ಗೋಮಾಳದ ರಕ್ಷಣೆಗೆ ಕಠಿಣ ಕ್ರಮ: ತಹಸೀಲ್ದಾರ್
ಶಿರಾ: ತಾಲೂಕಿನ ಗೌಡಗೆರೆ ಹೊನ್ನೆನಹಳ್ಳಿಯ ಸರ್ವೆ ನಂ. 86 ಮತ್ತು 87 ರಲ್ಲಿನ ನೂರಾರು ಎಕರೆ ಅರಣ್ಯ ಪ್ರದೇಶವನ್ನು ಕೆಲವರು ರಾಜಕೀಯ ವ್ಯಕ್ತಿಗಳ ಕುಮ್ಮಕ್ಕಿನಿಂದ ನಾಶಗೊಳಿಸಿ ಜಮೀನು ಸ್ವಾಧೀನಕ್ಕೆ ಪ್ರಯತ್ನಿಸಿದ್ದಾರೆ ಎಂಬ ಆಪಾದನೆಗಳಿಗೆ ಸ್ಪಂದಿಸಿದ ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ಪ್ರದೇಶ ಮತ್ತು ಗೋಮಾಳಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒಯ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಹಸೀಲ್ದಾರ್ ಕಾಂತರಾಜು ಅವರು ಗೌಡಗೆರೆ ವ್ಯಾಪ್ತಿಯ ಕಂದಾಯ ಇಲಾಖಾ ಸಿಬ್ಬಂದಿ, ಭೂಮಾಪನ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಸದರಿ ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ ನಡೆಸಿದರು. ಅರಣ್ಯವನ್ನು ಅಕ್ರಮವಾಗಿ ಜೆಸಿಬಿ ಯಂತ್ರಗಳಿಂದ ನೆಲಸಮ ಮಾಡಿರುವುದನ್ನು ಕಂಡು ಅಚ್ಚರಿಗೊಂಡರು. ಸ್ಥಳ ತನಿಖೆ ಸಂದರ್ಭದಲ್ಲಿ ಅರಣ್ಯ ನಾಶ ಮಾಡಿ ಜಮೀನು ಸ್ವಾಧೀನಕ್ಕೆ ಮುಂದಾದ ಇಬ್ಬರು ವ್ಯಕ್ತಿಗಳು ಇದು ತಮ್ಮದೇ ಜಮೀನು. ಪಹಣಿ ಕೂಡ ಇದೆ ಎಂದು ಹೇಳಿದರಾದರೂ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ತಹಸೀಲ್ದಾರ್ ಅವರು ಸದರಿ ಜಮೀನು ಗೋಮಾಳ ಎಂದು ತಿಳಿದಾಗ ಸ್ವಾಧೀನಕ್ಕೆ ಪ್ರಯತ್ನಿಸಿದವರ ವಿರುದ್ಧ ಕಿಡಿ ಕಾರಿದರು.
ಆಕ್ರೋಶ: ತಹಸೀಲ್ದಾರ್ ಅವರು ಸ್ಥಳಕ್ಕೆ ಬಂದಾಗ ಗೌಡಗೆರೆ ಹೊನ್ನೆನಹಳ್ಳಿ ವ್ಯಾಪ್ತಿಯ ರೈತರು ಸ್ಥಳಕ್ಕೆ ಬಂದು ಸದರಿ ವ್ಯಾಪ್ತಿಯಲ್ಲಿ ಸಾವಿರ ಎಕರೆಗೂ ಅಧಿಕ ಗೋಮಾಳವಿದ್ದು ಇದರಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಗಿಡಗಳನ್ನು ಬೆಳೆಸಿದೆ. ಈ ಭಾಗದ ಕುರಿ, ದನ, ಕರುಗಳ ಮೇವಿಗೂ ಈ ಅರಣ್ಯ ಅನುಕೂಲವಾಗಿತ್ತು. ಕೂಡಲೇ ಈ ಅಕ್ರಮ ಭೂಗಳ್ಳತನಕ್ಕೆ ಕಡಿವಾಣ ಹಾಕಬೇಕೆಂದು ಸ್ಥಳೀಯರಾದ ತಿಪ್ಪೇಸ್ವಾಮಿ, ಚಂದ್ರಶೇಖರ ಯಾದವ್ ಸೇರಿದಂತೆ ಹಲವು ರೈತರು ಒತ್ತಾಯಿಸಿದರು.
ನಿಜಾಂಶ: ಸದರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೊನ್ನೆನಹಳ್ಳಿ ಸರ್ವೆ ನಂಬರ್ 86 ಮತ್ತು 87 ರಲ್ಲಿ ಸರ್ಕಾರಿ ದಾಖಲೆಗಳ ಪ್ರಕಾರ ಅದು ನಿಜಕ್ಕೂ ಈಗಲೂ ಗೋಮಾಳವೆ ಆಗಿದೆ. 1982-84 ರ ಅವಧಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಸುಮಾರು 160 ಎಕರೆಯ ಗೋಮಾಳದ ಜಮೀನಿನಲ್ಲಿ ಗಿಡಗಳನ್ನು ನೆಟ್ಟಿದೆ. ಈ ಗಿಡಗಳನ್ನು ನೆಟ್ಟ ಅರಣ್ಯ ಇಲಾಖೆ ಈ ಗಿಡಗಳ ಸಂರಕ್ಷಣೆಗಾಗಿ 2005 ರಲ್ಲೆ ತನ್ನ ಜವಾಬ್ದಾರಿಯನ್ನು ಸ್ಥಳೀಯ ಗ್ರಾ.ಪಂ.ಗೆ ಹಸ್ತಾಂತರಿಸಿದೆ. ಗ್ರಾ.ಪಂ. ನಿರ್ಲಕ್ಷವನ್ನು ಕಂಡ ಕೆಲವು ಅವಕಾಶವಾದಿಗಳು ಗೋಮಾಳವನ್ನು ಕಳೆದ ಹಲವು ವರ್ಷಗಳಿಂದಲೂ ಒತ್ತುವರಿ ಮಾಡುತ್ತಿದ್ದಾರೆ ಎಂಬುವುದು ಅಲ್ಲಿನವರ ಆರೋಪವಾಗಿದೆ.
ಉಗ್ರ ಕ್ರಮ: ಗೌಡಗೆರೆ ಹೊನ್ನೆನಹಳ್ಳಿ ಗೋಮಾಳದ ಜಮೀನು ಕಂದಾಯ ಇಲಾಖಾ ವ್ಯಾಪ್ತಿಗೆ ಒಳಪಟ್ಟಿದ್ದು ಸದರಿ ಗೋಮಾಳದ ಪ್ರದೇಶದಲ್ಲಿ ಅಸಲಿ ಸಾಗುವಳಿ ಚೀಟಿ ಪಡೆದು ಉಳುಮೆ ಮಾಡುತ್ತಿರುವವರನ್ನು ಬಿಟ್ಟು ಉಳಿದವರನ್ನು ಸರ್ಕಾರಿ ದಾಖಲೆಗಳಿಂದ ಕೈಬಿಡಲು ಸಂಬಂಧಪಟ್ಟ ಕಂದಾಯ ಇಲಾಖಾ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ತಹಸೀಲ್ದಾರ್ ಕಾಂತರಾಜು ಅವರು ತಿಳಿಸಿದ್ದು ಸದರಿ ಗೋಮಾಳದ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸ್ಥಳದಲ್ಲಿ ಗೌಡಗೆರೆ ಹೋಬಳಿಯ ಕಂದಾಯ ತನಿಖಾಧಿಕಾರಿ ರಾಜೇಶ್, ಭೂಮಾಪನಾ ಇಲಾಖೆ ಕೆಂಚೇಗೌಡ, ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

