ತುಮಕೂರು

ಶಾಸಕರಿಂದ ಕುರ್ಚಿ ಉಳಿಸಿಕೊಳ್ಳುವ ಯತ್ನ

Published On :

ತುಮಕೂರು: ಜನರ ಸಮಸ್ಯೆಗಳನ್ನು ಕೇಳದೇ ತಮ್ಮ ಕುರ್ಚಿಗಳನ್ನು ಉಳಸಿಕೊಳ್ಳಲು ಮುಂದಾಗಿರುವ ಶಾಸಕರನ್ನು ಹಿರಿಯ ರಂಗಭೂಮಿ  ಕಲಾವಿದ ಮಾಸ್ಟರ್ ಹಿರಣ್ಣಯ್ಯ ಛೇಡಿಸಿದರು.
 ತುಮಕೂರಿನಲ್ಲಿ ಕನ್ನಡ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ಅಧಿಕಾರ ದಾಹಕ್ಕೆ ಮುಂದಾಗಿರುವ ಶಾಸಕರು ಮುಂಬರುವ ಚುನಾವಣೆಯಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ಹರಸಾಹಸ ನಡೆಸುತ್ತಿದ್ಧಾರೆ ವಿನಃ ಮತದಾರರಿಗೆ ನೀಡಿದ್ದ ಭರವಸೆ ಆಗಲಿ, ಜನರ ಸಮಸ್ಯೆಗಳನ್ನಾಗಲೀ ಈಡೇರಿಸುವತ್ತ ಚಿಂತನೆ ನಡೆಸಿಲ್ಲವೆಂದು ಹಿರಣ್ಣಯ್ಯ  ಟೀಕಿಸಿದರು.
ನಾಡಿನ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಮರೆಯಬಾರದು. ಪೋಷಕರು ಸಹ ತಮ್ಮ ಮಕ್ಕಳ ಜೊತೆಗೆ ಕನ್ನಡದಲ್ಲೇ ಮಾತನಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಲು ತಿಳಿಸಿದ ಹಿರಣ್ಣಯ್ಯ, ಮಮ್ಮಿ, ಡ್ಯಾಡಿ ಸಂಸ್ಕೃತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಭಾಷೆ ಮತ್ತು ರಂಗಭೂಮಿ ಕಲಾವಿದರನ್ನು ಕೈ ಬಿಡಬೇಡಿ ಎಂದು ಹಿರಣ್ಣಯ್ಯರವರು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ಯುವಕರು ಮುಂದಾಗಲಿ: ಅಬಕಾರಿ ಇಲಾಖೆ ನಿರ್ದೇಶಕ ಡಾ. ಸಿ. ಸೋಮಶೇಖರ್ ಮಾತನಾಡಿ, ಕನ್ನಡ ಭಾಷೆಯನ್ನು ಉಳಿಸಲು ಯುವಕರು ಮುಂದಾಗಬೇಕೆಂದರು.
ಮಾಸ್ಟರ್ ಹಿರಣ್ಣಯ್ಯರಿಗೆ ಕನ್ನಡ ಕಣ್ಮಣಿ ಡಾ. ಸಿ. ಸೋಮಶೇಖರ್ರವರಿಗೆ ಕನ್ನಡ ಸಾಂಸ್ಕೃತಿಕ ರಾಯಭಾರಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಎಚ್.ಎನ್. ದೀಪಕ್ ಅವರಿಗೆ ಕನ್ನಡ ಕುವರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸನ್ಮಾನ: ಕನ್ನಡ ನಾಡು-ನುಡಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ಪ್ರಶಾಂತ್, ಪತ್ರಕರ್ತರಾದ ಆರ್. ನಾಗರಾಜು, ಡಿ.ಎಂ. ಸತೀಶ್, ತಿಮ್ಮೇಗೌಡ ಸೇರಿದಂತೆ ಮತ್ತಿತರ ಪ್ರಮುಖರನ್ನು ಸನ್ಮಾನಿಸಲಾಯಿತು.
ಕನ್ನಡ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಶಾಖೆ ಆರಂಭಕ್ಕೆ ರಾಜ್ಯಾಧ್ಯಕ್ಷ ಆರ್. ಸುರೇಶ್ ಮತ್ತು ಕಾರ್ಯಾಧ್ಯಕ್ಷ ಕೆ.ಸಿ. ಮೂರ್ತಿ ಅವರು ಜಿಲ್ಲಾಧ್ಯಕ್ಷ ಟಿ.ಇ. ರಘುರಾಮ್ ಅವರಿಗೆ ಕನ್ನಡ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಪತ್ರಕರ್ತ ಚಿ.ನ. ಏಕೇಶ್ವರ್, ಕಾಂಗ್ರೆಸ್ ಮುಖಂಡರಾದ ಡಾ. ರಫೀಕ್ ಅಹ್ಮದ್, ಎನ್. ಗೋವಿಂದರಾಜು, ಎಚ್.ಸಿ. ಹನುಮಂತಯ್ಯ, ಕೆಜೆಪಿ ಮುಖಂಡ ಜ್ಯೋತಿ ಗಣೇಶ್, ಜೆಡಿಎಸ್ ಮುಖಂಡರಾದ ನರಸೇಗೌಡ, ತಿಪಟೂರು ಮೈಲಾರಪ್ಪ, ಬೆಳ್ಳಿ ಲೋಕೇಶ್, ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಎನ್. ಮೂರ್ತಿ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್ ಮತ್ತು ಪ್ರತಿಭಾನ್ವಿತರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಕನ್ನಡ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಆರ್. ಸುರೇಶ್, ಸಂಘಟನೆಯ ಜಿಲ್ಲಾಧ್ಯಕ್ಷ ಟಿ.ಇ. ರಘುರಾಮ್ ಸ್ವಾಗತಿಸಿದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಲ್ಲೇಶ್ ಗೌಡ, ನಗರಾಧ್ಯಕ್ಷ  ಸಂತೋಷ್, ಜಿಲ್ಲಾ ಉಪಾಧ್ಯಕ್ಷ ನಸೀರ್ ಅಹ್ಮದ್, ಕರ್ಣಸ್ವಾಮಿ ಸೇರಿದಂತೆ ಹಲವಾರು ಮಂದಿ ಹಾಜರಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಯುವ ಭಾರತ್ನ ರಾಜ್ಯಾಧ್ಯಕ್ಷ ನಿಖೇತ್ರಾಜ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.