ತುಮಕೂರು

ಪರಮಸತ್ಯ ಪ್ರತಿಪಾದನೆಯೆ ಆತ್ಮಕಥನದ ಹೃದಯ

Published On :

ತುಮಕೂರು: ಕಥನ ಕಲೆ ಅಮೂಲ್ಯವಾದುದು. ಪರಮಸತ್ಯ ಪ್ರತಿಪಾದನೆಯೆ ಆತ್ಮಕಥನದ ಹೃದಯ ಎಂದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ಅಭಿಪ್ರಾಯಪಟ್ಟರು.
ಅವರು ನಗರದ ಕ್ಯಾತ್ಸಂದ್ರದಲ್ಲಿನ ಕವಿತಾಕೃಷ್ಣ ಸಾಹಿತ್ಯ ಮಂದಿರ ಆಯೋಜಿಸಿದ್ದ ಕವಿ ಕೆ. ನರಸಿಂಹಯ್ಯನವರನ್ನು ಕುರಿತ ವಿಚಾರ ಸಂಕಿರಣ ಮತ್ತು ನೆನಪಿನ ಬುತ್ತಿ ಆತ್ಮಕಥನ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನತೆ ಪ್ರಚಾರದ ಗೀಳಿಗೆ ಬಲಿಯಾಗುತ್ತಿರುವುದು ವಿಷಾದನೀಯ. ಕೀರ್ತಿಶನಿಯ ಹೆಗಲೇರಿ ಮಾನವೀಯತೆಯನ್ನೇ ಮರೆಯುತ್ತಿದ್ದಾರೆ. ಜನರು ನೈತಿಕತೆಗೆ ಮನ್ನಣೆ ನೀಡಬೇಕು. ಸ್ವಮೌಲ್ಯ ಮಾಪನ ಮಾಡಿಕೊಳ್ಳುವುದರ ಮೂಲಕ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.
ನಡೆ ನುಡಿಯಲ್ಲಿ ಅವಿನಾಭಾವ ಬಾಂಧವ್ಯ ಇರಿಸಿಕೊಡ ಕಾರಣ ಕೆ. ನರಸಿಂಹಯ್ಯ ಅವರು ಪಾರದರ್ಶಕ ಆತ್ಮಕಥನ ನೀಡಲು ಸಾಧ್ಯವಾಯಿತು ಎಂದರು.
ಬೆಂಗಳೂರು ಸರ್ಕಾರಿ ಕಾಲೇಜಿನ ಡಾ. ಆರ್. ಕಮಲಮ್ಮ ನೆನಪಿನ ಬುತ್ತಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿ ವ್ಯಕ್ತಿಗಳು ಎರಡು ಮುಖ ಹೊತ್ತು ಮೆರೆಯುತ್ತಿದ್ದಾರೆ. ಮುಖವಾಡದ ಬದುಕು ಬದುಕಲ್ಲ. ಗೋಮುಖ ವ್ಯಾಘ್ರತನದಿಂದ ವ್ಯಕ್ತಿಗೂ ಸಮಾಜಕ್ಕೂ ಸೌಖ್ಯವಾಗದು. ಬದುಕಿನಲ್ಲಿ ಬದ್ಧತೆಯಿದ್ದ ಕಾರಣ ನರಸಿಂಹಯ್ಯರಿಗೆ ಆತ್ಮಕಥನ ಬರೆಯಲು ಕಾರಣವಾಯ್ತು ಎಂದರು.
ನರಸಿಂಹಯ್ಯನವರ ಬದುಕು ಬರೆಹ ಕುರಿತು ಬೆಂಗಳೂರಿನ ವೈ.ಎನ್. ರಮೇಶ್ ಅವರು ಸಾತ್ವಿಕ ಬದುಕು, ಅವರ ವೃತ್ತಿ, ಪ್ರವೃತ್ತಿಗಳೆರೆಡು ಒಪ್ಪ ಎಂದು ನುಡಿದರು.
ಮಸ್ಕಲ್ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಎಸ್.ಎನ್. ಶ್ರೀದೇವಿ ನಾನು ಕಂಡ ನನ್ನಪ್ಪ  ಎಂಬ ವಿಷಯ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ನರಸಿಂಹಯ್ಯ ದಂಪತಿಗೆ ಶಾಲು ಹೊದಿಸಿ ಪೇಟ ತೊಡಿಸಿ ಸನ್ಮಾನಿಸಲಾಯಿತು. ಜೀವಯಾನದ ಸಾಧನೆಗೆ ಸಾಹಿತ್ಯ ರತ್ನ ಪುರಸ್ಕಾರ ನೀಡಿ ಮಂದಿರ ಗೌರವಿಸಿತು.
ರಾಜ್ಯ ಲೇಖಕಿಯರ ಸಂಘದ ದತ್ತಿ ಪ್ರಶಸ್ತಿ ಪಡೆದ ಲೇಖಕಿ ಎಚ್. ಕಮಲಾ ಬಡ್ಡಿಹಳ್ಳಿ ಅವರನ್ನು ಸಾಹಿತ್ಯ ಮಂದಿರದ ಪರವಾಗಿ ಹೇಮಾಕೃಷ್ಣ ಸನ್ಮಾನಿಸಿದರು. ನಂತರ ಗಂಗಾಧರ ಕೊಡ್ಲಿಯವರ ಅಧ್ಯಕ್ಷತೆಯಲ್ಲಿ 25 ಮಂದಿ ಹಿರಿ-ಕಿರಿಯ ಕವಿಗಳು ಕವಿತೆ ವಾಚಿಸಿದರು. ಜಿ.ಕೆ. ಕುಲಕರ್ಣಿ, ಪೌಳಿ ಶಂಕರಾನಂದಪ್ಪ, ರವೀಂದ್ರನಾಥ ಠಾಗೂರ್, ಪಾವಗಡ ಸಣ್ಣರಂಗಪ್ಪ, ಮರಿದೇವರು, ಡಿ. ನಾರಾಯಣ ಮುಂತಾದವರು ಕವಿತೆ ವಾಚಿಸಿದರು. ಲಕ್ಷ್ಮೀಪುತ್ರ ಪ್ರಾರ್ಥಿಸಿದರು. ರವೀಂದ್ರ ಸ್ವಾಗತಿಸಿದರು. ಅಧ್ಯಕ್ಷ ಟಿ.ಆರ್.ಎಚ್. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಜೆ. ಆನಂದ್ ವಂದಿಸಿದರು. ಪದ್ಮಾ ಕೃಷ್ಣಮೂರ್ತಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.