ತುಮಕೂರು

ಗೊಂದಲದ ನಡುವೆ ಎಪಿಎಂಸಿ ನೂತನ ಅಧ್ಯಕ್ಷೆ ತಾರಾದೇವಿ

Published On :

ತುಮಕೂರು: ಅಧ್ಯಕ್ಷ ಸ್ಥಾನದಿಂದ ವಂಚಿತರಾದ ಹಿನ್ನಲೆಯಲ್ಲಿ ಹತಾಶರಾದ ಗುಂಪೊಂದು ಕಲ್ಲು ತೂರಿ ದಾಂಧಲೆ ನಡೆಸಿರುವ ಘಟನೆ ಶನಿವಾರ ಇಲ್ಲಿನ ಎಪಿಎಂಸಿ ಕಚೇರಿಯಲ್ಲಿ ನಡೆದಿದೆ.
ಘಟನೆಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ರುಚಿ ತೋರಿಸಬೇಕಾಯಿತು. ದಾಂದಲೆ ಮಾಡಿದ ಕೆಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಶನಿವಾರ ತುಮಕೂರು ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ತಾರಾದೇವಿ ಹಾಗೂ ಗೂಳೂರು ಶಿವಕುಮಾರ್ ಸ್ಪರ್ಧೆಗೆ ಇಳಿದಿದ್ದರು. ಚುನಾವಣೆಯಲ್ಲಿ ತಲಾ ಇಬ್ಬರು ಸ್ಪರ್ಧಿಗಳಿಗೂ 8 ಮತಗಳು ಲಭಿಸಿತು. ಈ ನಡುವೆ ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಅಹೋಬಲಯ್ಯ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆಗೆ ಮುಂದಾದರು. ಲಾಟರಿಯಲ್ಲಿ ತಾರಾದೇವಿ ಅಧ್ಯಕ್ಷರಾಗಿ ಆಯ್ಕೆಯಾದರು.. ಇದರಿಂದ ಆಕ್ರೋಶಗೊಂಡ ಶಿವಕುಮಾರ್ ಬೆಂಬಲಿಗರು ಎಪಿಎಂಸಿ ಕಚೇರಿಗೆ ಕಲ್ಲು ತೂರಿದರು. ಕುರ್ಚಿಗಳನ್ನು ಎಸೆದು ದಾಂಧಲೆ ನಡೆಸಿದರು. ತಾರಾದೇವಿ ಹಾಗೂ ಶಾಸಕ ಸುರೇಶ್‌ಗೌಡ ವಿರುದ್ಧ ಅವಾಚ್ಯ ಶಬ್ದ ಬಳಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ನೂತನ ಅಧ್ಯಕ್ಷೆ ತಾರಾದೇವಿ ಸೋಲು-ಗೆಲವನ್ನು ಸಮಾನವಾಗಿ ಸ್ವೀಕರಿಸಬೇಕು. ಘಟನೆಗೂ ನನಗೂ ಸಂಬಂಧ ಇಲ್ಲ ಎಂದರು.
ರಣರಂಗ: ಘಟನೆಯಿಂದ ಕ್ಷಣಾರ್ಧದಲ್ಲಿ ಎಪಿಎಂಸಿ ಆವರಣ ರಣರಂಗವಾಯಿತು. ಶಿವಕುಮಾರ್ ಬೆಂಬಲಿಗರು ಪೊಲೀಸರ ಮೇಲೂ ಹಲ್ಲೆಗೆ ಮುಂದಾದರು. ಸಮಯ ಪ್ರಜ್ಞೆ ಮೆರೆದ ಪೊಲೀಸರು ಲಾಠಿ ಚಾರ್ಜ್ ಮೂಲಕ ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾದರು. ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಶಿವಕುಮಾರ್ ಸೋಲಿಗೆ ಶಾಸಕ ಸುರೇಶ್‌ಗೌಡರೇ ಕಾರಣ ಅನ್ನೋದು ಅವರ ಆರೋಪ. ಈ ನಡುವೆ ಘಟನೆ ಕಾರಣರಾದ ವಿರುದ್ಧ ದೂರು ಸಲ್ಲಿಸೋದಾಗಿ ಎಪಿಎಂಸಿ ಕಾರ್ಯದರ್ಶಿ ರಾಜಣ್ಣ ಹೇಳಿದ್ದಾರೆ. ತುಮಕೂರು  ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯ ಎರಡು ಬಣಗಳು ಸೃಷ್ಟಿಯಾಗಿರುವುದು ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ.
ಬಿಜೆಪಿಯಿಂದ ಇಬ್ಬರನ್ನು ಕಣಕ್ಕೆ ಇಳಿಸುವ ಬದಲು ಪಕ್ಷದಿಂದ ಒಬ್ಬ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಅನ್ನೋದು ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿರುವ ಮಾತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.