರೆ ಸೌಲಭ್ಯ ನೀಡುವುದು ಬಿಟ್ಟರೆ ಅವರ ಆರ್ಥಿಕ ಸಬಲೀಕರಣಕ್ಕೆ ಅಗತ್ಯವಾದ ಕ್ರೀಯಾ ಯೋಜನೆ ರೂಪಿಸುತ್ತಿಲ್ಲ ಎಂದು ಆರೋಪಿಸಿದರು. ಜಿ.ಪಂ.ಅಧ್ಯಕ್ಷರ ನಿಧಿಯ ಶೇ.3ರಷ್ಟು ಅನುದಾನಕ್ಕೆ ಕ್ರೀಯಾ ಯೋಜನೆಯನ್ನು ರೂಪಿಸಿಲ್ಲ. ಡಿಸೆಂಬರ್ ಕಳೆದರೂ ಒಂದು ರು. ಖರ್ಚಾಗಿಲ್ಲ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಇಓ ಗೋವಿಂದರಾಜು ಜಿ.ಪಂ.ನ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಎಷ್ಟು ಸಂಪನ್ಮೂಲ ಕ್ರೋಢೀಕರಣವಾಗುತ್ತದೆ ಎಂಬುದನ್ನು ನೋಡಿಕೊಂಡು ಆದಷ್ಟು ಬೇಗ ಕ್ರಿಯಾ ಯೋಜನೆ ರೂಪಿಸುವುದಾಗಿ ಭರವಸೆ ನೀಡಿದರು.
ಏನು ಕ್ರಮ ಕೈಗೊಂಡಿದ್ದೀರಾ: ಸದಸ್ಯೆ ರಾಧಾ ದೇವರಾಜು ಮಾತನಾಡಿ, ಕಳೆದ ಹಲವು ದಿನಗಳಿಂದ ತಮುರ ಎಲೆಕ್ಟ್ರೋನಿಕ್ಸ್ ಕಾರ್ಮಿಕರು ಮುಷ್ಕರ ನಡೆಸುತ್ತಿರುವ ಕಾರ್ಮಿಕರ ಸಮಸ್ಯೆಯ ಬಗ್ಗೆ ಗಮನ ಸೆಳೆದು ಕಾರ್ಮಿಕ ಮೂಲ ಸಮಸ್ಯೆ ಏನು, ಕಾರ್ಮಿಕರು ಮುಷ್ಕರ ನಡೆಸುತ್ತಿರುವ ಸಂದರ್ಭದಲ್ಲಿಯೇ ಕಾರ್ಖಾನೆಯ ಆಡಳಿತ ಮಂಡಲಿ ಬೇರೆ ಕಾರ್ಮಿಕರನ್ನು ಕರೆಸಿಕೊಂಡು ಕೆಲಸ ಮಾಡಿಸುತ್ತದೆ. ಅಧಿಕಾರಿಗಳು ಏನು ಕ್ರಮಕೈಗೊಂಡಿದ್ದಿರಾ ಎಂದು ಪ್ರಶ್ನಿಸಿದರು. ಸತ್ಯಾಗ್ರಹ, ಉಪವಾಸ ನಡೆಸುತ್ತಿದ್ದಾರೆ. ಒಂದು ವೇಳೆ ಸೂಕ್ತ ಕ್ರಮಕೈಗೊಂಡು ಕಾರ್ಮಿಕರಿಗೆ ನ್ಯಾಯ ಒದಗಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಸದಸ್ಯರು ಎಚ್ಚರಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಮಾತನಾಡಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. 100 ಕ್ಕೂ ಹೆಚ್ಚು ಕಾರ್ಮಿಕರಿರುವ ಕಾರ್ಖಾನೆಗಳಿಗೆ ಸಂಬಂಧಿಸಿದಂತೆ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಇಲ್ಲ. ಹಾಗಾಗಿ ಪರಿಶೀಲನೆ ನಡೆಸಿ ವರದಿಯನ್ನು ಉನ್ನತ ಅಧಿಕಾರಿಗಳಿಗೆ ರವಾನಿಸಲಾಗಿದೆ. ಇಂದು ನಿರ್ಧಾರ ಅಥವಾ ನಿರ್ದೇಶನ ಬರುವ ಸಾಧ್ಯತೆಯಿದ್ದು, ನಂತರ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದರು.
ಸಭೆಯಲ್ಲಿ ಜಿ.ಪಂ.ಅಧ್ಯಕ್ಷೆ ಸಾಕಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಹೆಚ್. ಹುಚ್ಚಯ್ಯ, ಜಗದೀಶ್, ಸೇರಿದಂತೆ ಜಿ.ಪಂ. ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

