ಲೋಕಾಯುಕ್ತರ ಅಹವಾಲು ಸ್ವೀಕಾರ ಕೇವಲ ಕಾಟಾಚಾರ
ಚಿಕ್ಕನಾಯಕನಹಳ್ಳಿ: ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಲೋಕಾಯುಕ್ತರ ಅಹವಾಲು ಕಾರ್ಯಕ್ರಮ ಕೇವಲ ಕಾಟಾಚಾರದಿಂದ ಕೂಡಿತ್ತು.
ನಿಗದಿತ ಸಮಯದಂತೆ 3 ಗಂಟೆಗೆ ಪ್ರಾರಂಭವಾದ ಸಭೆಗೆ ಬಂದಿದ್ದು ಕೇವಲ 6 ಅರ್ಜಿಗಳು. ಅದರಲ್ಲಿ 4 ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂದಿಸಿದ್ದು, ಲೋಕಾಯುಕ್ತ ನಿರೀಕ್ಷಕರಾದ ಗೌತಮ್ ಅವರು ಯಾವ ಪ್ರಕರಣಕ್ಕೂ ಪರಿಹಾರ ಸೂಚಿಸದೆ, ಸಂಬಂಧಿಸಿದ ಇಲಾಖೆಗೆ ಅರ್ಜಿಯನ್ನು ವರ್ಗಾಯಿಸಿ, ಅರ್ಜಿದಾರರಿಗೆ ಹಿಂಬರಹ ನೀಡಿದ್ದಷ್ಟೇ ಅವರ ಕರ್ತವ್ಯವಾಗಿತ್ತು.
ಈಗಾಗಲೇ ಸಂಬಂಧಿಸಿದ ಇಲಾಖೆಯಿಂದ ತಮಗೆ ನ್ಯಾಯ ದೊರೆತಿಲ್ಲ ಎಂದು ನೊಂದವರು ಲೋಕಾಯುಕ್ತರಿಗೆ ದೂರು ನೀಡಿದರೆ ಪುನಃ ಅಮಾಯಕ ರೈತರನ್ನು ತೋಳದ ಬಾಯಿಗೆ ದೂಡುವ ಕೆಲಸವನ್ನಷ್ಟೇ ಲೋಕಾಯುಕ್ತ ನಿರೀಕ್ಷಕರು ಮಾಡಿದರು. ಲೋಕಾಯುಕ್ತರಿಗೆ ಬಂದಿದ್ದ ದೂರುಗಳಲ್ಲಿ ಬಹುಪಾಲು ಕಂದಾಯ ಇಲಾಖೆಯಲ್ಲಿ ವರ್ಷಗಟ್ಟಲೆಯಿಂದ ಕೊಳೆಯುತ್ತ ಬಿದ್ದಿರುವ ಖಾತೆ ಪ್ರಕರಣಗಳಿಗೆ ಸಂಬಂದಿಸಿದ್ದು. ಇದರಲ್ಲಿ ಅರ್ಜಿ ಕೊಟ್ಟ 35 ದಿನಗಳಲ್ಲಿ ರೈತನಿಗೆ ಕಂದಾಯ ಇಲಾಖೆ ಖಾತೆ ವರ್ಗಾವಣೆ ಮಾಡಿ ಕೊಡಬೇಕು, ಇಲ್ಲವೆ ನಿಮ್ಮ ಖಾತೆ ವರ್ಗಾವಣೆಗೆ ಸಂಬಂಧಪಟ್ಟಂತೆ ದಾಖಲಾತಿಗಳು ಸಮರ್ಪಕವಾಗಿಲ್ಲ ಎಂದು ಹಿಂಬರಹ ನೀಡಬೇಕು. ಆದರೆ ಕಂದಾಯ ಇಲಾಖೆ ಇದಾವುದನ್ನೂ ಮಾಡದೆ, ರೈತ ನೀಡಿದ ಖಾತೆ ವರ್ಗಾವಣೆ ಅರ್ಜಿಗಳನ್ನು ಮೂಲೆಗೆಸೆದು ಕೂತುಬಿಡುತ್ತಾರೆ. ಅಂತಹವರ ಬಗ್ಗೆ ದೂರು ನೀಡಿದ ರೈತರಿಗೆ ಲೋಕಾಯುಕ್ತರು, ನಿಮ್ಮ ಅರ್ಜಿಯನ್ನು ಸಂಬಂಧಿಸಿದ ಕಂದಾಯ ಇಲಾಖೆಗೆ ರವಾನಿಸಿದ್ದೇವೆ. 15 ದಿನಗಳಲ್ಲಿ ನಿಮ್ಮ ಪ್ರಕರಣ ಏನಾಗಿದೆ ಎಂಬುದನ್ನು ತಿಳಿಸುತ್ತೇವೆ ಎಂದು ಹಿಂಬರಹ ನೀಡಿವುದು ಯಾವ ಪುರುಷಾರ್ಥಕ್ಕೆ. ಇದಕ್ಕಾಗಿ ಇಷ್ಟೆಲ್ಲಾ ಸರ್ಕಸ್ ಮಾಡಬೇಕೆ ಎಂಬುದು ಸಾರ್ವಜನಿಕರ ಪ್ರಶ್ನೆ.
ಸಾಗುವಳಿ ಪತ್ರ ನೀಡಿಲ್ಲ: ಇನ್ನು ಭೂ ಮಂಜೂರಾತಿಯಾಗಿ 4 ವರ್ಷಗಳಾಗಿವೆ. ಇನ್ನೂ ನನಗೆ ಸಾಗುವಳಿ ಪತ್ರ ನೀಡಿಲ್ಲ ಎಂದು ನೀಡಿದ ಅರ್ಜಿಗೆ ಲೋಕಾಯುಕ್ತರು 15 ದಿನಗಳ ಕಾಲಾವಕಾಶ ನೀಡಿ ಹಿಂಬರಹ ನೀಡಿದ್ದಾರೆ. ಒಬ್ಬ ಅಕ್ರಮ ಸಾಗುವಳಿದಾರ ಸರ್ಕಾರದ ಆದೇಶದಂತೆ ನಿಗದಿತ ಸಮಯದಲ್ಲಿ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದು, ಸದರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದರೆ, ಅದನ್ನು ಭೂ ಸಕ್ರಮೀಕರಣ ಸಮಿತಿಯ ಮುಂದೆ ಇಟ್ಟು, ಸಮತಿ ಅದನ್ನು ಒಪ್ಪಿದ ಮೇಲೆ ಸಾರ್ವಜನಿಕ ಆಕ್ಷೇಪಣೆಗಾಗಿ 15 ದಿನಗಳ ಕಾಲಾವಕಾಶ ನೀಡಿ, ನಂತರ ಅಕ್ರಮ ಸಕ್ರಮೀಕರಣಕ್ಕೆ ದಂಡ ವಸೂಲು ಮಾಡಿ ಅಂದರೆ ಹಣ ಕಟ್ಟಿಸಿಕೊಂಡು ಆತನಿಗೆ ಮಂಜೂರು ಪತ್ರ ನೀಡಬೇಕು. ಈ ಎಲ್ಲಾ ಪ್ರಕ್ರಿಯೆಗಳು ಮುಗಿದು ಸಾಗುವಳಿ ಪತ್ರ ನೀಡವುದೊಂದೇ ಬಾಕಿ ಉಳಿದಿರುವ ಪ್ರಕರಣಕ್ಕೂ ಲೋಕಾಯುಕ್ತರು 15 ದಿನಗಳ ಕಾಲಾವಕಾಶ ಕೋರಿ ಹಿಂಬರಹ ನೀಡಿರುವುದು ಯಾವ ಪುರುಷಾರ್ಥಕ್ಕೆ ಎಂಬುದು ಹಲವರ ಪ್ರಶ್ನೆ.
ಈ ಲೋಕಾಯುಕ್ತ ಅಹವಾಲು ಸ್ವೀಕಾರ ಕಾರ್ಯಕ್ರಮ ಸರ್ಕಾರಕ್ಕೆ ವರದಿ ಸಲ್ಲಿಸುವುದಕ್ಕೆ, ಜನರ ಕಣ್ಣೊರೆಸುವ ತಂತ್ರಕ್ಕಷ್ಟೇ. ಇದರಿಂದ ಸಾರ್ವಜನಿಕರಿಗಾಗಲಿ ಅಥವಾ ನೊಂದ ಜನರಿಗಾಗಲಿ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಇನ್ನು ಮುಂದಾದರು ಲೋಕಾಯುಕ್ತರು ಸ್ಥಳದಲ್ಲೇ ಪ್ರಕರಣ ಇತ್ಯರ್ಥ ಪಡಿಸುವ ಕಾರ್ಯವಾಗದಿದ್ದರೆ, ಲೋಕಾಯುಕ್ತರ ಭೇಟಿಗೆ ಅರ್ಥವಿರುವುದಿಲ ಎಂಬುದು ಸಾರ್ವತ್ರಿಕ ಅಭಿಪ್ರಾಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

