ತುಮಕೂರು

ಬಿಜೆಪಿ ಆತ್ಮಹತ್ಯೆ ಮಾಡಿಕೊಳ್ಳುವಂಥ ಫಲಿತಾಂಶ ನೀಡಿ

Published On :

ತುಮಕೂರು: ಬಿಜೆಪಿ ಹೈಕಮಾಂಡ್, ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸವಾಲಾಗಿ ಸ್ವೀಕರಿಸಿ. ಸದುಪಯೋಗಪಡಿಸಿಕೊಳ್ಳಿ. ತಮ್ಮನ್ನು ವಿನಾಕಾರಣ ಜೈಲಿಗೆ ಕಳುಹಿಸಿದವರನ್ನು, ಬೆನ್ನಿಗೆ ಚೂರಿ ಹಾಕಿದವರನ್ನು, ಸಚಿವರಾಗಿದ್ದುಕೊಂಡೇ ತಮ್ಮ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಫಲಿತಾಂಶ ನೀಡಿ ಎಂದು ಮುಖಂಡರು, ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಅವರು ತುಮಕೂರಿನ ಸದಾಶಿವಯ್ಯ ವಿಶಾಲಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಏರ್ಪಾಟಾಗಿದ್ದ ಜಿಲ್ಲಾ ಮಟ್ಟದ ಕೆಜೆಪಿ ಮುಖಂಡರು, ಪದಾಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದರು. ನನ್ನ ವಿರುದ್ಧ ಆರೋಪ ಬಂದ ವೇಳೆ ಡಿಸಿಎಂ ಒಬ್ಬರು ತಾವಾಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎಂದು ಹೇಳಿದ್ದರು. ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಫಲಿತಾಂಶವನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನೀಡುವಂತೆ ಕೆಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.
ಹೊಸ ಕೊಡುಗೆ ನೀಡಲು ಪಕ್ಷ: ನಾನು ಪುರಸಭಾ ಸದಸ್ಯನಾಗಿ, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಹುದ್ದೇಗೇರಿದೆ. ಎಲ್ಲ ಅಧಿಕಾರ ಪಡೆದಾಗಿತ್ತು. ಈಗ ನನಗೇಕೆ ರಾಜಕೀಯ ಬೇಕು ಎನಿಸಿತ್ತು. ನಾನೀಗ ರಾಜಕೀಯದಿಂದ ನಿವೃತ್ತನಾಗಬೇಕಿತ್ತು. ಆದರೆ ರಾಜ್ಯವನ್ನು ದುಃಸ್ಥಿತಿಗೆ ತಂದಿರುವವರ ವಿರುದ್ಧ, ಬೆನ್ನಿಗೆ ಚೂರಿ ಹಾಕಿದವರ ವಿರುದ್ಧ ಹೋರಾಟ ಮಾಡಲು, ಅಭಿವೃದ್ಧಿಯಲ್ಲಿ ಗುಜರಾತನ್ನು ಮೀರಿಸಲು, ಹೈಕಮಾಂಡ್ ಕಪಿಮುಷ್ಟಿಯಿಂದ ರಾಜ್ಯವನ್ನು ಬಿಡಿಸಲು, ಕರ್ನಾಟಕಕ್ಕೆ ಹೊಸ ಕೊಡುಗೆ ಪ್ರಾದೇಶಿಕ ಪಕ್ಷ ಕಟ್ಟಲಾಗಿದೆ ಎಂದರು.
ಆತ್ಮಚರಿತ್ರೆ ಬರೆಯಬೇಕಾದೀತು: ನಾನೀಗ ಬಹಳ ನೊಂದಿದ್ದೇನೆ. ವಿನಾಕಾರಣ ತಮ್ಮನ್ನು 24 ದಿವಸ ಜೈಲಲ್ಲಿಡಲಾಗಿತ್ತು. ದೇಶದಲ್ಲಿ ಕೇವಲ ಖಾಸಗಿ ದೂರಿನ ಹಿನ್ನೆಲೆಯಲ್ಲಿ, ಆರೋಪ ಸಾಬೀತಾಗುವ ಮುನ್ನವೇ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಯನ್ನು ಜೈಲಿಗೆ ಕಳುಹಿಸಿದ ಉದಾಹರಣೆಯಿಲ್ಲ. ಪಾಕಿಸ್ತಾನದಲ್ಲೂ ಕೂಡ ಈ ರೀತಿಯ ಉದಾಹರಣೆಗಳಿಲ್ಲ. ಆದರೆ ತಮ್ಮನ್ನು ಜೈಲಿಗೆ ಕಳುಹಿಸಲಾಯಿತು. ಅಕ್ರಮ ಗಣಿಗಾರಿಕೆ ತಡೆದಿದ್ದು, ಅದಿರು ರಪ್ತು ನಿಷೇಧಕ್ಕೆ ಆಗ್ರಹಿಸಿದ್ದಕ್ಕೆ ತಮ್ಮ ವಿರುದ್ಧ ಸಿಬಿಐ ತನಿಖೆ ನಡೆಸಲಾಯಿತು. ಇದೆಲ್ಲಾ ಹೇಳಲು  ಆತ್ಮಚರಿತ್ರೆಯನ್ನೇ ಬರೆಯಬೇಕಾದೀತು ಎಂದು ಬಿಎಸ್‌ವೈ ಹೇಳಿದರು.
ಆಯ್ಕೆಯಲ್ಲಿ ಮರ್ಜಿ ಬೇಡ: ಮುಂಬರುವ ಸ್ಥಳೀಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಕೆಜೆಪಿಯಲ್ಲಿ ಯಾವುದೇ ಮಜಿ, ಮುಲಾಜು ಬೇಡ. ಯೋಗ್ಯರಿಗಷ್ಟೇ ಆದ್ಯತೆ ನೀಡಿ. ಕೆಜೆಪಿ ಕಚೇರಿಯಲ್ಲಿ ಟಿಕೆಟ್ ನೀಡಲಾಗದು. ಇರುವ ಕಾಲಾವಕಾಶ ತೀರ ಕಡಿಮೆ. ಓಡಾಡಿ, ಯೋಗ್ಯರನ್ನು ಪ್ರಾಮಾಣಿಕರನ್ನು ಹುಡುಕಿ. ಹೆಚ್ಚು ಸೀಟುಗಳನ್ನು ಗೆಲ್ಲಿಸಲು ಅವಕಾಶವಿದ್ದು, ಶ್ರಮ ವಹಿಸಿ ಕೆಲಸ ಮಾಡುವಂತೆ ಬಿಎಸ್‌ವೈ ಕರೆ ನೀಡಿದರು.
ನಲ್ಲಿ ಇದೆ ನೀರು ಬರಲ್ಲ: ನಲ್ಲಿ ಇದೆ ನೀರು ಬರಲ್ಲ. ದುಡ್ಡಿದೆ ರಸ್ತೆಯಿಲ್ಲ. ಚರಂಡಿಯಿಲ್ಲ. ಇಂತಹ ದುಃಸ್ಥಿತಿ ರಾಜ್ಯಕ್ಕೆ ಬಂದೊದಗಿದೆ. ಇದನ್ನು ಹೋಗಲಾಡಿಸುವ ದೃಷ್ಟಿಯಿಂದ ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರತಿವರ್ಷ ಪಾಲಿಕೆ, ನಗರಸಭೆ, ಪುರಸಭೆಗಳಿಗೆ ಕೋಟ್ಯಂತರ ರು. ಹಣ ನೀಡಿ, ದೇಶದಲ್ಲೇ ಇತಿಹಾಸ ಸೃಷ್ಟಿಸಿದ ಹೆಗ್ಗಳಿಕೆ ತಮ್ಮದು. ಆದರೆ ಇಂದು ರಾಜ್ಯದಲ್ಲೇನಾಗಿದೆ. ತುಮಕೂರು ಜಿಲ್ಲೆಯಲ್ಲೇನಾಗಿದೆ ಎಂದು ಪ್ರಶ್ನಿಸಿದ ಬಿಎಸ್‌ವೈ, ಜನತೆ ಪ್ರಶ್ನಿಸಿ, ಉತ್ತರ ಹೇಳಬೇಕಾದ ಕಾಲ ಬಂದೊದಗಿದೆ ಎಂದು ಮಾರ್ಮಿಕವಾಗಿ ನುಡಿದರು. ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜು, ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ್, ಜಿಲ್ಲಾ ಕೆಜೆಪಿ ಅಧ್ಯಕ್ಷ ಹಾಗೂ ಬಿಜೆಪಿ ಜಿಪಂ ಸದಸ್ಯ ಹೆಬ್ಬಾಕ ರವಿ, ಕೊಪ್ಪಳ್ ನಾಗರಾಜ್, ಜಿಲ್ಲಾ ಪದಾಧಿಕಾರಿಗಳು, ಇತರರು ಉಪಸ್ಥಿತರಿದ್ದರು.

ಬಜೆಟ್ ಅನುಮೋದನೆಗೆ ಬಿಎಸ್‌ವೈ ಬರಬೇಕು
ತುಮಕೂರು: ತಮ್ಮ ಹಾದಿಯಲ್ಲೇ ಶೆಟ್ಟರ್ ಬಜೆಟ್ ಮಂಡಿಸಿರಬಹುದು. ಆದರೆ ಶೆಟ್ಟರ್ ಬಜೆಟ್ ಅನುಮೋದನೆಗೆ ಇದೇ ಯಡಿಯೂರಪ್ಪ ಬರಬೇಕು. ಅಥವಾ ತಮ್ಮ ಸಹಕಾರ ಬೇಕು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾರ್ಮಿಕವಾಗಿ ನುಡಿದರು.
ಅವರು ತುಮಕೂರಿನಲ್ಲಿ ಕೆಜೆಪಿ ಮುಖಂಡರ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಧಾನಸಭಾ ಚುನಾವಣೆಗೂ ಮುನ್ನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬಂದಿವೆ. ಚುನಾವಣೆಗೆ ಸಜ್ಜಾಗಲು ನಮಗೂ ಇದೊಂದು ಸವಾಲು. ಪ್ರತಿದಿನ 3 ಜಿಲ್ಲೆಗಳಂತೆ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದು, ಈಗಾಗಲೇ ಮೈಸೂರಿನಿಂದ ಪ್ರವಾಸ ಆರಂಭಿಸಿದ್ದೇನೆ ಎಂದು ಬಿಎಸ್‌ವೈ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ತಾವು ಸಿಎಂ ಆಗಿದ್ದ ಅವಧಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನೀಡಿದ ಕೋಟ್ಯಂತರ ರು. ಅನುದಾನ ಈ ಚುನಾವಣೆಯಲ್ಲಿ ನೆರವಿಗೆ ಬರಲಿದೆ ಎಂಬ ವಿಶ್ವಾಸವನ್ನು ಬಿಎಸ್‌ವೈ ವ್ಯಕ್ತಪಡಿಸಿದರು.

ಬಿಜೆಪಿ ನಗರಸಭಾ ಸದಸ್ಯರ ಸೇರ್ಪಡೆ
ತುಮಕೂರು: ನಾಲ್ವರು ತುಮಕೂರು ನಗರಸಭಾ ಸದಸ್ಯರು ಬಿಜೆಪಿ ತೊರೆದು ಕೆಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಮ್ಮುಖದಲ್ಲಿ ಕೆಜೆಪಿಗೆ ಸೇರ್ಪಡೆಯಾದರು. ಯಶೋಧ ಗಂಗಪ್ಪ, ವಿಜಯರುದ್ರೇಶ್, ಅನ್ನಪೂರ್ಣ ಶಿವಶಂಕರ್, ಕೆ.ಪಿ. ಮಹೇಶ್ ಸೇರ್ಪಡೆಯಾದ ಸದಸ್ಯರು. ಶಿರಾ ನಗರಸಭೆಯ ಲಕ್ಷ್ಮೀನಾರಾಯಣ್, ಶಿರಾ ಬಿಜೆಪಿ ಅಲ್ಪಸಂಖ್ಯಾತ ಘಟಕ ಸಂಪೂರ್ಣವಾಗಿ ಕೆಜೆಪಿ ಜತೆ ವಿಲೀನವಾಯಿತು.

ಸೊಗಡು ವಿರುದ್ದ ಜಿಎಸ್‌ಬಿ ವಾಗ್ದಾಳಿ
ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ವಿರುದ್ಧ ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜು  ವಾಗ್ದಾಳಿ ನಡೆಸಿದ್ದಾರೆ. ಅವರು ತುಮಕೂರಿನಲ್ಲಿ ಏರ್ಪಾಟಾಗಿದ್ದ ಜಿಲ್ಲಾ ಕೆಜೆಪಿ ಪದಾಧಿಕಾರಿಗಳು, ಮುಖಂಡರ ಸಭೆಯಲ್ಲಿ ಮಾತನಾಡಿದರು. ಮೊದಲಿಗೆ ಮಾತನಾಡಿದ ಸಂಸದ ಜಿ.ಎಸ್. ಬಸವರಾಜು, ತುಮಕೂರು ನಗರದ ಅಭಿವೃದ್ಧಿಗೆಂದು ಬಿ.ಎಸ್. ಯಡಿಯೂರಪ್ಪ 320 ಕೋಟಿ ರು. ಗಳಿಗೂ ಹೆಚ್ಚು ಅನುದಾನ ನೀಡಿದರು. ಆದರೆ ಸಚಿವರಾಗಿರುವ ಸೊಗಡು ಶಿವಣ್ಣ ಸರಿಯಾಗಿ ಕೆಲಸ ಮಾಡದೆ, ಹಣ ದುರಪಯೋಗ ಮಾಡಿಕೊಂಡಿದ್ದಾರೆ. ಯಾವ್ಯಾವ ಕಾಮಗಾರಿಗೆ ಎಷ್ಟೆಷ್ಟು ಖರ್ಚಾಗಿದೆ ಅನ್ನೋದನ್ನು ಸರಿಯಾಗಿ ಲೆಕ್ಕ ಕೊಟ್ಟಿಲ್ಲ ಎಂದು ಆರೋಪಿಸಿದರು. ಯಡಿಯೂರಪ್ಪನವರ ಬೆನ್ನಿಗೆ ಚೂರಿ ಹಾಕಿದವರಿಗೆ ಬುದ್ಧಿ ಕಲಿಸುವಂತೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.