ಹಳೆ ವರ್ಷಕ್ಕೆ ಬೈ, ಹೊಸ ವರ್ಷಕ್ಕೆ ಜೈ ಜೈ
ಉಗಮ ಶ್ರೀನಿವಾಸ್
ಕನ್ನಡಪ್ರಭ ವಾರ್ತೆ, ತುಮಕೂರು, ಡಿ.31
ಕಳೆದ ವರ್ಷ ಕಲ್ಪತರು ಜಿಲ್ಲೆಯಾದ ತುಮಕೂರಿಗೆ ಸೋಲು, ಗೆಲವಿನ ವರ್ಷ, ಸಿಹಿ ಕಹಿಗಳ ವರ್ಷ. ಕಳೆದ ವರ್ಷ ಎರಡು ಚುನಾವಣೆ ನಡೆದದ್ದು ವಿಶೇಷ. ಘಟಾನುಘಟಿಗಳೆಲ್ಲಾ ಸೋತು ಹೈರಾಣಾಗಿದ್ದು
ಕಳೆದ ವರ್ಷವೇ.
ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿರಾವಾಗಿದ್ದ ಕೆಪಿಸಿಸಿ ಅಧ್ಯಕ್ಷರೂ ಆಗಿದ್ದ ಡಾ. ಜಿ. ಪರಮೇಶ್ವರ್ ಅವರು ಕೊರಟಗೆರೆ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸೋಲನ್ನು ಅನುಭವಿಸುವಂತಾಯಿತು. ಹಾಗೆಯೇ ನಾಲ್ಕು ಬಾರಿ ಸತತವಾಗಿ ಶಾಸಕರಾಗಿ ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಸೊಗಡು ಶಿವಣ್ಣ ಕೂಡ ತುಮಕೂರು ವಿಧಾನಸಭಾ ಕ್ಷೇತ್ರದಿಂದ ಪರಾಭವಗೊಂಡರು. ಜಿ.ಪಂ. ಸದಸ್ಯರಾಗಿದ್ದ ಸುಧಾಕರ್ಲಾಲ್ ಅವರು ಪರಮೇಶ್ವರ್ ವಿರುದ್ಧ ಜಯಭೇರಿ ಬಾರಿಸಿ ರಾಜ್ಯ ಮಟ್ಟದಲ್ಲಿ ಗಮನ ಸೆಳೆದದ್ದು ಕೂಡ ಕಳೆದ ವರ್ಷವೇ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ 6, ಕಾಂಗ್ರೆಸ್ 4 ಹಾಗೂ ಬಿಜೆಪಿ 1 ಸ್ಥಾನಗಳನ್ನು ಗೆಲ್ಲುವಂತಾಯಿತು. 6 ಬಾರಿ ಶಾಸನಸಭೆಗೆ ಆಯ್ಕೆಯಾದ ಟಿ.ಬಿ. ಜಯಚಂದ್ರ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಕಾನೂನು ಸಚಿವರಾಗಿ ನೇಮಕಗೊಂಡರು.
ಕೆಜೆಪಿ ಉತ್ತಮ ಸಾಧನೆ
ಹಾಗೆಯೇ ತುಮಕೂರು ನಗರಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗಳಿಸಿತು. ಅದರ ಬೆನ್ನಲ್ಲೇ ಜೆಡಿಎಸ್ ಇದ್ದರೆ, ಬಿಜೆಪಿಯನ್ನು ಹಿಂದಿಕ್ಕಿ ಕೆಜೆಪಿ ಉತ್ತಮ ಸಾಧನೆ ಮಾಡಿತು. ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಗೀತಾ ರುದ್ರೇಶ್ ಅವರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಂಡು ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಯಿತು. ನಗರಸಭೆ ಅಧ್ಯಕ್ಷರಾಗಿ ನೇಮಕಗೊಂಡ ಬೆನ್ನಲ್ಲೇ ತುಮಕೂರು ನಗರಸಭೆ, ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿತು. ಹೀಗಾಗಿ ನಗರಸಭೆ ಅಧ್ಯಕ್ಷೆಯಾಗಿದ್ದ ಗೀತಾ ರುದ್ರೇಶ್ ಅವರಿಗೆ ಮೇಯರ್ ಭಾಗ್ಯ ಲಭಿಸಿದ್ದು ವಿಶೇಷ.
ಮೇಲ್ಸೇತುವೆ
10 ವರ್ಷಗಳಿಂದ ನಡೆಯುತ್ತಿದ್ದ ಉಪ್ಪಾರಹಳ್ಳಿ ಮೇಲ್ಸೇತುವೆಯನ್ನು ಜನರ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಅದರ ಬೆನ್ನಲ್ಲೇ ಶೆಟ್ಟಿಹಳ್ಳಿ ಕೆಳ ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದೇ ಇದ್ದರೂ ಸಹ ಸಂಚಾರಕ್ಕೆ ಮುಕ್ತವಾಯಿತು. ಹೀಗಾಗಿ ತಕ್ಕ ಮಟ್ಟಿಗೆ ಟ್ರಾಫಿಕ್ ಕೂಡ ನಿಯಂತ್ರಣದಲ್ಲಿದೆ.
ಪ್ರಶಸ್ತಿಗಳ ಸುರಿಮಳೆ
ಪಾವಗಡದ ಸೂಲಗಿತ್ತಿ ನರಸಮ್ಮ ಅವರಿಗೆ ರಾಷ್ಟ್ರಪ್ರಶಸ್ತಿ ಗೌರವ ಲಭಿಸಿದ್ದು ಜಿಲ್ಲೆಯ ಹೆಗ್ಗಳಿಕೆ. ಹಾಗೆಯೇ ಹರಿಕಥಾ ವಿದ್ವಾನ್ ಲಕ್ಷ್ಮಣದಾಸ್ ಅವರಿಗೆ ನಿಜಗುಣ ಪುರಂದರ ಪ್ರಶಸ್ತಿ ಲಭಿಸಿತು. ಮತ್ತೆ ಸೂಲಗಿತ್ತಿ ನರಸಮ್ಮ ಹಾಗೂ ಕೆ.ಬಿ. ಸಿದ್ದಯ್ಯ ಅವರಿಗೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿಯ ಗರಿ.
ಕಾಡು ಪ್ರಾಣಿಗಳು ನಾಡಿಗೆ
ಕಳೆದ ವರ್ಷ ಕಾಡಾನೆ, ಚಿರತೆ, ಕರಡಿ ಮುಂತಾದ ಕಾಡು ಪ್ರಾಣಿಗಳು ನಾಡಿಗೆ ನಿರಂತರವಾಗಿ ಬಂದ ವರ್ಷ. ಹಿಂಡು ಹಿಂಡು ಆನೆಗಳು ದಾಳಿ ಮಾಡಿ ಮೂರು ಮಂದಿಯನ್ನು ಬಲಿ ತೆಗೆದುಕೊಂಡಿತು. ಹಾಗೆಯೇ ಜಾನುವಾರುಗಳನ್ನು ಚಿರತೆಗಳು ಕೊಂದು ಹಾಕಿತು. ಇನ್ನು ತುಮಕೂರು ನಗರದೊಳಗೆ ಕರಡಿ ದಾಂಗುಡಿ ಇಟ್ಟಿದ್ದು ಮತ್ತೊಂದು ಸುದ್ದಿ.
3 ಡಿಸಿಗಳನ್ನು ಕಂಡಿತು
ಕಳೆದ ವರ್ಷ ಮೂರು ಜಿಲ್ಲಾಧಿಕಾರಿಗಳನ್ನು ಕಂಡ ಹೆಗ್ಗಳಿಕೆ ತುಮಕೂರು ಜಿಲ್ಲೆಯದ್ದು. ಈ ಮೊದಲು ಜಿಲ್ಲಾಧಿಕಾರಿಯಾಗಿದ್ದ ಆರ್,ಕೆ. ರಾಜು ಅವರು ವರ್ಗಾವಣೆಯಾದರೂ ಅವರ ಬೆನ್ನಲ್ಲೇ ಅನುರಾಗ್ ತಿವಾರಿ ಅಧಿಕಾರ ವಹಿಸಿಕೊಂಡರು. ಅನುರಾಗ್ ತಿವಾರಿ ಬಂದಷ್ಟೆ ವೇಗವಾಗಿ ವರ್ಗವಾದರೂ. ಸುಮಾರು 2 ತಿಂಗಳ ಕಾಲ ಜಿಲ್ಲಾಧಿಕಾರಿಗಳೇ ಇಲ್ಲದಂತಾಯಿತು. ಇದು ವ್ಯಾಪಕ ಟೀಕೆಗೂ ಗುರಿಯಾಯಿತು. ಆಗ ಎಚ್ಚೆತ್ತುಕೊಂಡ ಸರ್ಕಾರ ಸತ್ಯಮೂರ್ತಿ ಅವರನ್ನು ನೇಮಿಸಿತು.
ಸಿಟಿ ಬಸ್ಸುಗಳು
ಕಳೆದ ವರ್ಷದ ತುಮಕೂರು ನಗರಸಾರಿಗೆ ಬಸ್ಗಳು ಸಾಕಷ್ಟು ಸುದ್ದಿ ಮಾಡಿದವು. ಅತ್ಯುತ್ತಮ ಸೇವೆಯಿಂದ ಎಲ್ಲರ ಪ್ರಶಂಸೆಸೆಗೆ ಇದು ಪಾತ್ರವಾಯಿತು. ಈಗಾಗಲೇ ನರ್ಮ್ ಯೋಜನೆಯಡಿ ಮತ್ತೆ 40 ಬಸ್ಗಳ ಸೇವೆ ಆರಂಭಿಸುವ ಸುಳಿವು ಸಿಕ್ಕಿದ್ದು ಕೂಡ ಕಳೆದ ವರ್ಷವೇ. ತುಮಕೂರಿನ ತುಂಬೆಲ್ಲಾ ಸಿಟಿ ಬಸ್ ಸಂಚಾರ ಮಾಡುವುದರ ಮೂಲಕ ಗಮನ ಸೆಳೆಯಿತು.
ರೈತರಿಗೆ ಸಂಕಷ್ಟ
ಎಂದಿನಂತೆ ಕಳೆದ ವರ್ಷ ರೈತರಿಗೆ ಸಂಕಟದ ವರ್ಷ. ಶೇಂಗಾ, ತೆಂಗು ಬೆಳೆಗಾರರು ತತ್ತರಿಸಿದರು. ಬೆಂಬಲ ಬೆಲೆಗೆ ಆಗ್ರಹಿಸಿ ನಿರಂತರ ಪ್ರತಿಭಟನೆಗಳು ನಡೆದವು. ಕಳೆದ ವರ್ಷ ಜಿಲ್ಲೆ ಭೀಕರ ಬರಗಾಲಕ್ಕೆ ತುತ್ತಾಯಿತು. ಹೀಗಾಗಿ ಕಳೆದ ವರ್ಷ ಅನ್ನದಾತನ ಪಾಲಿಗೆ ಕಹಿಯಾದ ವರ್ಷ.
ರೈಲಿನ ಸುದ್ದಿ
ತುಮಕೂರು ಬೆಂಗಳೂರು ನಡುವೆ ವಿಶೇಷ ರೈಲಿಗೆ ನಡೆದ ನಿರಂತರ ಹೋರಾಟಕ್ಕೆ ಫಲ ಸಿಕ್ಕಿತು. ಕಳೆದ ವರ್ಷ ತುಮಕೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವ ಸರ್ಕಾರಿ ನೌಕರರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತುಮಕೂರು ಬೆಂಗಳೂರು ನಡುವೆ ರೈಲು ಸಂಪರ್ಕ ಕಲ್ಪಿಸಲಾಯಿತು.
ಸದ್ದು ಮಾಡಿದ ನೀರಾವರಿ
ಗ್ರಿಡ್ ಕೆನಾಲ್, ನೇತ್ರಾವತಿ, ಎತ್ತಿನಹೊಳೆ ಯೋಜನೆ ಕುರಿತಂತೆ ತುಮಕೂರು ಜಿಲ್ಲೆಯಲ್ಲಿ ವ್ಯಾಪಕವಾಗಿ ಚರ್ಚೆಯಾಯಿತು. ಒಂದೆಡೆ ಸಂಸದ ಜಿ.ಎಸ್. ಬಸವರಾಜು, ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರ ಮುಂತಾದವರು ಆಗಾಗ ನೀರಾವರಿ ಬಗ್ಗೆ ಮಾತನಾಡುತ್ತಾ ಸುದ್ದಿ ಮಾಡಿದ್ದು ವಿಶೇಷ.
ಮರಳು ಗಣಿಗಾರಿಕೆ: ಕಳೆದ ವರ್ಷವಿಡಿ ಅತಿ ಹೆಚ್ಚು ಸುದ್ದಿ ಮಾಡಿದ್ದು ಮರಳು ದಂಧೆ. ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಅತಿ ಹೆಚ್ಚು ಮರಳು ಗಣಿಗಾರಿಕೆ ನಡೆಯುತ್ತಿರುವುದು ವಿಶೇಷ. ಹಾಗೆಯೇ ಮರಳು ಗಣಿಗಾರಿಕೆ ಬಗ್ಗೆ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಹಾಗೂ ಮಾಜಿ ಸಚಿವ ಚನ್ನಿಗಪ್ಪ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು ವಿಶೇಷ.
ಕೃಷಿಗೆ ಪ್ರಾಧಾನ್ಯತೆ ನೀಡಿ ಅಭಿವೃದ್ಧಿ ಪಡಿಸಿ
ರೈತರಿಗೆ ಶಾಸಕ ಕೆ.ಎಂ. ತಿಮ್ಮರಾಯಪ್ಪ ಕರೆ, ತೊಗರಿ ಕೃಷಿ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟನೆ
ಕ.ಪ್ರ.ವಾರ್ತೆ ಪಾವಗಡ ಡಿ 31
ತಾ. ಕೃಷಿ ಇಲಾಖೆ ವತಿಯಿಂದ ರಿಯಾಯಿತಿ ದರದ ಕೃಷಿ ಯಂತ್ರೋಪಕರಣಗಳನ್ನು ಪಡೆದು ಕೃಷಿಯನ್ನು ಅಭಿವೃದ್ಧಿ ಪಡಿಸಿಕೊಳ್ಳಿ ಎಂದು ಶಾಸಕ ಕೆ.ಎಂ. ತಿಮ್ಮರಾಯಪ್ಪ ಅವರು ರೈತರಿಗೆ ಕರೆ ನೀಡಿದರು.
ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯಿತಿ ತುಮಕೂರು ಹಾಗೂ ತಾಲೂಕು ಕೃಷಿ ಇಲಾಖೆ ವತಿಯಿಂದ ಮಂಗಳವಾರ ಪಾವಗಡ ಸಮೀಪ ರೈತ ಸರವಾಟಪುರ ಗೋವಿಂದಬಾಬು ಅವರ ಜಮೀನಿನಲ್ಲಿ ಇಲಾಖೆಯ ಆತ್ಮ ಯೋಜನೆ ಅಡಿಯಲ್ಲಿ ಅಯೋಜಿಸಿದ್ದ ತೊಗರಿ ಕೃಷಿ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಕೃಷಿ ಪದ್ಧತಿ ಹಿನ್ನಲೆಯಲ್ಲಿ ತಾ.ಕೃಷಿ ಇಲಾಖೆಗೆ ವಿವಿಧ ರೀತಿಯ ಕೃಷಿ ಯಂತ್ರಗಳು ಸರಬರಾಜು ಆಗಿದ್ದು ಸರ್ಕಾರದ ಸಹಾಯ ಧನದಲ್ಲಿ ಯಂತ್ರಗಳನ್ನು ಖರೀದಿಸಿ ವ್ಯವಸಾಯ ಅಭಿವೃದ್ಧಿಪಡಿಸಿಕೊಳ್ಳಿ ಎಂದು ರೈತರಿಗೆ ಅವರು ಸಲಹೆ ನೀಡಿದರು.
ತೊಗರಿ ಬೆಳೆ ಸೇರಿದಂತೆ ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದು ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಬರುವ ಇತರೆ ದವಸ ಧಾನ್ಯಗಳನ್ನು ಪರ್ಯಾಯ ಬೆಳೆಗಳಾಗಿ ಬೆಳೆಯಲು ರೈತರಿಗೆ ಅವರು ಸಲಹೆ ನೀಡಿದರು.
ತಾ.ಕೃಷಿ ಸಹಾಯಕ ನಿರ್ದೇಶಕ ಪರುಶುರಾಮ್ ಮಾತನಾಡಿ ಕೃಷಿ ಇಲಾಖೆಯ ಸೌಲಭ್ಯಗಳು ಸೇರಿದಂತೆ ಲಾಭ ಹಾಗೂ ತೊಗರಿ ಬೆಳೆಯ ಸಮಗ್ರ ಮಾಹಿತಿ ಬಗ್ಗೆ ರೈತರಿಗೆ ವಿವರಿಸಿದರು. ಜೆಡಿಎಸ್ ಹಿರಿಯ ಮುಖಂಡ ಎನ್. ತಿಮ್ಮಾರೆಡ್ಡಿ, ಜಿಪಂ ಸದಸ್ಯ ಆರ್.ಸಿ ಅಂಜಿನಪ್ಪ, ಉಪಾಧ್ಯಕ್ಷ ಬಲರಾಮರೆಡ್ಡಿ, ಮುಖಂಡ ಗೋವಿಂದಬಾಬು, ಪ್ರಸಾದ್ ರೆಡ್ಡಿ ಮುಂತಾದವರು ರೈತರ ಬಗ್ಗೆ ಮಾತನಾಡಿದರು. ಲೋಕಸಭಾ ಜೆಡಿಎಸ್ ಅಭ್ಯರ್ಥಿ ಆಕಾಂಕ್ಷಿ ವೆಂಕಟರಮಣಪ್ಪ, ಮುಖಂಡರಾದ ಕೋಟಗುಡ್ಡ ಅಂಜಿನಪ್ಪ, ಜಿ.ಬಿ.ದೇವರಾಜ್ ಹಾಗೂ ಕೃಷಿ ಸಹಾಯಕ ಮಂಜುನಾಥ್ ರೆಡ್ಡಿ ಮುಂತಾವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

