ಮಠಗಳ ಅಭಿವೃದ್ಧಿ, ಏಳಿಗೆಗೆ ಭಕ್ತರ ಸಹಕಾರ ಮುಖ್ಯ
ತಿಪಟೂರು: ಯಾವುದೇ ಮಠಗಳ ಅಭಿವೃದ್ಧಿ, ಏಳಿಗೆಗೆ ಭಕ್ತರ ಸಹಕಾರ, ಗುರುಪೀಠದ ಬಗ್ಗೆ ಅಪಾರ ನಂಬಿಕೆ ವಿಶ್ವಾಸ ಬಹು ಮುಖ್ಯ ಕಾರಣ. ಈ ಹಿನ್ನೆಲೆಯಲ್ಲಿ ಕೆರೆಗೋಡಿ-ರಂಗಾಪುರ ಸುಕ್ಷೇತ್ರದ ಮೇಲೆ ಭಕ್ತಾದಿಗಳಲ್ಲಿರುವ ಅಭಿಮಾನ, ಭಕ್ತಿ ಜೊತೆಗೆ ಅವರ ಸಹಕಾರ ನಮ್ಮ ಕ್ಷೇತ್ರ ದೊಡ್ಡಮಟ್ಟದಲ್ಲಿ ಸಮಾಜಸೇವೆ,ಅಕ್ಷರ ಮತ್ತು ತ್ರಿವಿಧ ಅನ್ನದಾಸೋಹವನ್ನು ಹಮ್ಮಿಕೊಳ್ಳಲು ಸಾಧ್ಯವಾಗಿದೆ ಎಂದು ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ರಂಗಾಪುರ ಸುಕ್ಷೇತ್ರದ ಶ್ರೀ ಗುರುಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಸಮಾರಂಭ, 6ನೇ ಶ್ರೀ ಗುರುಗಳ ದೇವಾಲಯದ ಪ್ರವೇಶ ಹಾಗೂ ಶಿಲಾಮೂರ್ತಿ ಪ್ರತಿಷ್ಠಾಪನ 12ನೇ ವಾರ್ಷಿಕ ಸಮಾರಂಭದ ಸಾನಿಧ್ಯ ವಹಿಸಿ ಆಶೀವರ್ಚನ ನೀಡಿದ ಶ್ರೀಗಳು, ಪ್ರತಿ ವರ್ಷ ನಡೆಯುವ ಶ್ರೀ ಗುರುಸಪ್ತಾಹ ಕಾರ್ಯಕ್ರಮವು ಶ್ರೀಮಠದ ಅತ್ಯಂತ ಪ್ರಮುಖ ಕಾರ್ಯಕ್ರಮವಾಗಿದ್ದು, ಶ್ರೀಕ್ಷೇತ್ರದ ಹಿರಿಯ ಪವಾಡ ಪುರುಷರಾಗಿದ್ದ ಎಲ್ಲಾ 6 ಪೂಜ್ಯರ ಆಶೀರ್ವಾದ ಭಕ್ತಾರ ಮೇಲೆ ಸದಾ ಇರಲೆಂದು ಗುದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಸ್ಮರಣೆ ಮಾಡಲಾಗುವ ಪವಿತ್ರ ಕಾರ್ಯಕ್ರಮವೇ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಶ್ರೀ ಗುರುಸಪ್ತಾಹ ಎಂದು ತಿಳಿಸಿದರು.
ನೋವಿನ ಸಂಗತಿ: ಕಾನೂನು ಮತ್ತು ಸಂಸದೀಯ ಸಚಿವ ಸುರೇಶ್ ಕುಮಾರ್ ಮಾತನಾಡಿ ಧಾರ್ಮಿಕ ಸಮಾರಂಭಗಳು ಸಮಾಜಕ್ಕೆ ಚೈತನ್ಯ ತರುವಂತಹ ಕಾರ್ಯಕ್ರಮಗಳಾಗಿದ್ದು, ದೇವಾಲಯ ಹಾಗೂ ಧಾರ್ಮಿಕ ಕಾರ್ಯಗಳು ಹೆಚ್ಚಾಗುತ್ತಿದ್ದರೂ ಸಮಾಜದಲ್ಲಿ ಅಧರ್ಮ, ಅನ್ಯಾಯ ಅನಾಚಾರ ತಾಂಡವವಾಡುತ್ತಿದೆ. ಪ್ರತಿ ನಿತ್ಯ ಕಸಿವಿಸಿ, ತಳಮಳದಂತಹ ಸುದ್ದಿಗಳನ್ನು ನಾವು ಕೇಳುತ್ತಿರುವುದು ನೋವಿನ ಸಂಗತಿ. ಶ್ರೀಮಠವು ಅಭಿವೃದ್ಧಿಯತ್ತ ಸಾಗಿದ್ದು ಅದಕ್ಕೆ ಗುರುಗಳ ಶ್ರಮ, ಮಾರ್ಗದರ್ಶನ ಮಹತ್ವದಾಗಿದೆ. ರಾಜ್ಯದ ದೊಡ್ಡ ಪ್ರಸಾದ ನಿಲಯಗಳಲ್ಲಿ ಶ್ರೀಮಠದ ಪ್ರಸಾದ ನಿಲಯವೂ ಸಹ ಒಂದಾಗಿರುವುದು ಶ್ಲಾಘನೀಯ ಎಂದರು.
ಸಾರ್ಥಕ ಪಡಿಸಿಕೊಳ್ಳಿ: ಶಾಸಕ ಬಿ.ಸಿ.ನಾಗೇಶ್ ಮಾತನಾಡಿ ಮನುಷ್ಯ ಜನ್ಮ ಪಡೆದಿರುವುದು ಪುಣ್ಯವಾಗಿದ್ದು, ಮನುಷ್ಯನ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರೂ ಮಾನವೀಯತೆ ಮರೆತು ಕ್ರೂರಿಗಳಂತೆ ವರ್ತಿಸುತ್ತಿರುವ ಸುದ್ದಿ ಸಾಮಾನ್ಯವಾಗಿದೆ ಎಂದರು.
ಕೆಜೆಪಿ ಮುಖಂಡ ಲೋಕೇಶ್ವರ ಮಾತನಾಡಿ ಸಮಾಜದ ಅಭಿವೃದ್ಧಿಗೆ ಮಠ ಮಾನ್ಯಗಳು ಶ್ರಮಿಸುತ್ತಿದ್ದು, ಉಳ್ಳವರು ಉದಾರ ಮನಸ್ಸಿನಿಂದ ಮಠಗಳಿಗೆ ಧಾನ-ಧರ್ಮ ಮಾಡಿ ಸಮಾಜದ ಏಳಿಗೆಗೆ ಸಹಕರಿಸಬೇಕು ಎಂದರು.
ಎಂಎಸ್‌ಐಎಲ್ ಅಧ್ಯಕ್ಷ ನಂದೀಶ್, ಮಾಜಿ ಶಾಸಕ ಕೆ. ಷಡಕ್ಷರಿ, ಸಾಹಿತಿ ಡಾ.ಪ್ರದೀಪ್ ಕುಮಾರ್, ಜಿ.ಪಂ. ಸದಸ್ಯ ತ್ರಿಯಂಬಕ, ತಾ.ಪಂ.ಉಪಾಧ್ಯಕ್ಷ ಕೆ.ಎಸ್.ರಾಜು, ನಗರಸಭಾಧ್ಯಕ್ಷ ಪ್ರಕಾಶ್, ನಗರಸಭಾ ಸದಸ್ಯ ತರಕಾರಿ ನಾಗರಾಜು, ತಾ.ಕಾಂಗ್ರೆಸ್ ಮುಖಂಡರಾದ ಪರಮೇಶ್, ಶಶಿಧರ್ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

