ದಬ್ಬೇಘಟ್ಟ ರಸ್ತೆ ಅಗಲೀಕರಣ: ಹತ್ತಾ, ಹದಿಮೂರು ಮೀಟರ್ರಾ?
ಎಸ್.ನಾಗಭೂಷಣ
ತುರುವೇಕೆರೆ: ಪಟ್ಟಣದ ಪ್ರಮುಖ ರಸ್ತೆಯಾಗಿರುವ ದಬ್ಬೇಘಟ್ಟ ರಸ್ತೆಯ ಅಗಲೀಕರಣ ಸಂಬಂಧ ಲೋಕೋಪಯೋಗಿ ಇಲಾಖೆ ಮೀನಾಮೇಷ ಎಣಿಸುತ್ತಿದೆ.
ಈ ರಸ್ತೆಯಲ್ಲಿ ಹಲವಾರು ಸರ್ಕಾರಿ ಕಚೇರಿಗಳು, ನ್ಯಾಯಾಲಯ, ಕಾಲೇಜುಗಳು ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ನೂತನ ಬಸ್ ನಿಲ್ದಾಣವಿದೆ. ಇಲ್ಲಿ ಪ್ರತಿದಿನ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣಿಸುವುದು ಹಾಗೂ ಓಡಾಡುವುದು ನಿರಂತರವಾಗಿದೆ. ಯಡಿಯೂರು - ತಿಪಟೂರು ರಸ್ತೆಯ ಅಂಚಿನಿಂದ ನೂತನ ಬಸ್ ನಿಲ್ದಾಣದ ವರೆಗೆ ಸುಮಾರು 70 ಲಕ್ಷ ರು.ಗಳು ಬಿಡುಗಡೆಯಾಗಿದೆ. ಶಾಸಕ ಎಂ.ಟಿ.ಕೃಷ್ಣಪ್ಪ ಭೂಮಿ ಪೂಜೆಯನ್ನೂ ಸಹ ನೆರವೇರಿಸಿ ತಿಂಗಳ ಮೇಲಾಯಿತು. ಶಾಸಕರು ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರ ನಿಗದಿ ಪಡಿಸರುವ ಗಡಿಯನ್ನೇ ಪರಿಗಣಿಸಿ ಅಕ್ಕ ಪಕ್ಕದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿರುವ ಕಟ್ಟಡಗಳನ್ನು ತೆರವು ಮಾಡಬೇಕೆಂದು ಲೋಕೋಪಯೋಗಿ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಹಾಲಿ ರಸ್ತೆಯ ಮಧ್ಯ ಭಾಗದಿಂದ 25 ಮೀಟರ್ಗಳೆಂದು ಉಲ್ಲೇಖವಾಗಿತ್ತು. ಆದರೆ ಪಟ್ಟಣದೊಳಗೆ 25 ಮೀಟರ್ ವರೆಗೆ ಕಟ್ಟಡಗಳನ್ನು ತೆರವುಗೊಳಿಸುವುದು ಅಸಾಧ್ಯದ ಮಾತಾಗಿತ್ತು.
ಪಟ್ಟಣ ಪಂಚಾಯ್ತಿಗೆ ಸೂಚನೆ: ಈ ನಡುವೆ ಲೋಕೋಪಯೋಗಿ ಇಲಾಖೆ ರಸ್ತೆಯ ವಿಸ್ತಾರಕ್ಕಾಗಿ ರಸ್ತೆಯ ಮಧ್ಯಭಾಗದಿಂದ ಕನಿಷ್ಠ 10 ಮೀಟರ್ ನಷ್ಟಾದರೂ ತೆರವು ಗೊಳಿಸಬೇಕು ಎಂದು ಪಟ್ಟಣ ಪಂಚಾಯ್ತಿಗೆ ಸೂಚನೆ ನೀಡಿತ್ತು. ಆದರೆ ನೂತನವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಹಾಗೂ ಲೋಕೋಪಯೋಗಿ ಇಲಾಖಾ ಕಚೇರಿಗೆ ಬಂದಿರುವ ಸರ್ಕಾರಿ ಸುತ್ತೋಲೆ ಅನ್ವಯ ರಸ್ತೆಯ ಜಿಲ್ಲಾ ಮುಖ್ಯ ರಸ್ತೆ ನಿರ್ಮಾಣಕ್ಕೆ ಕನಿಷ್ಠ 13 ಮೀಟರ್ ಗಳೆಂದು ನಿಗದಿ ಮಾಡಲಾಗಿದೆ. ಆದರೆ ಸ್ಥಳೀಯ ಪಟ್ಟಣ ಪಂಚಾಯ್ತಿಯಲ್ಲಿ ನಡೆದ ತುರ್ತು ಸಭೆಯಲ್ಲಿ ಕೆಲವು ಸದಸ್ಯರು ಲೋಕೋಪಯೋಗಿ ಇಲಾಖಾ ಕೋರಿಕೆಯಂತೆ 10 ಮೀಟರ್ ಇರಲಿ ಎಂದರೆ ಕೆಲವು ಸದಸ್ಯರು 9 ಮೀಟರ್ ಇರಲಿ ಎಂದು ನಡವಳಿಕೆಯಲ್ಲಿ ಬರೆಸಿದರು.
ನೀಲ ನಕ್ಷೆ ಪ್ರಕಾರ: ಆದರೆ ನೀಲ ನಕ್ಷೆಯ ಪ್ರಕಾರ ಡಾಂಬರು ರಸ್ತೆಯೇ 10 ಮೀಟರ್ ಆಗಲಿದೆ. ರಸ್ತೆಯ ಮಧ್ಯಭಾಗದಿಂದ ತಲಾ ಎರಡೂ ಭಾಗಗಳಲ್ಲಿ 5 ಮೀಟರ್ ಅಳತೆಯಲ್ಲಿ ಡಾಂಬರು ರಸ್ತೆ ನಿರ್ಮಾಣವಾಗಲಿದೆ. ಉಳಿದಂತೆ ಪಾದಚಾರಿಗಳ ರಸ್ತೆ, ದ್ವಿಚಕ್ರ ವಾಹನ ನಿಲ್ದಾಣ, ವಿದ್ಯುತ್ ಕಂಬಗಳ ಅಳವಡಿಕೆ, ಒಳಚರಂಡಿ ನಿರ್ಮಾಣ, ಹಾಗೂ ಪಟ್ಟಣಕ್ಕೆ ನೀರು ಒದಗಿಸುತ್ತಿರುವ ಪೈಪುಗಳನ್ನು ಅಳವಡಿಸಲು ಎರಡೂ ಬದಿಯೂ ಕನಿಷ್ಠವೆಂದರೂ 8 ಮೀಟರ್ ಗಳ ಅಗತ್ಯವಿದ್ದು ಒಟ್ಟಾರೆ 13 ಮೀಟರ್ ಅಗತ್ಯವಿದೆ ಎಂದು ಲೋಕೇಪಯೋಗಿ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಸ್ಥಳೀಯ ಪಟ್ಟಣ ಪಂಚಾಯ್ತಿ ಅವಧಿ ಇನ್ನು ಕೇವಲ ಹತ್ತಾರು ದಿನಗಳು ಮಾತ್ರ ಇದೆ. ಹೀಗಾಗಿ ತಮಗೆ ಕಟ್ಟಡ ಒಡೆಸುವ ಉಸಾಬರಿಯೇ ಬೇಡ ಎಂಬ ನಿಲವೂ ಕೆಲವು ಪ.ಪಂ ಸದಸ್ಯರಿಗೆ ಇದೆ.
ಸಂಬಂಧವಿಲ್ಲ: ಶಾಸಕ ಎಂ.ಟಿ.ಕೃಷ್ಣಪ್ಪನವರು ಮಾತ್ರ ಸರ್ಕಾರಿ ಆದೇಶದ ರೀತ್ಯ ಕ್ರಮ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಗೆ ಅಧಿಕಾರವಿದೆ. ಪಟ್ಟಣ ಪಂಚಾಯ್ತಿಗೂ ರಸ್ತೆ ಅಗಲೀಕರಣಕ್ಕೂ ಯಾವುದೇ ಸಂಬಂಧವಿಲ್ಲ. ರಸ್ತೆ ಕಡಿಮೆ ಇದ್ದು ಜನಸಾಮಾನ್ಯರು ಪ್ರತಿದಿನ ಪರದಾಡುವ ಸ್ಥಿತಿ ನೋಡಲಾಗದು. ಅಪಘಾತವಾಗುವ ಸಾಧ್ಯತೆಗಳು ಇದೆ. ಆದ್ದರಿಂದ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ತಿಪಟೂರು ಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರ್ ಅವರ ಹಾಗೂ ಲೋಕೋಪಯೋಗಿ ಇಲಾಖಾ ಅಧಿಕಾರಿಗಳ ನೇತೃತ್ವದಲ್ಲಿ ತಂಡವನ್ನು ರಚಿಸಿ ಒತ್ತುವರಿಯಾಗಿರುವ ಪ್ರದೇಶವನ್ನು ಕೂಡಲೇ ತೆರೆವುಗೊಳಿಸವಂತೆ ಎಸಿ ಶಿಲ್ಪಾ ಅವರಿಗೆ ಸೂಚಿಸಿದ್ದಾರೆ.
ಪರದಾಟ ತಪ್ಪದು: ಈಗ ಉಳಿದಿರುವ ಪ್ರಶ್ನೆ... ಪಟ್ಟಣ ಪಂಚಾಯ್ತಿಯವರು ನಿಗದಿ ಪಡಿಸಿರುವ ಪ್ರಕಾರ ಕ್ರಮ ಕೈಗೊಂಡರೆ ಡಾಂಬರು ರಸ್ತೆ ಆಗಬಹುದೇ ಹೊರೆತು ಉಳಿದಂತೆ ಹಾಗೇ ಇದ್ದು ಯಾವುದೇ ವಿಸ್ತೀರ್ಣ ಸಾಧ್ಯವಾಗದೇ ಜನರ ಪರದಾಟ ತಪ್ಪದು. ಲೋಕೋಪಯೋಗಿ ಇಲಾಖೆಯವರು ಕೋರಿದ್ದ ಮಾಹಿತಿಯಂತೆ ರಸ್ತೆಯ ಮಧ್ಯಭಾಗದಿಂದ 10 ಮೀಟರ್ವರೆಗೆ ತೆರವುಗೊಳಿಸಿದರೆ ಸದ್ಯಕ್ಕೆ ಮಾತ್ರ ಜನಸಾಮಾನ್ಯರು ಓಡಾಡಬಹುದು.
ಆದರೆ ಶಾಸಕರು ಅಥವಾ ಸರ್ಕಾರದ ಸುತ್ತೋಲೆಯಂತೆ ತೀರ್ಮಾನಿಸಿದರೆ ಮುಂದಿನ ಹಲವು ವರ್ಷಗಳವರೆಗೂ ಜನಸಮಾನ್ಯರು ನೆಮ್ಮದಿಯಾಗಿ ಸಂಚರಿಸಬಹುದು ಹಾಗೂ ಧೂಳಿನಿಂದ ಮುಕ್ತರಾಗಿರಬಹುದು. ಲೋಕೋಪಯೋಗಿ ಇಲಾಖೆ ಹಾಗೂ ಶಾಸಕರು ಹಾಗೂ ಜಿಲ್ಲಾಡಳಿತ ಜನರ ಹಿತ ಕಾಪಾಡುವರೋ ಕಾದುನೋಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

