ತುಮಕೂರು

ಯುವ ಜನಾಂಗಕ್ಕೆ ಉದ್ಯೋಗ ಕಲ್ಪಿಸುವುದೇ ಗುರಿ

Published On :

ಕುಣಿಗಲ್: ತಾಲೂಕಿನ ಬಹುತೇಕ ವಿದ್ಯಾವಂತ ನಿರುದ್ಯೋಗಿ ಯುವಜನಾಂಗ ಉದ್ಯೋಗ ಅರಸಿ, ವಿವಿಧೆಡೆ
ಎಡತಾಕುತ್ತಾ, ಸಾಕಷ್ಟು ಆರ್ಥಿಕ ನಷ್ಟ ಅನುಭವಿಸುತ್ತಿರುವುದನ್ನು ತಪ್ಪಿಸಲು, ಬೃಹತ್ ಉದ್ಯೋಗ ಮೇಳವನ್ನು ಗ್ರಾಮಾಂತರ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ, ಜೆಡಿಎಸ್ ಮುಖಂಡ ಎಸ್.ಪಿ. ಮುದ್ದುಹನುಮೇಗೌಡ ತಿಳಿಸಿದರು.
ಸೋಮವಾರ, ತಾಲೂಕಿನ ಅಂಚೇಪಾಳ್ಯ ಕೈಗಾರಿಕಾ ವಸಾಹತು ಪ್ರದೇಶದಲ್ಲಿ, ಮಾಜಿ ಶಾಸಕ ಎಸ್.ಪಿ.ಮುದ್ದುಹನುಮೇಗೌಡ ನೇತೃತ್ವದಲ್ಲಿ, ಮೂವತ್ತಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳ ಸಹಯೋಗದಲ್ಲಿ ಬೃಹತ್ ಉದ್ಯೋಗಮೇಳ ಉದ್ಘಾಟಿಸಲಾಯಿತು.
ಡಾ.ನಂಜುಂಡಪ್ಪ ವರದಿ ಅನ್ವಯ ಕುಣಿಗಲ್ ತಾಲೂಕು ಆರ್ಥಿಕವಾಗಿ ಹಿಂದುಳಿದ ತಾಲೂಕಾಗಿದ್ದು,  
ತಾಲೂಕಿನಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಯುವಜನತೆ ಉದ್ಯೋಗಕ್ಕಾಗಿ ಪಟ್ಟಣ ಸೇರಿದಂತೆ ರಾಜಧಾನಿ ಕಡೆಗೆ ವಲಸೆ ಹೋಗುತ್ತಿರುವುದರಿಂದ, ತಾಲೂಕಿನ ಆರ್ಥಿಕ ಪ್ರಗತಿಗೆ ಮಾರಕವಾಗಿ,
ತಾಲೂಕು ಮತ್ತಷ್ಟು ಆರ್ಥಿಕವಾಗಿ ಹಿಂದುಳಿಯುವಂತಾಗಿದೆ ಎಂದು ಮುದ್ದುಹನುಮೇಗೌಡರು ತಿಳಿಸಿದರು.
ಅವಕಾಶ: ಗ್ರಾಮಾಂತರ ಪ್ರದೇಶದ ವಿದ್ಯಾವಂತ ನಿರುದ್ಯೋಗಿಗಳಿಗೆ ಅವರ ಅರ್ಹತೆ ಆಧಾರದ ಮೇಲೆ ಉದ್ಯೋಗವಕಾಶ ಕಲ್ಪಿಸಲು ಮೂವತ್ತು ಬಹುರಾಷ್ಟ್ರೀಯ ಕಂಪನಿಗಳ ಮಾಲೀಕರ, ವ್ಯವಸ್ಥಾಪಕ ಮಂಡಳಿಯ ಮನ ಒಲಿಸಿ, ಈ ಬೃಹತ್ ಉದ್ಯೋಗಮೇಳವನ್ನು ಆಯೋಜಿಸಲಾಗಿದ್ದು, ಯಾವುದೇ ಲಂಚ ಅಥವಾ ಶುಲ್ಕವಿಲ್ಲದೆ, ಉಚಿತವಾಗಿ ಐದು ಸಾವಿರಕ್ಕೂ ಹೆಚ್ಚು ಉದ್ಯೋಗ ಅವಕಾಶಗಳು ಈ ಮೇಳದಲ್ಲಿ ದೊರಕಲಿವೆ. ಯುವಜನಾಂಗ ಸದಾ ಕ್ರಿಯಾಶೀಲರಾಗಿ, ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು. ಇಲ್ಲವಾದಲ್ಲಿ, ಸೋಮಾರಿತನ ಆವರಿಸಿ, ಇಡೀ ಜೀವನ ಬರಡುಮಾಡುವುದರ ಮೂಲಕ ಕೌಟುಂಬಿಕ  ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿ ಪರದಾಡಬೇಕಾಗುತ್ತೆ. ಮುಂದಿನ ದಿನಗಳಲ್ಲಿ ವರ್ಷಕ್ಕೆ ಎರಡು ಬಾರಿ ಬೃಹತ್ ಉದ್ಯೋಗಮೇಳವನ್ನು ತಾಲೂಕಿನ ವಿವಿಧ ಹೋಬಳಿಗಳಲ್ಲಿ ಆಯೋಜಿಸಲಾಗುವುದೆಂದರು.
ಆರ್ಥಿಕ ಭದ್ರತೆ : ಎಚ್ ಅಂಡ್ ಆರ್ ಜಾನ್ಸನ್ ಇಂಡಿಯಾ, ಕಾರ್ಖಾನೆಯ ಜನರಲ್ ಮೇನೇಜರ್ ರಾಮಲಿಂಗಾರೆಡ್ಡಿ, ಗ್ರಾಮಾಂತರ ಪ್ರದೇಶದ, ವಿದ್ಯಾವಂತ ನಿರುದ್ಯೋಗಿ ಯುವಜನತೆಯ ಮನೆಬಾಗಿಲಲ್ಲಿ, ಉದ್ಯೋಗ ಮೇಳ ಕಾರ್ಯಕ್ರಮ ಆಯೋಜನೆಗೊಂಡಿರುವುದರಿಂದ, ಅರ್ಹ ಯುವಜನತೆ ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗುವ ಮೂಲಕ ತಮ್ಮ ಕುಟುಂಬಕ್ಕೆ ಆರ್ಥಿಕ ಭದ್ರತೆ ಕಲ್ಪಿಸಿ ನೆಮ್ಮದಿಯುತ ಜೀವನ ಸಾಗಿಸಬೇಕೆಂದರು. ಉದ್ಯೋಗ ಮೇಳದ ಆಯೋಜಕ ಕಂಪನಿ, ಬೆಸ್ಟ್‌ಡಯಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ನಾಗರಾಜ್, ವಿನಯಗೌಡ, ಗ್ರಾಪಂ ಅಧ್ಯಕ್ಷ ಕೃಷ್ಣೆಗೌಡ, ಜೆಡಿಎಸ್ ಮುಖಂಡರಾದ ಎಚ್.ಎ. ಜಯರಾಮಯ್ಯ, ಅಣ್ಣಯ್ಯ, ಹೊನ್ನೇಗೌಡ, ಐ.ಜಿ.ರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದು, ತಾಲೂಕಿನಾದ್ಯಂತ ವಿವಿಧೆಡೆಯಿಂದ ಅಸಂಖ್ಯಾತ ವಿದ್ಯಾವಂತ ನಿರುದ್ಯೋಗಿಗಳ ಮೇಳದಲ್ಲಿ ಪಾಲ್ಗೊಂಡಿದ್ದರು. 1200 ಮಂದಿ ನಿರುದ್ಯೋಗಿ ಯುವಕರಿಗೆ ಅರ್ಹತೆ ಆಧಾರದ ಮೇರೆಗೆ ಉದ್ಯೋಗವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.