ನ್ಯಾನೋ ತಂತ್ರಜ್ಞಾನದಿಂದ ಕ್ರಾಂತಿಕಾರಿ ಬದಲಾವಣೆ
ತುಮಕೂರು: ನ್ಯಾನೋ ತಂತ್ರಜ್ಞಾನದಿಂದ ನಿರ್ಮಾಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧ್ಯ ಎಂದು ಅಮೆರಿಕಾ ನಾರ್ತ್ವೆರ್ಸ್ಟನ್ ವಿವಿ ಪ್ರೊ. ಸುರೇಂದ್ರ ಪಿ. ಷಾ ಅಭಿಮತ ವ್ಯಕ್ತಪಡಿಸಿದ್ದಾರೆ.
ಅವರು ಇಲ್ಲಿನ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗ ಮತ್ತು ನ್ಯಾನೋ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಕೇಂದ್ರ ಏರ್ಪಡಿಸಿದ್ದ ನ್ಯಾನೋ ಕಾನ್-2013 ಅಂಗವಾಗಿ ನಿರ್ಮಾಣದಲ್ಲಿ ನ್ಯಾನೋ ತಂತ್ರಜ್ಞಾನ ಎಂಬ ವಿಷಯ ಕುರಿತ ಅಂತಾರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ನ್ಯಾನೋ ತಂತ್ರಜ್ಞಾನದಿಂದ ಸಿಮೆಂಟ್ ಮತ್ತು ಕಾಂಕ್ರಿಟ್ ತಯಾರಿಕೆಯಲ್ಲಿ ನ್ಯಾನೋ ಕಣಗಳನ್ನು ಈಗ ಬಳಕೆಯಲ್ಲಿರುವ ಸಿಮೆಂಟ್ ಕಣಗಳ ಜತೆ ಸಂಯೋಜಿಸಬಹುದು ಎಂದರು. ಅವುಗಳ ಸೂಕ್ಷ್ಮಾತಿಸೂಕ್ಷ್ಮ ಆಂತರಿಕ ರಚನೆಯಲ್ಲಿ ಭೌತಿಕ ಮತ್ತು ರಾಸಾಯನಿಕ ಬದಲಾವಣೆಗಳನ್ನು ತರುವ ಮೂಲಕ ಸಿಮೆಂಟ್, ಕಾಂಕ್ರಿಟ್ನ ಪೂರ್ಣ ಸಾಮರ್ಥ್ಯ, ದೃಢತೆ, ಶಕ್ತಿ ಮತ್ತು ಬಾಳಿಕೆಯನ್ನು ಅಧಿಕಗೊಳಿಸುತ್ತದೆ ಎಂದರು. ಹೀಗಾಗಿ ದೇಶದ ಮೂಲಭೂತ ಸೌಕರ್ಯ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ತಾಪಮಾನ ಏರಿಕೆಗೆ ಕಾರಣ: ಅಭಿವೃದ್ಧಿಯ ಸೂಚಕವೆಂದು ಬಿಂಬಿಸಲಾಗುತ್ತಿದ್ದರೂ ತಯಾರಿಕೆಯಿಂದ ಅಪಾರ ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಬಿಡುಗಡೆಯಾಗಿ ವಾತಾವರಣದಲ್ಲಿ ಜಾಗತಿಕ ತಾಪಮಾನ ಏರಿಕೆಗೆ ಕಾರಣಾಗುತ್ತಿದೆ ಎಂದರು.
ನ್ಯಾನೋ ತಂತ್ರಜ್ಞಾನದ ಬಳಕೆಯಿಂದ ಸಿಮೆಂಟ್ನ ಸಂಪೂರ್ಣ ಸಾಮರ್ಥ್ಯ ವರ್ಧನೆಯಾಗಿ ಸ್ವಲ್ಪವೇ ಪ್ರಮಾಣದ ಕಾಂಕ್ರಿಟ್ ಹೆಚ್ಚಿನ ಶಕ್ತಿಯನ್ನು ಹೊಂದಿ ರಾಷ್ಟ್ರಗಳ ಆರ್ಥಿಕ ಚಿತ್ರಣ ಬದಲಾವಣೆಯಾಗಲಿದೆ ಎಂದರು. ಕೇಂದ್ರ ಕಟ್ಟಡ ತಂತ್ರಜ್ಞಾನ ಸಂಸ್ಥೆ ನಿರ್ದೇಶಕ ಪ್ರೊ. ಎಸ್.ಕೆ. ಭಟ್ಟಾಚಾರ್ಯ ಮಾತನಾಡಿ ಸಿಮೆಂಟ್ನ ಜಲರಾಸಾಯನಿಕ ಪ್ರಕ್ರಿಯೆಯಲ್ಲಿ ಸಾಕಷ್ಟು ಪ್ರಮಾಣದ ಸುಣ್ಣದ ಆಕ್ಸೈಡ್ ಮತ್ತು ಇಂಗಾಲದ ಡೈ ಆಕ್ಸೈಡ್ ಬಿಡುಗಡೆಯಾಗುತ್ತಿದ್ದು ನ್ಯಾನೋ ಕಣಗಳನ್ನು ಸಿಮೆಂಟ್ ಕಣಗಳ ಜತೆ ಸಂಯೋಜಿಸುವುದರಿಂದ ಉನ್ನತ ಕಾರ್ಯಕ್ಷಮತೆಯ ಕಾಂಕ್ರಿಟ್ ತಯಾರಿಕೆ ಸಾಧ್ಯ ಎಂದರು. ಇದರಿಂದ ಹಲವಾರು ಬಗೆಯ ಗುಣಗಳು ಪರಿವರ್ತಿತವಾಗಿ ಸುಸ್ಥಿರ ಅಭಿವೃದ್ಧಿ ಸಾಧ್ಯತೆ ಹೆಚ್ಚು ಎಂದರು. ಅಲ್ಲದೇ ಶಿಥಿಲಗೊಂಡ ಕಟ್ಟಡಗಳ ನಿರ್ಮಾಣ ವಸ್ತುಗಳ ಮರುಬಳಕೆಯು ನ್ಯಾನೋ ತಂತ್ರಜ್ಞಾನದಿಂದ ಸಾಧ್ಯವಾಗಿ ಸುಸ್ಥಿರ ಬಳಕೆಗೆ ಪೂರಕವಾಗಬಲ್ಲವು ಎಂದರು.
ಬಹುಶಾಖಾ ಶಾಸ್ತ್ರೀಯ ವಿಷಯ: ಸಮಾರಂಭದಲ್ಲಿ ಪ್ರಾಂಶುಪಾಲ ಡಾ. ಶಿವಕುಮಾರಯ್ಯ ಮಾತನಾಡಿ ನ್ಯಾನೋ ತಂತ್ರಜ್ಞಾನವೆಂಬುದು ಹಲವಾರು ಮೂಲಭೂತ ವಿಜ್ಞಾನ ಮತ್ತು ತಾಂತ್ರಿಕ ಕ್ಷೇತ್ರಗಳಿಂದ ಕೂಡಿದ ಬಹುಶಾಖಾ ಶಾಸ್ತ್ರೀಯ ವಿಷಯವಾಗಿದೆ. ಯಾವುದೇ ಕ್ಷೇತ್ರದಲ್ಲಿ ಕೈಗೊಳ್ಳಬಹುದಾದ ಸಂಶೋಧನೆ ಮತ್ತೊಂದು ಕ್ಷೇತ್ರದಲ್ಲಿ ತನ್ನ ಸಿದ್ಧಿಯನ್ನು ಕಂಡುಕೊಳ್ಳಬಹುದಾದ ಬಹಪಯೋಗಿ ಕ್ಷೇತ್ರ ಎಂದರು.
ವಿದ್ಯಾಲಯದಲ್ಲಿ ಉತ್ಕೃಷ್ಟ ನ್ಯಾನೋ ತಂತ್ರಜ್ಞಾನ ಸಂಶೋಧನಾ ಕೇಂದ್ರ ಸ್ಥಾಪನೆ ನಿಟ್ಟಿನಲ್ಲಿ ಸತತವಾಗಿ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್ಐಟಿ ನಿರ್ದೇಶಕ ಡಾ. ಎಂ.ಎನ್. ಚನ್ನಬಸಪ್ಪ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

